ಮುಖ್ಯಮಂತ್ರಿ ಹುದ್ದೆಯ ಬಗ್ಗೆಯೇ ಎಚ್ ಡಿಕೆ ಅಸಮಾಧಾನ

By Web DeskFirst Published Jan 10, 2019, 7:41 AM IST
Highlights

‘ಮುಖ್ಯಮಂತ್ರಿ ಸ್ಥಾನ ನಿಭಾಯಿಸುವುದು ಎಂದರೆ ಸುಮ್ಮನೆ ಅಲ್ಲ. ಬಿಸಿ ತುಪ್ಪ ಬಾಯಲ್ಲಿ ಇಟ್ಟುಕೊಂಡಂತಾಗಿದೆ ಎಂದು ಎಚ್.ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು :  ‘ಮುಖ್ಯಮಂತ್ರಿ ಸ್ಥಾನ ನಿಭಾಯಿಸುವುದು ಎಂದರೆ ಸುಮ್ಮನೆ ಅಲ್ಲ. ಬಿಸಿ ತುಪ್ಪ ಬಾಯಲ್ಲಿ ಇಟ್ಟುಕೊಂಡಂತಾಗಿದೆ!’ ನಮ್ಮ ಪಕ್ಷವೇ ಆಡಳಿತದಲ್ಲಿದ್ದರೂ ಸರ್ಕಾರದಲ್ಲಿ ನಮ್ಮ ಕೆಲಸ ವಾಗುತ್ತಿಲ್ಲ ಎಂದು ಜೆಡಿಎಸ್ ಶಾಸಕರು ತಮ್ಮ ಅಳಲನ್ನು ತೋಡಿಕೊಂಡಾಗ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ತಮ್ಮ ಅಸಹಾಯಕತೆಯನ್ನು ಹೊರಹಾಕಿದ ಪರಿ ಇದು.

ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಪಕ್ಷದ ಶಾಸಕರು ಕಾಂಗ್ರೆಸ್ ನಾಯಕರ ವರ್ತನೆಯ ಕುರಿತು ಆಕ್ರೋಶ ಹೊರಹಾಕಿ, ಸರ್ಕಾರ ನಮ್ಮದೇ ಇದ್ದರೂ ನಮ್ಮ ಯಾವುದೇ ಕೆಲಸವಾಗುತ್ತಿಲ್ಲ ಎಂದು ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಮುಂದಿಟ್ಟರು. ಈ ವೇಳೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಂಗ್ರೆಸ್‌ನ ಎಲ್ಲಾ ಕೆಲಸಗಳನ್ನು ಮಾಡಿಕೊಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೇಡಿಕೆಗಳನ್ನು ಈಡೇರಿಸಲಾಗುತ್ತಿದೆ. ಆದರೂ ಕಾಂಗ್ರೆಸ್‌ನಿಂದ ಇನ್ನಿಲ್ಲದ ಒತ್ತಡ ಇದೆ.

ಮುಖ್ಯಮಂತ್ರಿ ಸ್ಥಾನ ನಿಭಾಯಿಸುವುದು ಎಂದರೆ ಸುಮ್ಮನೆಯಲ್ಲ.  ಬಿಸಿ ತುಪ್ಪ ಬಾಯಲ್ಲಿ ಇಟ್ಟುಕೊಂಡಂತಾಗಿದೆ ಎಂದು ಶಾಸಕರ ಮುಂದೆ ಅಸಹಾಯತೆ ಹೊರಹಾಕಿದರು ಎಂದು ಮೂಲಗಳು ತಿಳಿಸಿವೆ. ನಿಗಮ-ಮಂಡಳಿ, ಸಂಸದೀಯ ಕಾರ್ಯದರ್ಶಿ, ರಾಜಕೀಯ ಕಾರ್ಯದರ್ಶಿ  ನೇಮಕ ಪ್ರಕ್ರಿಯೆ ಮುಗಿದ ಬಳಿಕ ಸಚಿವ ಸ್ಥಾನ ಹಂಚಿಕೆ ಬಗ್ಗೆ ಯೋಚಿಸಿದರಾಯಿತು. ಜೆಡಿಎಸ್‌ಗೆ ಲಭ್ಯ ಇರುವ ನಿಗಮ-ಮಂಡಳಿ, ಸಂಸದೀಯ ಕಾರ್ಯದರ್ಶಿ, ರಾಜಕೀಯ ಕಾರ್ಯದರ್ಶಿ ಮತ್ತು ಮುಖ್ಯ ಸಚೇತಕ ಹುದ್ದೆಗೆ ಶೀಘ್ರದಲ್ಲಿಯೇ ನೇಮಕ ಮಾಡಲಾಗುವುದು ಎಂದು ಶಾಸಕರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರು ಎನ್ನಲಾಗಿದೆ. 

ಸಚಿವ ಸ್ಥಾನ, ನಿಗಮ ಮಂಡಳಿಗೆ ನೇಮಕ ಮಾಡಬೇಕು ಎಂದು ಶಾಸಕರು ಒತ್ತಡ ಹೇರಿದಾಗ ಒಂದು ಹಂತಕ್ಕೆ ಸಹನೆ ಕಳೆದುಕೊಂಡ ಮುಖ್ಯಮಂತ್ರಿ ಕುಮಾರಸ್ವಾಮಿ, ತಮ್ಮ ಶಾಸಕರ ವಿರುದ್ಧ ಗರಂ ಆದರು. ಕಾಂಗ್ರೆಸ್‌ನವರಂತೆ ನೀವೂ ನನ್ನ ಮೇಲೆ ಒತ್ತಡ ಹೇರಬೇಡಿ. ಲೋಕಸಭಾ ಚುನಾವಣೆ ಎದುರಾಗುತ್ತಿದ್ದು, ಪಕ್ಷಕ್ಕೆ ಒಂದು ಅವಕಾಶ ಸಿಕ್ಕಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಲೋಕಸಭೆ ಚುನಾವಣೆವರೆಗೆ ಎಲ್ಲರೂ ತಾಳ್ಮೆಯಿಂದ ಇರಿ ಎಂದು ಸೂಚಿಸಿದರು ಎಂದು ತಿಳಿದು ಬಂದಿದೆ.

click me!