ರೇಪ್ ಆರೋಪಿ ಪಾದ್ರಿಗೆ ಹೈ ಕೋರ್ಟ್ ಜಾಮೀನು

By Web DeskFirst Published Oct 15, 2018, 11:59 AM IST
Highlights

ಅತ್ಯಾಚಾರ ಆರೋಪಿ ಪಾದ್ರಿಗೆ ಹೈ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಕೇರಳದ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಪ್ರಕರಣ ಸಂಬಂಧ ಜಾಮೀನು ನೀಡಲಾಗಿದೆ. 

ಕೇರಳ : ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಜಲಂಧರ್'ನ ರೋಮನ್ ಕ್ಯಾಥೋಲಿಕ್ ಬಿಷಪ್ ಫ್ರಾಂಕೊ ಮುಲಕ್ಕಲ್ ಗೆ ಕೇರಳ ಹೈಕೋರ್ಟ್ ಸೋಮವಾರ ಶರತ್ತುಬದ್ಧ ಜಾಮೀನು ನೀಡಿದೆ.

ಕೊಟ್ಟಯಂನ ಪಾಲದಲ್ಲಿರುವ ಜಿಲ್ಲಾ ಮೆಜಿಸ್ಟ್ರೇಟ್ ನ್ಯಾಯಾಲಯವು  ಜಾಮೀನು ನಿರಾಕರಿಸಿದ ಹಿನ್ನಲೆಯಲ್ಲಿ ಫ್ರಾಂಕೋ ಮುಲಕ್ಕಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಅವರಿಗೆ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಫ್ರಾಂಕೋ ಮುಲಕ್ಕಲ್ ಕೇರಳ ಪ್ರವೇಶಿಸಬಾರದು, ಪಾಸ್‌ಪೋರ್ಟನ್ನು ಒಪ್ಪಿಸಬೇಕು, ಹಾಗೂ ತನಿಖೆಯ ಅಂತಿಮ ವರದಿ ಬರುವವರೆಗೂ ಎರಡು ವಾರಕ್ಕೊಮ್ಮೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು ಎಂದು ಕೋರ್ಟ್ ಸೂಚಿಸಿದೆ. ನನ್ ವಿರುದ್ಧ ತಾನು ಈ ಹಿಂದೆ ಶಿಸ್ತುಕ್ರಮ ಕೈಗೊಂಡಿದ್ದು, ಆಕೆ ತನ್ನ ಮೇಲೆ ಸುಳ್ಳಾರೋಪ ಹೊರಿಸಿದ್ದಾಳೆ ಎಂದು ಬಿಷಪ್ ವಾದಿಸಿದ್ದಾರೆ. 
 
ನನ್ ಒಬ್ಬರು ನೀಡಿದ ದೂರಿನ ಆಧಾರದಲ್ಲಿ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರನ್ನು ಕಳೆದ ಸೆ.  21 ರಂದು ಬಂಧಿಸಲಾಗಿತ್ತು. 

ಫಾದರ್ ಬಂಧನಕ್ಕೆ ಕೇರಳದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಕೇರಳ ರಾಜ್ಯ ಹೈಕೋರ್ಟಿನ ಸಮೀಪ ಐವರು ಸನ್ಯಾಸಿನಿಯರು 13 ದಿನಗಳ ಧರಣಿಯನ್ನು ಹಮ್ಮಿಕೊಂಡಿದ್ದರು.  

ದೇಶದಲ್ಲೇ ಸನ್ಯಾಸಿನಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧನಕ್ಕೊಳಗಾದ ಮೊದಲ ಕ್ಯಾಥೋಲಿಕ್ ಬಿಷಪ್ ಎಂಬ ಕುಖ್ಯಾತಿ ಫ್ರಾಂಕೊ ಅವರದ್ದಾಗಿದೆ. ವ್ಯಾಟಿಕನ್ ಪೋಪ್, ಫ್ರಾಂಕೊ ಅವರನ್ನು ಜಲಂಧರ್'ನ ರೋಮನ್ ಕ್ಯಾಥೋಲಿಕ್ ಬಿಷಪ್ ಹುದ್ದೆಯಿಂದ ತಾತ್ಕಾಲಿಕವಾಗಿ ತೆರವುಗೊಳಿಸಿದ್ದಾರೆ. 

ಮುಲಕ್ಕಲ್ 2014ರಿಂದ 2016ರ ಅವಧಿಯಲ್ಲಿ 44 ವರ್ಷದ ಕ್ರೈಸ್ತ ಸನ್ಯಾಸಿನಿಯೊಬ್ಬರ ಮೇಲೆ ನಿರಂತರ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿದ್ದಾರೆ.

click me!