13 ರಿಂದ 70 ವರ್ಷದವರಿಗೆ ಮಾತ್ರ ಅನ್ವಯ ಆಗುತ್ತಾ ಆಯುಷ್ಮಾನ್ ಭಾರತ್?

By Web DeskFirst Published Oct 16, 2018, 10:16 AM IST
Highlights

ಪ್ರದಾನಿ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆ ಆಯುಷ್ಮಾನ್ ಭಾರತ್ | ಯಾರ್ಯಾರಿಗೆ ಅನ್ವಯ ಆಗುತ್ತೆ ಈ ಯೋಜನೆ? 

ಬೆಂಗಳೂರು (ಅ. 16): ಆಯುಷ್ಮಾನ್ ಭಾರತ ಯೋಜನೆಯಡಿ ಉಚಿತ ವಿಮೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆ ಸಂದೇಶದಲ್ಲಿ ಹೀಗಿದೆ-‘ ಆಯುಷ್ಮಾನ್ ಭಾರತ ಯೋಜನೆ-2018 ಇದರಡಿಯಲ್ಲಿ 13 ರಿಂದ 70 ವರ್ಷದೊಳಗಿನ ಸುಮಾರು 10 ಕೋಟಿ ಜನರು ೫ ಲಕ್ಷನ ರು. ನ ವಿಮೆಯನ್ನು ಉಚಿತವಾಗಿ ಪಡೆಯಬಹುದು. ಅರ್ಜಿಸಲ್ಲಿಸಲು ಇದೇ ಅಕ್ಟೋಬರ್ 29 ಕೊನೆಯ ದಿನಾಂಕ. ಈ ಸಂದೇಶವನ್ನು ನಿಮ್ಮೆಲ್ಲಾ ಸ್ನೇಹಿತರಿಗೆ ಕಳುಹಿಸಿ’ ಎಂದು ಹೇಳಲಾಗಿದೆ.

ಇದರೊಂದಿಗೆ ವೆಬ್‌ಸೈಟ್‌ವೊಂದರ ಲಿಂಕನ್ನು ಲಗತ್ತಿಸಲಾಗಿದೆ. ಈ ಲಿಂಕ್ ತೆರೆದಾಗ ಹೆಸರು,ಮೊಬೈಲ್ ಸಂಖ್ಯೆ, ವಯಸ್ಸು ಮತ್ತು ರಾಜ್ಯದ ಹೆಸರನ್ನು ಭರ್ತಿ ಮಾಡಲು ಕೇಳುತ್ತದೆ. ಬಳಿಕ ಈ ಸಂದೇಶವನ್ನು ಕನಿಷ್ಠ 10 ಗ್ರೂಪ್‌ಗಳಿಗೆ ಕಳುಹಿಸಬೇಕೆಂದು ಹೇಳಲಾಗುತ್ತದೆ. ಆದರೆ ಇದು ನಿಜವೇ ಎಂದು ಪರಿಶೀಲಿಸಿದಾಗ ಈ ಸಂದೇಶದೊಂದಿಗೆ ಲಗತ್ತಿಸಲಾದ ವೆಬ್‌ಸೈಟೇ ನಕಲಿ ಎಂಬುದು ಪತ್ತೆಯಾಗಿದೆ. ಇದು ಆಯುಷ್ಮಾನ್ ಭಾರತದ ಅಧಿಕೃತ ವೆಬ್‌ಸೈಟ್ ಅಲ್ಲ. ಈ ವೆಬ್‌ಸೈಟ್‌ನಲ್ಲಿ ಹೆಸರು, ವಿಳಾಸ ಇತ್ಯಾದಿಯನ್ನು ಭರ್ತಿ ಮಾಡಿದಲ್ಲಿ ನಿಮಗೆ ಯಾವುದೇ ವಿಮೆ ಬರುವುದಿಲ್ಲ ಬದಲಾಗಿ ನಿಮ್ಮ ಮೊಬೈಲ್‌ಗೆ ಅನಗತ್ಯ ಸಂದೇಶಗಳು, ಕರೆಗಳು ಬರುತ್ತವೆ.

ಅದನ್ನು ಟೆಲಿ ಮಾರ್ಕೆಟಿಂಗ್ ಉದ್ದೇಶಕ್ಕೆ ಬಳಸಿಕೊಳ್ಳಲಾ ಗುತ್ತದೆ. ಅಲ್ಲದೆ ವೆಬ್‌ಸೈಟ್ ಮಾಲೀಕರು ಜಾಹೀರಾತುಗಳಿಂದ ಹಣ ಗಳಿಸುತ್ತಾರೆ. ವಾಸ್ತವವಾಗಿ ಆಯುಷ್ಮಾನ್ ಭಾರತದಡಿ 5 ಲಕ್ಷ ರು. ವಿಮೆ ಸೌಲಭ್ಯ ಇರುವುದು ನಿಜ. ಆದರೆ ಅದಕ್ಕೆ 13 ರಿಂದ 70 ವರ್ಷದ ವಯೋಮಿತಿ ಇಲ್ಲ. ಮೇಲಾಗಿ ಇದು ಎಲ್ಲ ವರ್ಗದವರಿಗೂ ಲಭ್ಯವಿಲ್ಲ. ಅಷ್ಟೇಕೆ, ಅಕ್ಟೋಬರ್ 29 ರ ಕೊನೆಯ ದಿನಾಂಕವೂ ಇಲ್ಲ. ಹಾಗಾಗಿ ಈ ಸುದ್ದಿ ಸುಳ್ಳು. 

-ವೈರಲ್ ಚೆಕ್ 

click me!