
ನವದೆಹಲಿ: ‘ವ್ಯಭಿಚಾರ (ಅಕ್ರಮ ಸಂಬಂಧ) ಪ್ರಕರಣಗಳಲ್ಲಿ ಪುರುಷ ಮತ್ತು ಮಹಿಳೆ- ಇಬ್ಬರನ್ನೂ ಸಮಾನ ದೋಷಿಗಳು ಎಂದು ಪರಿಗಣಿಸಬೇಕು ಅಥವಾ ಪುರುಷ/ಮಹಿಳೆಯರ ನಡುವೆ ತಾರತಮ್ಯ ಮಾಡುವ ವ್ಯಭಿಚಾರ ನಿರ್ಬಂಧ ಕಾನೂನನ್ನು ರದ್ದುಗೊಳಿಸಬೇಕು’ ಎಂದು ಕೋರಿ ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿರುವ ಅರ್ಜಿಗೆ ಕೇಂದ್ರ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಅದು ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದು, ಭಾರತೀಯ ವೈವಾಹಿಕ ಮೌಲ್ಯ ರಕ್ಷಣೆಗೆ ಈ ಕಾನೂನು ಅಗತ್ಯ ಎಂದಿದೆ.
ಭಾರತೀಯ ದಂಡ ಸಂಹಿತೆ 497ರ ಪ್ರಕಾರ ವ್ಯಭಿಚಾರವು ಶಿಕ್ಷಾರ್ಹವಾಗಿದೆ. ಇದು ಮದುವೆಯ ಪಾವಿತ್ರ್ಯತೆ ರಕ್ಷಿಸಲು 157 ವರ್ಷದ ಹಿಂದೆ ಬ್ರಿಟಿಷ್ ಸರ್ಕಾರದ ಅವಧಿಯಲ್ಲೇ ಜಾರಿಯಾದ ಕಾನೂನಾಗಿದೆ. ಈ ಕಾನೂನಿನ ಪ್ರಕಾರ, ಪುರುಷನೊಬ್ಬ ಮದುವೆಯಾದ ಮಹಿಳೆಯೊಂದಿಗೆ ಸಂಬಂಧ ಇರಿಸಿಕೊಂಡರೆ ಪುರುಷನಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. ಮಹಿಳೆಗೆ ಯಾವುದೇ ಶಿಕ್ಷೆಯಾಗುವುದಿಲ್ಲ.
ವ್ಯಭಿಚಾರ ಅಪರಾಧ- ಕೇಂದ್ರ: ‘ಮಹಿಳೆಯನ್ನು ಈ ಪ್ರಕರಣಗಳಲ್ಲಿ ಸಮಾನ ಅಪರಾಧಿ ಎಂದು ಪರಿಗಣಿಸುವುದಿಲ್ಲ. ಸೆಕ್ಷನ್ 497 ಲಿಂಗ ತಾರತಮ್ಯ ಹೊಂದಿದ್ದು, ಇದು ಅಸಾಂವಿಧಾನಿಕ’ ಎಂದು ಜೋಸೆಫ್ ಶೈನ್ ಎಂಬುವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಮುಖ್ಯನ್ಯಾಯಾಧೀಶ ನ್ಯಾ. ದೀಪಕ್ ಮಿಶ್ರಾ ಅವರ ಪೀಠದ ಮುಂದೆ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರ ಭಾರತೀಯ ವೈವಾಹಿಕ ಮೌಲ್ಯ ಎತ್ತಿ ಹಿಡಿಯಲು ಮತ್ತು ಮದುವೆಯ ಪಾವಿತ್ರ್ಯತೆ ರಕ್ಷಿಸಲು ವ್ಯಭಿಚಾರವು ಶಿಕ್ಷಾರ್ಹ ಎಂದು ಒತ್ತಿ ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ನ್ಯಾ. ವಿ.ಎಸ್. ಮಳಿಮಠ ಅವರು ನೀಡಿದ ಆಪರಾಧಿಕ ನ್ಯಾಯಿಕ ವ್ಯವಸ್ಥೆ ಸುಧಾರಣೆಯ ವರದಿಯನ್ನೂ ಉಲ್ಲೇಖಿಸಿದೆ.
ಈ ಅರ್ಜಿಯನ್ನು ವಜಾ ಮಾಡುವಂತೆ ನ್ಯಾಯಪೀಠಕ್ಕೆ ಕೇಳಿಕೊಂಡಿರುವ ಕೇಂದ್ರ, ‘ಈ ಕಾನೂನನ್ನು ಬದಲಿಸಹೊರಟರೆ/ರದ್ದು ಮಾಡಿದರೆ ಅದು ಭಾರತೀಯ ಮೌಲ್ಯಗಳಿಗೆ ಹಾಗೂ ವೈವಾಹಿಕ ಪಾವಿತ್ರ್ಯತೆಗೆ ವಿರುದ್ಧ ಎನ್ನಿಸಿಕೊಳ್ಳುತ್ತದೆ’ ಎಂದಿದೆ. ಈ ಹಿಂದಿನ ವಿಚಾರಣೆಯಲ್ಲಿ ಪರಿಚ್ಛೇದ 497ನ್ನು ಈಗಿನ ಕಾಲಮಾನಕ್ಕೆ ತಕ್ಕಂತೆ ಮರುಪರಿಶೀಲನೆಗೆ ಒಳಪಡಿಸಲು ಸುಪ್ರೀಂ ಕೋರ್ಟ್ ಇಂಗಿತ ವ್ಯಕ್ತಪಡಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.