ಅನರ್ಹರಿಗೆ ಸುಪ್ರೀಂ ಟೆನ್ಷನ್‌! ಬೀರುತ್ತಾ ಉಪ ಚುನಾವಣೆ ಮೇಲೆ ಪರಿಣಾಮ

By Kannadaprabha News  |  First Published Sep 23, 2019, 7:21 AM IST

17 ಮಂದಿ ಅನರ್ಹ ಶಾಸಕರು ತಮ್ಮ ಅನರ್ಹತೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟಲ್ಲಿ ಇಂದು ವಿಚಾರಣೆಗೆ ಬರಲಿದೆ. 17ರಲ್ಲಿ 15 ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಈಗಾಗಲೇ ಉಪ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕೋರ್ಟ್‌ ತೀರ್ಪಿನ ಕುರಿತು ಅನರ್ಹ ಶಾಸಕರಲ್ಲಿ ಆತಂಕ ಶುರುವಾಗಿದೆ.


ನವದೆಹಲಿ [ಸೆ.23]:  ರಾಜ್ಯ ರಾಜಕೀಯದ ಪಾಲಿಗೆ ಅತ್ಯಂತ ಮಹತ್ವದ್ದಾಗಿರುವ 17 ಮಂದಿ ಅನರ್ಹ ಶಾಸಕರು ತಮ್ಮ ಅನರ್ಹತೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟಲ್ಲಿ ಇಂದು ವಿಚಾರಣೆಗೆ ಬರಲಿದೆ. 17ರಲ್ಲಿ 15 ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಈಗಾಗಲೇ ಉಪ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕೋರ್ಟ್‌ ತೀರ್ಪಿನ ಕುರಿತು ಅನರ್ಹ ಶಾಸಕರಲ್ಲಿ ಆತಂಕ ಶುರುವಾಗಿದೆ. ಪ್ರಕರಣದಲ್ಲಿ ನ್ಯಾಯಾಲಯವು ಯಾವುದೇ ಆದೇಶ ನೀಡಿದರೂ ಅಥವಾ ವಿಚಾರಣೆಯನ್ನೇ ಮುಂದೂಡಿದರೂ ಅದು 15 ಕ್ಷೇತ್ರಗಳ ಉಪ ಚುನಾವಣೆ ಮೇಲೆ ನೇರ ಪರಿಣಾಮ ಬೀರಲಿದೆ.

ಒಂದು ವೇಳೆ ಸ್ಪೀಕರ್‌ ನಿರ್ಧಾರವನ್ನು ನ್ಯಾಯಾಲಯ ಎತ್ತಿಹಿಡಿದರೆ ಅನರ್ಹ ಶಾಸಕರ ಭವಿಷ್ಯ ಸಂಕಷ್ಟಕ್ಕೆ ಸಿಲುಕಲಿದೆ. ಒಂದು ವೇಳೆ ಅನರ್ಹತೆಯನ್ನೇ ರದ್ದು ಮಾಡಿದರೆ ಮುಂಬರುವ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹ ಶಾಸಕರಿಗೆ ಅವಕಾಶ ಸಿಕ್ಕಂತಾಗಲಿದೆ. ಇದು ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಚಾರವಾಗಿ ರಾಜ್ಯ ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಗೊಂದಲಕ್ಕೂ ತೆರೆ ಎಳೆಯಲಿದೆ. ಆದರೆ, ಏನೂ ನಿರ್ಧಾರವಾಗದೆ ವಿಚಾರಣೆ ಮುಂದೂಡಿಕೆಯಾದರೆ ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಾಗಿ ಹೊಸದಾಗಿ ಕಾನೂನು ಹೋರಾಟ ರೂಪಿಸುವ ಅನಿವಾರ್ಯತೆ ಎದುರಿಸಬೇಕಾಗುತ್ತದೆ.

Latest Videos

undefined

2 ತಿಂಗಳ ಬಳಿಕ: ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತನಗೊಂಡು ಸರಿಯಾಗಿ 2 ತಿಂಗಳ ಬಳಿಕ ಸರ್ಕಾರದ ಪತನಕ್ಕೆ ಕಾರಣರಾದ 17 ಶಾಸಕರು ತಮ್ಮ ಅನರ್ಹತೆಯನ್ನು ಪ್ರಶ್ನಿಸಿರುವ ರಿಚ್‌ ಅರ್ಜಿಗಳು ವಿಚಾರಣೆಗೆ ಬರುತ್ತಿದೆ. ಈ ಮಧ್ಯೆ ಅ.21ಕ್ಕೆ ಉಪ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಸೆ.30 ಕೊನೇ ದಿನ. ಹೀಗಾಗಿ ಸುಪ್ರೀಂ ಕೋರ್ಟ್‌ನ ಸೋಮವಾರದ ನಡೆ ಅನರ್ಹ ಶಾಸಕರ ಪಾಲಿಗೆ ನಿರ್ಣಾಯಕವಾಗಲಿದೆ.

ಉಪ ಚುನಾವಣೆಗೆ ತಡೆ ಕೇಳುವ ಅವಕಾಶ ಅನರ್ಹ ಶಾಸಕರ ಮುಂದಿದ್ದರೂ ಚುನಾವಣೆ ದಿನಾಂಕದ ಅಧಿಸೂಚನೆ ಪ್ರಕಟಗೊಂಡ ಬಳಿಕ ಚುನಾವಣಾ ಪ್ರಕ್ರಿಯೆಯಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡುವುದು ಅಸಾಧ್ಯ ಎಂದು ಕಾನೂನು ತಜ್ಞರು ಹೇಳುತ್ತಾರೆ. ಆದ್ದರಿಂದ ಸ್ಪೀಕರ್‌ ರಮೇಶ್‌ ಕುಮಾರ್‌ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಅಥವಾ ನಮ್ಮನ್ನು ಅನರ್ಹಗೊಳಿಸಿ ಸ್ಪೀಕರ್‌ ನೀಡಿರುವ ಆದೇಶದ ಮರು ವಿಮರ್ಶೆ ನಡೆಸುವಂತೆ ಸ್ಪೀಕರ್‌ ಅವರಿಗೆ ಕಳುಹಿಸಿ ಕೊಡುವಂತೆ ನ್ಯಾಯಾಲಯವನ್ನು ಅನರ್ಹ ಶಾಸಕರು ಕೋರುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗುತ್ತಿದೆ.

ಪ್ರಕರಣದಲ್ಲಿ ಸಾಂವಿಧಾನಿಕ ಅಂಶಗಳು ಅಡಕವಾಗಿದ್ದು ಸುದೀರ್ಘ ವಿಚಾರಣೆಯ ಅಗತ್ಯ ಕಂಡು ಬರಬಹುದು. ಹಾಗೆಯೇ ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಸ್ಪೀಕರ್‌, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪರ ವಕೀಲರೂ ನ್ಯಾಯಾಲಯದಲ್ಲಿ ಹಾಜರಿರಬೇಕಾಗುತ್ತದೆ. ಆದ್ದರಿಂದ ಮಧ್ಯಂತರ ಪರಿಹಾರವಾಗಿ ನಮಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರುವ ಬಗ್ಗೆ ಅನರ್ಹ ಶಾಸಕರ ಕಾನೂನು ತಂಡದಲ್ಲಿ ಸಮಾಲೋಚನೆ ನಡೆಯುತ್ತಿದೆ.

ಒಂದು ವೇಳೆ ಸುಪ್ರೀಂ ಕೋರ್ಟ್‌ ಯಾವುದೇ ತೀರ್ಮಾನ ಪ್ರಕಟಿಸದೇ ಸೆ.30ರ ಬಳಿಕ ವಿಚಾರಣೆಯನ್ನು ಮುಂದೂಡಿದರೆ ಅನರ್ಹ ಶಾಸಕರಿಗೆ ಸ್ಪರ್ಧೆಯ ಬಾಗಿಲು ಬಹುತೇಕ ಮುಚ್ಚಿದಂತಾಗಲಿದೆ. ಬಿಜೆಪಿಗೂ ಅನರ್ಹ ಶಾಸಕರ ಕ್ಷೇತ್ರದಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬ ಗೊಂದಲ ಸೃಷ್ಟಿಯಾಗಲಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡೆದ್ದು ಆನಂದ್‌ ಸಿಂಗ್‌, ಎಚ್‌.ವಿಶ್ವನಾಥ್‌, ರಮೇಶ್‌ ಜಾರಕಿಹೊಳಿ, ಎಂ.ಟಿ.ಬಿ. ನಾಗರಾಜ್‌ ಸೇರಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 17 ಶಾಸಕರು ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರ ಪತನ ಪತನಗೊಂಡಿತ್ತು. ಈ 17 ಶಾಸಕರನ್ನು ಆಗ ಸ್ಪೀಕರ್‌ ಆಗಿದ್ದ ರಮೇಶ್‌ ಕುಮಾರ್‌ ಅವರು ಅನರ್ಹಗೊಳಿಸಿದ್ದರು.

click me!