ಚಿದಂಬರಂ ರಹಸ್ಯ ಪತ್ತಗೆ ಸುಳ್ಳು ಪತ್ತೆ ಪರೀಕ್ಷೆ!

By Web DeskFirst Published Aug 28, 2019, 9:51 AM IST
Highlights

ಚಿದಂಬರಂಗೆ ಸುಳ್ಳು ಪತ್ತೆ ಪರೀಕ್ಷೆ?| ಶೀಘ್ರದಲ್ಲೇ ಸಿಬಿಐ ಸುಪ್ರೀಂಕೋರ್ಟ್‌ ಮೆಟ್ಟಿಲೇರುವ ಸಂಭವ| ಏನೇ ಕೇಳಿದರೂ ‘ಗೊತ್ತಿಲ್ಲ’, ‘ನೆನಪಿಲ್ಲ’ ಎನ್ನುತ್ತಿರುವ ನಾಯಕ

ನವದೆಹಲಿ[ಆ.28]: ನವದೆಹಲಿ: ಐಎನ್‌ಎಕ್ಸ್‌ ಮೀಡಿಯಾ ಹಗರಣ ಸಂಬಂಧ ಬಂಧಿತರಾಗಿರುವ ಹಿರಿಯ ಕಾಂಗ್ರೆಸ್ಸಿಗ ಹಾಗೂ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ಸಿಬಿಐ ಅಧಿಕಾರಿಗಳ ವಿಚಾರಣೆ ವೇಳೆ ಅಸ್ಪಷ್ಟಉತ್ತರ ನೀಡುತ್ತಿದ್ದಾರೆ ಎನ್ನಲಾಗಿದೆ. ಬಹುತೇಕ ಪ್ರಶ್ನೆಗಳಿಗೆ ‘ಗೊತ್ತಿಲ್ಲ’, ‘ನೆನಪಿಲ್ಲ’ ಎಂಬ ಸಿದ್ಧ ಉತ್ತರವನ್ನು ಕೊಡುತ್ತಿರುವ ಹಿನ್ನೆಲೆಯಲ್ಲಿ ಚಿದಂಬರಂ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಸಿಬಿಐ ಅಧಿಕಾರಿಗಳು ಒಲವು ತೋರಿದ್ದಾರೆ. ಈ ಸಂಬಂಧ ಶೀಘ್ರದಲ್ಲೇ ಸುಪ್ರೀಂಕೋರ್ಟಿನ ಮೊರೆ ಹೋಗಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಆದರೆ, ಯಾವುದೇ ಆರೋಪಿಯ ಸುಳ್ಳು ಪತ್ತೆ ಪರೀಕ್ಷೆಗೆ ಆತನ ಸಮ್ಮತಿ ಅಗತ್ಯ. ಹೀಗಾಗಿ ಚಿದಂಬರಂ ಅವರು ಪರೀಕ್ಷೆಗೆ ಒಪ್ಪುತ್ತಾರಾ? ಅಥವಾ ಇಲ್ಲವಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಈ ನಡುವೆ, ಐಎನ್‌ಎಕ್ಸ್‌ ಪ್ರಕರಣದಲ್ಲಿ ಚಿದಂಬರಂ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸದಂತೆ ನೀಡಿರುವ ಮಧ್ಯಂತರ ರಕ್ಷಣೆಯನ್ನು ಸುಪ್ರೀಂಕೋರ್ಟ್‌ ಬುಧವಾರದವರೆಗೆ ವಿಸ್ತರಣೆ ಮಾಡಿದೆ. ಬುಧವಾರ ವಿಚಾರಣೆ ಮುಂದುವರಿಯಲಿದೆ. ಅದೇ ಪ್ರಕರಣದಲ್ಲಿ ಸಿಬಿಐ ಚಿದಂಬರಂ ಅವರನ್ನು ಬಂಧಿಸಿ, ತನ್ನ ಕಸ್ಟಡಿಯಲ್ಲಿರಿಸಿಕೊಂಡಿದೆ.

ತನಿಖೆಗೆ ಚಿದು ಅಸಹಕಾರ?:

ಹಣಕಾಸು ಮಂತ್ರಿಯಾಗಿದ್ದಾಗ ಅಧಿಕಾರ ದುರ್ಬಳಕೆ ಮಾಡಿಕೊಂಡು ಐಎನ್‌ಎಕ್ಸ್‌ ಕಂಪನಿಗೆ ಹೂಡಿಕೆ ಅನುಮತಿಯನ್ನು ಕೊಡಿಸಿ, ತನ್ಮೂಲಕ ಲಂಚ ಪಡೆದ ಆರೋಪ ಸಂಬಂಧ ಚಿದಂಬರಂ ಅವರನ್ನು ಆ.21ರಂದು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಕಳೆದ 6 ದಿನದಿಂದ ಅವರು ಸಿಬಿಐ ವಶದಲ್ಲಿದ್ದಾರೆ. ಈ ವೇಳೆ ಅಧಿಕಾರಿಗಳು ಹಣ ಪಾವತಿ ಹಾಗೂ ಇ-ಮೇಲ್‌ ಸಂಪರ್ಕ ಕುರಿತು ಪ್ರಶ್ನಿಸಿದರೆ ಅಸ್ಪಷ್ಟಉತ್ತರ ಕೊಡುತ್ತಿದ್ದಾರೆ. ‘ಗೊತ್ತಿಲ್ಲ’, ‘ನೆನಪಿಲ್ಲ’ ಎಂಬ ಸಿದ್ಧ ಉತ್ತರ ಕೊಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ಟೀವಿ ವಾಹಿನಿಯೊಂದು ವರದಿ ಮಾಡಿದೆ.

ಈ ಹಿನ್ನೆಲೆಯಲ್ಲಿ ಸುಳ್ಳು ಪತ್ತೆ ಪರೀಕ್ಷೆ ಸಂಬಂಧ ನ್ಯಾಯಾಲಯದ ಅನುಮತಿಯನ್ನು ಸಿಬಿಐ ಕೋರುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಮತ್ತೊಂದೆಡೆ, ಚಿದಂಬರಂ ಅವರನ್ನು ಐಎನ್‌ಎಕ್ಸ್‌ ಕಂಪನಿಯ ಇಂದ್ರಾಣಿ ಮುಖರ್ಜಿ ಮುಂದೆ ಕೂರಿಸಿ ವಿಚಾರಣೆ ನಡೆಸುವ ಉದ್ದೇಶವೂ ಅಧಿಕಾರಿಗಳಿಗೆ ಇದೆ ಎನ್ನಲಾಗಿದೆ.

ಏನಿದು ಸುಳ್ಳು ಪತ್ತೆ ಪರೀಕ್ಷೆ?

ಅಧಿಕಾರಿಗಳು ಕೇಳುವ ಪ್ರಶ್ನೆಗೆ ಆರೋಪಿಯು ಉತ್ತರಿಸುವಾಗ ಆತನ ರಕ್ತದೊತ್ತಡ, ನಾಡಿ ಮಿಡಿತ, ಉಸಿರಾಟದಂತಹ ಭೌತಿಕ ಸೂಚನೆಗಳು ಯಾವ ರೀತಿ ಇರುತ್ತವೆ ಎಂಬುದನ್ನು ಆಧರಿಸಿ, ಆತ ಸುಳ್ಳು ಹೇಳಿದ್ದು ಸುಳ್ಳೋ ಅಥವಾ ಸತ್ಯವೋ ಎಂಬುದನ್ನು ಪತ್ತೆ ಹಚ್ಚುವ ಪರೀಕ್ಷೆ. ಸತ್ಯ ಹೇಳುವಾಗ ಒಂದು ರೀತಿಯ ಸೂಚನೆಯನ್ನು ದೇಹ ನೀಡಿದರೆ, ಸುಳ್ಳು ಹೇಳುವಾಗ ಮತ್ತೊಂದು ರೀತಿಯ ಸೂಚನೆ ಕಂಡುಬರುತ್ತದೆ. ಅದನ್ನು ಆಧರಿಸಿ ಆರೋಪಿಯ ಹೇಳಿಕೆಯಲ್ಲಿ ಸತ್ಯಾಂಶ ಎಷ್ಟಿದೆ ಎಂಬುದನ್ನು ಅಧಿಕಾರಿಗಳು ಕಂಡುಕೊಳ್ಳುತ್ತಾರೆ. ಆದರೆ ಈ ಪರೀಕ್ಷೆಗೆ ಆರೋಪಿಯ ಸಮ್ಮತಿಯನ್ನು ತನಿಖಾಧಿಕಾರಿಗಳು ಪಡೆಯುವುದು ಅಗತ್ಯ.

click me!