ಈ ತಿಂಗಳು ಸರ್ಕಾರಿ ರಜೆಯ ದಿನ ಬದಲು?

By Web DeskFirst Published Oct 10, 2018, 10:35 AM IST
Highlights

ಈ ತಿಂಗಳ ಸರ್ಕಾರಿ ರಜೆಯನ್ನು ಸರ್ಕಾರ ಚಿಂತನೆ ನಡೆಸಿದೆ. ಈ ತಿಂಗಳಲ್ಲಿ ರಜೆಯನ್ನು 2ನೇ ಶನಿವಾರದ ಬದಲಾಗಿ ಮೂರನೇ ಶನಿವಾರ ನೀಡಲು ಚಿಂತನೆ ನಡೆಸಿದೆ. 

ಬೆಂಗಳೂರು :  ದಸರಾ ಹಬ್ಬದ ಪ್ರಯುಕ್ತ ಸಾಲು-ಸಾಲು ಸರ್ಕಾರಿ ರಜೆ ಬಂದಿರುವ ಹಿನ್ನೆಲೆಯಲ್ಲಿ ಅಕ್ಟೋಬರ್‌ ತಿಂಗಳ ಮಟ್ಟಿಗೆ 2ನೇ ಶನಿವಾರದ ಸರ್ಕಾರಿ ರಜೆ ರದ್ದು ಮಾಡಿ 3ನೇ ಶನಿವಾರವಾದ ಅ.20ರಂದು ಸಾರ್ವತ್ರಿಕ ರಜೆ ನೀಡುವ ಚಿಂತ​ನೆ​ಯನ್ನು ರಾಜ್ಯ ಸರ್ಕಾರ ಹೊಂದಿ​ದೆ.

ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರು ಪ್ರಸ್ತಾವನೆ ಸಿದ್ಧಪಡಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಸೂಚನೆ ನೀಡಿದ್ದಾರೆ. ಅಕ್ಟೋಬರ್‌ 18, 19ರಂದು ಆಯುಧ ಪೂಜೆ, ವಿಜಯ ದಶಮಿ ಪ್ರಯುಕ್ತ ರಜೆ ಇದೆ. ಜತೆಗೆ ಅ.21ರಂದು ಭಾನುವಾರ ಸಾರ್ವತ್ರಿಕ ರಜೆ ಇದೆ. ಹೀಗಾಗಿ ಅ.20ರಂದು (3ನೇ ಶನಿವಾರ) ಸರ್ಕಾರಿ ನೌಕರರು ರಜೆ ತೆಗೆದುಕೊಂಡು ನಾಲ್ಕು ದಿನ ಸುದೀರ್ಘ ರಜೆಗೆ ತೆರಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಹೀಗಾಗಿ ಅಕ್ಟೋಬರ್‌ ತಿಂಗಳಿಗೆ ಮಾತ್ರ ಅನ್ವಯಿಸುವಂತೆ ಅ.13ರಂದು ಬರುವ 2ನೇ ಶನಿವಾರದ ರಜೆಯನ್ನು ರದ್ದುಗೊಳಿಸಿ ಅ.20 ರಂದು ಬರುವ 3ನೇ ಶನಿವಾರವನ್ನು ಸಾರ್ವತ್ರಿಕ ರಜೆಯನ್ನಾಗಿ ಘೋಷಿಸಬೇಕು. ಈ ಬಗ್ಗೆ ಕಾನೂನು ಅವಕಾಶಗಳನ್ನು ಪತ್ತೆ ಮಾಡಿ ಕರಡು ಸಿದ್ಧಪಡಿಸುವಂತೆ ಡಿಪಿಎಆರ್‌ ಇಲಾಖೆಗೆ ವಿಜಯಭಾಸ್ಕರ್‌ ಸೂಚನೆ ನೀಡಿದ್ದಾರೆ.

ಈ ಬಗ್ಗೆ ‘ಕನ್ನಡಪ್ರಭ’ ಜತೆ ಮಾತನಾಡಿದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌, ಪ್ರಸಕ್ತ ತಿಂಗಳ ಮಟ್ಟಿಗೆ ಮಾತ್ರ ಅ.13 ರ 2ನೇ ಶನಿವಾರದ ರಜೆಯನ್ನು ಅ.20 ರಂದು ನೀಡಲು ಪ್ರಸ್ತಾವನೆ ಸಿದ್ಧಪಡಿಸಲು ಸೂಚನೆ ನೀಡಿದ್ದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯ ಒಪ್ಪಿಗೆ ಅಗತ್ಯವಿರುತ್ತದೆ. ಹೀಗಾಗಿ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

click me!