ನಾಗಪಂಚಮಿ ದಿನ ಇಲ್ಲಿ ಚೇಳುಗಳಿಗೆ ಅಗ್ರಪೂಜೆ!

By Web DeskFirst Published Aug 5, 2019, 10:28 AM IST
Highlights

ನಾಗಪಂಚಮಿ ದಿನ ಇಲ್ಲಿ ಚೇಳುಗಳಿಗೆ ಅಗ್ರಪೂಜೆ!  ಯಾದಗಿರಿ ಸಮೀಪದ ಕಂದಕೂರಿನ ಕೊಂಡಮಾಯಿ ಗುಡ್ಡದಲ್ಲಿ ವಿಶೇಷ ಆಚರಣೆ | ಕೀಟಲೆ ಮಾಡಿದರೂ ಕಚ್ಚದು ಎಂಬ ನಂಬಿಕೆ

ಯಾದಗಿರಿ (ಆ. 05): ನಾಗರ ಪಂಚಮಿಯಂದು ಎಲ್ಲೆಡೆ ನಾಗದೇವರಿಗೆ ಹಾಲೆರೆದರೆ ಈ ಗ್ರಾಮದಲ್ಲಿ ಮಾತ್ರ ಚೇಳುಗಳಿಗೆ ಅಗ್ರಪೂಜೆ!. ಈ ವೇಳೆ ಮೈಮೇಲೆ ಚೇಳು ಬಿಟ್ಟುಕೊಂಡು ಚೇಷ್ಟೆನಡೆಸುವ ಭಕ್ತರಿಗೆ, ಹಬ್ಬದ ದಿನದಂದು ಚೇಳುಗಳು ಕಚ್ಚುವುದಿಲ್ಲ ಎಂಬ ನಂಬಿಕೆ ಇಲ್ಲಿಯ ಜನರದ್ದಾಗಿದೆ.

ಯಾದಗಿರಿ ಸಮೀಪದ ಕಂದಕೂರು ಗ್ರಾಮದ ಕೊಂಡಮಾಯಿ ಗುಡ್ಡದಲ್ಲಿ ಪ್ರತಿವರ್ಷದ ನಾಗರ ಪಂಚಮಿಯಂದು ಚೇಳುಗಳ ಜಾತ್ರೆ ನಡೆಯಲಿದ್ದು, ಹಬ್ಬದ ದಿನದಂದು ಕೊಂಡಮಾಯಿ ಗುಡ್ಡದಲ್ಲಿ ಸಾವಿರಾರು ಚೇಳುಗಳು ಕಾಣಿಸಿಕೊಳ್ಳುತ್ತವೆ. ಗುಡ್ಡದಲ್ಲಿ ಚೇಳಿನ ಮೂರ್ತಿಯುಳ್ಳ ದೇವಸ್ಥಾನವಿದ್ದು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿ ಅನೇಕ ಭಾಗಗಳಿಂದ ಭಕ್ತರು ನಾಗರಪಂಚಮಿಯಂದು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ಎಲ್ಲೆಂದರಲ್ಲಿ ಚೇಳುಗಳು:

ನಾಗರ ಪಂಚಮಿಯ ಸಂಜೆ ಈ ಗುಡ್ಡದ ತುಂಬೆಲ್ಲ ಚೇಳುಗಳು ತುಂಬಿಕೊಳ್ಳುತ್ತವೆ. ನೆಲ ಬಗೆದರೆ ಕೆಂಪು ಚೇಳುಗಳ ಹಿಂಡು ಹಿಂಡೇ ಕಾಣಿಸುತ್ತದೆ. ಊರಿನ ಪುಟ್ಟಬೆಟ್ಟದಲ್ಲಿ ಯಾವುದೇ ಕಲ್ಲನ್ನೆತ್ತಿ ನೋಡಿದರೂ ಅಲ್ಲಿ ಚೇಳುಗಳು ಪ್ರತ್ಯಕ್ಷವಾಗುತ್ತವೆ. ಎಷ್ಟೇ ಕೀಟಲೆ ಕೊಟ್ಟರೂ ಯಾರನ್ನೂ ಕಚ್ಚುವುದಿಲ್ಲ.

ಕಚ್ಚಿದ ಉದಾಹರಣೆಯೂ ಇಲ್ಲ ಎನ್ನುತ್ತಾರೆ ಗ್ರಾಮಸ್ಥರು. ಕೊಂಡಮಾಯಿ ಗುಡಿಯಲ್ಲಿ ಪೂಜೆ ಸಲ್ಲಿಸುವುದರಿಂದ ಚೇಳುಗಳು ಯಾರನ್ನೂ ಕಚ್ಚುವುದಿಲ್ಲ ಎಂದು ನಂಬಿದ್ದಾರೆ. ಅಷ್ಟೇ ಅಲ್ಲ, ಗ್ರಾಮಕ್ಕೆ ದುಷ್ಟಜಂತುಗಳ ಕಾಟ ಕೂಡ ಬರುವುದಿಲ್ಲ.

ನಮ್ಮ ಗ್ರಾಮದಲ್ಲಿ ಯಾವುದೇ ಸಂದರ್ಭದಲ್ಲಿ ಯಾರೂ ಚೇಳುಗಳನ್ನು ಕೊಲ್ಲುವುದಿಲ್ಲ. ಚೇಳುಗಳನ್ನು ಭಕಿಯಿಂದ ಕಾಣುತ್ತೇವೆ ಎನ್ನುತ್ತಾರೆ ಈ ಗ್ರಾಮದ ಜನ. ದೇಶದ ಯಾವ ಮೂಲೆಯಲ್ಲೂ ಇಲ್ಲದ ಚೇಳಿನ ದೇವಾಲಯ ಇಲ್ಲಿದೆ. ಚೇಳುದೇವಿ ಕೊಂಡಮಾಯಿಯೇ ತಮ್ಮೂರ ರಕ್ಷಕಿ ನ್ನುತ್ತಾರೆ ಗ್ರಾಮಸ್ಥರು.

ಪಂಚಮಿ ದಿನ ಕುಟುಕುವುದಿಲ್ಲ

ಕಂದಕೂರು ಗ್ರಾಮದ ಸುತ್ತ ಇನ್ನೂ ಅನೇಕ ಗುಡ್ಡಗಳಿವೆ. ಆದರೆ ಕೊಂಡಮಾಯಿ ಬೆಟ್ಟದಲ್ಲಿ ಮಾತ್ರ ಪ್ರತಿ ಕಲ್ಲಿನ ಸಂದಿಯಲ್ಲೂ ಚೇಳುಗಳಿರುತ್ತವೆ. ಅಪ್ಪಿತಪ್ಪಿ ಉಳಿದ ದಿನಗಳಲ್ಲಿ ಯಾರಿಗಾದರೂ ಕಚ್ಚಿದರೆ ಕೊಂಡಮಾಯಿಯನ್ನು ನೆನೆದು ಭಸ್ಮ ಹಚ್ಚಿದರೆ ಸಾಕು ವಾಸಿಯಾಗುತ್ತದೆ ಎಂಬುದು ಸ್ಥಳೀಯರ ನಂಬಿಕೆಯಾಗಿದೆ.

ವೈಜ್ಞಾನಿಕ ಕಾರಣವೇನು?

ಚೇಳು ಜೀವಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜೀವಿಸಲು ಕಂದಕೂರು ಗುಡ್ಡದಲಿ ತೇವಾಂಶ ಹೆಚ್ಚಾಗಿರುವುದೇ ಕಾರಣ. ಜೀವಿಗಳು ಅವುಗಳಿಗೆ ಅನುಕೂಲಕರ ವಾತಾವರಣ ಇದ್ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೆಲೆ ನಿಲ್ಲುತ್ತವೆ. ಅದೇ ರೀತಿ ಕಂದಕೂರು ಗುಡ್ಡ ಚೇಳಿಗೆ ಹಿತಕರ ವಾತಾವರಣ ಹೊಂದಿದೆ ಎನ್ನುವುದು ವೈಜ್ಞಾನಿಕ ಕಾರಣ ಅನ್ನೋದು ಜೀವಿಶಾಸ್ತ್ರ ಅಧ್ಯಯನ ಮಾಡಿದವರ ಅಭಿಮತ.

click me!