ಕರ್ನಾಟಕದ ಆಕ್ಷೇಪವನ್ನೂ ಲೆಕ್ಕಿಸದೇ ಕೇಂದ್ರದಿಂದ ಕ್ರಮ

First Published Jun 23, 2018, 7:44 AM IST
Highlights

ಕರ್ನಾಟಕದ ಹಲವು ಆಕ್ಷೇಪಗಳ ಹೊರತಾಗಿಯೂ ಕಾವೇರಿ ನದಿ ನೀರನ್ನು ನ್ಯಾಯಾಧಿಕರಣ, ಸುಪ್ರೀಂಕೋರ್ಟ್‌ ತೀರ್ಪುಗಳಿಗೆ ಅನುಗುಣವಾಗಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ನಡುವೆ ಹಂಚಿಕೆ ಮಾಡಲು ಕೇಂದ್ರ ಸರ್ಕಾರ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ಜಲ ನಿಯಂತ್ರಣ ಸಮಿತಿಗಳನ್ನು ರಚಿಸಿ ಶುಕ್ರವಾರ ಆದೇಶ ಹೊರಡಿಸಿದೆ.
 

ನವದೆಹಲಿ :  ಕರ್ನಾಟಕದ ಹಲವು ಆಕ್ಷೇಪಗಳ ಹೊರತಾಗಿಯೂ ಕಾವೇರಿ ನದಿ ನೀರನ್ನು ನ್ಯಾಯಾಧಿಕರಣ, ಸುಪ್ರೀಂಕೋರ್ಟ್‌ ತೀರ್ಪುಗಳಿಗೆ ಅನುಗುಣವಾಗಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ನಡುವೆ ಹಂಚಿಕೆ ಮಾಡಲು ಕೇಂದ್ರ ಸರ್ಕಾರ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ಜಲ ನಿಯಂತ್ರಣ ಸಮಿತಿಗಳನ್ನು ರಚಿಸಿ ಶುಕ್ರವಾರ ಆದೇಶ ಹೊರಡಿಸಿದೆ.

ಜಲಾಶಯಗಳ ಮೇಲುಸ್ತುವಾರಿ ವಹಿಸಿ, ನೀರು ಹಂಚಿಕೆಯಲ್ಲಿ ಪ್ರಧಾನ ಪಾತ್ರ ನಿರ್ವಹಿಸುವ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವು ದೆಹಲಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಕೇಂದ್ರ ಜಲ ಆಯೋಗದ ಅಧ್ಯಕ್ಷ ಎಸ್‌. ಮಸೂದ್‌ ಹುಸೇನ್‌ ಅಧ್ಯಕ್ಷತೆಯಲ್ಲಿ ಕೆಲಸ ಮಾಡಲಿದೆ. ಇದರಲ್ಲಿ ಅಧ್ಯಕ್ಷರು ಸೇರಿ ಒಟ್ಟು 9 ಸದಸ್ಯರು ಇರುತ್ತಾರೆ. ಕಾವೇರಿ ಕಣಿವೆಯ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿಯ ಪ್ರತಿನಿಧಿಗಳೂ ಇರುತ್ತಾರೆ. ಈ ಪ್ರಾಧಿಕಾರಕ್ಕೆ ಅಣೆಕಟ್ಟೆಗಳಲ್ಲಿನ ಜಲಸಂಗ್ರಹ, ಜಲ ಬೇಡಿಕೆ ಮತ್ತಿತರ ವಿಚಾರಗಳ ಕುರಿತು ಪರಿಪೂರ್ಣ ಮಾಹಿತಿ ಒದಗಿಸುವ ಕಾವೇರಿ ನೀರು ನಿಯಂತ್ರಣ ಸಮಿತಿಯ ಕಚೇರಿ ಬೆಂಗಳೂರಿನಲ್ಲಿ ಇರಲಿದೆ. ಕೇಂದ್ರ ಜಲ ಆಯೋಗದ ಮುಖ್ಯ ಎಂಜಿನಿಯರ್‌ ನವೀನ್‌ ಕುಮಾರ್‌ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಕರ್ನಾಟಕದ ಪ್ರತಿನಿಧಿ ಸೇರಿ 9 ಸದಸ್ಯರು ಇರುತ್ತಾರೆ.

ಇಂಥದ್ದೇ ಬೆಳೆ ಬೆಳೆಯಬೇಕು, ಇಷ್ಟೇ ಪ್ರಮಾಣದಲ್ಲಿ ನೀರು ಬಳಸಬೇಕು, ಪ್ರತಿ 10 ದಿನಕ್ಕೊಮ್ಮೆ ಜಲಾಶಯಗಳಲ್ಲಿನ ಸಂಗ್ರಹ ಸಾಮರ್ಥ್ಯ ಅಳೆಯಬೇಕು ಎಂಬ ಅಂಶಗಳನ್ನು ಹೊಂದಿರುವ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ, ಮಾರ್ಗಸೂಚಿಯ ಬದಲು ಷರತ್ತು ವಿಧಿಸುವಂತಿದೆ ಎಂಬುದು ಕರ್ನಾಟಕದ ಪ್ರಧಾನ ಆಕ್ಷೇಪ. ಇದರ ಜತೆಗೆ ಅಂತಾರಾಜ್ಯ ಜಲ ವಿವಾದ ಕಾನೂನುಗಳ ಪ್ರಕಾರ, ಇಂತಹ ಪ್ರಾಧಿಕಾರ ಸಂಸತ್ತಿನಲ್ಲಿ ಚರ್ಚೆಯಾಗಿ ಸ್ಥಾಪನೆಯಾಗಬೇಕು ಎಂದು ಕಳೆದ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದರು. ಅಲ್ಲದೆ, ಕರ್ನಾಟಕದ ಕಳವಳಗಳನ್ನು ನಿವಾರಿಸುವವರೆಗೂ ಕಾವೇರಿ ಪ್ರಾಧಿಕಾರ ಹಾಗೂ ಕಾವೇರಿ ಸಮಿತಿಗೆ ಕರ್ನಾಟಕದ ಪ್ರತಿನಿಧಿಗಳನ್ನು ನೇಮಕ ಮಾಡುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದರು.

ಆದರೆ ಕೇಂದ್ರ ಸರ್ಕಾರ ಈ ಆಕ್ಷೇಪಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪ್ರಾಧಿಕಾರ ಹಾಗೂ ಸಮಿತಿಯ ಹುದ್ದೆಗಳಿಗೆ ತಮಿಳುನಾಡು, ಕೇರಳ, ಪುದುಚೇರಿ ಅಧಿಕಾರಿಗಳ ಹೆಸರನ್ನು ಪ್ರಕಟಿಸಿ, ಕರ್ನಾಟಕದ ವಿವಿಧ ಶ್ರೇಣಿಯ ಹುದ್ದೆಗಳನ್ನಷ್ಟೇ ನಮೂದಿಸಿದೆ. ಪ್ರಾಧಿಕಾರವೇ ಆಗಲೀ, ಸಮಿತಿಯೇ ಆಗಲೀ ಸಭೆ ನಡೆಸಲು 9 ಸದಸ್ಯರ ಪೈಕಿ 6 ಮಂದಿ ಹಾಜರಾದರೂ ಸಾಕು. ಬಹುಮತದ ತತ್ವದಲ್ಲಿ ಇವು ಕೆಲಸ ಮಾಡಲಿವೆ. ಹೀಗಾಗಿ ಕರ್ನಾಟಕ ಪ್ರತಿನಿಧಿಗಳ ಅನುಪಸ್ಥಿತಿಯಲ್ಲೂ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಸಮಿತಿಗಳು ಕಾರ್ಯನಿರ್ವಹಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಹೀಗಾಗಿ ಕರ್ನಾಟಕ ಸರ್ಕಾರ ಈ ಎರಡೂ ಸಂಸ್ಥೆಗಳ ಮುಂದೆ ತನ್ನ ಪರ ಪ್ರಬಲ ವಾದ ಮಾಡಲು ತನ್ನ ಪ್ರತಿನಿಧಿಗಳನ್ನು ಸೂಚಿಸಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರಕ್ಕೆ ಕರ್ನಾಟಕ ಸರ್ಕಾರ ಜಲ ಸಂಪನ್ಮೂಲ ಇಲಾಖೆಯ ಆಡಳಿತಾತ್ಮಕ ಕಾರ್ಯದರ್ಶಿಯನ್ನು ನೇಮಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಆ ಹುದ್ದೆಗೆ ಹಾಲಿ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿರುವ ರಾಕೇಶ್‌ ಸಿಂಗ್‌ ಅವರು ನೇಮಕಗೊಳ್ಳುವ ಸಂಭವ ಅಧಿಕವಿದೆ. ಆದರೆ ಕಾವೇರಿ ನೀರು ಸಲಹಾ ಸಮಿತಿಗೆ ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್‌ ಹುದ್ದೆಯ ಅಧಿಕಾರಿಯನ್ನು ಸದಸ್ಯರಾಗಿ ನೇಮಕ ಮಾಡಬೇಕಿದೆ. ಆದರೆ ಹಾಲಿ ಇದೇ ಶ್ರೇಣಿಯಲ್ಲಿ ಕರ್ನಾಟಕ ಸರ್ಕಾರದಲ್ಲಿ 20 ಅಧಿಕಾರಿಗಳು ಇದ್ದಾರೆ. ಆ ಪೈಕಿ ಸರ್ಕಾರ ಯಾರನ್ನು ಸೂಚಿಸಲಿದೆ ಎಂಬುದು ನಿರ್ಧಾರವಾಗಬೇಕಿದೆ.

ಪ್ರಾಧಿಕಾರದ ಕೆಲಸಗಳೇನು?:

ಜಲ ಸಂಗ್ರಹ, ಜಲ ಹಂಚಿಕೆ, ನಿಯಂತ್ರಣ ಮತ್ತು ಕಾವೇರಿ ನದಿ ನೀರಿನ ನಿಯಂತ್ರಣವನ್ನು ಪ್ರಾಧಿಕಾಋು ಹೊಂದಿರುತ್ತದೆ. ಜಲಾಶಯಗಳ ಮೇಲುಸ್ತುವಾರಿಯನ್ನು ವಹಿಸಿ, ಕಾವೇರಿ ಜಲ ನಿಯಂತ್ರಣ ಸಮಿತಿಯ ನೆರವಿನಿಂದ ನದಿ ನೀರನ್ನು ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳುತ್ತದೆ. ವಾಡಿಕೆಗಿಂತ ಕಡಿಮೆ ಮಳೆಯಾದಲ್ಲಿ ಸಂಕಷ್ಟಸೂತ್ರ ರೂಪಿಸಿ, ನೀರು ಹಂಚಿಕೆ ಮಾಡುತ್ತದೆ. ನೀರಿನ ಒಳಹರಿವು, ಸಂಗ್ರಹ, ಬಳಕೆ ಬಿಡುಗಡೆ ಕುರಿತು ಪ್ರತಿ 10 ದಿನಕ್ಕೊಮ್ಮೆ ನಿರ್ಧಾರ ಕೈಗೊಳ್ಳುತ್ತದೆ.

ಏನಿದು ನೀರು ನಿಯಂತ್ರಣ ಸಮಿತಿ?:

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಸಮಿತಿ, ಜಲಾಶಯಗಳ ಒಳಹರಿವು, ಸಂಗ್ರಹ ಸಾಮರ್ಥ್ಯ, ಬೇಡಿಕೆ ಮತ್ತಿತರೆ ವಿವರಗಳನ್ನು ಸಂಗ್ರಹಿಸಿ ನೀರು ನಿರ್ವಹಣೆ ಪ್ರಾಧಿಕಾರಕ್ಕೆ ಹಸ್ತಾಂತರಿಸುತ್ತದೆ.

ಹಿನ್ನೆಲೆ: ಕರ್ನಾಟಕ ಹಾಗೂ ತಮಿಳುನಾಡು ನಡುವೆ ಶತಮಾನಗಳಿಂದ ಇರುವ ಕಾವೇರಿ ವಿವಾದ ಇತ್ಯರ್ಥಕ್ಕೆ 1990ರಲ್ಲಿ ಕೇಂದ್ರ ಸರ್ಕಾರ ನ್ಯಾಯಾಧಿಕರಣ ರಚನೆ ಮಾಡಿತ್ತು. 2007ರ ಫೆ.5ರಂದು ಅಂತಿಮ ಐತೀರ್ಪು ಪ್ರಕಟಿಸಿದ್ದ ನ್ಯಾಯಾಧಿಕರಣ, ಕರ್ನಾಟಕ ಪ್ರತಿ ವರ್ಷ ತಮಿಳುನಾಡಿಗೆ 192 ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂದು ಸೂಚಿಸಿತ್ತು. ಕೇರಳಕ್ಕೆ 30, ಪುದುಚೇರಿಗೆ 7 ಟಿಎಂಸಿ ನೀರು ಹಂಚಿಕೆ ಮಾಡಿತ್ತು. ಇದರ ವಿರುದ್ಧ ನಾಲ್ಕೂ ರಾಜ್ಯಗಳು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದವು. ಇದೇ ವರ್ಷ ಫೆ.16ರಂದು ತೀರ್ಪು ಪ್ರಕಟಿಸಿದ್ದ ಸುಪ್ರೀಂಕೋರ್ಟ್‌, ಕರ್ನಾಟಕ ಬಿಡುಗಡೆ ಮಾಡಬೇಕಾದ ನೀರಿನ ಪ್ರಮಾಣವನ್ನು 177 ಟಿಎಂಸಿಗೆ ಇಳಿಸಿತ್ತು. ಅಲ್ಲದೆ ತೀರ್ಪು ಜಾರಿಗೆ ಆರು ವಾರಗಳಲ್ಲಿ ಒಂದು ವ್ಯವಸ್ಥೆ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಜೂ.1ರಂದು ಕೇಂದ್ರ ಸರ್ಕಾರ ನೀರು ನಿಯಂತ್ರಣ ವ್ಯವಸ್ಥೆಯ ಗೆಜೆಟ್‌ ಅಧಿಸೂಚನೆ ಹೊರಡಿಸಿತ್ತು.


ಪ್ರಾಧಿಕಾರದಲ್ಲಿ ಯಾರಾರ‍ಯರು ಇರುತ್ತಾರೆ?

ಅಧ್ಯಕ್ಷರು: ಕೇಂದ್ರೀಯ ಜಲ ಆಯೋಗದ ಅಧ್ಯಕ್ಷ ಎಸ್‌. ಮಸೂದ್‌ ಹುಸೇನ್‌

ಸದಸ್ಯರು: ಕೇಂದ್ರೀಯ ಜಲ ಆಯೋಗದ ಮುಖ್ಯ ಎಂಜಿನಿಯರ್‌ ನವೀನ್‌ ಕುಮಾರ್‌. ಕೇಂದ್ರ ಕೃಷಿ ಆಯುಕ್ತರು

ತಾತ್ಕಾಲಿಕ ಸದಸ್ಯರು: ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಜಂಟಿ ಕಾರ್ಯದರ್ಶಿ. ಕೃಷಿ, ಸಹಕಾರ ಹಾಗೂ ರೈತ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ. ಕರ್ನಾಟಕದ ಜಲಸಂಪನ್ಮೂಲ ಇಲಾಖೆಯ ಆಡಳಿತ ಕಾರ್ಯದರ್ಶಿ. ತಮಿಳುನಾಡು ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌.ಕೆ. ಪ್ರಭಾಕರ್‌. ಕೇರಳ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಟಿಂಕು ಬಿಸ್ವಾಲ್‌, ಪುದುಚೇರಿ ಲೋಕೋಪಯೋಗಿ ಇಲಾಖೆಯ ಆಯುಕ್ತ ಮತ್ತು ಕಾರ್ಯದರ್ಶಿ ಎ. ಅನ್ಬರಸು.

-ನೀರು ನಿಯಂತ್ರಣ ಸಮಿತಿ ಸದಸ್ಯರು

ಅಧ್ಯಕ್ಷರು: ಕೇಂದ್ರೀಯ ಜಲ ಆಯೋಗದ ಮುಖ್ಯ ಎಂಜಿನಿಯರ್‌ ನವೀನ್‌ ಕುಮಾರ್‌ (ಕಾವೇರಿ ಪ್ರಾಧಿಕಾರದ ಸದಸ್ಯರು).

ಸದಸ್ಯರು: ಕರ್ನಾಟಕದ ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್‌. ತಮಿಳುನಾಡು ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್‌ ಆರ್‌. ಸೆಂಥಿಲ್‌ ಕುಮಾರ್‌, ಕೇರಳದ ಅಂತಾರಾಜ್ಯ ಜಲಕೋಶದ ಮುಖ್ಯ ಎಂಜಿನಿಯರ್‌ ಕೆ.ಎ. ಜೋಶಿ, ಪುದುಚೇರಿಯ ಲೋಕೋಪಯೋಗಿ ಮುಖ್ಯ ಎಂಜಿನಿಯರ್‌ ವಿ. ಷಣ್ಮುಗಸುಂದರಂ, ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಡಾ

ಎಂ. ಮೊಹಾಪಾತ್ರ, ಕೊಯಮತ್ತೂರಿನಲ್ಲಿರುವ ಕೇಂದ್ರ ಜಲ ಆಯೋಗದ ಮುಖ್ಯ ಎಂಜಿನಿಯರ್‌ ಎನ್‌.ಎಂ. ಕೃಷ್ಣನುನ್ನಿ. ಕೇಂದ್ರ ಕೃಷಿ ಇಲಾಖೆಯ ತೋಟಗಾರಿಕೆ ಆಯುಕ್ತ. ಕೇಂದ್ರ ಜಲ ಆಯೋಗದ ಮುಖ್ಯ ಎಂಜಿನಿಯರ್‌ ಎ.ಎಸ್‌. ಗೋಯೆಲ್‌.

ಏನಿದು ಕಾವೇರಿ ಪ್ರಾಧಿಕಾರ?

ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವು ಕಾವೇರಿ ಕಣಿವೆಯ ಎಲ್ಲ ಜಲಾಶಯಗಳ ಮೇಲುಸ್ತುವಾರಿ ವಹಿಸಿ, ನ್ಯಾಯಾಧಿಕರಣ- ಸುಪ್ರೀಂಕೋರ್ಟ್‌ ತೀರ್ಪಿಗೆ ಅನುಗುಣವಾಗಿ ನೀರು ಬಿಡುಗಡೆ ನಿರ್ಧಾರ ಕೈಗೊಳ್ಳುತ್ತದೆ. ಜಲಾಶಯಗಳ ಒಳಹರಿವು, ಸಂಗ್ರಹ, ಬೇಡಿಕೆ ಆಧರಿಸಿ, ಪ್ರತಿ 10 ದಿನಕ್ಕೊಮ್ಮೆ ತೀರ್ಮಾನ ತೆಗೆದುಕೊಳ್ಳುತ್ತದೆ. ಕಾವೇರಿ ನೀರು ನಿಯಂತ್ರಣ ಸಮಿತಿಯು ಪ್ರಾಧಿಕಾರಕ್ಕೆ ಸಲಹೆಗಳನ್ನು ಮಾಡುತ್ತದೆ. ದೆಹಲಿಯಲ್ಲಿ ಪ್ರಾಧಿಕಾರದ ಕೇಂದ್ರ ಕಚೇರಿ ಇರುತ್ತದೆ. ಕೇಂದ್ರ ಜಲ ಆಯೋಗದ ಮುಖ್ಯಸ್ಥ ಎಸ್‌. ಮಸೂದ್‌ ಹುಸೇನ್‌ ಅಧ್ಯಕ್ಷತೆಯ ಈ ಪ್ರಾಧಿಕಾರದಲ್ಲಿ ಒಟ್ಟು 9 ಸದಸ್ಯರು ಇರುತ್ತಾರೆ. 6 ಮಂದಿ ಇದ್ದರೆ ಕೋರಂ. ಬಹುಮತ ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಕರ್ನಾಟಕ ಯಾರ ಹೆಸರನ್ನೂ ತನ್ನ ಪ್ರತಿನಿಧಿ ಸ್ಥಾನಕ್ಕೆ ಸೂಚಿಸಿಲ್ಲ. ರಾಜ್ಯ ಜಲಸಂಪನ್ಮೂಲ ಇಲಾಖೆಯ ರಾಕೇಶ್‌ ಸಿಂಗ್‌ ನೇಮಕವಾಗಬಹುದು.

ಏನಿದು ನಿಯಂತ್ರಣ ಸಮಿತಿ?

ಕಾವೇರಿ ನೀರು ನಿಯಂತ್ರಣಾ ಸಮಿತಿಯು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಅಧೀನದಲ್ಲಿರುತ್ತದೆ. ಇದರ ಕಚೇರಿ ಬೆಂಗಳೂರಿನಲ್ಲೇ ಇರುತ್ತದೆ. ಪ್ರಾಧಿಕಾರದ ಕಾಯಂ ಸದಸ್ಯರೊಬ್ಬರು ಇದರ ಮುಖ್ಯಸ್ಥರು. ಕೇಂದ್ರ ಸರ್ಕಾರ ಮುಖ್ಯಸ್ಥ ಹುದ್ದೆಗೆ ಕೇಂದ್ರೀಯ ಜಲ ಆಯೋಗದ ಮುಖ್ಯ ಎಂಜಿನಿಯರ್‌ ನವೀನ್‌ ಕುಮಾರ್‌ ಹೆಸರನ್ನು ಆಯ್ಕೆ ಮಾಡಿದೆ. ಒಟ್ಟು 9 ಮಂದಿ ಇದ್ದು, ಆರು ಮಂದಿ ಇದ್ದರೆ ಕೋರಂ. ಬಹುಮತದ ಆಧಾರದಲ್ಲಿ ಇಲ್ಲೂ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಈ ಸಮಿತಿಯಲ್ಲಿ ನಾಲ್ಕೂ ರಾಜ್ಯಗಳ ಅಧಿಕಾರಿಗಳು ಮಾತ್ರವೇ ಅಲ್ಲದೆ, ಹವಾಮಾನ ಇಲಾಖೆಯ ಪ್ರತಿನಿಧಿಯೂ ಇರುತ್ತಾರೆ. ಜಲಾಶಯಗಳಲ್ಲಿನ ಪ್ರತಿ ದಿನದ ನೀರಿನ ಒಳ ಹರಿವು, ನೀರಿನ ಲಭ್ಯತೆ ಹಾಗೂ ಎಲ್ಲಾ ಜಲಾಶಯಗಳ ಸಮಗ್ರ ಮಾಹಿತಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸುವುದು ಇದರ ಕೆಲಸ. ಕರ್ನಾಟಕದಿಂದ ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್‌ ಹುದ್ದೆ ಶ್ರೇಣಿಯಲ್ಲಿರುವವರನ್ನು ನೇಮಿಸಲು ಅವಕಾಶವಿದೆ. ಆದರೆ, ಕರ್ನಾಟಕದಲ್ಲಿ ಸುಮಾರು 20 ಮುಖ್ಯ ಎಂಜಿನಿಯರ್‌ ಶ್ರೇಣಿಯ ಅಧಿಕಾರಿಗಳಿದ್ದಾರೆ. ಆ ಪೈಕಿ ಯಾರು ಆಯ್ಕೆ ಆಗುತ್ತಾರೋ ಕಾದು ನೋಡಬೇಕು.

ಸಂಸತ್ತಿನಲ್ಲಿ ಚರ್ಚೆ ಆಗಲಿ ಎಂದು ಕೋರಿದ್ದ ಎಚ್‌ಡಿಕೆ

ಇಂಥದ್ದೇ ಬೆಳೆ ಬೆಳೆಯಬೇಕು, ಇಷ್ಟೇ ಪ್ರಮಾಣದಲ್ಲಿ ನೀರು ಬಳಸಬೇಕು, ಪ್ರತಿ 10 ದಿನಕ್ಕೊಮ್ಮೆ ಜಲಾಶಯಗಳಲ್ಲಿನ ಸಂಗ್ರಹ ಸಾಮರ್ಥ್ಯ ಅಳೆಯಬೇಕು ಎಂಬ ಅಂಶಗಳನ್ನು ಹೊಂದಿರುವ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ, ಮಾರ್ಗಸೂಚಿಯ ಬದಲು ಷರತ್ತು ವಿಧಿಸುವಂತಿದೆ ಎಂಬುದು ಕರ್ನಾಟಕದ ಪ್ರಧಾನ ಆಕ್ಷೇಪ. ಇದರ ಜತೆಗೆ ಅಂತಾರಾಜ್ಯ ಜಲ ವಿವಾದ ಕಾನೂನುಗಳ ಪ್ರಕಾರ, ಇಂತಹ ಪ್ರಾಧಿಕಾರ ಸಂಸತ್ತಿನಲ್ಲಿ ಚರ್ಚೆಯಾಗಿ ಸ್ಥಾಪನೆಯಾಗಬೇಕು ಎಂದು ಕಳೆದ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕೋರಿದ್ದರು. ಆದಾಗ್ಯೂ, ಪ್ರಾಧಿಕಾರ ರಚನೆಯಾಗಿದೆ.

click me!