ಸಮಾಜ ಕಲ್ಯಾಣ ಸಚಿವೆ ರಾಜೀನಾಮೆ

By Web DeskFirst Published Aug 9, 2018, 7:20 AM IST
Highlights

ಸಮಾಜ ಕಲ್ಯಾಣ ಸಚಿವೆ ಮುಖ್ಯಮಂತ್ರಿ ಒತ್ತಡದ ಮೇರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಹೋಮ್ ಶೆಲ್ಟರ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ವಿಕೆಟ್ ಪತನವಾದಂತಾಗಿದೆ.

ಪಟನಾ: ಮುಜಫ್ಫರ್‌ಪುರ ಹೆಣ್ಣುಮಕ್ಕಳ ಪುನರ್ವಸತಿ ಕೇಂದ್ರದಲ್ಲಿ 34 ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆದ ಪ್ರಕರಣ ಸಂಬಂಧ, ಬಿಹಾರದ ಸಮಾಜ ಕಲ್ಯಾಣ ಖಾತೆ ಸಚಿವೆ ಮಂಜು ವರ್ಮಾ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಮೊದಲ ಹೈಪ್ರೊಫೈಲ್ ವ್ಯಕ್ತಿಯ ತಲೆದಂಡ ಆದಂತಾಗಿದೆ. 

ಪ್ರಕರಣ ಸಂಬಂಧ ಇತ್ತೀಚೆಗಷ್ಟೇ ಬಂಧಿತನಾಗಿದ್ದ ಬ್ರಜೇಶ್ ಠಾಕೂರ್ ಜೊತೆ, ಸಚಿವೆ ಮಂಜು ವರ್ಮಾರ ಪತಿ ಚಂದೇಶ್ವರ್ ವರ್ಮಾ ನಂಟು ಬೆಳಕಿಗೆ ಬಂದ ಹಿನ್ನೆಲೆ ಯಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸರ್ಕಾರದ ಅನುದಾನದಲ್ಲಿ ನಡೆಯುತ್ತಿದ್ದ ಪುನರ್ವಸತಿ ಕೇಂದ್ರದಲ್ಲಿನ 40 ಅಪ್ರಾಪ್ತೆಯರ ಪೈಕಿ 34 ಜನರ ಮೇಲೆ ಅತ್ಯಾಚಾರವೆಸಗಿರುವುದು ಇತ್ತೀಚೆಗೆ ವೈದ್ಯಕೀಯ ತಪಾಸಣೆಯಲ್ಲಿ ಖಚಿತಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಈ ಕೇಂದ್ರವನ್ನು ನಡೆಸುತ್ತಿದ್ದ ಬ್ರಜೇಶ್ ಠಾಕೂರ್ ನನ್ನು ಬಂಧಿಸಲಾಗಿತ್ತು. ಆತನ ಮೊಬೈಲ್ ಕರೆ ದಾಖಲೆ ಪರಿಶೀಲಿಸಿದಾಗ, ಅದರಲ್ಲಿ ಆತ ಸಚಿವೆ ಮಂಜು ವರ್ಮಾ ಅವರ ಪತಿ, ಮಾಜಿ ಶಾಸಕ ಚಂದೇಶ್ವರ್ ಜೊತೆ ಹಲವು ಬಾರಿ ಮಾತುಕತೆ ನಡೆಸಿರುವುದು ಪತ್ತೆಯಾಗಿತ್ತು. 

ಅಲ್ಲದೆ ಪ್ರಕರಣದಲ್ಲಿ ಬಂಧಿತ ಮತ್ತೊಬ್ಬ ಸರ್ಕಾರಿ ಅಧಿಕಾರಿಯ ಪತ್ನಿ ಕೂಡಾ, ಚಂದೇ ಶ್ವರ್ ವರ್ಮಾ ಏಕಾಂಗಿಯಾಗಿ ಬಾಲಕಿಯರ ಕೊಠಡಿಗೆ ಹೋಗುತ್ತಿದ್ದರು ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವೆ ಮಂಜು ರಾಜೀನಾಮೆಗೆ ವಿಪಕ್ಷಗಳು ಭಾರೀ ಒತ್ತಾಯ ಮಾಡಿದ್ದವು.

ಇದರ  ಬೆನ್ನಲ್ಲೇ ಮಂಜು ವರ್ಮಾಗೆ ಕರೆ ಮಾಡಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್, ಸರ್ಕಾರದ ಇಮೇಜ್‌ಗೆ ಭಾರೀ ಧಕ್ಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣವೇ ರಾಜೀನಾಮೆ ನೀಡುವಂತೆ ಸೂಚಿಸಿದ್ದರು ಎನ್ನಲಾಗಿದೆ. ಮೊದಲಿಗೆ ಹುದ್ದೆಗೆ ರಾಜೀನಾಮೆ ನೀಡಲು ಮಂಜು ವರ್ಮಾ ನಿರಾಕರಿಸಿದ್ದರು ಎನ್ನಲಾಗಿದೆ. ಆದರೆ ಬಳಿಕ ನಿತೀಶ್ ಅವರ ಕಟ್ಟಪ್ಪಣೆ ಮೇರೆಗೆ ರಾಜೀನಾಮೆಗೆ ಮುಂದಾದರು ಎನ್ನಲಾಗಿದೆ.

click me!