ಕರ್ನಾಟಕಕ್ಕೆ ಅಸಾಧ್ಯದ ಗೆಲುವು ತಂದುಕೊಟ್ಟರಾ ನಾರಿಮನ್? ಹೇಗಿತ್ತು ಚಾಣಾಕ್ಷ್ಯ ನಾರಿಮನ್'ರ ತಂತ್ರಗಾರಿಕೆ?

By Web DeskFirst Published Oct 5, 2016, 3:43 PM IST
Highlights

ಕಾವೇರಿ ನದಿ ನೀರು ವಿಚಾರದಲ್ಲಿ ರಾಜ್ಯದ ಪರ ವಕೀಲ ಫಾಲಿ ಎಸ್.ನಾರಿಮನ್ ಅವರನ್ನು ಕಿತ್ತುಬಿಸಾಡುವಂತೆ ಆಗ್ರಹಿಸುವ ಕೂಗು ಗಟ್ಟಿಯಾಗಿ ಕೇಳಿಬರುತ್ತಿದೆ. ಆದರೆ, ರಾಜ್ಯ ಸರಕಾರ ಹಾಗೂ ಅನೇಕ ರಾಜಕೀಯ ಮುತ್ಸದ್ದಿಗಳು ನಾರಿಮನ್'ರನ್ನು ಉಳಿಸಿಕೊಳ್ಳಲು ಅತೀವ ಪ್ರಯತ್ನ ನಡೆಸುತ್ತಿರುವುದು ಸುಮ್ಮನೆ ಅಲ್ಲ. ಕಾವೇರಿಯ ಕಾನೂನು ಹೋರಾಟದಲ್ಲಿ ಮೇಲ್ನೋಟಕ್ಕೆ ನಾರಿಮನ್ ಸಂಪೂರ್ಣ ಸೋತುಬಿಟ್ಟರೇನೋ ಎಂದನಿಸಬಹುದು. ಆದರೆ, ವಾಸ್ತವವಾಗಿ ನಾರಿಮನ್ ಕರ್ನಾಟಕಕ್ಕೆ ಒಳ್ಳೆಯ ಗೆಲುವನ್ನು ತಂದುಕೊಟ್ಟಿದ್ದಾರೆ. ನಾರಿಮನ್ ತಂತ್ರಗಾರಿಕೆ ಹೇಗಿತ್ತು ಎಂಬ ಬಗ್ಗೆ ಕೇರಳದ ಸಿವಿಲ್ ಎಂಜಿನಿಯರ್ ಹಾಗೂ ಅಣೆಕಟ್ಟು ತಜ್ಞ ಜೇಮ್ಸ್ ವಿಲ್ಸನ್ ಎಲ್ಲಾ ವಿವರ ತೆರೆದಿಟ್ಟಿದ್ದಾರೆ.

ಸುಪ್ರೀಂಕೋರ್ಟ್ ಬಳಿ ತಮಿಳುನಾಡು ಕೇಳಿದ್ದು 5.84 ಟಿಎಂಸಿ ನೀರು. ಆದರೆ, ನಾರಿಮನ್ ಬಹಳ ಚಾಕಚಕ್ಯತೆಯಿಂದ ಪರಿಸ್ಥಿತಿ ನಿಭಾಯಿಸಿ 5.5 ಟಿಎಂಸಿ ನೀರು ಬಿಡುವ ಸ್ಥಿತಿಗೆ ತಂದು ನಿಲ್ಲಿಸಿದರು. ಸೆ. 5ರಂದು ತಮಿಳುನಾಡು ನಿತ್ಯ 20 ಸಾವಿರ ಕ್ಯೂಸೆಕ್ಸ್ ನೀರಿನಂತೆ ಇಡೀ ತಿಂಗಳು ಬಿಡಬೇಕೆಂದು ಸುಪ್ರೀಂಕೋರ್ಟ್'ನಲ್ಲಿ ಪಟ್ಟುಹಿಡಿದಿದ್ದರು. ಆದರೆ, ಕರ್ನಾಟಕದ ಪರ ವಕೀಲರು ನಿತ್ಯ 10 ಸಾವಿರ ಕ್ಯೂಸೆಕ್ಸ್'ನಂತೆ 7 ದಿನ ನೀರು ಬಿಡುವುದಾಗಿ ತಿಳಿಸಿದರು. ಕೊನೆಗೆ ಸುಪ್ರೀಂಕೋರ್ಟ್ ನಿತ್ಯ 15 ಸಾವಿರ ಕ್ಯೂಸೆಕ್ಸ್'ನಂತೆ 10 ದಿನ ನೀರು ಬಿಡಬೇಕೆಂದು ಕರ್ನಾಟಕಕ್ಕೆ ಆದೇಶಿಸಿತು. ಅಂದರೆ, ಕರ್ನಾಟಕ ಸುಮಾರು 12.96 ಟಿಎಂಸಿ ನೀರು ಬಿಡುವಂತಾಯಿತು. ಕರ್ನಾಟಕಕ್ಕೆ ಭಾರೀ ಸೋಲಾಗಿದೆ. ನೀರು ಬಿಡಲು ನಾರಿಮನ್ ಯಾಕೆ ಒಪ್ಪಿಕೊಂಡರು ಎಂದು ರಾಜ್ಯದಲ್ಲಿ ದೊಡ್ಡ ಕೂಗೇ ಎಬ್ಬಿತು. ಆದರೆ, ನಾರಿಮನ್ ತಂತ್ರಗಾರಿಕೆ ಇದ್ದದ್ದೇ ಅಲ್ಲಿ. ವಿಚಾರಣೆಯ ಸಮಯ ದೂಡುವುದು ಅಥವಾ ವಿಳಂಬ ಮಾಡುವುದು ನಾರಿಮನ್ ಯೋಜನೆಯಾಗಿತ್ತು. ಮುಂದಿನ ವಿಚಾರಣೆಗಳಲ್ಲಿ ಇವರು ಯಶಸ್ವಿಯಾಗಿ ಬಾರ್ಗೈನ್ ಮಾಡುತ್ತಾ ಹೋಗುತ್ತಾರೆ. ಮೊನ್ನೆ ಮೊನ್ನೆ, ಅ. 4ರಂದು ಸುಪ್ರೀಂಕೋರ್ಟ್ ನಿತ್ಯ 2 ಸಾವಿರ ಕ್ಯೂಸೆಕ್'ನಂತೆ 12 ದಿನ ನೀರು ಬಿಡಿ ಎಂದು ಹೇಳುವ ಮಟ್ಟಕ್ಕೆ ಇದು ತಲುಪುತ್ತದೆ. ಅಂದರೆ, ರಾಜ್ಯವು 24 ಸಾವಿರ ಕ್ಯೂಸೆಕ್ ನೀರು ಮಾತ್ರ ಬಿಡುವಂತಹ ಸ್ಥಿತಿಗೆ ತಲುಪಲು ನಾರಿಮನ್ ತಂತ್ರಗಾರಿಕೆಯೇ ಕಾರಣ.

ಸುಪ್ರೀಂಕೋರ್ಟ್'ಗೆ ಸಿಟ್ಟು ಬಂದದ್ದು ಎಲ್ಲಿ?
ಕಾವೇರಿ ಮೇಲುಸ್ತುವಾರಿ ಸಮಿತಿಯು ದಿನಕ್ಕೆ 3 ಸಾವಿರ ಕ್ಯೂಸೆಕ್'ನಂತೆ 10 ದಿನಗಳ ಕಾಲ ತಮಿಳುನಾಡಿಗೆ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿತು. ರಾಜ್ಯವು ಅಷ್ಟರಲ್ಲಾಗಲೇ 3 ಸಾವಿರ ಕ್ಯೂಸೆಕ್'ನಂತೆ 3 ದಿನ ನೀರು ಬಿಟ್ಟಾಗಿತ್ತು. ಇನ್ನು 7 ದಿನವಷ್ಟೇ ನೀರು ಬಿಡಬೇಕಿತ್ತು. ಇದು ಕರ್ನಾಟಕದ ಪಾಲಿಗೆ ಸೋಲಂತೂ ಆಗಿರಲಿಲ್ಲ ಎಂದು ಜೇಮ್ಸ್ ವಿಲ್ಸನ್ ಹೇಳುತ್ತಾರೆ. ಆದರೆ, ರಾಜ್ಯದೊಳಗಿನ ಆಂತರಿಕ ಒತ್ತಡಕ್ಕೆ ಸಿಲುಕಿ ಮೇಲುಸ್ತುವಾರಿ ಸಮಿತಿ ಹೇಳಿದ ಪ್ರಮಾಣದಲ್ಲಿ ನೀರನ್ನು ಬಿಡಲು ಸಾಧ್ಯವಿಲ್ಲವೆಂದು ಕರ್ನಾಟಕ ಸರಕಾರ ನಿಲುವು ತಳೆಯಿತು. ಇದು ಸುಪ್ರೀಂಕೋರ್ಟನ್ನು ಕೆರಳಿಸಿತು. ವಿನಾಕಾರಣ ಅದು ಕಾವೇರಿ ನಿರ್ವಹಣಾ ಮಂಡಳಿ ರಚನೆಯ ವಿಷಯ ಎತ್ತಿಕೊಂಡು ಕರ್ನಾಟಕಕ್ಕೆ ಚಾಟಿ ಬೀಸಲು ಪ್ರಯತ್ನಿಸಿತು. ಮೇಲುಸ್ತುವಾರಿ ಸಮಿತಿ ಹೇಳಿದ್ದಕ್ಕಿಂತಲೂ ಹೆಚ್ಚಿನ ನೀರನ್ನು ಬಿಡಲು ಸರ್ವೋಚ್ಚ ನ್ಯಾಯಾಲಯ ತಿಳಿಸಿತು. ಅಂದರೆ, ನಿತ್ಯ 6 ಸಾವಿರ ಕ್ಯೂಸೆಕ್'ನಂತೆ 7 ದಿನಗಳ ಕಾಲ ನೀರು ಬಿಡುವಂತೆ ಆದೇಶಿಸಿತು.

ಸುಪ್ರೀಂಕೋರ್ಟ್'ನ ಈ ತೀರ್ಪು ಕರ್ನಾಟಕದ ಜನರಲ್ಲಿ ಭಾವೋದ್ವೇಗ ಸೃಷ್ಟಿಗೆ ಕಾರಣವಾಯಿತು. ಇಡೀ ರಾಜಕೀಯ ಪಕ್ಷಗಳು ಒಗ್ಗೂಡಿ ಒಂದು 'ನಿರ್ಣಯ' ಹೊರತಂದವು. ರಾಜ್ಯದ ನಾಲ್ಕು ಕಾವೇರಿ ಜಲಾನಯನ ಜಲಾಶಯಗಳಲ್ಲಿ ಒಟ್ಟು ಇರುವುದು 27.26 ಟಿಎಂಸಿ ನೀರು ಮಾತ್ರ. ಇದು ಕುಡಿಯಲು ಸಾಕಾಗುತ್ತದೆಯಷ್ಟೇ. ಈ ನೀರನ್ನು ಕುಡಿಯಲಷ್ಟೇ ಬಳಸುತ್ತೇವೆ ಎಂಬಂತಹ ನಿರ್ಣಯ ಬಂದಿತು.

ಇಷ್ಟೆಲ್ಲಾ ಬೆಳವಣಿಗೆಗಳಾಗುವಷ್ಟರಲ್ಲಿ ಎರಡು ವಾರ ವಿಳಂಬವಾಯಿತು. ಈ ಅವಧಿಯಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗಿ ಸುಮಾರು 6 ಟಿಎಂಸಿಯಷ್ಟು ಹೆಚ್ಚುವರಿ ನೀರು ಸೇರ್ಪಡೆಗೊಂಡಿತು. ಜೊತೆಗೆ ಬಹಳ ಮಹತ್ವದ ಜನಾಕ್ರೋಶ ಹಾಗೂ ಕೇಂದ್ರ ಸರಕಾರದ ಮಧ್ಯಪ್ರವೇಶಕ್ಕೆ ಕಾರಣವಾಯಿತು. ಕರ್ನಾಟಕಕ್ಕೆ ಮಾರಕವಾಗಬಹುದಾದ ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಷಯದಲ್ಲಿ ಕೇಂದ್ರ ಸರಕಾರ ಸಹಾಯಕ್ಕೆ ಬಂದಿತು. ಮಂಡಳಿ ರಚನೆಯನ್ನು ಆದೇಶಿಸುವ ಹಕ್ಕು ಸುಪ್ರೀಂಕೋರ್ಟ್'ಗೆ ಇಲ್ಲ ಎಂದು ಕೇಂದ್ರ ಸರಕಾರ ತಿಳಿಹೇಳಿತು. ಅಲ್ಲಿಗೆ, ಸುಪ್ರೀಂಕೋರ್ಟ್ ಸಾಕಷ್ಟು ಸೌಮ್ಯಗೊಂಡಿತು.

ನಾರಿಮನ್ ವಾದದ ಝಲಕ್:
ಅಕ್ಟೋಬರ್ 4ರಂದು: "ಮೇಲುಸ್ತುವಾರಿ ಸಮಿತಿ ನಿರ್ಧಾರವನ್ನು ನಾವು ಪ್ರಶ್ನಿಸಿದೆವು. ಆದರೆ, ನೀವು ನಮ್ಮನ್ನು ವಿಚಾರಿಸದೆಯೇ 6 ಸಾವಿರ ಕ್ಯೂಸೆಕ್ ನೀರು ಬಿಡಲು ನಿರ್ದೇಶಿಸಿದಿರಿ. ನೀವು ನಮ್ಮ ಮಾತು ಕೇಳಲಿಲ್ಲ. ಇದು ಇಡೀ ಸಮಸ್ಯೆಗೆ ಕಾರಣವಾಯಿತು" ಎಂದು ನಾರಿಮನ್ ವಾದಿಸಿದರು. "ಕೋರ್ಟ್'ನ ನಿರ್ಧಾರವನ್ನು ಉಲ್ಲಂಘಿಸಬೇಡಿ ಎಂದು ನನ್ನ ರಾಜ್ಯಕ್ಕೆ ತಿಳಿಸಿದ್ದೆ" ಎಂದು ಕೋರ್ಟ್'ನಲ್ಲಿ ಹೇಳುವ ಮೂಲಕ ಕಾನೂನು ಪರಿಪಾಲನೆಯಲ್ಲಿ ತನಗಿರುವ ಕಾಳಜಿಯಲ್ಲಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು. ಆದರೆ, ಅದೇ ಉಸಿರಿನಲ್ಲಿ "ನೀವು(ಸುಪ್ರೀಂಕೋರ್ಟ್) ನನಗೆ ಮುಜುಗರ ಉಂಟುಮಾಡಬೇಡಿ" ಎಂದು ಕೋರ್ಟ್'ಗೆ ತಣ್ಣಗೆ ಚಾಟಿ ಬೀಸಲೂ ನಾರಿಮನ್ ಯಶಸ್ವಿಯಾಗಿದ್ದರು.

ಅಷ್ಟೇ ಅಲ್ಲ, ನೀರು ಬಿಡುವ ಪ್ರಮಾಣವನ್ನು ಬದಲಿಸುತ್ತಾ ಹೋಗಲು ಕಾರಣವೇನು ಎಂದು ತಾವು ತಿಳಿಸಿಲ್ಲ. ತಮ್ಮ ಆದೇಶದಿಂದಾಗಿ ನನ್ನ ಮೇಲೆ ಸಾಕಷ್ಟು ಟೀಕೆ ಬಂದಿತು. ದಯವಿಟ್ಟು ಇಂತಹ ಆದೇಶವನ್ನು ಹೊರಡಿಸಬೇಡಿ ಎಂದು ಸುಪ್ರೀಂಕೋರ್ಟ್'ಗೆ ನೇರವಾಗಿ ನಾರಿಮನ್ ಸೂಚಿಸಿದರು. ಇದಕ್ಕೆ ಉತ್ತರಿಸಿದ ಸುಪ್ರೀಂಕೋರ್ಟ್, ತಾನು ಅಂಕಗಣಿತದ ಲೆಕ್ಕಾಚಾರದಲ್ಲಿ ಅಂತಹ ನಿರ್ಧಾರ ತೆಗೆದುಕೊಂಡೆವು ಎಂದಿತು. ಇದಕ್ಕೆ ಸರಿಯಾಗಿ ಪ್ರತಿಕ್ರಿಯಿಸಿದ ನಾರಿಮನ್, ಈ ನಿರ್ಧಾರವನ್ನು ಗಣಿತದ ಲೆಕ್ಕಾಚಾರದ ಮೇಲೆ ತೆಗೆದುಕೊಳ್ಳಲು ಆಗುವುದಿಲ್ಲ. ವಾಸ್ತವ ಪರಿಸ್ಥಿತಿ ಅರಿತು ನಿರ್ಧರಿಸಬೇಕಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದರು.

ಇದೀಗ, ಕರ್ನಾಟಕ ರಾಜ್ಯವು ಅ. 7-18ರವರೆಗೆ ನಿತ್ಯ 2 ಸಾವಿರ ಕ್ಯೂಸೆಕ್ಸ್'ನಂತೆ 12 ದಿನಗಳ ನೀರು ಬಿಡಲು ಒಪ್ಪಿಕೊಂಡಿದೆ. ಈ ವೇಳೆ, ಕರ್ನಾಟಕದ ಪಾಲಿಗೆ ಮುಳುವಾದ ಕಾವೇರಿ ನಿರ್ವಹಣಾ ಮಂಡಳಿಯ ತೂಗುಗತ್ತಿ ದೂರವಾಗಿದೆ. ಅಲ್ಲದೇ, ಕಾವೇರಿ ಮೇಲುಸ್ತುವಾರಿಯ ತಂಡವು ಕರ್ನಾಟಕ ಮತ್ತು ತಮಿಳುನಾಡಿಗೆ ತೆರಳಿ ಅಲ್ಲಿಯ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಲಿದೆ.

ಇದು ಕರ್ನಾಟಕದ ಪಾಲಿಗೆ ಸ್ಪಷ್ಟ ಜಯ ಎಂದು ಹೇಳುತ್ತಾರೆ ಕೇರಳದ ತಜ್ಞ ಜೇಮ್ಸ್ ವಿಲ್ಸನ್.

click me!