ಪರಿಶುದ್ಧ ರಾಜಕೀಯಕ್ಕೆ ಇಂದು ಮುಹೂರ್ತ..?

By Web DeskFirst Published Sep 25, 2018, 10:06 AM IST
Highlights

ಹಾಲಿ ಇರುವ ನಿಯಮಗಳ ಅನ್ವಯ ಕ್ರಿಮಿನಲ್ ಕೇಸಿನಲ್ಲಿ 2 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಗೆ ಗುರಿಯಾದವರಿಗೆ ಮಾತ್ರವೇ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಇದೆ. ಆದರೆ ಪ್ರಕರಣವೊಂದರಲ್ಲಿ ದೋಷಿ ಎನ್ನಿಸಿಕೊಂಡವರು, ಮೇಲಿನ ಹಂತದಲ್ಲಿ ತೀರ್ಪನ್ನು ಪ್ರಶ್ನಿಸಿದರೆ, ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇರುತ್ತದೆ. ಇಂಥ ಕೇಸುಗಳ ವಿಚಾರಣೆ ದಶಕಗಳ ಕಾಲ ಎಳೆಯುವುದರಿಂದ ಅನರ್ಹರು ಕೂಡಾ ದಶಕಗಳ ಕಾಲ ರಾಜಕೀಯದಲ್ಲಿ ಇರುತ್ತಾರೆ. ಹೀಗಾಗಿ ಕ್ರಿಮಿನಲ್ ಕೇಸಿನಲ್ಲಿ ಆರೋಪಪಟ್ಟಿ ದಾಖಲಾಗುತ್ತಲೇ ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಿಸಬೇಕು ಎಂದು ಕೋರಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು.

ನವದೆಹಲಿ[ಸೆ.25]: ರಾಜಕೀಯವನ್ನು ಅಪರಾಧ ಮುಕ್ತಗೊಳಿಸಬೇಕು ಎಂಬ ಬೇಡಿಕೆ ತೀವ್ರಗೊಂಡಿರುವ ನಡುವೆಯೇ,ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠವೊಂದು ಇಂದು ಮಹತ್ವದ ತೀರ್ಪು ನೀಡಲಿದೆ. ಕ್ರಿಮಿನಲ್ ಕೇಸುಗಳಲ್ಲಿ ಆರೋಪಪಟ್ಟಿ ದಾಖಲಿಸಲ್ಪಟ್ಟ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕು ಎಂದು ಕೋರಿರುವ ಹಲವು ಅರ್ಜಿಗಳ ಕುರಿತು ಮುಖ್ಯ ನ್ಯಾಯಮೂರ್ತಿ ಮಿಶ್ರಾ ನೇತೃತ್ವದ ಪೀಠ ಇಂದು ತೀರ್ಪು ಪ್ರಕಟಿಸಲಿದೆ.

ಹಾಲಿ ಇರುವ ನಿಯಮಗಳ ಅನ್ವಯ ಕ್ರಿಮಿನಲ್ ಕೇಸಿನಲ್ಲಿ 2 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಗೆ ಗುರಿಯಾದವರಿಗೆ ಮಾತ್ರವೇ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಇದೆ. ಆದರೆ ಪ್ರಕರಣವೊಂದರಲ್ಲಿ ದೋಷಿ ಎನ್ನಿಸಿಕೊಂಡವರು, ಮೇಲಿನ ಹಂತದಲ್ಲಿ ತೀರ್ಪನ್ನು ಪ್ರಶ್ನಿಸಿದರೆ, ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇರುತ್ತದೆ. ಇಂಥ ಕೇಸುಗಳ ವಿಚಾರಣೆ ದಶಕಗಳ ಕಾಲ ಎಳೆಯುವುದರಿಂದ ಅನರ್ಹರು ಕೂಡಾ ದಶಕಗಳ ಕಾಲ ರಾಜಕೀಯದಲ್ಲಿ ಇರುತ್ತಾರೆ. ಹೀಗಾಗಿ ಕ್ರಿಮಿನಲ್ ಕೇಸಿನಲ್ಲಿ ಆರೋಪಪಟ್ಟಿ ದಾಖಲಾಗುತ್ತಲೇ ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಿಸಬೇಕು ಎಂದು ಕೋರಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು.

ಈ ಅರ್ಜಿಗಳ ವಿಚಾರಣೆ ವೇಳೆ, ಶಾಸಕಾಂಗದ ವಿಷಯದಲ್ಲಿ ನ್ಯಾಯಾಂಗ ಮಧ್ಯಪ್ರವೇಶ ಮಾಡಬಾರದು. ಆರೋಪಪಟ್ಟಿ ಹೊರಿಸಿದ ಕೂಡಲೇ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿದರೆ ಅವರ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ. ಇಂಥ ಅಪರಾಧಿಗಳನ್ನು ಚುನಾವಣೆಯಿಂದ ನಿಷೇಧಿಸಲು ಈಗಾಗಲೇ ಸೂಕ್ತ ಕಾನೂನು ಇದೆ ಎಂದು ಕೇಂದ್ರ ಸರ್ಕಾರ ವಾದ ಮಂಡಿಸಿತ್ತು. ಮತ್ತೊಂದೆಡೆ ಕ್ರಿಮಿನಲ್ ಹಿನ್ನೆಲೆಯವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡದಂತೆ ರಾಜಕೀಯ ಪಕ್ಷಗಳು ಕ್ರಮ ಕೈಗೊಳ್ಳಬೇಕು. ಇಂಥ ವ್ಯಕ್ತಿಗಳು ಪಕ್ಷೇತರರಾಗಿ ಬೇಕಾದರೆ ಸ್ಪರ್ಧಿಸಲಿ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತ್ತು. ಮತ್ತೊಂದೆಡೆ ಕಾನೂನು ಆಯೋಗ, ಕ್ರಿಮಿನಲ್ ಕೇಸಿನಲ್ಲಿ ಆರೋಪಪಟ್ಟಿ ದಾಖಲಾಗುತ್ತಲೇ ಅವರನ್ನು ನಿಷೇಧಿಸಬೇಕು ಎಂಬ ಸಲಹೆ ನೀಡಿತ್ತು.

ಜನಪ್ರತಿನಿಧಿಗಳ ವಕೀಲ ವೃತ್ತಿಗೆ ಸುಪ್ರೀಂ ಬ್ರೇಕ್?

ದೇಶದ ಜನಪ್ರತಿನಿಧಿಗಳು ವಕೀಲ ತರಬೇತಿ ಹಾಗೂ ವಕೀಲ ವೃತ್ತಿ ಮಾಡದಂತೆ ನಿರ್ಬಂಧ ಹೇರಬೇಕೆಂಬ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ಪ್ರಕಟಿಸುವ ಸಾಧ್ಯತೆಯಿದೆ. ಬಿಜೆಪಿ ಮುಖಂಡ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯ್ ಈ ಅರ್ಜಿ ಸಲ್ಲಿಸಿದ್ದರು.

8 ದಿನದಲ್ಲಿ 16 ಮಹತ್ವದ ತೀರ್ಪು ನೀಡಲಿರುವ ಮಿಶ್ರಾ

ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅ.2ರಂದು ತಮ್ಮ ಹುದ್ದೆಯಿಂದ ನಿವೃತ್ತರಾಗಲಿದ್ದಾರೆ. ಅಷ್ಟರೊಳಗೆ ಅವರು ಈಗಾಗಲೇ ತಮ್ಮ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಸಿದ್ದ 16 ಕೇಸಿನ ತೀರ್ಪು ಪ್ರಕಟಿಸಲಿದ್ದಾರೆ. 
ಅವುಗಳಲ್ಲಿ ಮುಖ್ಯವಾಗಿ ರಾಮ ಜನ್ಮಭೂಮಿ- ಬಾಬ್ರಿ ಮಸೀದಿ, ಉದ್ಯೋಗ ಬಡ್ತಿ ಮೀಸಲು, ಆಧಾರ್, ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ, ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸುವ ಸಂವಿಧಾನದ 497ನೇ ವಿಧಿ ರದ್ದು ಕೋರಿದ್ದ ಅರ್ಜಿ, ರಾಜ್ಯಗಳಿಗೂ ಆರ್‌ಟಿಐ ಕಾಯ್ದೆ ತಿದ್ದುಪಡಿ ಮಾಡಲು ಅವಕಾಶ, ಅಹಮದ್ ಪಟೇಲ್ ರಾಜ್ಯಸಭೆ ಚುನಾವಣೆ ಪ್ರಕರಣ, ರಾಘವೇಂದ್ರ ಸ್ವಾಮಿ ಮಠ ಮತ್ತು ಉತ್ತರಾಧಿಮಠ ನಡುವಿನ ಪ್ರಕರಣಗಳು ಕೂಡಾ ಸೇರಿವೆ.

click me!