ಅನ್ನಭಾಗ್ಯ ಅಕ್ಕಿ 5ಕೆಜಿಯೋ, 7 ಕೆಜಿಯೋ..?

By Web DeskFirst Published Jul 18, 2018, 7:48 AM IST
Highlights

ರಾಜ್ಯ ಸರ್ಕಾರದ ‘ಅನ್ನಭಾಗ್ಯ’ ಯೋಜನೆಯಡಿ ಮಾಸಿಕವಾಗಿ ನೀಡುವ ಅಕ್ಕಿಯ ಪ್ರಮಾಣದ ಬಗೆಗಿನ ಗೊಂದಲ ಇನ್ನೂ ಮುಂದುವರೆದಿದೆ.

ಬೆಂಗಳೂರು :  ರಾಜ್ಯ ಸರ್ಕಾರದ ‘ಅನ್ನಭಾಗ್ಯ’ ಯೋಜನೆಯಡಿ ಮಾಸಿಕವಾಗಿ ನೀಡುವ ಅಕ್ಕಿಯ ಪ್ರಮಾಣದ ಬಗೆಗಿನ ಗೊಂದಲ ಇನ್ನೂ ಮುಂದುವರೆದಿದೆ. ಪ್ರತಿ ತಿಂಗಳು ನೀಡುತ್ತಿದ್ದ ಏಳು ಕೇಜಿ ಅಕ್ಕಿಯನ್ನು ಐದು ಕೇಜಿಗೆ ಕಡಿತ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರೂ ಸಹ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮದ್ ಅವರು ಮಾತ್ರ ಕಡಿತ ಮಾಡಿರುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿಲ್ಲ. 

ಹಾಗಾಗಿ ಏಳು ಕೇಜಿ ಅಕ್ಕಿಯನ್ನೇ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್‌ನಲ್ಲಿ ಅಕ್ಕಿಯನ್ನು ಏಳು ಕೇಜಿಯಿಂದ ಐದು ಕೇಜಿಗೆ ಕಡಿತ ಮಾಡುವುದಾಗಿ ಘೋಷಣೆ ಮಾಡಿದ ನಂತರ ತಾವು ಬಡವರು ಅಕ್ಕಿಯನ್ನೇ ಹೆಚ್ಚು ಬಳಸುವುದರಿಂದ ಅಕ್ಕಿ ಪ್ರಮಾಣ ಕಡಿಮೆ ಮಾಡದಂತೆ ಮುಖ್ಯಮಂತ್ರಿಗೆ ಮನವಿ ಮಾಡಿ ದ್ದೇನೆ. ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ. 

ಬಜೆಟ್ ಮೇಲಿನ ಚರ್ಚೆಗೆ ಉತ್ತರ ಕೊಡುವ ಸಂದರ್ಭದಲ್ಲಿಯೂ ಸಹ ಹಿಂದಿನಂತೆ ಏಳು ಕೆ.ಜಿ. ಕೊಡುವುದಾಗಿ ಹೇಳಿದ್ದಾರೆ. ಈಗ ಮತ್ತೆ ಕಡಿತ ಮಾಡಲು ನಿರ್ಧರಿಸಿದ್ದರೆ ತಮ್ಮೊಂದಿಗೆ ಚರ್ಚಿಸಬೇಕಾಗಿತ್ತು. ಆದರೆ ಈವರೆಗೆ ಚರ್ಚಿಸಿಲ್ಲ. ಹೀಗಾಗಿ ಪಡಿತರದಾರರಿಗೆ ಏಳು ಕೇಜಿ ಅಕ್ಕಿಯನ್ನೇ ನೀಡಲಾಗುವುದು ಎಂದು ಹೇಳಿದರು.

ಉಳಿದಂತೆ ತೊಗರಿಬೆಳೆ, ಉಪ್ಪು, ಎಣ್ಣೆ ಕೊಡುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆಯಾಗಿದೆ. ಈ ಬಗ್ಗೆ ಆದೇಶ ಆಗಬೇಕಿದೆ. ಈಗಿರುವ ಬಿಪಿಎಲ್  ಪಡಿತರ ಚೀಟಿ ಜೊತೆಗೆ ಹೊಸದಾಗಿ ಸೇರ್ಪಡೆಯಾಗಿರುವ ಎಂಟು ಲಕ್ಷ ಪಡಿತರ ಚೀಟಿದಾರರಿಗೂ ಸೌಲಭ್ಯ ನೀಡಬೇಕಾಗುತ್ತದೆ ಎಂದರು. 

ಗೋದಾಮು ಪರಿಶೀಲನೆ: ರಾಜ್ಯ ಸರ್ಕಾರಿ ಗೋದಾಮಿನಲ್ಲಿ ಆಹಾರ ಧಾನ್ಯ ಹಾಳಾಗುತ್ತಿದೆ ಎಂಬ ಬಗ್ಗೆ ಯಡಿಯೂರಪ್ಪ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ನಿರ್ದಿಷ್ಟ ಗೋದಾಮಿನ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದೇನೆ ಎಂದು ಇದೇ ವೇಳೆ ಸಚಿವರು ತಿಳಿಸಿದರು. ಇದರ ಜೊತೆಗೆ ಮುಂದಿನ ದಿನಗಳಲ್ಲಿ ಗೋದಾಮಿಗೆ ಭೇಟಿ ನೀಡಿ ಪರಿಶೀಲಿಸಲಾ ಗುವುದು. ಹಿಂದೆ ಕೆಲವು ಗೋದಾಮುಗಳಲ್ಲಿ ಬಹಳ ಕಾಲದಿಂದ ಇದ್ದ ಆಹಾರ ಧಾನ್ಯವನ್ನು ವಿಲೇವಾರಿ ಮಾಡಿದ್ದು, ಎಲ್ಲಿಯೂ ಹಾಳಾಗುತ್ತಿರುವ ಮಾಹಿತಿ ಬಂದಿಲ್ಲ ಎಂದರು. 

click me!