ಗಲ್ಲು ಶಿಕ್ಷೆ ಜಾರಿಗೆ ವಿಳಂಬ ಹಿನ್ನೆಲೆ: ರೇಪಿಸ್ಟ್‌ಗಳ ಗಲ್ಲು ಶಿಕ್ಷೆ ಜೀವಾವಧಿಗೆ ಇಳಿಕೆ!

By Web DeskFirst Published Jul 31, 2019, 8:16 AM IST
Highlights

2007 ರಲ್ಲಿ ಪುಣೆ ಬಿಪಿಒ ಕಂಪನಿ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರ ನಡೆಸಿ ಕೊಲೆ| ಗಲ್ಲು ಶಿಕ್ಷೆ ಜಾರಿಗೆ ವಿಳಂಬ ಹಿನ್ನೆಲೆ: ರೇಪಿಸ್ಟ್‌ಗಳ ಗಲ್ಲು ಶಿಕ್ಷೆ ಜೀವಾವಧಿಗೆ ಇಳಿಕೆ!| 

ಮುಂಬೈ[ಜು.31]: ಅತ್ಯಾಚಾರ, ಕೊಲೆ ಪ್ರಕರಣವೊಂದರಲ್ಲಿ ಮರಣದಂಡನೆಗೆ ಗುರಿಯಾಗಿದ್ದ ದೋಷಿಗಳಿಗೆ ಶಿಕ್ಷೆ ನೀಡುವಲ್ಲಿ ವಿಳಂಬ ಮಾಡಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಹೈಕೋರ್ಟ್‌, ಇಬ್ಬರು ದೋಷಿಗಳಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು 35 ವರ್ಷಗಳ ಜೀವಾವಧಿ ಶಿಕ್ಷೆಗೆ ಪರಿವರ್ತಿಸಿ ಆದೇಶ ಹೊರಡಿಸಿದೆ.

2007 ರಲ್ಲಿ ಪುಣೆ ಬಿಪಿಒ ಕಂಪನಿ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ದೋಷಿಗಳಾಗಿದ್ದ ಪುರುಷೋತ್ತಮ ಬೊರಾಟೆ(38) ಮತ್ತು ಪ್ರದೀಪ್‌ ಕೋಕಡೆ(32)ಗೆ ವಿಚಾರಣಾ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿತ್ತು. ಮುಂದೆ ಇದನ್ನು ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ ಕೂಡಾ ಎತ್ತಿಹಿಡಿದಿದ್ದವು. ತದನಂತರದಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತು ರಾಷ್ಟ್ರಪತಿಗಳು 2017ರಲ್ಲಿ ದೋಷಿಗಳ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದರು. ಬಳಿಕ ಜೂನ್‌ 24ರಂದು ಗಲ್ಲು ಶಿಕ್ಷೆ ಜಾರಿಗೆ ಪುಣೆ ಸೆಶೆನ್ಸ್‌ ಕೋರ್ಟ್‌ ಆದೇಶ ಕೂಡಾ ಹೊರಡಿಸಿತ್ತು.

ಇದೆಲ್ಲದರ ಹೊರತಾಗಿಯೂ ದೋಷಿಗಳಿಗೆ ಶಿಕ್ಷೆ ಜಾರಿಯಾಗಿರಲಿಲ್ಲ. ಇದನ್ನೇ ಮುಂದಿಟ್ಟುಕೊಂಟು ದೋಷಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ಈ ರೀತಿಯಲ್ಲಿ ಗಲ್ಲು ಶಿಕ್ಷೆ ಜಾರಿ ವಿಳಂಬ ಮಾಡುವುದು ಸಕಾರಣವಿಲ್ಲದ್ದು, ಅನಗತ್ಯವಾದುದು. ಆಡಳಿತ ವ್ಯವಸ್ಥೆಯ ಯಾವುದೇ ಅಂಗವು ಶಿಕ್ಷೆ ಜಾರಿ ವಿಳಂಬ ಮಾಡುವುದು ವ್ಯಕ್ತಿಯೊಬ್ಬನ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತೆ. ಜೊತೆಗೆ ಕ್ಷಮಾದಾನ ಅರ್ಜಿ ಸಲ್ಲಿಕೆ ವಿಚಾರಣೆ ವೇಳೆ ರಾಜ್ಯಪಾಲರಿಗೆ ರಾಜ್ಯ ಸರ್ಕಾರ ಅಗತ್ಯ ಮಾಹಿತಿಯನ್ನು ನೀಡಿರಲಿಲ್ಲ ಎಂದು ಹೇಳಿ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿತು.

click me!