ಮತ್ತೋರ್ವ ಸ್ಯಾಂಡಲ್ ವುಡ್ ಹೀರೊ ಅರೆಸ್ಟ್ !

By Web DeskFirst Published Nov 5, 2018, 8:17 AM IST
Highlights

ಮತ್ತೋರ್ವ ಸ್ಯಾಂಡಲ್ ವುಡ್ ಸ್ಟಾರ್ ಗೆ ಸಂಕಷ್ಟ ಎದುರಾಗಿದ್ದು, ಪೊಲೀಸರು ಬಂಧನಕ್ಕೆ ಒಳಪಡಿಸಿದ್ದಾರೆ. ಅಕ್ರಮವಾಗಿ ಪಿಸ್ತೂಲ್ ಮತ್ತು ಗುಂಡುಗಳನ್ನು ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಅರೆಸ್ಟ್ ಆಗಿದ್ದಾನೆ. 

ಬೆಂಗಳೂರು :  ಅಕ್ರಮವಾಗಿ ಪಿಸ್ತೂಲ್ ಮತ್ತು ಗುಂಡುಗಳನ್ನು ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ನಾಯಕ ನಟನೋರ್ವ ಸೇರಿ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ‘ಸರ್ಕಾರ್’ ಎಂಬ ಕನ್ನಡ ಚಿತ್ರದ ನಾಯಕ ಜಗದೀಶ್ ಎಸ್.ಹೊಸಮಠ (31), ಎಚ್‌ಎಎಲ್‌ನ ಇಸ್ಲಾಂಪುರ್‌ದ ಮಹಮ್ಮದ್ ನಿಜಾಮ್ (25),  ಜಿ.ಎಂ.ಪಾಳ್ಯದ ಬಿ.ಜಿ.ಸತೀಶ್ ಕುಮಾರ್ (44) ಹಾಗೂ ಕೊತ್ತನೂರಿನ  ಕೆ.ನಾರಾಯಣಪುರದ ಸೈಯದ್ ಸಮೀರ್ ಅಹಮದ್ (32) ಬಂಧಿತರು.

ಬಂಧಿತ ಆರೋಪಿಗಳಿಂದ ಎರಡು ಪಿಸ್ತೂಲ್ ಮತ್ತು 21 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮೂಲತಃ ಹುಬ್ಬಳ್ಳಿಯ ಗಣೇಶ್‌ಪೇಟ್ ನಿವಾಸಿಯಾಗಿರುವ ಜಗದೀಶ್ ಎಸ್.ಹೊಸಮಠ ಕಳೆದ ಮಾರ್ಚ್‌ನಲ್ಲಿ ಬಿಡುಗಡೆಗೊಂಡ ‘ಸರ್ಕಾರ್’ ಚಿತ್ರದಲ್ಲಿ ನಾಯಕರಾಗಿದ್ದರು. ಚಿತ್ರ ಸೋತ ಬಳಿಕ ಜಗದೀಶ್ ಯಾವುದೇ ಕೆಲಸ ಮಾಡುತ್ತಿರಲಿಲ್ಲ. 

ಸಿನಿಮಾ ತೆಗೆಯುವಾಗ ಜಗದೀಶ್, ಮೊಹಮ್ಮದ್ ನಿಜಾಮ್ ಬಳಿ ಎರಡು ಲಕ್ಷ ಹಣ ಸಾಲ ಪಡೆದಿದ್ದರು. ಹೀಗೆ ಜಗದೀಶ್‌ಗೆ ಮಹಮ್ಮದ್ ನಿಜಾಮ್‌ನ ಪರಿಚಯವಾಗಿತ್ತು. ಮಹಮ್ಮದ್ ನಿಜಾಮ್ ಎಚ್ ಎಎಲ್‌ನಲ್ಲಿ ಶಾಮೀಯಾನ್ ಅಂಗಡಿ ಹೊಂದಿದ್ದರೆ, ಸತೀಶ್ ಸಣ್ಣಪುಟ್ಟ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ. ಸೈಯದ್ ಮಾಂಸದ ಅಂಗಡಿ ಹೊಂದಿದ್ದು, 1.84 ಕೋಟಿ ಹಳೇ ನೋಟು ವಿನಿಮಯ ಮಾಡುವಾಗ ಕೊತ್ತನೂರು ಪೊಲೀಸರಿಂದ ಈ ಹಿಂದೆ ಬಂಧನಕ್ಕೆ ಒಳಗಾಗಿದ್ದ. 

ಅ.23 ರಂದು ರಾತ್ರಿ ವೇಳೆ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬೆಮಲ್ ಆಡಿಟೋರಿಯಂ, ಬೆಮಲ್ ಟೌನ್ ಶಿಫ್ ಕ್ಟಾಟ್ರರ್ಸ್ ಸಮೀಪ ಮಹಮ್ಮದ್ ನಿಜಾಮ್ ಹಾಗೂ ಜಗದೀಶ್ ಅಕ್ರಮವಾಗಿ ಪಿಸ್ತೂಲ್ ಮತ್ತು ಗುಂಡುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಒಂದು ಪಿಸ್ತೂಲ್ ಹಾಗೂ 10 ಜೀವಂತ ಗುಂಡು ಜಪ್ತಿ ಮಾಡಿದ್ದರು. 

ಬಳಿಕ ಬಂಧಿತರು ನೀಡಿದ ಮಾಹಿತಿ ಮೇರೆಗೆ ಸತೀಶ್ ಹಾಗೂ ಸೈಯದ್ ಸಮೀರ್‌ನನ್ನು ಬಂಧಿಸಿ ಅವರ ಬಳಿ ಇದ್ದ ಪಿಸ್ತೂಲ್ ಒಂದು 11 ಜೀವಂತ ಗುಂಡು  ಜಪ್ತಿ ಮಾಡಲಾಯಿತು ಎಂದು ಅಧಿಕಾರಿ ಮಾಹಿತಿ ನೀಡಿದರು. ಬಂಧಿತ ಆರೋಪಿಗಳು ಎಲ್ಲಿಂದ ಈ ಅಕ್ರಮ ಶಸ್ತ್ರಾಗಳನ್ನು ಖರೀದಿ ಮಾಡಿದ್ದರು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಮೂರ್ನಾಲ್ಕು ಜನ ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇತರ ಆರೋಪಿಗಳ ಬಂಧನದ ಬಳಿಕ ಪಿಸ್ತೂಲ್‌ಗಳನ್ನು ಎಲ್ಲಿಂದ ಖರೀದಿ ಮಾಡಿದ್ದರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಎಂದು ಸಿಸಿಬಿ ಅಪರಾಧ ವಿಭಾಗದ ಡಿಸಿಪಿ ಎಸ್. ಗಿರೀಶ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

click me!