
ಬೆಳಗಾವಿ (ಮೇ. 07): ಬೇಸಿಗೆಯಲ್ಲಿ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಹಣ ಪಡೆದು ನೀರು ಬಿಡುತ್ತಿದ್ದ ಮಹಾರಾಷ್ಟ್ರ ಸರ್ಕಾರ ಈ ಬಾರಿ ನೀರಿಗೆ ಪ್ರತಿಯಾಗಿ ನೀರು ಬಿಡಿ ಎನ್ನುವ ಪ್ರಸ್ತಾಪ ಮುಂದಿಟ್ಟಿದ್ದು, ಅವರ ಈ ಬೇಡಿಕೆ ಈಡೇರಿಸಲು ನಾವು ಬದ್ಧ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಜತೆಗೆ, ಈ ಸಂಬಂಧ ಮೇ 29ರ ನಂತರ ಉಭಯ ರಾಜ್ಯಗಳ ಮಧ್ಯೆ ಒಪ್ಪಂದ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಿದ್ದಾರೆ.
ಇಲ್ಲಿನ ಕರ್ನಾಟಕ ನೀರಾವರಿ ನಿಗಮದ ಕಚೇರಿಯಲ್ಲಿ ಕೃಷ್ಣಾ ನದಿ ತೀರದ ಹಾಗೂ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆ ಮತ್ತು ತಾಲೂಕುಗಳ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಲು ಸೋಮವಾರ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಚಾರ ತಿಳಿಸಿದರು.
ಬರಗಾಲದ ಸಂದರ್ಭದಲ್ಲಿ ಚಿಕ್ಕೋಡಿ, ಅಥಣಿ, ರಾಯಭಾಗ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸುವಂತೆ ಮನವಿ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಮಹಾರಾಷ್ಟ್ರದ ಕೆಲ ಗ್ರಾಮಗಳೂ ನೀರಿನ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕೊಯ್ನಾದಿಂದ ಬಿಡುವ ನೀರಿಗೆ ಪ್ರತಿಯಾಗಿ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ನೀರು ಬಿಡುವಂತೆ ಫಡ್ನವೀಸ್ ಸರ್ಕಾರ ಪತ್ರ ಬರೆದು ಮನವಿ ಮಾಡಿದೆ.
ಈ ಮೂಲಕ ಎರಡೂ ರಾಜ್ಯಗಳ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಭಿಪ್ರಾಯ ಪ್ರಸ್ತಾಪ ಮುಂದಿಟ್ಟಿದೆ. ಮಹಾರಾಷ್ಟ್ರದ ಈ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ಕೂಡ ಬದ್ಧವಾಗಿದ್ದು, ಚುನಾವಣೆ ನೀತಿ ಸಂಹಿತೆ ಬಳಿಕ ಎರಡೂ ರಾಜ್ಯಗಳ ನಡುವೆ ಒಪ್ಪಂದದ ಕುರಿತು ಮಾತುಕತೆ ನಡೆಯಲಿದೆ ಎಂದರು.
ತಾಂತ್ರಿಕ ಸಮಿತಿ ರಚನೆ:
ಮಹಾರಾಷ್ಟ್ರ ಪ್ರಸ್ತಾಪದ ಸಾಧಕ-ಬಾಧಕಗಳ ಕುರಿತು ವರದಿ ಸಿದ್ಧಪಡಿಸಲು ವಿಶೇಷ ತಾಂತ್ರಿಕ ಸಮಿತಿ ರಚನೆ ಮಾಡಲಾಗುವುದು. 15-20 ದಿನಗಳಲ್ಲಿ ಈ ಸಮಿತಿ ವರದಿ ನೀಡಲಿದ್ದು, ವರದಿ ಬಂದ ನಂತರ ಯಾವ ಜಲಾಶಯದಿಂದ ಎಷ್ಟುಮತ್ತು ಎಲ್ಲಿಗೆ ನೀರು ಬಿಡಬೇಕು ಎಂಬ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ತಕ್ಷಣ ಸಚಿವ ಸಂಪುಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹಣ ಕೊಟ್ಟು ನೀರು ಖರೀದಿಸಲಾಗುತ್ತಿತ್ತು
ಮಹಾರಾಷ್ಟ್ರದಿಂದ ಬಿಡುಗಡೆ ಮಾಡುವ ಕುಡಿಯುವ ನೀರಿಗೆ ಅನುಗುಣವಾಗಿ ಈ ಮೊದಲು ಹಣ ನೀಡಲಾಗುತ್ತಿತ್ತು. 2004ರಲ್ಲಿ .2.12 ಕೋಟಿ, 2009ರಲ್ಲಿ .2.73 ಕೋಟಿ, 2011ರಲ್ಲಿ .2.11 ಕೋಟಿ, 2012ರಲ್ಲಿ .2.84 ಕೋಟಿ ಹಣ ನೀಡಲಾಗಿತ್ತು. ಆದರೆ ಇದೀಗ ಮಹಾರಾಷ್ಟ್ರ ಸರ್ಕಾರ ಕುಡಿಯುವ ನೀರಿಗೆ ಹಣದ ಬದಲು ಕರ್ನಾಟಕದಿಂದ ಹಿಂಗಾರಿನಲ್ಲಿ 2 ಟಿಎಂಸಿ ಹಾಗೂ ಮುಂಗಾರಿನಲ್ಲಿ 2 ಟಿಎಂಸಿ ಸೇರಿ ಒಟ್ಟು 4 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಪ್ರಸ್ತಾಪ ಇಟ್ಟಿದೆ ಎಂದು ಡಿಕೆಶಿ ತಿಳಿಸಿದರು.
ಕುಡಿಯುವ ನೀರಿಗೆ ಮಹಾರಾಷ್ಟ್ರ ಸರ್ಕಾರ ನೀರುಬಿಟ್ಟಲ್ಲಿ, ನದಿ ತೀರ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಳಿಸುವಂತೆ ಈಗಾಗಲೇ ಸೂಚನೆ ಕೊಡಲಾಗಿದೆ. ರೈತರು ಕೂಡ ಕುಡಿಯುವ ನೀರನ್ನು ಜಮೀನುಗಳಿಗೆ ಬಳಸಿಕೊಳ್ಳಬಾರದು. ಒಂದು ವೇಳೆ ನೀರನ್ನು ಜನರೇಟರ್ ಮೂಲಕ ರೈತರು ತಮ್ಮ ಹೊಲಗಳಿಗೆ ಬಳಸಿಕೊಂಡರೆ ಅವರ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.