ಶಶಿಕಲಾಗೆ ಸೇರಿದ 1600 ಕೋಟಿ ಬೇನಾಮಿ ಆಸ್ತಿ ಮುಟ್ಟುಗೋಲು!

By Kannadaprabha NewsFirst Published Nov 6, 2019, 7:30 AM IST
Highlights

ತಮಿಳುನಾಡಿನ ಎಐಎಡಿಎಂಕೆ ಪಕ್ಷದ ನಾಯಕಿ ವಿ.ಕೆ. ಶಶಿಕಲಾ ನಟರಾಜನ್‌ಗೆ ಸೇರಿದ್ದು ಎನ್ನಲಾದ ಬರೋಬ್ಬರಿ 1600 ಕೋಟಿ ರು. ಬೇನಾಮಿ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.

ಚೆನ್ನೈ [ನ.05]: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ 2017ರಿಂದ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ನಾಯಕಿ ವಿ.ಕೆ. ಶಶಿಕಲಾ ನಟರಾಜನ್‌ಗೆ ಸೇರಿದ್ದು ಎನ್ನಲಾದ ಬರೋಬ್ಬರಿ 1600 ಕೋಟಿ ರು. ಬೇನಾಮಿ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.

2016ರ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ ಅಪನಗದೀಕರಣ ನಿರ್ಧಾರ ಪ್ರಕಟಿಸಿದ ಬಳಿಕ ಚಲಾವಣೆ ಕಳೆದುಕೊಂಡ ನೋಟುಗಳ ರೂಪದಲ್ಲಿದ್ದ 1500 ಕೋಟಿ ರು. ವ್ಯಯಿಸಿ ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ಶಶಿಕಲಾ ಆಸ್ತಿ ಖರೀದಿಸಿದ್ದರು. ಮನೆ ಕೆಲಸದಾಳು, ಕಾರು ಚಾಲಕರು, ಸಹಾಯಕರ ಹೆಸರಿನಲ್ಲೂ ಆಸ್ತಿ ಖರೀದಿಸಲಾಗಿತ್ತು. 2017ರ ನವೆಂಬರ್‌ನಲ್ಲಿ ಆದಾಯ ತೆರಿಗೆ ದಾಳಿ ನಡೆಸಿದಾಗ ಲಭ್ಯವಾದ ದಾಖಲೆಗಳಿಂದ ಈ ಸಂಗತಿ ಬೆಳಕಿಗೆ ಬಂದಿತ್ತು. ಇದೀಗ ಶಶಿಕಲಾ ಅವರ ಬೇನಾಮಿ ಆಸ್ತಿಯನ್ನು ತೆರಿಗೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಬೇನಾಮಿ ವಹಿವಾಟು (ನಿರ್ಬಂಧ) ಕಾಯ್ದೆಯ ಸೆಕ್ಷನ್‌ 24(3)ರಡಿ ಆದಾಯ ತೆರಿಗೆ ಇಲಾಖೆಯ ಬೇನಾಮಿ ನಿರ್ಬಂಧ ಘಟಕದ ಪ್ರಕ್ರಿಯೆ ಅಧಿಕಾರಿ ಮುಟ್ಟುಗೋಲು ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶವನ್ನು ಉಪ ನೋಂದಣಾಧಿ ಕಾರಿಗಳು ಹಾಗೂ ಕಂಪನಿಗಳ ನೋಂದಣಾಧಿಕಾರಿಗಳಿಗೂ ರವಾನಿಸಿದ್ದಾರೆ. ತಾತ್ಕಾಲಿಕ ಮುಟ್ಟುಗೋಲಿನ ಅವಧಿ 90 ದಿನಗಳಾಗಿರುತ್ತದೆ.

ಆಸ್ತಿ ಜಪ್ತಿ ಮಾಡಿರುವ ಸಂದೇಶವನ್ನು ಸದ್ಯ ಶಶಿಕಲಾ ಇರುವ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹಕ್ಕೂ ರವಾನಿಸಲಾಗಿದೆ. ಶಶಿಕಲಾ ಒಟ್ಟು 4 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಪನಗದೀಕರಣದ ಬಳಿಕ ಒಟ್ಟು 9 ಆಸ್ತಿಗಳನ್ನು ಶಶಿಕಲಾ ಖರೀದಿಸಿದ್ದರು. 2017ರಲ್ಲಿ ಆದಾಯ ತೆರಿಗೆ ಇಲಾಖೆ ಶಶಿಕಲಾರ ಬೇನಾಮಿ ಆಸ್ತಿ ಪತ್ತೆ ಉದ್ದೇಶದೊಂದಿಗೆ ‘ಆಪರೇಷನ್‌ ಕ್ಲೀನ್‌ ಮನಿ’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿತ್ತು. ಚೆನ್ನೈ, ಕೊಯಮತ್ತೂರು ಹಾಗೂ ಪುದುಚೇರಿಯ 37 ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿತ್ತು. ಇನ್ನಿತರೆ 150 ಸ್ಥಳಗಳಲ್ಲಿ ಪರಿಶೀಲನೆ ನಡೆಸಿದಾಗ ಮಹತ್ವದ ದಾಖಲೆಗಳು ಲಭಿಸಿದ್ದವು.

ಜಪ್ತಿಯಾದ ಪ್ರಮುಖ ಆಸ್ತಿಗಳು:  ಚೆನ್ನೈ ಪೆರಂಬಲೂರಿನಲ್ಲಿರುವ ಶಾಪಿಂಗ್‌ ಮಾಲ್‌, ಪುದುಚೇರಿ ಆಭರಣ ವ್ಯಾಪಾರಿ ಹೆಸರಿನಲ್ಲಿರುವ ರೆಸಾರ್ಟ್‌, ಕೊಯಮತ್ತೂರಿನಲ್ಲಿರುವ ಕಾಗದ ಕಾರ್ಖಾನೆ, ಚೆನ್ನೈನಲ್ಲಿರುವ ಗಂಗಾ ಫೌಂಡೇಶನ್‌ನ ಸ್ಪೆಕ್ಟ್ರಂ ಮಾಲ್‌, ಪುದುಚೇರಿಯ ಶ್ರೀ ಲಕ್ಷ್ಮಿ ಜ್ಯೂವೆಲ್ಲರಿ ಹೆಸರಿನಲ್ಲಿರುವ ರೆಸಾರ್ಟ್‌, ಕೊಯಮತ್ತೂರಿನ ಸೆಂಥಿಲ್‌ ಪೇಪ​ರ್‍ಸ್ ಅಂಡ್‌ ಬೋರ್ಡ್ಸ್ ಹೆಸರಿನಲ್ಲಿರುವ ಮತ್ತೊಂದು ಆಸ್ತಿ ಕೂಡ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿರುವ 9 ಆಸ್ತಿಗಳ ಪಟ್ಟಿಯಲ್ಲಿದೆ.

click me!