ಜಮ್ಮು ಮತ್ತು ಕಾಶ್ಮೀರ ಇನ್ನು ರಾಜ್ಯವಲ್ಲ

By Web DeskFirst Published Aug 6, 2019, 8:35 AM IST
Highlights

ಇಡೀ ಜಮ್ಮು ಮತ್ತು ಕಾಶ್ಮೀರ ಇನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ |  ಜಮ್ಮು ಮತ್ತು ಕಾಶ್ಮೀರ ಒಂದು ಪ್ರದೇಶ, ಲಡಾಖ್‌ ಮತ್ತೊಂದು ಪ್ರದೇಶ |ಜಮ್ಮು ಕಾಶ್ಮೀರ ವಿಧಾನಸಭೆ ಹೊಂದಿದ ಕೇಂದ್ರಾಡಳಿತ ಪ್ರದೇಶವಾಗಿ ರಚನೆ 

ನವದೆಹಲಿ (ಆ. 06):  ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರವು ಹೊಂದಿದ್ದ ರಾಜ್ಯಸ್ಥಾನವನ್ನು ರದ್ದುಗೊಳಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಇಡೀ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದೆ. ಹೀಗಾಗಿ ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರವು ದೆಹಲಿ ಮತ್ತು ಪುದುಚೇರಿ ಮಾದರಿಯಲ್ಲಿ ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶವಾಗಿ ಗುರುತಿಸಿಕೊಳ್ಳಲಿದ್ದರೆ, ಲಡಾಖ್‌ ಪ್ರಾಂತ್ಯವು ಚಂಡೀಗಢ ಮಾದರಿಯಲ್ಲಿ ವಿಧಾನಸಭೆ ಹೊಂದಿರದ ಕೇಂದ್ರಾಡಳಿತ ಪ್ರದೇಶವಾಗಿ ಗುರುತಿಸಿಕೊಳ್ಳಲಿದೆ.

370ನೇ ವಿಧಿ ಜಾರಿ ಬೆನ್ನಲ್ಲೇ: ಜಮ್ಮು-ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ, ಅಬ್ದುಲ್ಲಾ ಸೆರೆ!

ಇದುವರೆಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯವು, ಮುಖ್ಯವಾಗಿ 3 ಪ್ರಾಂತ್ಯಗಳನ್ನು ಒಳಗೊಂಡಿತ್ತು. ಅವುಗಳೆಂದರೆ, ಜಮ್ಮು, ಕಾಶ್ಮೀರ ಮತ್ತು ಲಡಾಖ್‌. ಈ ಪೈಕಿ ಹೆಚ್ಚು ವಿಸ್ತಾರ ಹೊಂದಿದ್ದರೂ, ಕಡಿಮೆ ಜನಸಂಖ್ಯೆ ಇರುವ ಕಾರಣ, ಲಡಾಖ್‌ ಪ್ರಾಂತ್ಯ ಅಭಿವೃದ್ಧಿ ಯೋಜನೆಗಳಿಂದ ವಂಚಿತವಾಗಿತ್ತು.

ಮತ್ತೊಂದೆಡೆ ಸಂವಿಧಾನದ 370ನೇ ವಿಧಿ ಮತ್ತು 35ಎ ವಿಧಿಯು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ಕಾರಣ, ಈ ಭಾಗದಲ್ಲೂ ಬಂಡವಾಳ ಹೂಡಿಕೆಗೆ ಅವಕಾಶ ಇಲ್ಲದೆ, ಅಭಿವೃದ್ಧಿ ಕಾರ್ಯಗಳೂ ಕುಂಠಿತಗೊಂಡಿದ್ದವು. ಜೊತೆಗೆ ರಾಜ್ಯದಲ್ಲಿ ದಶಕಗಳಿಂದ ಬೇರೂರಿರುವ ಉಗ್ರವಾದವು, ಕಾಶ್ಮೀರ ಪ್ರಾಂತ್ಯವನ್ನು ಅಭಿವೃದ್ದಿಪಥದಿಂದ ದೂರ ತಳ್ಳುತ್ತಲೇ ಬಂದಿತ್ತು.

ಈ ಹಿನ್ನೆಲೆಯಲ್ಲಿ ರಾಜ್ಯವನ್ನು, ದೇಶದ ಇತರೆ ರಾಜ್ಯಗಳ ಜೊತೆ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸಂವಿಧಾನದ 370, 35ನೇ ವಿಧಿ ರದ್ದು ಮಾಡಿರುವ ಕೇಂದ್ರ ಸರ್ಕಾರ, ಅದರ ಜೊತೆಜೊತೆಗೇ ಇಡೀ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಜಮ್ಮು ಮತ್ತು ಕಾಶ್ಮೀರ ಇದುವರೆಗೆ ಹೊಂದಿದ್ದ ರಾಜ್ಯದ ಸ್ಥಾನಮಾನವನ್ನು ರದ್ದುಪಡಿಸುವುದರ ಜೊತೆಗೆ ಅದನ್ನು 2 ಭಾಗಗಳಾಗಿ ವಿಭಜಿಸಿ, ಎರಡನ್ನೂ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದೆ.

click me!