ಕಾರ್ಪೆಟ್‌ಗಳಂತೆ ಮಡಚಿಡಬಹುದಾದ ರಸ್ತೆಗಳಿವು!

By Web DeskFirst Published Oct 17, 2018, 11:51 AM IST
Highlights

ಬಂದಿವೆ ಕಾರ್ಪೆಟ್‌ನಂತೆ ಮಡಚಿಡಬಹುದಾದ ರಸ್ತೆಗಳು | ಇದು ಬಿಜೆಪಿ ಭ್ರಷ್ಟಾಚಾರದ ಸಂಕೇತ  ಅಂತೆ | ವೈರಲ್ ಆಗ್ತಾ ಇದೆ ರಸ್ತೆ ಫೋಟೋ 

ಬೆಂಗಳೂರು (ಅ. 17): ಕಾರ್ಪೆಟ್‌ಗಳಂತೆ ಮಡಚಿಡಬಹುದಾದ ಕಳಪೆ ಗುಣಮಟ್ಟದ ರಸ್ತೆಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರೊಂದಿಗೆ ‘ಕಾರ್ಪೆಟ್‌ನಂತೆ ಮಡಚಿಡಬಹುದಾದ ಕಳಪೆ ಟಾರ್ ರಸ್ತೆ.  ಇದು ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಸಂಕೇತ’ ಎಂದು ಒಕ್ಕಣೆಯನ್ನು ಬರೆಯಲಾಗಿದೆ.

ಈ ಫೋಟೋವನ್ನು ಮಧ್ಯಪ್ರದೇಶದ ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ನಾಯಕ ಕಮಲ್ ನಾಥ್ ಮೊದಲಿಗೆ ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅನಂತರ ಇದು ವೈರಲ್ ಆಗಿದೆ.

2017 ರಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವಾರಾಜ್ ಸಿಂಗ್ ಚೌಹಾಣ್ ರಾಜ್ಯದಲ್ಲಿ ವಾಷಿಂಗ್ಟನ್ ಡಿಸಿ, ಅಮೆರಿಕದಲ್ಲೂ ಇರದ ರಸ್ತೆ ನಿರ್ಮಾಣ ಮಾಡುತ್ತೇವೆ ಎಂಬ ಹೇಳಿಕೆ ನೀಡಿದ್ದರು. ಆ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಕಮಲ್ ನಾಥ್ ಈ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.

ಆದರೆ ನಿಜಕ್ಕೂ ಇದು ಮಧ್ಯಪ್ರದೇಶದ ರಸ್ತೆಯ ಫೋಟೋವೇ ಎಂದು ಪರಿಶೀಲಿಸಿದಾಗ ಈ ಫೋಟೋ ಭಾರತದ್ದೇ ಅಲ್ಲ ಎಂಬುದು ಸಾಬೀತಾಗಿದೆ. ಏಕೆಂದರೆ ಈ ಫೋಟೋ ವಿಭಿನ್ನ ಒಕ್ಕಣೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಸಾಕಷ್ಟು ಬಾರಿ ಹರಿದಾಡಿದೆ. 2016 ರಲ್ಲಿ ಇದೇ ಫೋಟೋವನ್ನು ಬಳಸಿಕೊಂಡು ಬಿಹಾರದ ಕಳಪೆ ರಸ್ತೆಗಳು ಎಂದು ಒಕ್ಕಣೆ ಬರೆದು ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಡಲಾಗಿತ್ತು.

ಅಲ್ಲದೆ ಈ ಫೋಟೋ ಇಂಡೋನೇಷಿಯಾ, ನೇಪಾಳದ್ದು ಎಂದೂ ಹೇಳಲಾಗುತ್ತಿತ್ತು. ಬೂಮ್ ಈ ಫೋಟೋದ ಜಾಡು ಹಿಡಿದು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟ ನಡೆಸಿದ್ದು, ವಾಸ್ತವಾಗಿ ಇದು ಬಾಂಗ್ಲಾದೇಶದ ಪೋಟೋ ಹಾಗೂ 2016 ರದ್ದು ಎಂಬುದು ಪತ್ತೆಯಾಗಿದೆ. ಹಾಗಾಗಿ ಈ ಸುದ್ದಿ ಸುಳ್ಳು ಎಂಬುದು ಸ್ಪಷ್ಟ. 

-ವೈರಲ್ ಚೆಕ್ 

click me!