ಸ್ವಘೋಷಿತ ದೇವಮಾನವ ಕಲ್ಕಿ ಭಗವಾನ್ ಆಶ್ರಮದ ಮೇಲೆ ಐಟಿ ದಾಳಿ!

By Web DeskFirst Published Oct 17, 2019, 7:19 AM IST
Highlights

ಸ್ವಘೋಷಿತ ದೇವಮಾನವ ಕಲ್ಕಿ ಆಶ್ರಮದ ಮೇಲೆ ಐಟಿ ದಾಳಿ!| ಕಲ್ಕಿ ಪುತ್ರನಿಂದ ಭಾರೀ ಅವ್ಯವಹಾರದ ಆರೋಪ ಹಿನ್ನೆಲೆ| ಕರ್ನಾಟಕ, ಆಂಧ್ರಪ್ರದೇಶ, ತಮಿಳ್ನಾಡಿನ ಹಲವೆಡೆ ದಾಳಿ| ದಾಳಿಗೇನು ಕಾರಣ?

ಚೆನ್ನೈ[ಅ.17]: ದೇಶ- ವಿದೇಶಗಳಲ್ಲಿ ಅಪಾರ ಭಕ್ತರನ್ನು ಹೊಂದಿರುವ ಸ್ವಯಂಘೋಷಿತ ದೇವಮಾನವ ಕಲ್ಕಿ ಭಗವಾನ್‌ಗೆ ಸೇರಿದ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕದ ಆಶ್ರಮಗಳು ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಭಾರೀ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಲ್ಕಿ ಭಗವಾನ್‌ರ ಮುಖ್ಯ ಆಶ್ರಮ ಇರುವ ತಮಿಳುನಾಡಿನ ಗಡಿ ಪ್ರದೇಶ, ಆಂಧ್ರಪ್ರದೇಶಕ್ಕೆ ಸೇರಿದ ಚಿತ್ತೂರು ಸೇರಿದಂತೆ 3 ರಾಜ್ಯಗಳ 40ಕ್ಕೂ ಹೆಚ್ಚು ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಕಲ್ಕಿ ಭಗವಾನ್‌ರ ಪುತ್ರ ಕೃಷ್ಣಾ ಮತ್ತು ಅವರ ಪತ್ನಿಯನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ ಎನ್ನಲಾಗಿದೆ.

ಪರಮೇಶ್ವರ್ ಗ್ರಹಚಾರ ಸರಿ ಇಲ್ಲ ಎಂದ ಮಾಜಿ ಶಾಸಕ

ವಿಜಯ್‌ ಕುಮಾರ್‌ ನಾಯ್ಡು ಅಲಿಯಾಸ್‌ ಕಲ್ಕಿ ಭಗವಾನ್‌ರ ಪುತ್ರ ಕೃಷ್ಣಾ ವಿವಿಧ ಉದ್ಯಮಗಳಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು, ಅಲ್ಲಿ ಅಕ್ರಮ ನಡೆಸಿರುವ ಆರೋಪಗಳು ಕೇಳಿಬಂದಿದ್ದವು. ಜೊತೆಗೆ ಭಕ್ತರು ಆಶ್ರಮಕ್ಕೆ ನೀಡಿದ್ದ ದೇಣಿಗೆ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿದ್ದ ಆರೋಪಗಳೂ ಇವೆ. ಅಲ್ಲದೆ ವಿದೇಶದಿಂದ ಸ್ವೀಕರಿಸಿದ ದೇಣಿಗೆಯ ಲೆಕ್ಕಪತ್ರದಲ್ಲೂ ಗೋಲ್‌ಮಾಲ್‌ ಮಾಡಲಾಗಿದ್ದು, ಭಾರೀ ತೆರಿಗೆ ವಂಚನೆಯ ಗಂಭೀರ ಆರೋಪಗಳು ಕೇಳಿಬಂದ ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಾರು ಕಲ್ಕಿ ಭಗವಾನ್‌:

ಆಂಧ್ರಪ್ರದೇಶ ಮೂಲದ ವಿಜಯ್‌ಕುಮಾರ್‌ ನಾಯ್ಡು ಎಲ್‌ಐಸಿಯಲ್ಲಿ ಉದ್ಯೋಗಿಯಾಗಿದ್ದ. ಬಳಿಕ ಕೆಲಸಕ್ಕೆ ರಾಜೀನಾಮೆ ಬೆಂಗಳೂರಿನ ಶಾಲೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ನಂತರ ಅಲ್ಲಿಂದಲೂ ಹೊರಬಿದ್ದು ಚಿತ್ತೂರಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದ. 1989ರಲ್ಲಿ ಶಿಕ್ಷಣ ಸಂಸ್ಥೆಗಳು ಕೈಗೂಡದೇ ಹೋದಾಗ ಕೆಲ ವರ್ಷಗಳ ಕಾಲ ಭೂಗತನಾಗಿದ್ದ. ಬಳಿಕ ಇದ್ದಕ್ಕಿದ್ದಂತೆ ಸ್ವಾಮಿ ವೇಷದಲ್ಲಿ ಪ್ರತ್ಯಕ್ಷನಾಗಿ ನಾನು ವಿಷ್ಣುವಿನ 10ನೇ ಅವತಾರ. ನಾನು ಕಲ್ಕಿ ಭಗವಾನ್‌ ಎಂದು ಘೋಷಿಸಿಕೊಂಡಿದ್ದ.

ಕೋಲಾರ: ಐಟಿ ಅಧಿಕಾರಿಗಳಿಂದ ಕ್ಯಾಷಿಯರ್‌ಗೆ ಕಪಾಳ ಮೋಕ್ಷ..!

ಬಳಿಕ ಹಲವು ಕಡೆ ಆಶ್ರಮ ಕಡೆ ಸ್ಥಾಪಿಸಿದ್ದ. ಈತನ ಜೊತೆಗೆ ಈತನ ಪತ್ನಿ ಕೂಡಾ ದೇವರ ಅವತಾರವೆಂದು ಘೋಷಿಸಿಕೊಂಡಿದ್ದರು. ಇವರ ಸಾಮಾನ್ಯ ದರ್ಶನಕ್ಕೆ ಭಕ್ತರು 5000 ರು. ಮತ್ತು ವಿಶೇಷ ದರ್ಶನಕ್ಕೆ 25000 ರು. ಪಾವತಿಸಬೇಕು. ಹಾಲಿ ಇವರಿಗೆ ದೊಡ್ಡ ದೊಡ್ಡ ಉದ್ಯಮಿಗಳು, ಅನಿವಾಸಿ ಭಾರತೀಯ ಭಕ್ತರಿದ್ದಾರೆ. ಕಲ್ಕಿ ಮೇಲೆ ಭೂಕಬಳಿಕೆಯ ಹಲವು ಆರೋಪಗಳಿವೆ.

ದಾಳಿಗೇನು ಕಾರಣ?

ಆಶ್ರಮಕ್ಕೆ ನೀಡಿದ ಹಣವನ್ನು ಕಲ್ಕಿ ಭಗವಾನ್‌ರ ಪುತ್ರ ಕೃಷ್ಣ, ಅನ್ಯ ಉದ್ದೇಶಗಳಿಗೆ ಬಳಸುವ ಮೂಲಕ ಅಕ್ರಮ ಎಸಗಿದ್ದಾನೆ. ಚೆನ್ನೈ ಉದ್ಯಮಗಳಲ್ಲಿ ಹಣ ಹೂಡಿಕೆ ಮಾಡಿದ್ದಾನೆ. ಲೆಕ್ಕಪತ್ರದಲ್ಲಿ ಗೋಲ್‌ಮಾಲ್‌ ಎಸಗಲಾಗಿದೆ. ತೆರಿಗೆ ವಂಚನೆ ಎಸಗಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಆದಾಯ ತೆರಿಗೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ಎಲ್ಲೆಲ್ಲಿ ದಾಳಿ?

ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡಿನ ಆಶ್ರಮಗಳು, ಕಚೇರಿಗಳ ಮೇಲೆ ದಾಳಿ ನಡೆಸಿ ಕಲ್ಕಿ ಭಗವಾನ್‌ ಪುತ್ರ ಕೃಷ್ಣ ಮತ್ತು ಆತನ ಪತ್ನಿ, ಸಿಬ್ಬಂದಿಗಳ ವಿಚಾರಣೆ ನಡೆಸಲಾಗಿದೆ.

ತುಮಕೂರು: ವೇಷ ಮರೆಸಿ ನಗರ ಸುತ್ತಿದ್ರು IT ಆಫೀಸರ್ಸ್‌..!

click me!