ಉ. ಕರ್ನಾಟಕದ 6 ಜಿಲ್ಲೆಗಳಲ್ಲಿ ಭಾರೀ ಪ್ರವಾಹ: ಬದುಕು ನೀರುಪಾಲು!

By Web DeskFirst Published Aug 5, 2019, 7:29 AM IST
Highlights

ಬದುಕು ನೀರುಪಾಲು!| ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಯಾದಗಿರೀಲಿ ಅಲರ್ಟ್| ಮಹಾರಾಷ್ಟ್ರದಿಂದ 2 ಲಕ್ಷ ಕ್ಯುಸೆಕ್ ನೀರು, ಅಬ್ಬರಿಸುತ್ತಿರುವ ಕೃಷ್ಣಾ, ಭೀಮಾ ನದಿ| ರಾಜ್ಯದ 40 ಸೇತುವೆ ಮುಳುಗಡೆ, ಗ್ರಾಮಗಳು ನಡುಗಡ್ಡೆ, ನೂರಾರು ಮಂದಿ ರಕ್ಷಣೆ

ಬೆಂಗಳೂರು[ಆ.05]: ಮಹಾರಾಷ್ಟ್ರ ಮತ್ತು ಖಾನಾಪುರ ಸುತ್ತಮುತ್ತ ಸುರಿಯುತ್ತಿರುವ ಮಳೆಗೆ ಕೃಷ್ಣಾ, ಭೀಮಾ ಸೇರಿ ಹಲವು ನದಿಗಳು ಉಕ್ಕಿ ಹರಿಯುತ್ತಿದ್ದು ಉತ್ತರ ಕರ್ನಾಟಕದ 6 ಜಿಲ್ಲೆಗಳ ನದಿಪಾತ್ರದ ಗ್ರಾಮಗಳ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಪ್ರಮುಖ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ 40ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿದ್ದು, ನೂರಾರು ಮಂದಿಯನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಭಾನುವಾರ ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ 2 ಲಕ್ಷ ಕ್ಯುಸೆಕ್‌ಗೂ ಹೆಚ್ಚು ನೀರು ಹೊರಬಿಡಲಾಗಿದ್ದು ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಯಾದಗಿರಿ, ಜಿಲ್ಲೆಯ ನದಿ ಪಾತ್ರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇದೇ ವೇಳೆ ವೀರಾ ಜಲಾಶಯ ದಿಂದಲೂ ಪ್ರತಿನಿತ್ಯ 1 ಟಿಎಂಸಿಗೂ ಅಧಿಕ ನೀರು ಹೊರಬಿಡುತ್ತಿರುವುದರಿಂದ ಕಲಬುರಗಿ ಜಿಲ್ಲೆಯ ಭೀಮಾ ನದಿ ಪಾತ್ರದಲ್ಲೂ ಕಟ್ಟೆಚ್ಚರ ಘೋಷಿಸ ಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ತಂಡ(ಎಸ್‌ಡಿಆರ್‌ಎಫ್), ಅಗ್ನಿಶಾಮಕ ದಳ ತಂಡಗಳು ಪ್ರವಾಹ ಭೀತಿಯಿರುವ ಸ್ಥಳದಲ್ಲಿ ಬೀಡುಬಿಟ್ಟಿದ್ದು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಸೇನೆ ಕೂಡ ಸ್ಥಳದಲ್ಲಿದ್ದು ಸಂತ್ರಸ್ತರ ನೆರವಿಗೆ ಧಾವಿಸಲು ಸಜ್ಜಾಗಿ ನಿಂತಿದೆ.
ಬೆಳಗಾವಿ ಜಿಲ್ಲೆಯಲ್ಲಿ ಶನಿವಾರದವರೆಗೆ 26 ಸೇತುವೆಗಳು ಮುಳುಗಡೆಯಾಗಿದ್ದು, ಭಾನುವಾರ ಮತ್ತೆ ಐದು ಸೇತುವೆಗಳ ಮೇಲೆಯೂ ನೀರು ಹರಿಯಲು ಆರಂಭಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 31 ಸೇತುವೆಗಳು ಜಲಾವೃತ ಗೊಂಡಂತಾಗಿದೆ. ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ 48 ಗಂಟೆಯಲ್ಲಿ 400 ಮಿ.ಮೀ. ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯ ಸ್ತವಾಗಿದೆ. ತಗ್ಗುಪ್ರದೇಶದ 300ಕ್ಕೂ ಅಧಿಕ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಮಳೆಯಿಂದಾಗಿ ಬೈಲಹೊಂಗಲ ತಾಲೂಕಿನಲ್ಲಿ 51 ಮನೆಗಳು ಭಾಗಶಃ ಕುಸಿದಿವೆ.

ಬಾಗಲಕೋಟೆ ಜಿಲ್ಲೆಯಲ್ಲಿನ ಕೃಷ್ಣಾ, ಘಟಪ್ರಭಾ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿರುವ ಪರಿಣಾಮ ಮುಧೋಳ ಹಾಗೂ ಜಮಖಂಡಿ ತಾಲೂಕಿನ 10ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹದ ಭೀತಿಯಲ್ಲಿವೆ.

ಭಾನುವಾರ ಮುತ್ತೂರು ನಡುಗಡ್ಡೆ ಯಲ್ಲಿರುವ 38 ಕುಟುಂಬಗಳ ಪೈಕಿ 35 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಇನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸುಮಾರು 12ರಿಂದ 15 ಹಳ್ಳಿಗಳಲ್ಲಿ ಪ್ರವಾಹ ಆತಂಕ ಹೆಚ್ಚಾಗಿದೆ

ಸಿಎಂ ಕಚೇರಿಯಿಂದ ಸೂಚನೆ:

ಆಲಮಟ್ಟಿ ಜಲಾಶಯದ ಮೂಲಕ ಬಸವಸಾಗರ ಜಲಾಶಯಕ್ಕೆ 2.71 ಲಕ್ಷ ಕ್ಯುಸೆಕ್‌ನಷ್ಟು ನೀರು ಹರಿದು ಬರುತ್ತಿದ್ದು, 2.50 ಲಕ್ಷ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಇದರಿಂದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಕಾಣಿಸಿಕೊಂಡಿದೆ. ಭಾನುವಾರ ರಾತ್ರಿ ನಾಲ್ಕರಿಂದ ಐದು ಲಕ್ಷ ಕ್ಯುಸೆಕ್ ನೀರು ಹೊರಬಿಡುವ ಸಾಧ್ಯತೆ ಯಿರುವ ಕಾರಣ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಕಚೇರಿಯಿಂದ ಸೂಚಿಸಲಾಗಿದೆ.

ಯಾದಗಿರಿ ಜಿಲ್ಲೆಯ ಶಹಾಪುರ ಹಾಗೂ ವಡಗೇರಾ ತಾಲೂಕಿನ ಕೃಷ್ಣಾ ಪಾತ್ರದ 23 ಹಳ್ಳಿಗಳ ಹೊಲಗದ್ದೆಗಳಲ್ಲಿ ನೀರು ನುಗ್ಗಿ, ಭತ್ತ, ಹತ್ತಿ ಮತ್ತಿತರ ಬೆಳೆ ಹಾನಿಯಾಗಿದೆ. ರಾಜ್ಯ ಹೆದ್ದಾರಿ 15ರಲ್ಲಿ ಕೊಳ್ಳೂರು (ಎಂ) ಸಮೀಪದ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಹುಣಸಗಿ ಸಮೀಪದ, ಪುರಾಣ ಪ್ರಸಿದ್ಧ ಛಾಯಾ ಭಗವತೀ ದೇವಸ್ಥಾನ ಜಲಾವೃತಗೊಂಡಿದ್ದು, ಮೆಟ್ಟಿಲು ಮೇಲೆ ಕುಳಿತೇ ಪೂಜೆ ನೆರವೇರಿ ಸಲಾಗಿದೆ. ರಾಯಚೂರು ಜಿಲ್ಲೆಯಲ್ಲೂ ಒಟ್ಟು ಆರು ಗ್ರಾಮಗಳ ಸ್ಥಿತಿ ನಡುಗಡ್ಡೆಯಂತಾಗಿದೆ.

click me!