ಮಗನಿಗಾಗಿ ವರುಣ ಬಿಟ್ಟು ಚಾಮುಂಡೇಶ್ವರಿ ಕ್ಷೇತ್ರದಿಂದ ಸಿಎಂ ಸ್ಪರ್ಧೆ

By Suvarna Web DeskFirst Published Mar 25, 2018, 10:17 AM IST
Highlights

ಮೈಸೂರು ನಗರದ ಸುತ್ತಮುತ್ತಲಿನ ಪ್ರದೇಶ ಹಾಗೂ ಗ್ರಾಮಾಂತರ ಪ್ರದೇಶಗಳನ್ನು ಒಳಗೊಂಡ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಇಡೀ ರಾಜ್ಯದಲ್ಲಿಯೇ ಅತ್ಯಂತ ಪ್ರತಿಷ್ಠಿತ ಕ್ಷೇತ್ರವಾಗಿ ಮಾರ್ಪಟ್ಟಿದೆ. ಎರಡು ಚುನಾವಣೆಗಳ ಬಿಡುವಿನ ನಂತರ ಮತ್ತೊಮ್ಮೆ ಈ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಿಸಿರುವುದು ಇದಕ್ಕೆ ಕಾರಣ.

ಅಂಶಿ ಪ್ರಸನ್ನಕುಮಾರ್‌

ಮೈಸೂರು : ಮೈಸೂರು ನಗರದ ಸುತ್ತಮುತ್ತಲಿನ ಪ್ರದೇಶ ಹಾಗೂ ಗ್ರಾಮಾಂತರ ಪ್ರದೇಶಗಳನ್ನು ಒಳಗೊಂಡ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಇಡೀ ರಾಜ್ಯದಲ್ಲಿಯೇ ಅತ್ಯಂತ ಪ್ರತಿಷ್ಠಿತ ಕ್ಷೇತ್ರವಾಗಿ ಮಾರ್ಪಟ್ಟಿದೆ. ಎರಡು ಚುನಾವಣೆಗಳ ಬಿಡುವಿನ ನಂತರ ಮತ್ತೊಮ್ಮೆ ಈ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಿಸಿರುವುದು ಇದಕ್ಕೆ ಕಾರಣ.

ಸಿದ್ದರಾಮಯ್ಯ ಅವರು ಹಾಲಿ ಪ್ರತಿನಿಧಿಸುತ್ತಿರುವ ವರುಣ ಕ್ಷೇತ್ರವನ್ನು ಪುತ್ರ ಡಾ.ಎಸ್‌. ಯತೀಂದ್ರಗೆ ಬಿಟ್ಟುಕೊಟ್ಟು, ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಪ್ರಕಟಿಸುತ್ತಿದ್ದಂತೆ ಅವರಿಗೆ ತಿರುಗೇಟು ನೀಡಲು ಪ್ರತಿಪಕ್ಷಗಳು ಸಜ್ಜಾಗುತ್ತಿವೆ. ಮಾಜಿ ಸಚಿವ, ಜೆಡಿಎಸ್‌ನ ಜಿ.ಟಿ. ದೇವೇಗೌಡ ಹಾಲಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಇದು ಸಿದ್ದರಾಮಯ್ಯ- ಜಿ.ಟಿ. ದೇವೇಗೌಡರ ನಡುವಿನ ಜಿದ್ದಾಜಿದ್ದಿಯ ಕಣವಾಗಿ ಮಾರ್ಪಟ್ಟಿದೆ.

ಸಿದ್ದರಾಮಯ್ಯ ಅವರು ಈ ಕ್ಷೇತ್ರದಿಂದ 1983ರಲ್ಲಿ ಪಕ್ಷೇತರ, 1985ರಲ್ಲಿ ಜನತಾಪಕ್ಷ, 1994ರಲ್ಲಿ ಜನತಾದಳ, 2004ರಲ್ಲಿ ಜೆಡಿಎಸ್‌ ಹಾಗೂ 2006ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಆಯ್ಕೆಯಾಗಿದ್ದರು. ಅವರು 1989ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಎಂ. ರಾಜಶೇಖರಮೂರ್ತಿ, 1999ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಎ.ಎಸ್‌. ಗುರುಸ್ವಾಮಿ ಅವರ ಎದುರು ಪರಾಭವಗೊಂಡಿದ್ದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರೊಂದಿಗೆ ವಿರಸ ಉಂಟಾಗಿ 2006ರಲ್ಲಿ ಸಿದ್ದರಾಮಯ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್‌ ಸೇರಿದರು. ಆ ವರ್ಷದ ಡಿಸೆಂಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು. ಆಗ ರಾಜ್ಯದಲ್ಲಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌- ಬಿಜೆಪಿ ಸಮ್ಮಿಶ್ರ ಸರ್ಕಾರವಿತ್ತು. ಬಿ.ಎಸ್‌. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದರು. ಬಿಜೆಪಿ ಅಭ್ಯರ್ಥಿ ಹಾಕಿರಲಿಲ್ಲ. ಜೆಡಿಎಸ್‌ನ ಶಿವಬಸಪ್ಪ ಎಂಬ ಅನಾಮಧೇಯರ ಎದುರು ಸಿದ್ದರಾಮಯ್ಯ ಗೆಲ್ಲಲು ತಿಣುಕಾಡಬೇಕಾಯಿತು. ಹಲವು ಸುತ್ತುಗಳ ಹಾವು- ಏಣಿ ಆಟದ ನಂತರ ಕೊನೆಗೂ 257 ಮತಗಳ ಕೂದಲೆಳೆಯ ಅಂತರದಿಂದ ಗೆದ್ದಿದ್ದರು. ಕ್ಷೇತ್ರ ಪುನರ್‌ ವಿಂಗಡಣೆಯ ನಂತರ ಅಂದರೆ 2008ರಿಂದ ‘ಈ ಕ್ಷೇತ್ರದ ಸಹವಾಸ ಬೇಡ’ ಎಂದು ಹೊಸದಾಗಿ ರಚಿತವಾಗಿರುವ ವರುಣ ಕ್ಷೇತ್ರಕ್ಕೆ ಸ್ಥಳಾಂತರವಾಗಿದ್ದರು. 2008 ಹಾಗೂ 2013ರಲ್ಲಿ ಸುಲಭವಾಗಿ ಗೆದ್ದಿದ್ದರು. ಅಲ್ಲಿಂದ ಮೊದಲ ಬಾರಿ ಗೆದ್ದಾಗ ವಿರೋಧ ಪಕ್ಷದ ನಾಯಕ, ಎರಡನೇ ಬಾರಿ ಗೆದ್ದಾಗ ಸಿಎಂ ಆದರು.

ಸಿದ್ದರಾಮಯ್ಯ ಚಾಮುಂಡೇಶ್ವರಿಗೆ ಬಂದಲ್ಲಿ ಅವರನ್ನು ಸೋಲಿಸುವುದೇ ತಮ್ಮ ಗುರಿ ಎಂದು ಅವರ ಬದ್ಧವೈರಿಗಳಾದ ಮಾಜಿ ಸಚಿವರಾದ ವಿ. ಶ್ರೀನಿವಾಸಪ್ರಸಾದ್‌, ಎಚ್‌. ವಿಶ್ವನಾಥ್‌ ತೊಡೆತಟ್ಟಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಮೊದಲಾದ ನಾಯಕರು ಇದಕ್ಕೆ ಸಾಥ್‌ ನೀಡಿದ್ದಾರೆ. ಕ್ಷೇತ್ರಾದ್ಯಂತ ಬಿಗಿ ಹಿಡಿತ ಹೊಂದಿರುವ ​ಜಿ.ಟಿ. ದೇವೇಗೌಡ ‘ಕುಮಾರಪರ್ವ’ದ ಆರಂಭಿಕ ಕಾರ್ಯಕ್ರಮ ನಡೆಸಿ, ಅಪಾರ ಜನಸ್ತೋಮ ಸೇರಿಸಿ, ಕಾಂಗ್ರೆಸ್‌ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಎಲ್ಲಾ ವಿರೋಧಿಗಳು ಕೈಜೋಡಿಸಿದಲ್ಲಿ ಉಪ ಚುನಾವಣೆಯಂತೆಯೇ ಫಲಿತಾಂಶ ತೀವ್ರ ಕುತೂಹಲ ಕೆರಳಿಸುವ ಸಾಧ್ಯತೆ ಇದೆ. ಆದರೆ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಎನ್ನುವ ಪದವಿ ಇದೆ. ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ ಅವರಿಗೆ ಸಿಎಂ ಆಗುವ ಅವಕಾಶಗಳಿವೆ. ಜಿಲ್ಲೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂಬ ಭರವಸೆ ಇದೆ. ಅಲ್ಲದೇ ಇದೇ ಕೊನೆ ಚುನಾವಣೆ ಎಂಬ ಅನುಕಂಪ ಕೈಹಿಡಿಯುತ್ತದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್‌ ಹೊಂದಿದೆ.

ಜಾತಿ ಲೆಕ್ಕಾಚಾರದಲ್ಲಿ ಯಾರು ಸ್ಟ್ರಾಂಗ್‌?  2.78 ಲಕ್ಷ ಮತದಾರರು ಇದ್ದಾರೆ. ಒಕ್ಕಲಿಗರು- 72 ಸಾವಿರ, ಕುರುಬರು- 42 ಸಾವಿರ, ವೀರಶೈವರು- 30 ಸಾವಿರ, ಪರಿಶಿಷ್ಟಜಾತಿ- 45 ಸಾವಿರ, ಪ.ಪಂಗಡ- 30 ಸಾವಿರ, ವಿಶ್ವಕರ್ಮ- 14 ಸಾವಿರ, ಬ್ರಾಹ್ಮಣರು- 12 ಸಾವಿರ, ಇತರೆ ಸಮುದಾಯದವರು 33 ಸಾವಿರದಷ್ಟಿದ್ದಾರೆ.

click me!