ವಿದೇಶಾಂಗ ನೀತಿ ಬಗ್ಗೆ ಮಾತನಾಡಲು ರಾಹುಲ್ ಗಾಂಧಿ ಅರ್ಹರೆ?

By Web DeskFirst Published Aug 28, 2018, 12:18 PM IST
Highlights

ನೀವು ಪ್ರಧಾನಿಯಾಗಿದ್ದರೆ ಡೋಕ್ಲಾಂ ವಿವಾದವನ್ನು ಹೇಗೆ ಪರಿಹರಿಸುತ್ತಿದ್ದಿರಿ ಎಂಬ ಪ್ರಶ್ನೆಗೆ ರಾಹುಲ್ ಉತ್ತರಿಸಿದ್ದು- ‘ನನಗೆ ಡೋಕ್ಲಾಂ ಕುರಿತ ವಿವರಗಳು ಗೊತ್ತಿಲ್ಲ. ಹೀಗಾಗಿ ನಾನೇನು ಮಾಡುತ್ತಿದ್ದೆ ಎಂಬುದಕ್ಕೆ ಉತ್ತರ ಕೊಡುವುದು ಕಷ್ಟ.’ ಇಷ್ಟು ಹೇಳಿ, ಅದೇ ಉಸಿರಿನಲ್ಲಿ ತಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ಸುದೀರ್ಘ ಅಭಿಪ್ರಾಯ ಮಂಡಿಸಿ ಈ ವಿಷಯದಲ್ಲಿ ಮೋದಿ ಸರ್ಕಾರ ಸರಿ ಇಲ್ಲ ಎಂದು ಬಿಟ್ಟರು!

ನವದೆಹಲಿ (ಆ. 28): ಇಂಗ್ಲೆಂಡ್‌ನಲ್ಲಿ ನಡೆದ ಸಂವಾದಕೂಟವೊಂದರಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಾರತದ ವಿದೇಶಿ ನೀತಿ ಬಗ್ಗೆ, ಅದರಲ್ಲೂ ಚೀನಾ ಮತ್ತು ಡೋಕ್ಲಾಂ ಕುರಿತಂತೆ ಮಾಡಿರುವ ವಿಶ್ಲೇಷಣೆ ಕೇಳಿಸಿಕೊಂಡ ನಂತರ ಅನ್ನಿಸಿದ್ದೇನೆಂದರೆ ರಾಹುಲ್ ಇಂಥ ವಿಷಯಗಳ ಬಗ್ಗೆ ಮಾತನಾಡದಿದ್ದರೇ ಒಳ್ಳೆಯದಿತ್ತು.

ಏಕೆಂದರೆ ಈ ವಿಷಯಗಳನ್ನು ಕೆದಕಿದಷ್ಟೂ ತೆರೆದುಕೊಳ್ಳುವುದೆಲ್ಲ ಕಾಂಗ್ರೆಸ್ಸಿನ ವೈಫಲ್ಯದ ಕಥಾನಕಗಳೇ. ನೀವು ಪ್ರಧಾನಿಯಾಗಿದ್ದರೆ ಡೋಕ್ಲಾಂ ವಿವಾದವನ್ನು ಹೇಗೆ ಪರಿಹರಿಸುತ್ತಿದ್ದಿರಿ ಎಂಬ ಪ್ರಶ್ನೆಗೆ ರಾಹುಲ್ ಉತ್ತರಿಸಿದ್ದು- ‘ನನಗೆ ಡೋಕ್ಲಾಂ ಕುರಿತ ವಿವರಗಳು ಗೊತ್ತಿಲ್ಲ. ಹೀಗಾಗಿ ನಾನೇನು ಮಾಡುತ್ತಿದ್ದೆ ಎಂಬುದಕ್ಕೆ ಉತ್ತರ ಕೊಡುವುದು ಕಷ್ಟ.’ ಇಷ್ಟು ಹೇಳಿ, ಅದೇ ಉಸಿರಿನಲ್ಲಿ ತಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ಸುದೀರ್ಘ ಅಭಿಪ್ರಾಯ ಮಂಡಿಸಿ ಈ ವಿಷಯದಲ್ಲಿ ಮೋದಿ ಸರ್ಕಾರ ಸರಿ ಇಲ್ಲ ಎಂದು ಬಿಟ್ಟರು!

ಡೋಕ್ಲಾಂನಿಂದ ಚೀನಾ ಹಿಂದಕ್ಕೆ ಹೋಗಿಯೇ ಇಲ್ಲ ಎನ್ನುವ ಮೂಲಕ ಜನಮಾನಸದಲ್ಲಿ ಸಂಶಯ ಬಿತ್ತುವ ಕಾರ್ಯವನ್ನು ವಿದೇಶದ ವೇದಿಕೆಯಲ್ಲೂ ಮುಂದುವರಿಸಿದರು ರಾಹುಲ್. ಭಾರತದ ಸಿಲಿಗುರಿಕಾರಿಡಾರನ್ನು ಗುರಿಯಾಗಿಸಬಹುದಾಗಿದ್ದ ರಸ್ತೆ ನಿರ್ಮಾಣದ ಜಾಗದಿಂದ ಚೀನೀಯರು ಹಿಂದಕ್ಕೆ ಸರಿಯುವಂತೆ ಮಾಡುವಲ್ಲಿ ಯಾವಾಗ ಭಾರತ ಯಶಸ್ವಿಯಾಯಿತೋ ಅಂದೇ ಡೋಕ್ಲಾಂ ವಿವಾದ ಬಗೆಹರಿದಿದೆ.

ಭೂತಾನಿನ ಜಾಗದಿಂದ ಹಿಂದೆ ಸರಿದ ನಂತರ ಚೀನಾ ಅದರ ಜಮೀನಿನಲ್ಲಿ ಏನೆಲ್ಲ ಮಾಡಿಕೊಂಡಿದೆಯೋ ಅದು ಭಾರತದ ಕೈಯಲ್ಲಿಲ್ಲ. ಭಾರತೀಯ ಸೇನಾ ಮುಖ್ಯಸ್ಥರು ಡೋಕ್ಲಾಂನಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಈ ವರ್ಷದ ಫೆಬ್ರವರಿಯಲ್ಲಿ ಘೋಷಿಸಿದ್ದಾರೆ. ದೇಶಕ್ಕಂತೂ ಸೇನೆ ಮೇಲೆ ನಂಬಿಕೆ ಇದೆ!

ಯಾರಿಗೆ ಪಂಚ್? ಹೇಗೆ ಪಂಚ್?

ಇಷ್ಟಕ್ಕೂ ಮೋದಿ ಸರ್ಕಾರದ ಚೀನಾ ನೀತಿ ಬಗ್ಗೆ ರಾಹುಲ್‌ರ ತಕರಾರು ಇರುವುದಾದರೂ ಎಲ್ಲಿ? ‘ಭಾರತ ಚೀನಾದೊಂದಿಗೆ ವ್ಯವಹರಿಸುವಾಗ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪಂಚ್ ಮಾಡುವುದಕ್ಕೆ ಆಗುತ್ತಿಲ್ಲ. ಕಾರಣವೇನೆಂದರೆ ಮೋದಿ ಸರ್ಕಾರದ ವಿದೇಶ ನೀತಿ ಆ ಕ್ಷಣಕ್ಕೆ ಸ್ಪಂದಿಸುವ ಎಪಿಸೋಡಿಕ್ ಥರದ್ದು. ದೀರ್ಘಾವಧಿ ಕಾರ್ಯತಂತ್ರಗಳೇ ಇಲ್ಲಿಲ್ಲ.’ ಚೀನಾ ಬಗ್ಗೆ, ಅದರೊಂದಿಗೆ ವ್ಯವಹರಿಸಬೇಕಿರುವ ದೀರ್ಘಾವಧಿ ಕಾರ್ಯತಂತ್ರಗಳ ಬಗ್ಗೆ ಕಾಂಗ್ರೆಸ್ ಉಪದೇಶಕ್ಕೆ ಇಳಿಯುವುದನ್ನು ನೋಡಿದರೆ ನೆಹರುರಿಂದ ಹಿಡಿದು ಯುಪಿಎವರೆಗೆ ಚೀನಾದ ವಿರುದ್ಧ ಭಾರತದ ಮಿಲಿಟರಿ ಮತ್ತು ಕಾರ್ಯತಂತ್ರ ಸಾಮರ್ಥ್ಯಗಳು ಬೆಳೆಯುವುದಕ್ಕೆ ಅಡ್ಡಗಾಲಾದ ಕಾಂಗ್ರೆಸ್‌ನ ಪರಂಪರೆಯೇ ಇಡೀ ದೇಶಕ್ಕೆ ನೆನಪಿಗೆ ಬರುತ್ತದೆ.

ಅದ್ಯಾವ ಪಂಚ್ ಬಗ್ಗೆ ಮಾತನಾಡುತ್ತಿದ್ದಾರೆ ರಾಹುಲ್? ಎದುರಾಳಿಗೆ ಪಂಚ್ ನೀಡುವ ಸಾಮರ್ಥ್ಯ ರಾತ್ರಿ ಬೆಳಗಾಗುವುದರ ಒಳಗೆ ವೃದ್ಧಿಯಾಗಿಬಿಡುವಂಥದ್ದಲ್ಲ. ಡೋಕ್ಲಾಂ ಬಗ್ಗೆ ಮಾತನಾಡುವ ರಾಹುಲ್‌ಗೆ ತಿಳಿದಿರಬೇಕು, ಚೀನಾ ಕಡೆಯಿಂದ ಅತಿಹೆಚ್ಚು ಗಡಿ ಉಲ್ಲಂಘನೆಗಳಾಗಿದ್ದು ಯುಪಿಎ-2 ಅವಧಿಯಲ್ಲಿ. ನಾರ್ತ್ ಬ್ಲಾಕ್ ಅಂಕಿಅಂಶಗಳ ಪ್ರಕಾರ ಡೋಕ್ಲಾಂ ವಿವಾದವಾದ 2017 ನೇ ಸಾಲಿನಲ್ಲಿ ಸುಮಾರು 400 ಬಾರಿ ಚೀನಿ ಸೇನೆ ಗಡಿದಾಟಿ ಬಂದಿತ್ತು.

ಆದರೆ 2012, 2013, 2014 ರ ಯುಪಿಎ ಅವಧಿಯಲ್ಲಿ ಕ್ರಮವಾಗಿ 426, 411 ಹಾಗೂ 550 ಬಾರಿ ಚೀನಾ ಗಡಿ ಉಲ್ಲಂಘಿಸಿ ಆಕ್ರಮಣ ಧೋರಣೆ ತೋರಿತ್ತು. 2015 ರಲ್ಲಿ ಇಂಥ ಘಟನೆಗಳು 290 ಕ್ಕೆ ಇಳಿದರೆ, 2016 ರಲ್ಲಿ 273 ಕ್ಕೆ ಸೀಮಿತವಾಗಿತ್ತು. ಎದುರಾಳಿಗೆ ಪಂಚ್ ಮಾಡುವುದಕ್ಕೆ ಸಾಮರ್ಥ್ಯ ಬೆಳೆಯುವುದಾದರೂ ಹೇಗೆ? ಎದುರಾಳಿಗೆ ತಕ್ಕಂತೆ ನಮ್ಮಲ್ಲೂ ಮೂಲಸೌಕರ್ಯಗಳು ಮಜಬೂತಾಗಬೇಕು ತಾನೇ? ಭಾರತದ ಗಡಿಗೆ ಹೊಂದಿಕೊಂಡಿರುವ ತನ್ನ ಪ್ರದೇಶಗಳಲ್ಲೆಲ್ಲ ಉತ್ತಮ ರಸ್ತೆಗಳು, ಸಂವಹನ ಸಂಪರ್ಕ ವೃದ್ಧಿ ಇಂಥವೆಲ್ಲ ಕೆಲಸಗಳಿಗೆ ಚೀನಾ ದಶಕಗಳ ಹಿಂದೆಯೇ ಕಾರ್ಯಪ್ರವೃತ್ತವಾಗಿತ್ತು.

ಇದಕ್ಕೆ ವ್ಯತಿರಿಕ್ತವಾಗಿ, 1962 ರ ಯುದ್ಧದಲ್ಲಿ ಸೋತ ನಂತರ ಕಾಂಗ್ರೆಸ್ ಪ್ರಣೀತ ಕಾರ್ಯತಂತ್ರ ನೀತಿಯೊಂದು ಭಾರತದಲ್ಲಿತ್ತು. ‘ನಾವು ಗಡಿಪ್ರದೇಶದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಬೇಡ. ಏಕೆಂದರೆ ದಾಳಿ ಸಂದರ್ಭದಲ್ಲಿ ಅವೇ ಸೌಕರ್ಯಗಳನ್ನು ಉಪಯೋಗಿಸಿಕೊಂಡು ವೈರಿಗಳು ಪೂರ್ತಿ ಭಾರತವನ್ನು ಆಕ್ರಮಿಸಿಬಿಡುವ ಅಪಾಯವಿದೆ’ ಎಂಬುದೇ ಆ ನೀತಿ!

ಗಡಿ ಭಾಗಗಳಲ್ಲಿರುವ ಜನರಲ್ಲಿ, ‘ಸರ್ಕಾರವು ನಮ್ಮನ್ನು ದೇಶದ ಇತರ ಪ್ರಜೆಗಳಂತೆ ನೋಡುತ್ತಿಲ್ಲ’ ಎಂಬ ಅಪಾಯಕಾರಿ ಭಾವನೆ ಹುಟ್ಟಿಸಬಲ್ಲ ನಡೆಯಿದು. ಈ ಆಲೋಚನೆಯಿಂದ ಹೊರಬಂದು, ಇಂಡೋ-ಚೀನಾ ಗಡಿ ಗುಂಟ ರಸ್ತೆ ನಿರ್ಮಾಣಕ್ಕೆ ಯುಪಿಎ ಅವಧಿಯಲ್ಲೇ ಸಂಕಲ್ಪವಾಯಿತು. 2005 ರಲ್ಲಿ 73 ರಸ್ತೆ ಯೋಜನೆಗಳನ್ನು ಗುರುತಿಸಿ ಅವನ್ನೆಲ್ಲ 2012 ರ ಒಳಗೆ ಮುಗಿಸಲು ಕಾಲಮಿತಿ ಹಾಕಿಕೊಳ್ಳಲಾಗಿತ್ತು.

ಆದರೆ, 2016 ರಲ್ಲಿ ಬಂದ ಸಿಎಜಿ ವರದಿ ಪ್ರಕಾರ, ಈ ಪೈಕಿ 61 ಮಾರ್ಗಗಳಿಗೆ ನಿಗದಿ ಮಾಡಲಾಗಿದ್ದ ಹಣದಲ್ಲಿ ಶೇ.೯೮ರಷ್ಟನ್ನು ವ್ಯಯಿಸಿ ಕೇವಲ 22 ರಸ್ತೆ ನಿರ್ಮಿಸಲಾಗಿದೆ.  ಈಗ ಮೋದಿ ಸರ್ಕಾರ 2020 ರ ಒಳಗೆ ಎಲ್ಲ ಗಡಿ ರಸ್ತೆ ಪೂರ್ಣಗೊಳಿಸುವ ಕಾಲಮಿತಿಯಲ್ಲಿ ಕೆಲಸ ಮಾಡುತ್ತಿದೆ.

ನೆಹರು ಏನು ಮಾಡಿದ್ದರು ಗೊತ್ತೆ?

ದೀರ್ಘಾವಧಿ ಕಾರ್ಯತಂತ್ರದ ಬಗ್ಗೆ ಮಾತನಾಡುವ ರಾಹುಲ್‌ಗೆ ತಮ್ಮ ಮುತ್ತಾತ ನೆಹರು ಏನು ಮಾಡಿದರು ಎಂಬುದು ತಿಳಿದಿರಬೇಕು. ಸ್ವಾತಂತ್ರ್ಯ ಸಿಗುತ್ತಲೇ ಆಗ ಭಾರತೀಯ ಸೇನೆಯ ಮುಖ್ಯಸ್ಥರಾಗಿದ್ದ ರಾಬರ್ಟ್ ಲಾಕ್ಹಾರ್ಟ್ ನೂತನ ಭಾರತದ ಸೇನೆ ಹೇಗಿರಬೇಕು ಎಂಬ ಬಗ್ಗೆ ತಯಾರಿಸಿದ್ದ ವರದಿಯನ್ನು ಪ್ರಧಾನಿ ನೆಹರು ಅವರಿಗೆ ನೀಡಲು ಬಂದಾಗ ಅವರು ಹೇಳಿದ್ದು- ‘ನಮಗೆ ರಕ್ಷಣಾ ನೀತಿಯೇ ಬೇಕಾಗಿಲ್ಲ.
ನಮ್ಮದೇನಿದ್ದರೂ ಅಹಿಂಸಾ ಮಾರ್ಗ. ಸೇನೆಯನ್ನು ಈಗಲೇ ಬೇಕಾದರೂ ವಿಸರ್ಜಿಸಿಬಿಡಬಹುದು. ಕಾನೂನು ಪಾಲನೆಗೆ ಪೊಲೀಸರಿದ್ದರೆ ಸಾಕು.’

ಚೀನಾದ ಸೇನೆ ಈಶಾನ್ಯ ಭಾರತದ ಕೆಲವು ಭಾಗಗಳನ್ನು ತನ್ನ ನಕ್ಷೆಯಲ್ಲಿ ಗುರುತಿಸಿಕೊಂಡಿರುವ ವಿದ್ಯಮಾನದ ಬಗ್ಗೆ ಗಮನಸೆಳೆ ಯುತ್ತ 1951 ರಲ್ಲೇ ಜನರಲ್ ಕಾರಿಯಪ್ಪ ನೆಹರು ಅವರನ್ನು ಎಚ್ಚರಿಸಿದ್ದರು. ಆಗ ನೆಹರು- ‘ಈ ದೇಶದ ವೈರಿ ಯಾರೆಂದು ಗುರುತಿಸುವ ಕೆಲಸ ಸೇನೆಯದ್ದಲ್ಲ’ ಎಂದು ಅವಮಾನಿಸಿದ್ದರು. 1959 ರಲ್ಲಿ ಜನರಲ್ ತಿಮ್ಮಯ್ಯ ಸಂಭಾವ್ಯ ಚೀನಾ ದಾಳಿ ಬಗ್ಗೆ ಎಚ್ಚರಿಸಿದಾಗಲೂ ನೆಹರು ನಿರ್ಲಕ್ಷಿಸಿದ್ದರು.

ಇಂಥದೊಂದು ಪರಂಪರೆಯ ಉತ್ತರಾಧಿಕಾರಿ ರಾಹುಲ್, ಚೀನಾ ಕುರಿತ ಭಾರತದ ನೀತಿ ಹೇಗಿರಬೇಕೆಂದು ಉಪದೇಶ ನೀಡುತ್ತಿದ್ದಾರೆ ಎಂಬಲ್ಲಿಗೆ ನಾವೀಗ ಧನ್ಯ! 

-ಚೈತನ್ಯ ಹೆಗಡೆ 

click me!