ರೇಪ್‌ ಆರೋಪ ಮಾಡಿದ್ದಾಕೆ ಹತ್ಯೆಗೆ ಬಿಜೆಪಿ ಶಾಸಕ ಸಂಚು?

By Web DeskFirst Published Jul 30, 2019, 8:30 AM IST
Highlights

ರೇಪ್‌ ಆರೋಪ ಮಾಡಿದ್ದಾಕೆ ಹತ್ಯೆಗೆ ಬಿಜೆಪಿ ಶಾಸಕ ಸಂಚು?| ಉನ್ನಾವ್‌ ಶಾಸಕ ಕುಲದೀಪ್‌ ಸೇರಿ 10 ಜನರ ವಿರುದ್ಧ ಎಫ್‌ಐಆರ್‌| ತಮ್ಮ ಕುಟುಂಬ ಮುಗಿಸಲು ಯತ್ನ: ಸಂತ್ರಸ್ತೆಯ ತಾಯಿ ಆರೋಪ

ಉನ್ನಾವೋ/ ಲಖನೌ[ಜು.30]: ಉತ್ತರ ಪ್ರದೇಶದ ರಾಯ್‌ ಬರೇಲಿ ಬಳಿ ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಇದ್ದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಕುಲದೀಪ್‌ ಸೆಂಗಾರ್‌ ಸೇರಿದಂತೆ 10 ಜನರ ವಿರುದ್ಧ ಸೋಮವಾರ ಎಫ್‌ಐಆರ್‌ ದಾಖಲಾಗಿದೆ. ಸಂತ್ರಸ್ತೆಯ ಚಿಕ್ಕಪ್ಪ ಮಹೇಶ್‌ ಸಿಂಗ್‌ ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣದ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ ಇದೊಂದು ಅಪಘಾತ ಅಲ್ಲ. ಬದಲಾಗಿ ತಮ್ಮ ಕುಟುಂಬವನ್ನು ಮುಗಿಸಲು ರೂಪಿಸಿದ ಸಂಚು ಎಂದು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಸಂತ್ರಸ್ತೆಯ ತಾಯಿ ಆರೋಪಿಸಿದ್ದಾರೆ. ರಸ್ತೆ ಅಪಘಾತ ಸಾಕಷ್ಟುಅನುಮಾನಗಳಿಗೆ ಕಾರಣವಾದ ಹಿನ್ನೆಲೆಯಲ್ಲಿ ಘಟನೆಯನ್ನು ಸಿಬಿಐ ತನಿಖೆಗೆ ವಹಿಸಲು ಉತ್ತರ ಪ್ರದೇಶ ಸರ್ಕಾರ ಸಿದ್ಧವಿದೆ. ಮೇಲ್ನೋಟಕ್ಕೆ ಇದೊಂದು ಅಪಘಾತದಂತೆ ಕಂಡು ಬರುತ್ತಿದೆ. ಆದರೆ, ಘಟನೆಯನ್ನು ವಿಸ್ತೃತ ತನಿಖೆ ನಡೆಸಲಾಗುವುದು ಎಂದು ಡಿಜಿಪಿ ಒ.ಪಿ. ಸಿಂಗ್‌ ಹೇಳಿದ್ದಾರೆ.

ಉನ್ನಾವೋ ಸಂತ್ರಸ್ತೆಯ ಅಪಘಾತ ವಿಷಯ ರಾಜ್ಯಸಭೆಯಲ್ಲೂ ಪ್ರತಿಧ್ವನಿಸಿದ್ದು, ರಾಯ್‌ಬರೇಲಿಯಲ್ಲಿ ಸಂಭವಿಸಿದ ರಸ್ತೆ ಅಪಘಾತವನ್ನು ಶೂನ್ಯ ಅವಧಿಯಲ್ಲಿ ಪ್ರಸ್ತಾಪಿಸಿ ಗದ್ದಲ ಸೃಷ್ಟಿಸಿದ್ದಾರೆ.

ಅಪಘಾತಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಬೇಟಿ ಬಚಾವೋ- ಬೇಟಿ ಪಡಾವೋ ಯೋಜನೆಯನ್ನು ಅಣಕಿಸಿದ್ದಾರೆ. ಬೇಟಿ ಬಚಾವೋ- ಬೇಟಿ ಪಡಾವೋ ಎನ್ನುವುದು ಭಾರತೀಯ ಮಹಿಳೆಯರಿಗೆ ಒಂದು ವಿಶೇಷ ಶಿಕ್ಷಣ ಪ್ರಕಟಣೆ ಆಗಿದೆ. ಒಂದು ವೇಳೆ ಬಿಜೆಪಿ ಶಾಸಕರೊಬ್ಬರು ಅತ್ಯಾಚಾರ ಆರೋಪಿಯಾಗಿದ್ದರೆ ಯಾರೂ ಪ್ರಶ್ನೆ ಮಾಡಬಾರದು ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ. ಇದೇ ವೇಳೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್‌ ಅತ್ಯಾಚಾರ ಸಂತ್ರಸ್ತ ಯುವತಿಯನ್ನು ಲಖನೌ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಕುಲದೀಪ್‌ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿರುವ ಯುವತಿ ಭಾನುವಾರ ತನ್ನ ಸಂಬಂಧಿಗಳ ಜೊತೆ ಕಾರಿನಲ್ಲಿ ಪ್ರಯಾಣಿಸುವ ವೇಳೆ ಕಾರಿಗೆ ಲಾರಿ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದರು. ಅದೃಷ್ಟವಶಾತ್‌ ರೇಪ್‌ ಸಂತ್ರಸ್ತೆ ಮತ್ತು ಆಕೆಯ ತಾಯಿ ಬದುಕುಳಿದಿದ್ದರು.

click me!