
ನವದೆಹಲಿ: ಎನ್‌ಡಿಎ ಮೈತ್ರಿಕೂಟ ಮತ್ತು ಹಂಚಿಹೋಗಿದ್ದ ವಿಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಸಾಕ್ಷಿಯಾಗಿದ್ದ 2019ರ ಲೋಕಸಭಾ ಚುನಾವಣೆ, ಇತಿಹಾಸದಲ್ಲೇ ಅತ್ಯಂತ ದುಬಾರಿ ಚುನಾವಣೆ. ಈ ಚುನಾವಣೆಗೆ ಅಂದಾಜು 60,000 ಕೋಟಿ ರು.ಹಣ ವೆಚ್ಚ ಮಾಡಲಾಗಿದೆ ಎಂದು ಅಧ್ಯಯನ ವರದಿಯೊಂದು ಆಘಾತಕಾರಿ ಮಾಹಿತಿ ನೀಡಿದೆ. ಈ ವೆಚ್ಚ ಚುನಾವಣಾ ಆಯೋಗ ನಿಗದಿಪಡಿಸಿದ್ದ ಹಣಕ್ಕಿಂತ ಭಾರೀ ಪ್ರಮಾಣದಲ್ಲಿ ಹೆಚ್ಚು ಎಂಬುದು ಆತಂಕಕಾರಿ ವಿಷಯ.
ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಬಿಡುಗಡೆ ಮಾಡಿರುವ ವರದಿ ಅನ್ವಯ, 2014ರ ಲೋಕಸಭಾ ಚುನಾವಣೆಗೆ ಮಾಡಲಾದ 30 ಸಾವಿರ ಕೋಟಿ ರು. ವೆಚ್ಚಕ್ಕೆ ಹೋಲಿಸಿದರೆ ಈ ಬಾರಿ ದುಪ್ಪಟ್ಟು ವೆಚ್ಚ ಮಾಡಲಾಗಿದೆ. ಒಟ್ಟಾರೆ ವೆಚ್ಚವನ್ನು ವಿಂಗಡಿಸಿದರೆ ಪ್ರತಿ ಕ್ಷೇತ್ರಕ್ಕೂ ತಲಾ 100 ಕೋಟಿ ರು. ವೆಚ್ಚವಾಗಿರುವುದನ್ನು ಗಮನಿಸಬಹುದು. ಅದರಲ್ಲೂ ಕರ್ನಾಟಕದ ಮಂಡ್ಯ, ಕಲಬುರಗಿ, ಶಿವಮೊಗ್ಗ ಮತ್ತು ಉತ್ತರಪ್ರದೇಶದ ಅಮೇಠಿ ಸೇರಿದಂತೆ ದೇಶದ 75-85 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ತಲಾ 40 ಕೋಟಿ ರು.ವರೆಗೂ ವೆಚ್ಚ ಮಾಡಿದ್ದಾರೆ ಎಂದು ವರದಿ ಹೇಳಿದೆ.
ನಿಯಮಗಳ ಅನ್ವಯ ಒಬ್ಬ ಅಭ್ಯರ್ಥಿ ಲೋಕಸಭಾ ಚುನಾವಣೆಗೆ ಗರಿಷ್ಠ 70 ಲಕ್ಷ ರು. ವೆಚ್ಚ ಮಾಡಬಹುದು. ಇದರ ಅಧಾರದಲ್ಲಿ ಅಭ್ಯರ್ಥಿಗಳು ಗರಿಷ್ಠ 10-12000 ಕೋಟಿ ರು. ವೆಚ್ಚ ಮಾಡಬಹುದು. ಆದರೆ ಅನಧಿಕೃತವಾಗಿ ಚುನಾವಣೆಗೆ 55-60000 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದು ವರದಿ ಹೇಳಿದೆ.
1 ಮತಕ್ಕೆ 700 ರು.: ವರದಿಯಲ್ಲಿ ಉಲ್ಲೇಖಿಸಿರುವ ಪ್ರಕಾರ, ಮತದಾರರನ್ನು ಸೆಳೆಯಲು ತಲಾ ಒಂದು ಮತಕ್ಕೆ ಸುಮಾರು 700 ರು. ನೀಡಲಾಗಿದೆ. ಪ್ರತಿ ಕ್ಷೇತ್ರಕ್ಕೆ 100 ಕೋಟಿ ರು. ವೆಚ್ಚ ಮಾಡಲಾಗಿದೆ. ಶೇ.10ರಿಂದ ಶೇ12ರಷ್ಟುಜನರು ತಾವು ರಾಜಕೀಯ ಪಕ್ಷಗಳಿಂದ ಹಣವನ್ನು ನೇರವಾಗಿ ಪಡೆದುಕೊಂಡಿರುವುದಾಗಿ ಹೇಳಿದರೆ, ಮತದಾರರಿಗೆ ಹಣ ಹಂಚಲಾಗಿದೆ ಎಂದು ಶೇ.66ರಷ್ಟುಮಂದಿ ಹೇಳಿದ್ದಾರೆ.
ಇನ್ನಷ್ಟುಅಧಿಕ:
ಗ್ರಹಿಕೆಗಳು, ಅನುಭವಗಳು ಮತ್ತು ಅಂದಾಜು (ಪಿಇಇ) ಸೂತ್ರದ ಮೂಲಕ 2019ರ ಚುನಾವಣಾ ವೆಚ್ಚವನ್ನು ಅಂದಾಜಿಸಲಾಗಿದೆ. ಆದರೆ, ಚುನಾವಣಾ ಆಯೋಗದ ಅಧಿಸೂಚನೆ ಹೊರಬೀಳುವುದಿಕ್ಕಿಂತ ಕೈಗೊಂಡ ಪ್ರಚಾರ, ಜಾಹೀರಾತು ಹಾಗೂ ಇತರ ವೆಚ್ಚಗಳನ್ನು ಲೆಕ್ಕ ಹಾಕಿದರೆ ವೆಚ್ಚದ ಪ್ರಮಾಣ ಇನ್ನಷ್ಟುಅಧಿಕಗೊಳ್ಳುವ ಸಾಧ್ಯತೆ ಇದೆ.
ಬಿಜೆಪಿ ನಂ.1:
2019ರ ಚುನಾವಣೆಯಲ್ಲಿ ಮಾಡಿರುವ ಒಟ್ಟೂವೆಚ್ಚದಲ್ಲಿ ಬಿಜೆಪಿಯೊಂದೇ ಶೇ.45ರಷ್ಟುಪಾಲು ಹೊಂದಿದೆ. 2009ರ ಚುನಾವಣೆಯಲ್ಲಿ ಒಟ್ಟೂಚುನಾವಣಾ ವೆಚ್ಚದ ಶೇ.45ರಷ್ಟುಪಾಲು ಹೊಂದಿದ್ದ ಕಾಂಗ್ರೆಸ್‌ನ ಪಾಲು ಈ ಬಾರಿ ಕೇವಲ ಶೇ.15ರಿಂದ 20ರಷ್ಟುಮಾತ್ರ.
ಚುನಾವಣಾ ವೆಚ್ಚ ಮಾಡಿದ್ದು ಹೇಗೆ?
12-15000 ಕೋಟಿ ರು.: ಶೇ.20-25 ಮತದಾರರಿಗೆ ನೇರ ಹಣ ಹಂಚಿಕೆ
20-25000 ಕೋಟಿ ರು.: ಚುನಾವಣಾ ಪ್ರಚಾರ, ಜಾಹೀರಾತಿಗೆ ಬಳಕೆ
10-12000 ಕೋಟಿ ರು.: ಚುನಾವಣಾ ಆಯೋಗ ನಿಗದಿಪಡಿಸಿರುವ ಖರ್ಚು ವೆಚ್ಚ
05- 6000 ಕೋಟಿ ರು.: ಚುನಾವಣಾ ಸಾಮಗ್ರಿ ಸಾಗಣೆಗೆ ಮಾಡಿರುವ ವೆಚ್ಚ
03- 6000 ಕೋಟಿ ರು.: ಇತರೇ ವೆಚ್ಚಗಳು
1998: 9000 ಕೋಟಿ ರು.
1999: 10000 ಕೋಟಿ ರು.
2004: 14000 ಕೋಟಿ ರು.
2009: 20000 ಕೋಟಿ ರು.
2014: 30000 ಕೋಟಿ ರು.
2019: 60000 ಕೋಟಿ ರು.
2009ರ ಚುನಾವಣೆ
ಬಿಜೆಪಿ ಪಾಲು: ಶೇ.20
ಕಾಂಗ್ರೆಸ್ ಪಾಲು ಶೇ.45
2019ರ ಚುನಾವಣೆ
ಬಿಜೆಪಿ ಪಾಲು: ಶೇ. 45
ಕಾಂಗ್ರೆಸ್ ಪಾಲು ಶೇ.20
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.