
ಗುಳೇದಗುಡ್ಡ(ಮೇ.07): ಮೋದಿ 10 ಸಲಾ ಗೆದ್ದ ಬಂದರೂ, ಬಾಗಲಕೋಟೆಯಲ್ಲಿ ಮಾತ್ರ ಈ ಬಾರಿ ಕಾಂಗ್ರೆಸ್ ಗೆಲ್ಲೋದು ನೂರಕ್ಕೆ ನೂರು ಸತ್ಯ ಎಂದು ಸಚಿವ ಶಿವಾನಂದ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಶುಕ್ರವಾರ ಪಟ್ಟಣದ ಎಸ್.ಆರ್.ಶೆಟ್ಟರ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಈ ಬಾರಿ ಮೋದಿ ನೋಡಿ ಮತ ಕೊಡೋದಿಲ್ಲ. ನಾವು ಪಕ್ಷ ನೋಡಿ, ಮುಖ ನೋಡಿ ವೋಟು ಹಾಕಿ ಎಂದು ಕೇಳಂಗಿಲ್ಲ. ನಿಮ್ಮ ಕೆಲಸವನ್ನು ಯಾರ ಮಾಡ್ತಾರ ಅವರಿಗೆ ವೋಟು ಹಾಕ್ರಿ ಅಂತ ಕೇಳ್ತಿವಿ ಎಂದರು.ಗದ್ದಿಗೌಡರು ಏನು ಕೆಲಸ ಮಾಡಿದ್ದಾರೆಂದು ವೋಟು ಹಾಕುತ್ತೀರಿ?. ಇನ್ನೊಬ್ರ ಹೆಸರಿನ ಮೇಲೆ ಆರಿಸಿ ಬರೋದು, ಬಂದ ಮೇಲೆ ನಿದ್ದಿ ಮಾಡೋದೆ ಅವರ ಕೆಲ್ಸಾ ಎಂದು ವ್ಯಂಗ್ಯವಾಡಿದರು.
ಬಿಜೆಪಿಯದ್ದು ಜನ ವಿರೋಧಿ ಸರ್ಕಾರ: ಎಂಎಲ್‌ಸಿ ಉಮಾಶ್ರೀ
ಕಿವಿ ಹಿಂಡಿ ಕೇಳ್ತಾರ:
₹ 4 ಲಕ್ಷ 36 ಸಾವಿರ ಕೋಟಿ ಜಿಎಸ್ಟಿ ಹಣ ಕೇಂದ್ರ ಸರ್ಕಾರಕ್ಕೆ ಕರ್ನಾಟಕದಿಂದ ಹೋಗುತ್ತೆ. ಕರ್ನಾಟಕದ 28 ಲೋಕಸಭಾ ಸದಸ್ಯರೊಳಗೆ 26 ಜನ ಬಿಜೆಪಿಯವರೇ ಇದ್ದಾರೆ. ಸಾವಿರ ಕೋಟಿ ಪರಿಹಾರ ಕೇಳಿ ಅಂದರೆ, ಒಬ್ಬ ಸದಸ್ಯನೂ ತುಟಿ ಪಿಟಕ್ ಅನ್ನಲಿಲ್ಲ. ಈ ಬಾರಿ ಬಾಗಲಕೋಟೆ ಬಿಜಾಪುರದಲ್ಲಿ ಬದಲಾವಣೆ ಮಾಡಿದರೆ ನಮ್ಮ ಸದಸ್ಯರು ಮೋದಿಯವರ ಕಿವಿ ಹಿಂಡಿ ಕೇಳುತ್ತಾರೆ ಎಂದು ಹೇಳಿದರು.
ಬರಗಾಲ ಬಂದಾಗ ನಾವು 100 ದಿನಾ ನರೇಗಾ ಕೆಲಸ ಕೊಡತಿದ್ದೆವು. ಈ ಸಲಾ ಬರಗಾಲ ಬಂದರೂ ಮೋದಿಯವ್ರು ನರೇಗಾ ಯೋಜನೆ ನಿಲ್ಲಿಸಿದ್ದಾರೆ. ಕೇಂದ್ರದಾಗ ಈ ಬಾರಿ ನಮ್ಮ ಸರ್ಕಾರ ಬಂದ್ರ ನರೇಗಾ ಕೆಲಸದ ದಿನ 150 ದಿನಕ್ಕೆ ಹೆಚ್ಚಿಸಿ ₹ 400 ಕೂಲಿ ಕೊಡ್ತಿವಿ ಎಂದು ಹೇಳಿದರು.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶಕ್ಕೆ ಗಂಡಾಂತರ ನಿಶ್ಚಿತ: ಮಹಮದ್ ನಲಪಾಡ್
ಇದೇ ಸಂದರ್ಭದಲ್ಲಿ ಜೆಡಿಎಸ್ ತೊರೆದ 20ಕ್ಕೂ ಹೆಚ್ಚು ಮುಸ್ಲಿಂ ಯುವಕರು ಕಾಂಗ್ರೆಸ್ ಸೇರ್ಪಡೆಗೊಂಡರು. ಅವರಿಗೆ ಶಿವಾನಂದ ಪಾಟೀಲ ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು.
ವೇದಿಕೆ ಮೇಲೆ ಹೊಳಬಸು ಶೆಟ್ಟರ್, ಮಹೇಶ ಹೊಸಗೌಡರ, ರಾಜು ತಾಪಡಿತಾ, ಹನಮಂತಗೌಡ ಯಕ್ಕಪ್ಪನವರ, ನಾಗೇಶ ಪಾಗಿ, ರಫೀಕ್ ಕಲ್ಬುರ್ಗಿ, ಎಂ.ಬಿ.ಹಂಗರಗಿ, ಅಮಾತೆಪ್ಪ ಕೊಪ್ಪಳ, ನೇಕಾರ ಜಿಲ್ಲಾ ಮುಖಂಡ ಚಂದ್ರಕಾಂತ ಶೇಖಾ, ಶ್ರೀಕಾಂತ ಹುನಗುಂದ, ಶಶಿಕಾಂತ ಊದಗಟ್ಟಿ, ಮಲ್ಲಣ್ಣ ಯಲಿಗಾರ ಸೇರಿದಂತೆ ಇನ್ನಿತರರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.