ಖುಲಾಸೆಯೋ? ಶಿಕ್ಷೆಯೋ?: ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಆರೋಪ: ಹರತಾಳು ಹಾಲಪ್ಪ ಭವಿಷ್ಯ ಇಂದು ನಿರ್ಧಾರ

By Suvarna Web DeskFirst Published Aug 17, 2017, 8:35 AM IST
Highlights

ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಆರೋಪದಲ್ಲಿ ಮಂತ್ರಿಸ್ಥಾನ ಕಳೆದುಕೊಂಡಿದ್ದ ಹರತಾಳು ಹಾಲಪ್ಪ ಅವ್ರ ಭವಿಷ್ಯ ಇಂದು ನಿರ್ಧಾರವಾಗಲಿದೆ. ಪ್ರಕರಣ ಸಂಬಂಧ ಸುದೀರ್ಘ ವಿಚಾರಣೆ ನಡೆಸಿರುವ ಶಿವಮೊಗ್ಗದ ಜಿಲ್ಲಾ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಲಿದೆ. ಹೀಗಾಗಿ ಎಲ್ಲರ ಚಿತ್ತ ಕೋರ್ಟ್‌ನತ್ತ ನೆಟ್ಟಿದೆ.

ಶಿವಮೊಗ್ಗ(ಆ.17): ಮಾಜಿ ಸಚಿವ ಹರತಾಳು ಹಾಲಪ್ಪನ ಭವಿಷ್ಯ ಇಂದು ನಿರ್ಧಾರವಾಗಲಿದೆ. ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸೆಗಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತೀರ್ಪು ಪ್ರಕಟವಾಗಲಿದೆ. ಸತತ 7 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಶಿವಮೊಗ್ಗದ 2 ನೇ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಲಯದ ನ್ಯಾಯಾಧೀಶೆ ರಮಾರವರು ತೀರ್ಪು ನೀಡಲಿದ್ದಾರೆ.  ಅತ್ಯಾಚಾರ ಘಟನೆ ನಡೆದು 6 ತಿಂಗಳ ಬಳಿಕ ಹಾಲಪ್ಪ ವಿರುದ್ಧ ಪ್ರಕರಣ ದಾಖಲಾಗಿತ್ತಲ್ಲದೇ ಈ ಪ್ರಕರಣದ ಕೈಗೆತ್ತಿಗೊಂಡಿದ್ದ ಸಿಐಡಿ ಪೋಲಿಸರು 10 ತಿಂಗಳ ಬಳಿಕ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿದ್ದರು.  ಅತ್ಯಾಚಾರಕ್ಕೊಳ್ಳಗಾಗಿದ್ದ ಚಂದ್ರಾವತಿ , ಮತ್ತವಳ ಪತಿ ವೆಂಕಟೇಶಮೂರ್ತಿ ಸೇರಿದಂತೆ ಹಲವರ ವಿಚಾರಣೆ ನಡೆಸಿರುವ ನ್ಯಾಯಾಲಯ ಇಂದು ಮಹತ್ವದ ತೀರ್ಪು ಪ್ರಕಟಿಸಲಿದೆ.

ಏನಿದು ಈ ಪ್ರಕರಣ..?

2009ರ ನವೆಂಬರ್​ 26 ರಂದು ಊಟ ಮಾಡಲು ಆಗಮಿಸಿದ್ದ ಹರತಾಳು ಹಾಲಪ್ಪರವರು ತಮ್ಮ ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದಾಗಿ ವೆಂಕಟೇಶಮೂರ್ತಿ ಆರೋಪಿಸಿದ್ದರು. ಈ ಸಂಬಂಧ ವೆಂಕಟೇಶಮೂರ್ತಿ ಮತ್ತು ಆತನ ಪತ್ನಿ ಚಂದ್ರಾವತಿ 2010 ಮೇ 3 ರಂದು ಶಿವಮೊಗ್ಗದ ವಿನೋಬನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಆದ್ರೆ ಒಂದು ದಿನ ಮುಂಚಿತವಾಗಿಯೇ ಅಂದ್ರೆ 2010 ಮೇ. 2 ರಂದೇ ಹಾಲಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2010 ಮೇ 10 ರಂದು ಹಾಲಪ್ಪ ಪೊಲೀಸರಿಗೆ ಶರಣಾಗಿದ್ದರು. ಕೆಲ ದಿನಗಳ ಬಳಿಕ ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು. 

90 ದಿನದೊಳಗೆ ಚಾರ್ಚ್​ಶಿಟ್ ಸಲ್ಲಿಸಬೇಕಾಗಿದ್ದ ಸಿಐಡಿ ಪೋಲಿಸರು 10 ತಿಂಗಳಾದರೂ ನ್ಯಾಯಾಲಯಕ್ಕೆ ಚಾರ್ಚ್​ಶೀಟ್ ಸಲ್ಲಿಸಿರಲಿಲ್ಲ. ಆಗ ಹಾಲಪ್ಪ ಪರ ವಕೀಲರು ಈ ವಿಳಂಬದ ಕುರಿತು ಹೈಕೊರ್ಟ್​ ಗಮನ ಸೆಳೆದಿದ್ದರು. ಆಗ ಹೈಕೋರ್ಟ್  ಪ್ರಕರಣಕ್ಕೆ ಸಂಬಂಧಿಸಿದಂತೆ 2011 ರ ಮಾ. 31ರೊಳಗೆ ಸಂಬಂಧಿಸಿದ ನ್ಯಾಯಾಲಯಕ್ಕೆ ತನಿಖಾ ವರದಿಯನ್ನು ಸಲ್ಲಿಸುವಂತೆ  ಸಿಐಡಿಗೆ ಸ್ಪಷ್ಟ ಆದೇಶ ನೀಡಿತ್ತು. ಆಗ  ಸಿಐಡಿ ಪೊಲೀಸರು ಮಾ 30 ರಂದು ಶಿವಮೊಗ್ಗ ನಗರದ ಮೂರನೇ ಹೆಚ್ಚುವರಿ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಇದೀಗ ಸುದೀರ್ಘ ವಾದ-ಪ್ರತಿವಾದ ಆಲಿಸಿರುವ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಲಿದೆ. ಹೀಗಾಗಿ ಎಲ್ಲರ ಚಿತ್ತ ಇದೀಗ ಕೋರ್ಟ್‌ ತೀರ್ಪಿನತ್ತ ನೆಟ್ಟಿದೆ.

 

click me!