ಕನ್ನಡ ಶಾಲೆ ಉಳಿಸಲು ಈ ಕುಟುಂಬ ಕಂಕಣ ಬದ್ಧ

Published : Feb 22, 2018, 03:26 PM ISTUpdated : Apr 11, 2018, 01:01 PM IST
ಕನ್ನಡ ಶಾಲೆ ಉಳಿಸಲು ಈ ಕುಟುಂಬ ಕಂಕಣ ಬದ್ಧ

ಸಾರಾಂಶ

ನಿಮ್ಮ ಮಗುವನ್ನು ದಿನಕ್ಕೆ ಎಪ್ಪತ್ತು ರುಪಾಯಿ ಖರ್ಚು ಮಾಡಿಕೊಂಡು ಇಪ್ಪತ್ತೆಂಟು ಕಿಮೀ ದೂರದ ಶಾಲೆಗೆ ನಿತ್ಯವೂ ಕರೆದುಕೊಂಡು ಹೋಗಿ, ಬರುವುದು ತೊಂದರೆ ಎನ್ನಿಸುವುದಿಲ್ಲವೇ? ‘ಏನ್ ಮಾಡೋದು ಸಾರ್ ತೊಂದರೆ ಆಗುತ್ತೆ. ಆದರೆ  ಶಾಲೆ ಉಳಿಯಬೇಕಲ್ಲಾ. ಒಂದು ಕನ್ನಡ ಶಾಲೆ ಉಳಿಯಬೇಕು. ಕನ್ನಡ ಶಾಲೆ ಉಳಿವಿಗಾಗಿ ನಾವು 70 ರುಪಾಯಿ ಖರ್ಚು ಮಾಡುವುದು ದೊಡ್ಡ ವಿಚಾರವಲ್ಲ. ನನ್ನ ಮಗಳಿಂದ ಶಾಲೆ ಉಳಿಯುತ್ತದೆ. ಇನ್ನೊಂದಿಬ್ಬರು ಮಕ್ಕಳಿಗೆ ಅನುಕೂಲವಾಗುತ್ತದೆ ಎನ್ನುವುದಾದರೆ ನಾವು ಈ ರೀತಿಯ ಏನೇ ತೊಂದರೆ ಬಂದರೂ ಸಹಿಸಿಕೊಳ್ಳುತ್ತೇವೆ’ ಎಂದರು ದಕ್ಷಿಣ ಕನ್ನಡದ ಮೂಡುಬಿದಿರೆ ಸಮೀಪದ ಕುದ್ರಿ ಪದವು ನಿವಾಸಿ ಲಕ್ಷ್ಮೀ. ತಮ್ಮ ಮಗುವನ್ನು 25 ಕಿಮೀ ದೂರದ ಕಿಲ್ಪಾಡಿ ಕಿರಿಯ ಪ್ರಾಥಮಿಕ ಶಾಲೆಗೆ ಬಸ್ಸಿನಲ್ಲಿ ಕರೆದುಕೊಂಡು ಹೋಗಿ, ಕರೆದುಕೊಂಡು ಬರುವ ಮೂಲಕ ಶಾಲೆ ದೂರವಾದರೂ ಶಾಲೆಯ ಮೇಲಿನ ಅಭಿಮಾನ ಮೆರೆದಿರುವ ಎರಡನೇ ತರಗತಿಯ ನಿಶ್ಮಿತಾ ತಾಯಿ ಲಕ್ಷ್ಮೀ ಅವರನ್ನು ಪ್ರಶ್ನಿಸಿದಾಗ ಬಂದ ಉತ್ತರವಿದು.

ಮಂಗಳೂರು (ಫೆ.22): ನಿಮ್ಮ ಮಗುವನ್ನು ದಿನಕ್ಕೆ ಎಪ್ಪತ್ತು ರುಪಾಯಿ ಖರ್ಚು ಮಾಡಿಕೊಂಡು ಇಪ್ಪತ್ತೆಂಟು ಕಿಮೀ ದೂರದ ಶಾಲೆಗೆ ನಿತ್ಯವೂ ಕರೆದುಕೊಂಡು ಹೋಗಿ, ಬರುವುದು ತೊಂದರೆ ಎನ್ನಿಸುವುದಿಲ್ಲವೇ?
‘ಏನ್ ಮಾಡೋದು ಸಾರ್ ತೊಂದರೆ ಆಗುತ್ತೆ. ಆದರೆ  ಶಾಲೆ ಉಳಿಯಬೇಕಲ್ಲಾ. ಒಂದು ಕನ್ನಡ ಶಾಲೆ ಉಳಿಯಬೇಕು. ಕನ್ನಡ ಶಾಲೆ ಉಳಿವಿಗಾಗಿ ನಾವು 70 ರುಪಾಯಿ ಖರ್ಚು ಮಾಡುವುದು ದೊಡ್ಡ ವಿಚಾರವಲ್ಲ.
ನನ್ನ ಮಗಳಿಂದ ಶಾಲೆ ಉಳಿಯುತ್ತದೆ. ಇನ್ನೊಂದಿಬ್ಬರು ಮಕ್ಕಳಿಗೆ ಅನುಕೂಲವಾಗುತ್ತದೆ ಎನ್ನುವುದಾದರೆ ನಾವು ಈ ರೀತಿಯ ಏನೇ ತೊಂದರೆ ಬಂದರೂ ಸಹಿಸಿಕೊಳ್ಳುತ್ತೇವೆ’ ಎಂದರು ದಕ್ಷಿಣ ಕನ್ನಡದ ಮೂಡುಬಿದಿರೆ ಸಮೀಪದ ಕುದ್ರಿ ಪದವು ನಿವಾಸಿ ಲಕ್ಷ್ಮೀ. ತಮ್ಮ ಮಗುವನ್ನು 25 ಕಿಮೀ ದೂರದ ಕಿಲ್ಪಾಡಿ ಕಿರಿಯ ಪ್ರಾಥಮಿಕ ಶಾಲೆಗೆ ಬಸ್ಸಿನಲ್ಲಿ ಕರೆದುಕೊಂಡು ಹೋಗಿ, ಕರೆದುಕೊಂಡು ಬರುವ ಮೂಲಕ ಶಾಲೆ ದೂರವಾದರೂ ಶಾಲೆಯ ಮೇಲಿನ ಅಭಿಮಾನ ಮೆರೆದಿರುವ ಎರಡನೇ ತರಗತಿಯ ನಿಶ್ಮಿತಾ ತಾಯಿ ಲಕ್ಷ್ಮೀ ಅವರನ್ನು ಪ್ರಶ್ನಿಸಿದಾಗ ಬಂದ ಉತ್ತರವಿದು.

ನಾಲ್ಕು ಮಕ್ಕಳ ಶಾಲೆ

ಪ್ರಸ್ತುತ ಶಾಲೆಯಲ್ಲಿ ಕೇವಲ ನಾಲ್ಕು ಮಕ್ಕಳಿದ್ದಾರೆ. 1 ನೇ ತರಗತಿಯಲ್ಲಿ ಒಂದು ಮಗು, ಎರಡನೇ ತರಗತಿಯಲ್ಲಿ ನಿಶ್ಮಿತಾ ಹಾಗೂ 5 ನೇ ತರಗತಿಯಲ್ಲಿ ಇಬ್ಬರು ವಿದ್ಯಾರ್ಥಿಗಳು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇಬ್ಬರು ಐದನೇ ತರಗತಿಯ ಮಕ್ಕಳು ತೇರ್ಗಡೆಯಾಗಿ ತೆರಳಿದರೆ ಇನ್ನು ಉಳಿಯುವುದು ಇಬ್ಬರು ಮಾತ್ರ. ಅದರಲ್ಲಿ ನಿಶ್ಮಿತಾ ಕೂಡ ಈಗ ಶಾಲೆ ಬಿಟ್ಟು ಬೇರೆ ಕಡೆ ಶಾಲೆ ಸೇರಿದರೆ ಪ್ರಸ್ತುತ ಶಾಲೆಯನ್ನು ಮುಚ್ಚಬೇಕಾದ ಸಂದರ್ಭ ಬರುತ್ತದೆ ಎಂದು ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ನಿಶ್ಮಿತಾ ಪೋಷಕರಾದ ವಾಸು ಮೂಲ್ಯ ಮತ್ತು ಲಕ್ಷ್ಮೀ ಅವರಲ್ಲಿ  ವಿನಂತಿ ಮಾಡಿಕೊಂಡಾಗ, ‘ಕನ್ನಡ ಶಾಲೆಯೊಂದು ನಮ್ಮ ಕಾರಣದಿಂದ ಮುಚ್ಚಬಾರದು. ನಮಗೆ ತೊಂದರೆಯಾದರೂ ಪರವಾಗಿಲ್ಲ. ಶಾಲೆಯೊಂದು ಉಳಿಯಬೇಕು’ ಎಂದು ಮಗಳನ್ನು ಅದೇ ಶಾಲೆಯಲ್ಲಿ ಓದು ಮುಂದುವರೆಸಲು ನಿರ್ಧಾರ ಮಾಡಿದ್ದಾರೆ.
ಶಾಲೆಯಲ್ಲಿ ಓರ್ವ ಶಿಕ್ಷಕಿಯಿದ್ದು ಅವರು ದೂರದ ಮಂಗಳೂರಿನಿಂದ ಬಂದು ಪಾಠ ಮಾಡುತ್ತಿದ್ದಾರೆ. ಮೊದಲು ಕಿಲ್ಪಾಡಿಯಲ್ಲಿ ವಾಸವಿದ್ದ ವಾಸು ಮೂಲ್ಯ ಮತ್ತು ಲಕ್ಷ್ಮೀ ದಂಪತಿ ಕಳೆದ ಅಕ್ಟೋಬರ್‌ನಲ್ಲಿ ಕುದ್ರಿ ಪದವಿಗೆ ವಾಸ ಬದಲಿಸುತ್ತಾರೆ. ಈಗಾಗಿ ಮಗಳನ್ನು ಕುದ್ರಿ ಪದವಿಗೆ ಹತ್ತಿರವಿರುವ ಸರಕಾರಿ ಶಾಲೆಗೆ ಸೇರಿಸುವ ಮನಸ್ಸು ಮಾಡಿದರೂ ಹಿಂದಿನ ಶಾಲೆಯ ಉಳಿವಿಗಾಗಿ ತಮ್ಮ ನಿಲುವು ಬದಲಿಸಿಕೊಳ್ಳುತ್ತಾರೆ.

ಅಭಿಮಾನಕ್ಕೆ ಬಡತನವಿಲ್ಲ

ವಾಸುದೇವ ಮೂಲ್ಯ ಅವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಪತ್ನಿ ಲಕ್ಷ್ಮೀ ಮನೆಯಲ್ಲಿ ಬೀಡಿ ಕಟ್ಟುವ ಕಾಯಕ ಮಾಡುತ್ತಿದ್ದಾರೆ. ಅಂದು ದುಡಿದರೆ ಅಂದಿಗೆ ಎನ್ನುವ ಪರಿಸ್ಥಿತಿ ಇದ್ದರೂ ಸಹಿತ ಮಗಳಿಗಾಗಿ, ಶಾಲೆಗಾಗಿ ದಿನಕ್ಕೆ 70 ರುಪಾಯಿ ಖರ್ಚು ಮಾಡುವ ನಿರ್ಧಾರ ಮಾಡಿದ್ದಾರೆ. ಪ್ರತಿದಿನ ತಂದೆ ವಾಸುದೇವ ಅವರು ಕುದ್ರಿ ಪದವಿನ ತಮ್ಮ ಮನೆಯಿಂದ ಐಕಳ ಸಮೀಪದ
ಕುದ್ರಿಪದವಿನ ಬಸ್ಸು ನಿಲ್ದಾಣದವರೆಗೆ ಸುಮಾರು ಎರಡು ಕಿಮೀ ದೂರ ನಡೆದುಕೊಂಡು ಬಂದು, ಮೂಡುಬಿದಿರೆ-ಮೂಲ್ಕಿ ಬಸ್ಸಿನಲ್ಲಿ ಇಪ್ಪತ್ತೈದು ಕಿಮೀ ದೂರ ಇರುವ ಮೂಲ್ಕಿ ಸಮೀಪದ ಕಿಲ್ಪಾಡಿಯ ಕುಬೆವೂರುನಲ್ಲಿ ಇಳಿಯುತ್ತಾರೆ. ಅಲ್ಲಿಂದ ಪುನಃ ಒಂದು ಕಿಮೀ ನಡೆದುಕೊಂಡು ಶಾಲೆಗೆ ಬರುತ್ತಾರೆ. ಶಾಲೆಯಲ್ಲಿ ಮಗಳನ್ನು ಬಿಟ್ಟು ಬಳಿಕ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಮತ್ತೆ ಸಂಜೆ ಬಂದು ವಾಪಸ್ ಕರೆದುಕೊಂಡು
ಹೋಗುತ್ತಾರೆ. ತಂದೆಗೆ ಅನ್ಯ ಕಾರ್ಯವಿದ್ದಾಗ ತಾಯಿ ಲಕ್ಷ್ಮೀ ಅವರೇ ಈ ಜವಾಬ್ದಾರಿ ನಿರ್ವಹಿಸುತ್ತಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ಅಪ್ಪ- ಅಮ್ಮನ ವಿಚ್ಚೇಧನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?