ರಫೇಲ್‌ಗೆ ಶಸ್ತ್ರಪೂಜೆ: ಖರ್ಗೆ- ಅಮಿತ್ ಶಾ ಜಟಾಪಟಿ!

By Web DeskFirst Published Oct 10, 2019, 9:02 AM IST
Highlights

ರಫೇಲ್‌ಗೆ ಶಸ್ತ್ರಪೂಜೆ: ಖರ್ಗೆ-ಶಾ ಜಟಾಪಟಿ| ಪ್ರಚಾರ ಪಡೆಯಲು ರಾಜನಾಥ್‌ರಿಂದ ‘ಪೂಜೆ ನಾಟಕ’: ಖರ್ಗೆ| ಕಾಂಗ್ರೆಸ್‌ಗೆ ಯಾವ ಬಗ್ಗೆ ಟೀಕೆ ಮಾಡಬೇಕೆಂದೇ ಗೊತ್ತಿಲ್ಲ: ಶಾ| ಖರ್ಗೆ ನಾಸ್ತಿಕರು, ಅದಕ್ಕೆ ಈ ಟೀಕೆ: ಕಾಂಗ್ರೆಸ್‌ ನಾಯಕ ನಿರುಪಮ್‌

ನವದೆಹಲಿ[ಅ.10]: ಭಾರತಕ್ಕೆ ಹಸ್ತಾಂತರಗೊಂಡ ಮೊದಲ ರಫೇಲ್‌ ಯುದ್ಧವಿಮಾನಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರು ಶಸ್ತ್ರಪೂಜೆ ನೆರವೇರಿಸಿರುವುದು ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ.

‘ಕೇಂದ್ರ ಸರ್ಕಾರದ್ದು ಬರೀ ನಾಟಕ. ಕೇವಲ ಮಾಧ್ಯಮಗಳಲ್ಲಿ ಪ್ರಚಾರಕ್ಕೆಂದು ರಾಜನಾಥ್‌ ಅವರು ರಫೇಲ್‌ಗೆ ಶಸ್ತ್ರಪೂಜೆ ಮಾಡಿದ್ದಾರೆ’ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಟೀಕಿಸಿದ್ದಾರೆ. ಆದರೆ, ‘ಯಾವ ಬಗ್ಗೆ ಟೀಕೆ ಮಾಡಬೇಕು ಎಂಬ ಬಗ್ಗೆ ಕಾಂಗ್ರೆಸ್‌ ಮೊದಲು ಅರಿಯಲಿ. ಭಾರತದ ಸಂಪ್ರದಾಯದ ಅನುಸಾರ ವಿಜಯದಶಮಿ ದಿನ ಶಸ್ತ್ರಪೂಜೆ ಮಾಡದೇ ಇನ್ನಾವಾಗ ಮಾಡಬೇಕು?’ ಎಂದು ಅಮಿತ್‌ ಶಾ ತಿರುಗೇಟು ನೀಡಿದ್ದಾರೆ.

‘ಪವನಪುತ್ರ’ರಿಗೆ ವಿಜಯದಶಮಿ ಅರ್ಪಣೆ: ಮೋದಿ ಮಾಡಿಸಿದರು ಆಣೆ!

ಖರ್ಗೆ ಅವರು ಶಸ್ತ್ರಪೂಜೆ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಕೂಡ ಬೋಫೋರ್ಸ್‌ ಗನ್‌ ತರಿಸಿಕೊಳ್ಳಲಾಗಿತ್ತು. ಆದರೆ ಅವುಗಳನ್ನು ಪಡೆಯಲು ಹೋಗಿ ಪ್ರಚಾರ ಗಿಟ್ಟಿಸಿಕೊಂಡಿರಲಿಲ್ಲ. ಈಗ ರಫೇಲ್‌ ಪಡೆಯಲು ಹೋಗಿದ್ದು ನಾಟಕ. ಯಾವುವು ಉತ್ತಮ ಶಸ್ತ್ರಗಳು ಎಂಬುದನ್ನು ವಾಯುಪಡೆ ನಿರ್ಧರಿಸುತ್ತದೆ. ಆದರೆ ಬಿಜೆಪಿಯವರು ಬರೀ ಅದರೊಳಗೆ (ಯುದ್ಧವಿಮಾನದ ಒಳಗೆ) ಕೂತು ಪ್ರಚಾರ ಪಡೆಯುತ್ತಾರೆ’ ಎಂದು ಟೀಕಿಸಿದ್ದಾರೆ.

ಈ ನಡುವೆ ಖರ್ಗೆ ಹೇಳಿಕೆಯನ್ನು ಅವರ ಇತ್ತೀಚಿನ ಕಟುಟೀಕಾಕಾರರಾದ ಮಹಾರಾಷ್ಟ್ರ ಕಾಂಗ್ರೆಸ್‌ ಮುಖಂಡ ಸಂಜಯ್‌ ನಿರುಪಮ್‌ ಕೂಡಾ ಟೀಕಿಸಿದ್ದಾರೆ. ಶಸ್ತ್ರ ಪೂಜೆಯನ್ನು ತಮಾಷೆ ಎನ್ನಲಾಗದು. ದೇಶದಲ್ಲಿ ಶಸ್ತ್ರ ಪೂಜೆಯ ಬಗ್ಗೆ ಇತಿಹಾಸವೇ ಇದೆ. ಇಲ್ಲಿ ವಿಷಯವೇನೆಂದರೆ ಖರ್ಗೆ ಅವರು ನಾಸ್ತಿಕರು. ಕಾಂಗ್ರೆಸ್‌ನಲ್ಲಿ ಎಲ್ಲರೂ ನಾಸ್ತಿಕರಲ್ಲ ಎಂದು ಟಾಂಗ್‌ ನೀಡಿದ್ದಾರೆ.

ಭಾರತದ ಎರಡು ದಶಕಗಳ ಕನಸು ನನಸು: ವಾಯುಸೇನೆಗೆ ನೂರಾನೆ ಬಲ!

click me!