ಸರ್ಕಾರಕ್ಕೆ ಇಂದು ಎದುರಾಗಲಿದೆ ಹೊಸ ಚಾಲೆಂಜ್..?

First Published Jun 14, 2018, 7:18 AM IST
Highlights

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರದ ಪ್ರಪ್ರಥಮ ಸಮನ್ವಯ ಸಮಿತಿ ಸಭೆಯು ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ಮಧ್ಯಾಹ್ನ ನಾಲ್ಕು ಗಂಟೆಗೆ ನಗರದಲ್ಲಿ ನಡೆಯಲಿದೆ. 

ಬೆಂಗಳೂರು : ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಸರ್ಕಾರದ ಪ್ರಪ್ರಥಮ ಸಮನ್ವಯ ಸಮಿತಿ ಸಭೆಯು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ಮಧ್ಯಾಹ್ನ ನಾಲ್ಕು ಗಂಟೆಗೆ ನಗರದಲ್ಲಿ ನಡೆಯಲಿದೆ.

ಮೈತ್ರಿಕೂಟದ ಸುಲಲಿತ ನಿರ್ವಹಣೆ ದೃಷ್ಟಿಯಿಂದ ರಚನೆಯಾಗಿರುವ ಈ ಸಮನ್ವಯ ಸಮಿತಿಯು ತನ್ನ ಮೊದಲ ಸಭೆಯಲ್ಲಿ ಜೆಡಿಎಸ್‌ ಪ್ರಣಾಳಿಕೆಯ ಪ್ರಮುಖ ಅಂಶವಾದ ಸಾಲ ಮನ್ನಾ ಜಾರಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜುಲೈ ಮಾಸದಲ್ಲಿ ಮಂಡಿಸಲಿರುವ ಮೈತ್ರಿಕೂಟದ ಪ್ರಥಮ ಮುಂಗಡ ಪತ್ರ, ಮೈತ್ರಿಕೂಟದ ಪಾಲುದಾರರ ನಡುವೆ ಪ್ರಮುಖ ಸಮಸ್ಯೆಯಾಗಿರುವ ಅಧಿಕಾರಿಗಳ ವರ್ಗಾವಣೆ ವಿಚಾರ, ಜಿಲ್ಲಾ ಉಸ್ತುವಾರಿ ಸಚಿವರ ನಿಯುಕ್ತಿ, ನಿಗಮ-ಮಂಡಳಿಗಳ ಪಾಲು ಮಾಡಿಕೊಳ್ಳುವುದು ಮತ್ತು ಎರಡು ಪಕ್ಷಗಳ ಪ್ರಣಾಳಿಕೆಯ ಅಂಶ ಕ್ರೋಡೀಕರಿಸಿ ಸಾಮಾನ್ಯ ಕಾರ್ಯಸೂಚಿ ರಚಿಸುವಂತಹ ಮಹತ್ವದ ವಿಚಾರಗಳು ಚರ್ಚೆಗೆ ಬರಲಿವೆ. ಈ ಹಿನ್ನೆಲೆಯಲ್ಲಿ ಸಮನ್ವಯ ಸಮಿತಿಯ ಮೊದಲ ಸಭೆ ಒಂದು ರೀತಿಯಲ್ಲಿ ಸಮ್ಮಶ್ರ ಸರ್ಕಾರಕ್ಕೆ ‘ಫಿಟ್ನೆಸ್‌ ಚಾಲೆಂಜೇ’ ಸರಿ. 

ಇನ್ನು ಎಲ್ಲಾ ಖಾತೆಗಳ ವಿಚಾರ ಹಾಗೂ ಮುಖ್ಯಮಂತ್ರಿಗಳ ಆಡಳಿತ ವಿಚಾರದಲ್ಲಿಯೂ ಕೂಡ ಸಚಿವ ಎಚ್.ಡಿ ರೇವಣ್ಣ ಅವರು ಮಧ್ಯ ಪ್ರವೇಶಿಸುತ್ತಿದ್ದು, ಸ್ವತಃ ಕುಮಾರಸ್ವಾಮಿ ಅವರೇ ಅಸಮಾಧಾನಗೊಂಡಿದ್ದು, ಈ ವಿಚಾರವೂ ಕೂಡ ಚರ್ಚೆಯಾಗುವ ಸಾಧ್ಯತೆ ಇದೆ. 

ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಕಾಂಗ್ರೆಸ್‌ನಿಂದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಇದ್ದಾರೆ. ಇನ್ನು ಜೆಡಿಎಸ್‌ನಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್‌ ಅಲಿ ಇದ್ದಾರೆ.

ಜೆಡಿಎಸ್‌ ತನ್ನ ಪ್ರಣಾಳಿಕೆಯಲ್ಲಿ ಸಾಲ ಮನ್ನಾ ವಿಚಾರವನ್ನು ಪ್ರಮುಖವಾಗಿ ಪ್ರಸ್ತಾಪಿಸಿತ್ತು. ತಾನು ಮುಖ್ಯಮಂತ್ರಿಯಾಗಿ 24 ಗಂಟೆಗಳಲ್ಲಿ ಸಾಲ ಮನ್ನಾ ಜಾರಿಗೆ ತರುವುದಾಗಿ ಕುಮಾರಸ್ವಾಮಿ ಘೋಷಿಸಿದ್ದರು. ಮೈತ್ರಿ ಕೂಟ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾಲ ಮನ್ನಾ ಜಾರಿಯ ಬದ್ಧತೆಯನ್ನು ಕುಮಾರಸ್ವಾಮಿ ಪ್ರದರ್ಶಿಸಿದ್ದರೂ, ಅದರ ಜಾರಿಗೆ ಕಾಂಗ್ರೆಸ್‌ ಜತೆಗೂ ಸಮಾಲೋಚಿಸಬೇಕಾಗುತ್ತದೆ. ಏಕೆಂದರೆ, ತಾವೀಗ ಕಾಂಗ್ರೆಸ್‌ ಮುಲಾಜಿನಲ್ಲಿ ಇರುವುದಾಗಿ ಹೇಳಿದ್ದರು.

ಆದರೆ, ಪರಿಪೂರ್ಣ ಸಾಲ ಮನ್ನಾ ಕಾರ್ಯಸಾಧುವಲ್ಲ ಎಂಬ ಭಾವನೆ ಕಾಂಗ್ರೆಸ್‌ ಹೊಂದಿದೆ. ಸುಮಾರು 53 ಸಾವಿರ ಕೋಟಿ ರು. ಹೊರೆ ಬೀಳುವ ಸಾಲ ಮನ್ನಾ ಯೋಜನೆಯನ್ನು ರಾಜ್ಯದ ಬೊಕ್ಕಸ ಭರಿಸುವ ಸಾಮರ್ಥ್ಯ ಹೊಂದಿಲ್ಲ. ಒಂದು ವೇಳೆ ಜೆಡಿಎಸ್‌ ಘೋಷಿಸಿದ ರೀತಿಯಲ್ಲೇ ಈ ಯೋಜನೆ ಜಾರಿಗೊಳಿಸಿದರೆ ಈ ಹಿಂದಿನ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದ್ದ ಹತ್ತಾರು ಕಲ್ಯಾಣ ಕಾರ್ಯಕ್ರಮಗಳು ಸಂಕಷ್ಟಕ್ಕೆ ಸಿಲುಕುತ್ತವೆ ಎಂಬುದು ಕಾಂಗ್ರೆಸ್‌ ಆತಂಕ.

ಆದರೆ, ಜಿಡಿಎಸ್‌ ಒಂದಲ್ಲ ಒಂದು ರೀತಿಯಲ್ಲಿ ಸಾಲಮನ್ನಾ ಮಾಡುವ ಮೂಲಕ ನುಡಿದಂತೆ ನಡೆದೆ ಎಂದು ಬಿಂಬಿಸಿಕೊಳ್ಳಬೇಕಿದೆ. ಹೀಗಾಗಿ ಗುರುವಾರ ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ ಎಂದೇ ಹೇಳಲಾಗಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜುಲೈ ಎರಡನೇ ಮಾಸದಲ್ಲಿ ಬಜೆಟ್‌ ಮಂಡಿಸುವುದಾಗಿ ಘೋಷಿಸಿದ್ದಾರೆ. ಮುಂಗಡಪತ್ರದ ಸ್ವರೂಪ ಹೇಗಿರಬೇಕು ಮತ್ತು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಯಾವ್ಯಾವ ಯೋಜನೆಗಳು ಈ ಬಾರಿ ಮುಂಗಡಪತ್ರದಲ್ಲಿ ಅವಕಾಶ ಪಡೆಯಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಇದೇ ರೀತಿ ಇನ್ನೂ ಬಗೆಹರಿಯದ ನಿಗಮ ಮಂಡಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಚಾರವೂ ಸಭೆಯಲ್ಲಿ ಚರ್ಚಿತವಾಗಲಿದೆ ಎನ್ನಲಾಗಿದೆ. ನಿಗಮ-ಮಂಡಳಿಗಳನ್ನು ಯಾವ ರೀತಿ ಹಂಚಿಕೊಳ್ಳಬೇಕು ಎಂಬುದನ್ನು ಮೈತ್ರಿಕೂಟ ತೀರ್ಮಾನ ಮಾಡಬೇಕಿದೆ. ಉಭಯ ಪಕ್ಷಗಳಿಗೆ ಹಂಚಿಕೆಯಾಗಿರುವ ಖಾತೆಗಳ ವ್ಯಾಪ್ತಿಯಲ್ಲಿ ಬರುವ ನಿಗಮ ಮಂಡಳಿಗಳನ್ನು ಆಯಾ ಪಕ್ಷಗಳಿಗೆ ಬಿಡುವುದೋ ಅಥವಾ ನಿಗಮ ಮಂಡಳಿಗಳ ಪ್ರಾಮುಖ್ಯತೆಗೆ ಅನುಗುಣವಾಗಿ ಪಾಲು ಮಾಡಿಕೊಳ್ಳಬೇಕೋ ಎಂಬುದು ನಿರ್ಧಾರವಾಗಬೇಕಿದೆ. ಜತೆಗೆ, ಯಾವ ಪಕ್ಷಕ್ಕೆ ಎಷ್ಟುನಿಗಮ ಮಂಡಳಿಗಳು ಬರುತ್ತವೆ ಮತ್ತು ಇದಕ್ಕೆ ಯಾವ ಮಾನದಂಡ ಅನುಸರಿಸಬೇಕು ಎಂಬ ಬಗ್ಗೆ ಗುರುವಾರದ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಇನ್ನು ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಬೇಕಿದೆ. ಯಾವ ಜಿಲ್ಲೆಯನ್ನು ಯಾವ ಪಕ್ಷಕ್ಕೆ ಸೇರಿದ ಸಚಿವರಿಗೆ ನೀಡಬೇಕು ಎಂಬ ಬಗ್ಗೆ ಗೊಂದಲವಿದೆ. ಇನ್ನು, ಅಧಿಕಾರಿಗಳ ವರ್ಗಾವಣೆ ಮೈತ್ರಿಕೂಟದ ನಡುವೆ ಇರುವ ಪ್ರಮುಖ ಸಮಸ್ಯೆ. ಕಾಂಗ್ರೆಸ್‌ ಪಾಲಿಗೆ ಬಂದಿರುವ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ರೀತಿಯ ಅಧಿಕಾರಿಗಳ ವರ್ಗಾವಣೆಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕು. ಇದರಲ್ಲಿ ಮುಖ್ಯಮಂತ್ರಿಯವರು ಯಾವ ಪಾತ್ರವನ್ನೂ ನಿರ್ವಹಿಸಬಾರದು ಎಂಬುದು ಕಾಂಗ್ರೆಸ್‌ ಷರತ್ತು. ಆದರೆ, ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಒಪ್ಪುತ್ತಿಲ್ಲ. ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಹತೋಟಿಯಿಲ್ಲದಿದ್ದರೆ ಸರ್ಕಾರವನ್ನು ನಿರ್ವಹಿಸುವುದು ಹೇಗೆ? ಪ್ರಮುಖ ಶ್ರೇಣಿ-ವೃಂದದ ಅಧಿಕಾರಿಗಳ ವರ್ಗಾವಣೆ ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟಿದ್ದು, ಇದೇ ನೀತಿಯನ್ನು ಈ ಹಿಂದಿನ ಮೈತ್ರಿಕೂಟದ ಸರ್ಕಾರಗಳು ಅನುಸರಿಸಿದ್ದವು. ಈ ಬಾರಿಯೂ ಅದೇ ನೀತಿ ಅನ್ವಯವಾಗಬೇಕು ಎಂಬುದು ಜೆಡಿಎಸ್‌ ನಿಲುವು. ಹೀಗಾಗಿ ಈ ಸಂಘರ್ಷಕ್ಕೆ ಗುರುವಾರದ ಸಮನ್ವಯ ಸಮಿತಿ ಸಭೆ ಯಾವ ಮಾರ್ಗೋಪಾಯ ಕಂಡುಕೊಳ್ಳುತ್ತದೆ ಎಂಬ ಕುತೂಹಲವಿದೆ.

ಸಂಭಾವ್ಯ ಚರ್ಚೆ

1. ಸಾಲ ಮನ್ನಾ ಯೋಜನೆಯನ್ನು ಯಾವ ಸ್ವರೂಪದಲ್ಲಿ ಜಾರಿಗೊಳಿಸಬೇಕು

2. ಮೈತ್ರಿಕೂಟದ ಪ್ರಥಮ ಮುಂಗಡ ಪತ್ರ ಒಳಗೊಳ್ಳಬೇಕಾದ ಕಾರ್ಯಕ್ರಮಗಳು

3. ಮೈತ್ರಿಕೂಟದಲ್ಲಿ ಪ್ರಮುಖ ಸಮಸ್ಯೆಯೆನಿಸಿದ ಅಧಿಕಾರಿಗಳ ವರ್ಗಾವಣೆ ವಿಚಾರ

4. ರಾಜ್ಯದ 30 ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ ಹಾಗೂ ಹಂಚಿಕೆ ಕುರಿತು

5. ನಿಗಮ-ಮಂಡಳಿಗಳಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಾಲು ಹಂಚಿಕೊಳ್ಳುವಿಕೆ

6. ಎರಡೂ ಪಕ್ಷಗಳ ಪ್ರಣಾಳಿಕೆಯ ಅಂಶ ಕ್ರೋಡೀಕರಿಸಿ ಸಾಮಾನ್ಯ ಕಾರ‍್ಯಸೂಚಿ ರಚನೆ

 

ತಂದೆ ಹಾಗೂ ಸಹೋದರರ ನಡೆ ಬಗ್ಗೆ ಸಿಎಂ ಅಸಮಾಧಾನ

click me!