ವೈರಲ್ ಚೆಕ್: ಕಲಾವಿದರನ್ನು ನಿಷೇಧಿಸಿದರೆ ದೇಶ ಬಿಡ್ತೀನಿ ಅಂದ್ರಾ ಶಾರೂಕ್ ಖಾನ್?

By Web DeskFirst Published Feb 23, 2019, 7:54 AM IST
Highlights

ಪಾಕ್‌ ಕಲಾವಿದರನ್ನು ನಿಷೇಧಿಸಿದರೆ ದೇಶ ಬಿಡುವೆ ಎಂದು ಶಾರೂಕ್ ಖಾನ್ ಹೇಳಿದ್ದಾರೆ ಎನ್ನಲಾಗಿದ್ದು ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿಜಕ್ಕೂ ಶಾರೂಕ್ ಹೀಗೆ ಹೇಳಿದ್ರಾ? ಏನಿದರ ಅಸಲಿಯತ್ತು? ಇಲ್ಲಿದೆ ಓದಿ. 

ಮುಂಬೈ (ಫೆ. 23):  ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೈನಿಕರ ಮೇಲೆ ನಡೆದ ಆತ್ಮಾಹುತಿ ಬಾಂಬ್‌ ದಾಳಿ ಬಳಿಕ ಈ ಕುರಿತು ದಿನಕ್ಕೊಂದು ಸುದ್ದಿಗಳು ತಿಳಿದುಬರುತ್ತಿವೆ. ಇದರ ಜೊತೆಗೆ ಸುಳ್ಳುಸುದ್ದಿಗಳ ಪ್ರಸರಣವೂ ಹೆಚ್ಚುತ್ತಿದೆ.

ಸದ್ಯ ಖ್ಯಾತ ಬಾಲಿವುಡ್‌ ನಟ ಶಾರುಖ್‌ ಖಾನ್‌, ‘ಭಾರತದಲ್ಲಿ ಪಾಕಿಸ್ತಾನ ಕಲಾವಿದರನ್ನು ನಿಷೇಧಿಸಿದರೆ ತಾನು ಭಾರತ ಬಿಡುತ್ತೇನೆ’ ಎಂದು ಹೇಳಿಕೆ ನೀಡಿದ್ದಾರೆಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಿಜೆಪಿ ಸೋಷಿಯಲ್‌ ಮೀಡಿಯಾ, ಸುಧೀರ್‌ ಚೌಧರಿ, ಭಾಜಪ ಮಿಷನ್‌ 2019, ಮೋದಿ ಮಿಷನ್‌ 2019 ಸೇರಿದಂತೆ ಅನೇಕ ಫೇಸ್‌ಬುಕ್‌ ಪೇಜ್‌ಗಳು ಈ ಸಂದೇಶವನ್ನು ಶೇರ್‌ ಮಾಡಿವೆ. ಕೇವಲ ಫೇಸ್‌ಬುಕ್‌ನಲ್ಲಿ ಮಾತ್ರವಲ್ಲದೆ ಟ್ವೀಟರ್‌, ವಾಟ್ಸ್‌ಆ್ಯಪ್‌ಗಳಲ್ಲೂ ವೈರಲ್‌ ಆಗುತ್ತಿದೆ.

ಆದರೆ ನಿಜಕ್ಕೂ ಶಾರುಖ್‌ ಖಾನ್‌ ಹೀಗೆ ಹೇಳಿಕೆ ನೀಡಿದ್ದರಾ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ತಿಳಿದುಬಂದಿದೆ. ವಾಸ್ತವವಾಗಿ ಖಾನ್‌ ಈ ರೀತಿಯ ಯಾವ ಹೇಳಿಕೆಯನ್ನೂ ನೀಡಿಲ್ಲ. ಅಲ್ಲದೆ ಈ ಬಗ್ಗೆ ಯಾವುದೇ ಮುಖ್ಯವಾಹಿನಿಯ ಮಾಧ್ಯಮಗಳೂ ವರದಿ ಮಾಡಿಲ್ಲ. ಬದಲಾಗಿ ಫೆ.15ರಂದು ನಡೆದ ಪುಲ್ವಾಮಾ ದಾಳಿಯನ್ನು ಖಂಡಿಸಿ, ಹುತಾತ್ಮ ಯೋದರ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದರು.

ಫೆ.18ರಂದು ಅಖಿಲ ಭಾರತ ಚಲನಚಿತ್ರ ಕಾರ್ಮಿಕರ ಒಕ್ಕೂಟ( ಆಲ್‌ ಇಂಡಿಯಾ ಸಿನಿ ವರ್ಕ​ರ್‍ಸ್ ಅಸೋಸಿಯೇಶನ್‌) ಭಾರತದ ಚಲನಚಿತ್ರೋದ್ಯಮದಲ್ಲಿರುವ ಎಲ್ಲಾ ಪಾಕಿಸ್ತಾನಿ ಕಲಾವಿದರಿಗೆ ನಿಷೇಧ ಹೇರಿತ್ತು. ಈ ಬಗ್ಗೆ ಶಾರುಖ್‌ ಖಾನ್‌ ಯಾವುದೇ ಹೇಳಿಕೆ ನೀಡಿಲ್ಲ. ಹಾಗಾಗಿ ಈ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.

ಇದಕ್ಕೂ ಮೊದಲು, ಶಾರುಖ್‌ ಖಾನ್‌ ಪಾಕಿಸ್ತಾನಕ್ಕೆ 45 ಕೋಟಿ ದೇಣಿಗೆ ನೀಡಿದ್ದಾರೆ. ಆದರೆ ಹುತಾತ್ಮರಾದ ಭಾರತೀಯ ಯೋಧರ ಕುಟುಂಬಕ್ಕೆ ನೆರವಾಗಿಲ್ಲ ಎಂದು ಸುಳ್ಳುಸುದ್ದಿ ಹರಡಲಾಗಿತ್ತು.

- ವೈರಲ್ ಚೆಕ್ 

click me!