
ಬೆಂಗಳೂರು(ಫೆ.23): ಆಧಾರ್ ಕಾರ್ಡ್ನಿಂದ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗುತ್ತದೆಯೇ ಎಂಬ ವಿಚಾರ ಸುಪ್ರೀಂ ಕೋರ್ಟಿನ ಪರಿಶೀಲನೆಗೊಳಪಟ್ಟಿರುವ ನಡುವೆಯೇ, ರಾಜ್ಯದ 2.5 ಲಕ್ಷ ಶಿಕ್ಷಕರು, ಸುಮಾರು 1.25 ಕೋಟಿ ವಿದ್ಯಾರ್ಥಿಗಳು ಹಾಗೂ ಇವರ ಪಾಲಕರ ದೂರವಾಣಿ ಸಂಖ್ಯೆ, ಭಾವಚಿತ್ರ, ಇ-ಮೇಲ್ ವಿಳಾಸ, ಮನೆ ವಿಳಾಸ ಮುಂತಾದ ದತ್ತಾಂಶ ಒಳಗೊಂಡ ನೂತನ ಆಪ್ ರೂಪಿಸುವ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗೆ ನೀಡಲು ಮುಂದಾಗಿರುವ ಶಿಕ್ಷಣ ಇಲಾಖೆ ನಡೆ ತೀವ್ರ ಚರ್ಚೆಗೆ ಕಾರಣವಾಗಿದೆ.
ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದು ಹಾಗೂ ವಿದ್ಯಾರ್ಥಿಗಳು, ಅವರ ಪಾಲಕರು, ಶಿಕ್ಷಕರು, ಅಧಿಕಾರಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಈ ನೂತನ ಆಪ್ ನೆರವಾಗುತ್ತದೆ ಎಂಬುದು ಶಿಕ್ಷಣ ಇಲಾಖೆ ಸಮರ್ಥನೆ. ಆದರೆ ಆಪ್ ಅಭಿವೃದ್ಧಿ ಹಾಗೂ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಕಂಪನಿಗೆ ನೀಡಲು ನಿರ್ಧರಿಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ವಾಟ್ಸ್'ಆಪ್ ಗ್ರೂಪ್ ರೀತಿಯಲ್ಲೇ ಶಿಕ್ಷಣ ಇಲಾಖೆ ಆಪ್ ಕಾರ್ಯನಿರ್ವಹಿಸಲಿದೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಲು, ವಿದ್ಯಾರ್ಥಿಗಳು, ಅವರ ಪಾಲಕರು, ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಒಂದೇ ವೇದಿಕೆಗೆ ತಂದು ಪರಸ್ಪರ ಅಭಿಪ್ರಾಯ ಹಂಚಿಕೊಳ್ಳಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಆಪ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಸ್ಕೂಲ್ಜ್ ಲಿಂಕ್ ಪ್ರೈ.ಲಿ. ಸಂಸ್ಥೆ ಉಚಿತವಾಗಿ ಆಪ್ ಅಭಿವೃದ್ಧಿಪಡಿಸಿಕೊಡಲು ಶಿಕ್ಷಣ ಇಲಾಖೆ ಜತೆ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ಅವಧಿ 1 ವರ್ಷವಾಗಿದ್ದು, 3ನೇ ಸಂಸ್ಥೆ/ವ್ಯಕ್ತಿ ಇದರಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ಒಪ್ಪಂದಪತ್ರದಲ್ಲಿ ನಮೂದಿಸಲಾಗಿದೆ. ಶಿಕ್ಷಣ ಇಲಾಖೆ ಸಂಗ್ರಹಿಸಿರುವ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರ ವೈಯಕ್ತಿಕ ದತ್ತಾಂಶವನ್ನು ಉಚಿತವಾಗಿ ನೀಡಲಾಗಿದೆ.
ಅವಕಾಶವಿಲ್ಲ: ಮಾಹಿತಿ ತಂತ್ರಜ್ಞಾನ ಕಾಯ್ದೆ 2000, ಸೆಕ್ಷನ್ 72ರ ಪ್ರಕಾರ ವೈಯಕ್ತಿಕ ಮಾಹಿತಿಯನ್ನು ಖಾಸಗಿ ಕಂಪನಿಗೆ ನೀಡುವುದು ಅಪರಾಧವಾಗುತ್ತದೆ.
ಗೌಪ್ಯ ಒಪ್ಪಂದ! ಶಿಕ್ಷಣ ಇಲಾಖೆ ಖಾಸಗಿ ಕಂಪನಿಗಳೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿ ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡುವ ಪರಿಪಾಠವಿದೆ. ಆದರೆ ಸ್ಕೂಲ್ಜ್ ಲಿಂಕ್ ಕಂಪನಿ ಜತೆಗೆ ಒಪ್ಪಂದ ಮಾಡಿಕೊಂಡ ಬಗ್ಗೆ ಗೌಪ್ಯತೆ ಕಾಯ್ದು ಕೊಳ್ಳಲಾಗಿದೆ. ಇದು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.
ದುರ್ಬಳಕೆ ಸಾಧ್ಯತೆ: ಸರ್ಕಾರಿ ದತ್ತಾಂಶವನ್ನು ಖಾಸಗಿ ಸಂಸ್ಥೆಗಳು ಪಡೆದು ಪಾಲಕರಿಗೆ ಕರೆ ಮಾಡಿ ವಿಶೇಷ ಆಫರ್ ನೀಡುತ್ತೇವೆಂದು ವಿದ್ಯಾರ್ಥಿಗಳನ್ನು ಸೆಳೆಯುವ ಪ್ರಯತ್ನ ಮಾಡಬಹುದು. ವಿದ್ಯಾರ್ಥಿಗಳಿಗೆ ಕೋಚಿಂಗ್ ಸೆಂಟರ್'ಗಳು ಕೂಡ ಕರೆ ಮಾಡಿ ಪ್ರವೇಶ ಪಡೆಯುವಂತೆ ಕಿರಿಕಿರಿ ಕೊಡುವ ಸಾಧ್ಯತೆಯಿದೆ. ಅಲ್ಲದೆ ಸಮಾಜಘಾತುಕ ಶಕ್ತಿಗಳ ಕೈಗೆ ವಿವರ ಸಿಕ್ಕಿ ವೈಯಕ್ತಿಕ ತೇಜೋವಧೆ ಮತ್ತಿತರ ದುಷ್ಕೃತ್ಯಗಳಿಗೆ ಬಳಸುವ ಸಾಧ್ಯತೆಯೂ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.