ರಾಜ್ಯದ 45 ತಾಲೂಕುಗಳ ಜನರಿಗೆ ಸರ್ಕಾರದಿಂದ ಗುಡ್ ನ್ಯೂಸ್

By Suvarna NewsFirst Published Nov 3, 2018, 10:13 AM IST
Highlights

45 ತಾಲೂಕುಗಳ ಜನರು ಕೂಲಿ ಕೆಲಸವಿಲ್ಲದೇ ಗುಳೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆಯಡಿ ನೀಡುತ್ತಿದ್ದ ಕೆಲಸವನ್ನು 100 ದಿನಗಳಿಂದ 150 ದಿನಗಳಿಗೆ ಹೆಚ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ನಿರ್ಧರಿಸಿದೆ.

ಬೆಂಗಳೂರು :  ಮಳೆ ಕೊರತೆಯಿಂದ ಬರ ಪರಿಸ್ಥಿತಿ ಉಂಟಾಗಿರುವ ರಾಜ್ಯದ 24 ಜಿಲ್ಲೆಗಳ 100 ತಾಲೂಕು ಹಾಗೂ ಅತಿವೃಷ್ಟಿಯಿಂದ ಸಂಕಷ್ಟದಲ್ಲಿರುವ ಕೊಡಗು ಸೇರಿದಂತೆ ಮಲೆನಾಡು ಜಿಲ್ಲೆಗಳ 45 ತಾಲೂಕುಗಳ ಜನರು ಕೂಲಿ ಕೆಲಸವಿಲ್ಲದೇ ಗುಳೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆಯಡಿ ನೀಡುತ್ತಿದ್ದ ಕೆಲಸವನ್ನು 100 ದಿನಗಳಿಂದ 150 ದಿನಗಳಿಗೆ ಹೆಚ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ನಿರ್ಧರಿಸಿದೆ.

ಈವರೆಗೆ ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ 100 ದಿನಗಳ ಕಾಲ ಕೂಲಿ ಕೆಲಸ ನೀಡಲಾಗುತ್ತಿತ್ತು. ಆದರೆ ಬರ ಪೀಡಿತ ಜಿಲ್ಲೆಗಳು ಹಾಗೂ ಅತಿವೃಷ್ಟಿಪೀಡಿತ ಜಿಲ್ಲೆಗಳಲ್ಲಿ ಕೆಲಸವಿಲ್ಲದೇ ಜನರು ಕೆಲಸ ಹುಡುಕಿಕೊಂಡು ಬೇರೆ ರಾಜ್ಯ ಇಲ್ಲವೇ ಬೃಹತ್‌ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಸಚಿವ ಕೃಷ್ಣ ಬೈರೇಗೌಡ ಅವರು ಕೂಲಿ ದಿನಗಳನ್ನು 150 ದಿನದವರೆಗೆ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ಕೂಲಿ ದಿನಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಸಹ ಒಪ್ಪಿಕೊಂಡಿದೆ. ಶೀಘ್ರದಲ್ಲೇ ಈ ಕುರಿತು ಆದೇಶ ಹೊರಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಒಂದು ದಿನಕ್ಕೆ 249 ರು. ನೀಡಲಾಗುತ್ತಿದ್ದು, ನೂರು ದಿನಗಳಿಗೆ 24,900 ರು. ಸಿಗುತ್ತಿತ್ತು. ಈಗ ಹೆಚ್ಚುವರಿಯಾಗಿ 50 ದಿನ ಕೆಲಸ ನೀಡುವುದರಿಂದ ಒಟ್ಟಾರೆ 37,350 ರು. ಸಿಗಲಿದೆ. ಹೀಗಾಗಿ ನರೇಗಾ ಯೋಜನೆಯಡಿ ಕೆಲಸ ಪಡೆಯಲು ನೋಂದಣಿ ಮಾಡಿಕೊಳ್ಳುವಂತೆ ಜನರಿಗೆ ತಿಳಿವಳಿಕೆ ನೀಡಲಾಗುತ್ತದೆ. ನರೇಗಾ ಯೋಜನೆ ಜೊತೆಗೆ ಇತರೆ ಇಲಾಖೆಯ ಯೋಜನೆಯಡಿಯೂ ಕೆಲಸ ನೀಡಲಾಗುವುದು. ಬರ ಪೀಡಿತ ಪ್ರದೇಶಗಳಲ್ಲಿ ಜನರಿಗೆ ಉದ್ಯೋಗ ಕೊಡಲು ನರೇಗಾ ಯೋಜನೆಯಡಿ ಹಲವಾರು ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವೈಯಕ್ತಿಕ ಹಾಗೂ ಸಮುದಾಯದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಸೆಪ್ಟೆಂಬರ್‌ ಮೂರನೇ ವಾರದವರೆಗೆ 4.69 ಲಕ್ಷ ಕಾಮಗಾರಿಗಳನ್ನು ಕೈಗತ್ತಿಕೊಂಡಿದ್ದು, 2.10 ಕೋಟಿ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಒಟ್ಟು 6.36 ಕುಟುಂಬಗಳಿಗೆ ಉದ್ಯೋಗ ಒದಗಿಸಲಾಗಿದೆ.

8 ದಿನದಲ್ಲಿ ಕೂಲಿ ಹಣ ಪಾವತಿ:  ನರೇಗಾ ಯೋಜನೆಯ ನಿಯಮದ ಪ್ರಕಾರ 15 ದಿನದಲ್ಲಿ ಕೂಲಿ ಹಣವನ್ನು ಪಾವತಿ ಮಾಡಬೇಕು, ಆದರೆ ರಾಜ್ಯದಲ್ಲಿ ಶೇ.96 ಜನರಿಗೆ 10 ದಿನದಲ್ಲಿ ಪಾವತಿ ಮಾಡಲಾಗುತ್ತಿದೆ. ಇದನ್ನು ಎಂಟು ದಿನದೊಳಗೆ ನೀಡುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಎಂಟು ದಿನದೊಳಗೆ ಆಯಾ ಪಂಚಾಯಿತಿ ಅಧ್ಯಕ್ಷರು ಈ ಸಂಬಂಧ ಸಹಿ ಹಾಕಿ ಹಣ ಪಾವತಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಆಯುಕ್ತೆ ಎಂ. ಕನಗವಲ್ಲಿ ತಿಳಿಸಿದ್ದಾರೆ.

249 ರು.

ಉದ್ಯೋಗ ಖಾತ್ರಿಯಡಿ ಸಿಗುವ ದಿನಗೂಲಿ

24900 ರು.

100 ದಿನ ಉದ್ಯೋಗ ಮಾಡಿದರೆ ಸಿಗುವ ಮೊತ್ತ

37350 ರು.

ಹೆಚ್ಚುವರಿಯಾಗಿ 50 ದಿನ ಕೆಲಸ ಸಿಗುವುದರಿಂದ ಲಭಿಸುವ ವೇತನ

ರಾಜ್ಯದಲ್ಲಿರುವ ಆರು ಸಾವಿರಕ್ಕೂ ಹೆಚ್ಚು ಇರುವ ಗ್ರಾಮ ಪಂಚಾಯಿತಿಗಳಲ್ಲಿ ತಲಾ ಒಂದು ಆಟದ ಮೈದಾನ ನಿರ್ಮಿಸುವಂತೆ ಸೂಚಿಸಲಾಗಿದೆ. ಶೇ.60ರಷ್ಟುಕೂಲಿ ವೆಚ್ಚದ ರೂಪದಲ್ಲಿ ಶೇ.40ರಷ್ಟುಸಾಮಗ್ರಿ ವೆಚ್ಚಕ್ಕೆ ನೀಡಲಾಗುವುದು. ಇದಲ್ಲದೇ ತೋಟಗಾರಿಕೆ ಪ್ರದೇಶ ವಿಸ್ತರಣೆ, ರೇಷ್ಮೆ ಕೃಷಿಗೆ ಸಂಬಂಧ ಪಟ್ಟಂತೆ ಹಿಪ್ಪು ನೇರಳೆ, ಮರ ಪದ್ಧತಿ ಅಭಿವೃದ್ಧಿಯನ್ನು ಇಲಾಖೆ ಜಾರಿಗೆ ತಂದಿದೆ ಎಂದು ಅವರು ತಿಳಿಸಿದ್ದಾರೆ.

click me!