ಕಾಶ್ಮೀರ ವಿಚಾರವಾಗಿ ವಿಶ್ವಸಂಸ್ಥೆಯಿಂದ ಭಾರೀ ವಿವಾದ

First Published Jun 15, 2018, 11:26 AM IST
Highlights

 ಆರು ದಶಕಗಳಿಂದ ಭಾರತ ಹಾಗೂ ಪಾಕಿಸ್ತಾನ ನಡುವೆ ಕಗ್ಗಂಟಾಗಿರುವ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ನೀಡಿರುವ ವರದಿಯೊಂದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಪಿಟಿಐ ಜಿನೆವಾ/ನವದೆಹಲಿ :  ಆರು ದಶಕಗಳಿಂದ ಭಾರತ ಹಾಗೂ ಪಾಕಿಸ್ತಾನ ನಡುವೆ ಕಗ್ಗಂಟಾಗಿರುವ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ನೀಡಿರುವ ವರದಿಯೊಂದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಕಾಶ್ಮೀರ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಅಂತಾರಾಷ್ಟ್ರೀಯ ಮಟ್ಟದ ವಿಚಾರಣೆ ನಡೆಯಬೇಕು ಎಂದು ಈ ವರದಿಯಲ್ಲಿ ಮುಖ್ಯವಾಗಿ ಪ್ರಸ್ತಾಪಿಸಲಾಗಿದೆ. ತನ್ಮೂಲಕ ಈ ವಿವಾದವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಒಯ್ಯುವ ಯತ್ನ ನಡೆದಿದ್ದು, ಭಾರತದ ಕಣ್ಣು ಕೆಂಪಗಾಗಿಸಿದೆ.

ಜತೆಗೆ ಕಾಶ್ಮೀರಿ ಜನತೆಯ ಮನಸ್ಸಂಕಲ್ಪವನ್ನು ಗೌರವಿಸಬೇಕು ಎಂದು ಈ ವರದಿಯಲ್ಲಿ ಭಾರತಕ್ಕೆ ತಾಕೀತು ಮಾಡಲಾಗಿದೆ. 2016ರ ನಂತರ ನಡೆದಿರುವ ನಾಗರಿಕ ಹತ್ಯೆಗಳ ಕುರಿತು ತನಿಖೆಯಾಗಬೇಕು. ಗುಂಪು ನಿಯಂತ್ರಿಸಲು ಪೆಲ್ಲೆಟ್‌ ಗನ್‌ ಬಳಕೆಯನ್ನು ತಕ್ಷಣವೇ ನಿಲ್ಲಿಸಬೇಕು. ವಿವಾದಿತ ಸಶಸ್ತ್ರ ಪಡೆಗಳ ಪರಮಾಧಿಕಾರ ಕಾಯ್ದೆ (ಆಫ್‌ಸ್ಪಾ) ಹಿಂಪಡೆಯಬೇಕು ಎಂದು ಸೂಚಿಸಲಾಗಿದೆ.

ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಇದೇ ಮೊದಲ ಬಾರಿಗೆ ನೀಡಿರುವ, ಅತ್ಯಂತ ವಿವಾದಿತ ವರದಿ ಇದಾಗಿದೆ. ಕಾಶ್ಮೀರ ವಿವಾದದಲ್ಲಿ ತೃತೀಯ ದೇಶಗಳು ಮೂಗುತೂರಿಸಕೂಡದು ಎಂಬ ಭಾರತದ ನಿಲುವಿಗೆ ತದ್ವಿರುದ್ಧವಾಗಿದೆ. ಜಾಗತಿಕ ಸಮುದಾಯ ಕಾಶ್ಮೀರ ಸಮಸ್ಯೆ ಬಗ್ಗೆ ಗಮನಹರಿಸಬೇಕು ಎಂಬ ಪಾಕಿಸ್ತಾನದ ಬೇಡಿಕೆಗೆ ಪೂರಕವಾಗಿದೆ.

49 ಪುಟಗಳ ಈ ವರದಿಗೆ ಪ್ರತಿಕ್ರಿಯೆ ನೀಡಿರುವ ಭಾರತ, ಇದೊಂದು ತಪ್ಪು ದಾರಿಗೆ ಎಳೆಯುವ, ಗುಪ್ತ ಉದ್ದೇಶವುಳ್ಳ ಹಾಗೂ ಪ್ರೇರಿತ ವರದಿಯಾಗಿದೆ ಎಂದು ಹೇಳಿದೆ. ಅಲ್ಲದೆ ವಿಶ್ವಸಂಸ್ಥೆಯಲ್ಲಿ ಈ ಕುರಿತು ಪ್ರತಿಭಟನೆಯನ್ನೂ ಸಲ್ಲಿಸಿ, ವಿಶ್ವಸಂಸ್ಥೆಯ  ವಿಶ್ವಾಸಾರ್ಹತೆಯನ್ನು ವೈಯಕ್ತಿಕ ಪೂರ್ವಾಗ್ರಹಗಳು ಕುಗ್ಗಿಸುತ್ತಿವೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದೆ. ಭಾರತದ ಸಾರ್ವಭೌಮತೆ, ಭೌಗೋಳಿಕ ಅಖಂಡ ತೆಯನ್ನು ಈ ವರದಿ ಉಲ್ಲಂಘಿಸುತ್ತದೆ. ಜಮ್ಮು-ಕಾಶ್ಮೀರ ಪರಿಪೂರ್ಣವಾಗಿ ಭಾರತದ ಅವಿಭಾಜ್ಯ ಅಂಗ. ಆಕ್ರಮಣದ ಮೂಲಕ ಪಾಕಿಸ್ತಾನವು ಭಾರತದ ರಾಜ್ಯವೊಂದರಲ್ಲಿ ಅಕ್ರಮ ಹಾಗೂ ಬಲವಂತವಾಗಿ ನೆಲೆಯೂರಿದೆ ಎಂದು ಅತ್ಯಂತ ಕಠಿಣದ ಶಬ್ದಗಳ ಪತ್ರವನ್ನು ವಿದೇಶಾಂಗ ಸಚಿವಾಲಯ ರವಾನಿಸಿದೆ.

ಏನೇನಿದೆ?:  ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಸ್ಥಿತಿಗತಿ ವರದಿ: 2016ರ ಜೂನ್‌ನಿಂದ 2018ರ ಏಪ್ರಿಲ್‌ವರೆಗಿನ ಕಾಶ್ಮೀರದಲ್ಲಿನ ಬೆಳವಣಿಗೆಗಳು ಹಾಗೂ ಆಜಾದ್‌ ಜಮ್ಮು-ಕಾಶ್ಮೀರ ಮತ್ತು ಗಿಲ್ಗಿಟ್‌ ಬಾಲ್ಟಿಸ್ತಾನದಲ್ಲಿನ ಸಾಮಾನ್ಯ ಮಾನವ ಹಕ್ಕುಗಳ ಕಳವಳಗಳು ಎಂಬ ಹೆಸರಿನ ವರದಿ ಇದಾಗಿದೆ.

ಈ ಹಿಂದೆ ನಡೆದಿರುವ ಹಾಗೂ ಸದ್ಯ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಬೇಕಾದ ತಕ್ಷಣದ ಅಗತ್ಯವಿದೆ. ಕಾಶ್ಮೀರ ವಿಚಾರವಾಗಿ ಕೈಗೊಳ್ಳಲಾಗುವ ಯಾವುದೇ ನಿರ್ಣಯವು ಹಿಂಸಾಚಾರದ ಸರಣಿ ಅಂತ್ಯವಾಗುವಂತೆ ಹಾಗೂ ಹಿಂದೆ ಮತ್ತು ಸದ್ಯ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗೆ ಹೊಣೆಗಾರಿಕೆ ನಿಗದಿಪಡಿಸುವಂತಿರಬೇಕು ಎಂದು ಹೇಳಿದೆ.

1980ರ ದಶಕದಿಂದಲೂ ಜಮ್ಮು-ಕಾಶ್ಮೀರದಲ್ಲಿ ಶಸ್ತ್ರಧಾರಿ ಗುಂಪುಗಳು ಸಕ್ರಿಯವಾಗಿವೆ. ನಾಗರಿಕರ ಅಪಹರಣ, ಕೊಲೆ, ಲೈಂಗಿಕ ಹಿಂಸೆಯಂತಹ ಮಾನವ ಹಕ್ಕು ದೌರ್ಜನ್ಯಗಳನ್ನು ಈ ಗುಂಪುಗಳು ಎಸಗುತ್ತಿರುವುದು ಸಾಬೀತಾಗಿದೆ. ಇಂತಹ ಗುಂಪುಗಳಿಗೆ ತಾನು ಬೆಂಬಲ ನೀಡುತ್ತಿಲ್ಲ ಎಂದು ಪಾಕಿಸ್ತಾನ ಹೇಳಿಕೊಂಡರೂ, ಭಾರತ ನಿಯಂತ್ರಣದಲ್ಲಿರುವ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಿಂದಾಚೆಗೆ ಈ ಗುಂಪುಗಳು ನಡೆಸುವ ಚಟುವಟಿಕೆಗಳಿಗೆ ಪಾಕಿಸ್ತಾನ ಸೇನೆಯ ಬೆಂಬಲವಿದೆ ಎಂದು ತಜ್ಞರು ತಿಳಿಸಿದ್ದಾರೆ.

ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಬುರ್ಹಾನ್‌ ವಾನಿಯನ್ನು ಭಾರತೀಯ ಪಡೆಗಳು ಹತ್ಯೆ ಮಾಡಿದ ಬಳಿಕ ಭಾರಿ ಪ್ರಮಾಣದ ಹಿಂಸಾಚಾರಗಳು ಕಾಶ್ಮೀರದಲ್ಲಿ ನಡೆದಿದ್ದವು ಎಂದೂ ಪ್ರಸ್ತಾಪಿಸಿದೆ.

ಕಾಶ್ಮೀರವನ್ನು ಸಿರಿಯಾ ಹಿಂಸೆಗೆ ಹೋಲಿಸಿತೆ ವಿಶ್ವಸಂಸ್ಥೆ?

ಕಾಶ್ಮೀರದಲ್ಲಿ ನಡೆದಿರುವ ಮಾನವ ಹಕ್ಕು ಉಲ್ಲಂಘನೆ ಆರೋಪಗಳ ಕುರಿತು ಸಮಗ್ರ ಸ್ವತಂತ್ರ ಅಂತಾರಾಷ್ಟ್ರೀಯ ತನಿಖೆಯನ್ನು ನಡೆಸಲು ಕಮಿಷನ್‌ ಆಫ್‌ ಎನ್‌ಕ್ವಯರಿ ಸ್ಥಾಪಿಸಬೇಕು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉಲ್ಲಂಘನೆ ಕುರಿತ ವರದಿ ಹೇಳಿದೆ. ಸಾಮಾನ್ಯವಾಗಿ ಸಿರಿಯಾ ರೀತಿ ಅತ್ಯಂತ ಗಂಭೀರ ಬಿಕ್ಕಟ್ಟು ಸೃಷ್ಟಿಯಾದಾಗ ಮಾತ್ರ ಇಂತಹ ತನಿಖೆಗೆ ವಿಶ್ವಸಂಸ್ಥೆ ಆದೇಶಿಸುತ್ತದೆ. ಆದರೆ ಕಾಶ್ಮೀರ ವಿವಾದದಲ್ಲೂ ಅದೇ ಆಗ್ರಹಪಡಿಸಿರುವುದು ಸಂದೇಹಕ್ಕೆ ಕಾರಣವಾಗಿದೆ.

click me!