
ನವದೆಹಲಿ : ಸಮ್ಮತಿಯ ಸಲಿಂಗಕಾಮವನ್ನು ಅಪರಾಧ ಎಂದು ಸಾರುವ 158 ವರ್ಷದಷ್ಟು ಹಳೆಯದಾದ ಐಪಿಸಿ ಸೆಕ್ಷನ್ 377ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತಂತೆ ಸುಪ್ರೀಂಕೋರ್ಟ್ ಗುರುವಾರ ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸಲಿದೆ.
ಸಲಿಂಗಕಾಮಿಗಳ ಹಕ್ಕುಗಳ ಹೋರಾಟಗಾರರು ಸೇರಿದಂತೆ ವಿವಿಧ ವ್ಯಕ್ತಿ, ಸಂಘ-ಸಂಸ್ಥೆಗಳ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಮುಖ್ಯ ನ್ಯಾಯಾಧೀಶ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠ ಜು.17ರಂದು ತೀರ್ಪು ಕಾದಿರಿಸಿದ್ದು, ಗುರುವಾರ ಪ್ರಕಟಿಲಿಸದೆ. ನ್ಯಾ. ರೋಹಿನ್ಟನ್ ನಾರಿಮನ್, ನ್ಯಾ. ಎ.ಎಂ. ಖಾನ್ವಿಲ್ಕರ್, ನ್ಯಾ. ಡಿ.ವೈ. ಚಂದ್ರಚೂಡ ಹಾಗೂ ನ್ಯಾ. ಇಂದೂ ಮಲ್ಹೋತ್ರಾ ಅವರು ಪೀಠದ ಇತರ ಸದಸ್ಯರು.
ಈ ವಿಚಾರವಾಗಿ ಪ್ರತಿಕ್ರಿಯೆ ಸಲ್ಲಿಸಲು ಮೊದಲು ಸಮಯಾವಕಾಶ ಕೇಳಿದ್ದ ಕೇಂದ್ರ ಸರ್ಕಾರ, ತದನಂತರದಲ್ಲಿ ಈ ವಿಚಾರವನ್ನು ಸುಪ್ರೀಂಕೋರ್ಟಿನ ವಿವೇಚನೆಗೆ ಬಿಟ್ಟಿದೆ. ಹೀಗಾಗಿ ನ್ಯಾಯಾಲಯ ಯಾವ ರೀತಿಯ ತೀರ್ಪು ನೀಡಬಹುದು ಎಂಬ ಕುತೂಹಲ ಗರಿಗೆದರಿದೆ.
ಏನಿದು ಪ್ರಕರಣ?: ಐಪಿಸಿ ಸೆಕ್ಷನ್ 377 ಎಂಬುದು ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಸಂಬಂಧಿಸಿದ್ದಾಗಿದೆ. ಯಾವುದೇ ವ್ಯಕ್ತಿ ಪ್ರಕೃತಿಗೆ ವಿರುದ್ಧವಾಗಿ ಪುರುಷ, ಮಹಿಳೆ ಅಥವಾ ಪ್ರಾಣಿಗಳ ಜತೆ ಲೈಂಗಿಕ ಕ್ರಿಯೆ ನಡೆಸಿದರೆ ಜೀವಾವಧಿ ಅಥವಾ 10 ವರ್ಷದವರೆಗೂ ವಿಸ್ತರಿಸಬಹುದಾದ ಶಿಕ್ಷೆ ವಿಧಿಸಬಹುದು ಹಾಗೂ ದಂಡ ಹೇರಬಹುದು ಎಂದು ಈ ಕಾಯ್ದೆ ಹೇಳುತ್ತದೆ. 2001ರಲ್ಲಿ ಈ ಕಾಯ್ದೆಯ ವಿರುದ್ಧ ನಾಝ್ ಫೌಂಡೇಷನ್ ಎಂಬ ಎನ್‌ಜಿಒ ದೆಹಲಿ ಹೈಕೋರ್ಟ್ ಮೊರೆ ಹೋಗಿತ್ತು. 2009ರಲ್ಲಿ ಆ ನ್ಯಾಯಾಲಯ ಸಲಿಂಗಕಾಮವನ್ನು ಅಪರಾಧಮುಕ್ತಗೊಳಿಸಿ ಐತಿಹಾಸಿಕ ತೀರ್ಪು ನೀಡಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಕೆಯಾಗಿತ್ತು. 2013ರಲ್ಲಿ ದೆಹಲಿ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ವಜಾಗೊಳಿಸಿ, ಸಲಿಂಗಕಾಮವನ್ನು ಅಕ್ರಮ ಎಂದು ಕರೆದಿತ್ತು. ಈ ತೀರ್ಪಿಗೆ ವ್ಯಾಪಕ ಟೀಕೆ-ಟಿಪ್ಪಣಿಗಳು, ಪರ-ವಿರೋಧಗಳು ಕೇಳಿಬಂದಿದ್ದವು.
ಈ ಸಂಬಂಧ ಕ್ಯುರೇಟಿವ್ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆ ಅರ್ಜಿಗಳ ವಿಚಾರಣೆ ನಡೆಸುವ ಬದಲು, ಸೆಕ್ಷನ್ 377 ಕುರಿತಂತೆ ಮೊದಲಿನಿಂದ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.