ಕರ್ನಾಟಕದ ಉದ್ಯೋಗ ಕನ್ನಡಿಗರಿಗೇ; ಶುರುವಾಗಿದೆ ಆಂದೋಲನ

By Web DeskFirst Published May 9, 2019, 1:32 PM IST
Highlights

ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕ ರಣಧೀರ ಪಡೆಯ ಕನ್ನಡ ಸೇನಾನಿಗಳು ಹಾಗೂ ಇತರ ಕನ್ನಡಪರ ಸಂಘಟನೆಗಳು ‘ಕರ್ನಾಟಕದ ಉದ್ಯೋಗ ಕನ್ನಡಿಗರಿಗೇ’  ಹೋರಾಟವನ್ನು ಪ್ರಾರಂಭ ಮಾಡಿದ್ದಾರೆ. ಕರ್ನಾಟಕದ ಉದ್ಯೋಗ ಕನ್ನಡಿಗರಿಗೇ ಸಿಗಲಿ, (KarnatakaJobs forKannadigas) ಎಂದು ಹ್ಯಾಶ್‌ಟ್ಯಾಗ್‌ ಹಾಕಿ ಟ್ವೀಟರ್‌ ಮತ್ತು ಫೇಸ್‌ಬುಕ್‌ನಲ್ಲಿ ಪ್ರಾರಂಭವಾದ ಹೋರಾಟ ಈಗ ವಿಧಾನಸೌಧದ ಬಾಗಿಲು ತಟ್ಟಿದೆ.

ಕನ್ನಡ ನಾಡಿನ ಉದ್ಯೋಗಗಳು ಕನ್ನಡಿಗರಿಗೇ ಸಿಗಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನ ಆರಂಭವಾಗಿದೆ. ಇದಕ್ಕೆ ದೊಡ್ಡ ದೊಡ್ಡ ನಾಯಕರಿಂದಲೂ ಸಾಕಷ್ಟುಬೆಂಬಲ ದೊರೆತಿದೆ. ‘ಕರ್ನಾಟಕದ ಉದ್ಯೋಗ ಕನ್ನಡಿಗರಿಗೇ’ (KarnatakaJobs forKannadigas) ಎಂಬ ಈ ಹೋರಾಟ ಏಕೆ ನಡೆಯುತ್ತಿದೆ? ಇದರ ಹಿನ್ನೆಲೆಯೇನು? ಕಿರು ಮಾಹಿತಿ ಇಲ್ಲಿದೆ.

ಯಾರು ಪ್ರಾರಂಭಿಸಿದ್ದು?

ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕ ರಣಧೀರ ಪಡೆಯ ಕನ್ನಡ ಸೇನಾನಿಗಳು ಹಾಗೂ ಇತರ ಕನ್ನಡಪರ ಸಂಘಟನೆಗಳು ಈ ಹೋರಾಟವನ್ನು ಪ್ರಾರಂಭ ಮಾಡಿದ್ದಾರೆ. ಕರ್ನಾಟಕದ ಉದ್ಯೋಗ ಕನ್ನಡಿಗರಿಗೇ ಸಿಗಲಿ, (KarnatakaJobs forKannadigas) ಎಂದು ಹ್ಯಾಶ್‌ಟ್ಯಾಗ್‌ ಹಾಕಿ ಟ್ವೀಟರ್‌ ಮತ್ತು ಫೇಸ್‌ಬುಕ್‌ನಲ್ಲಿ ಪ್ರಾರಂಭವಾದ ಹೋರಾಟ ಈಗ ವಿಧಾನಸೌಧದ ಬಾಗಿಲು ತಟ್ಟಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಪರಮೇಶ್ವರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ನಾಯಕ ಸಿ ಟಿ ರವಿ ಸೇರಿದಂತೆ ಹಲವು ರಾಜಕೀಯ ನಾಯಕರು ಟ್ವೀಟ್‌ ಮಾಡುವ ಮೂಲಕ ಕನ್ನಡಿಗರ ಹೋರಾಟಕ್ಕೆ ಸ್ಪಂದಿಸಿದ್ದಾರೆ.

ಬೇಡಿಕೆ ಏನು?

ಕನ್ನಡಿಗರಿಗೆ ನ್ಯಾಯಯುತವಾಗಿ ಸಿಗಬೇಕಾದ ಕರ್ನಾಟಕದ ಉದ್ಯೋಗಾವಕಾಶದ ಮೇಲೆ ಗಮನ ಕೇಂದ್ರೀಕರಿಸಿ ಈ ಹೋರಾಟದ ಮೂಲಕ ಹಕ್ಕೊತ್ತಾಯ ಮಂಡಿಸಲಾಗುತ್ತಿದೆ. ಕರ್ನಾಟಕದಲ್ಲಿ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಮೊದಲ ಆದ್ಯತೆ ಕನ್ನಡಿಗರಿಗೆ ಸಿಗಬೇಕು.

ಐಬಿಪಿಎಸ್‌ (ಬ್ಯಾಂಕಿಂಗ್‌ ನೇಮಕಾತಿ) ಪರೀಕ್ಷೆಯಲ್ಲಿ ಕರ್ನಾಟಕದ ಬ್ಯಾಂಕ್‌ ಹುದ್ದೆಗಳಿಗೆ ಕನ್ನಡ ಜ್ಞಾನ ಕಡ್ಡಾಯವಾಗಬೇಕು. ರಾಜ್ಯದ ರೈತರ ಜಾಗಗಳಲ್ಲಿ ತಲೆ ಎತ್ತಿರುವ/ ಎತ್ತುತ್ತಿರುವ ಐಟಿ-ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ದೊರಕಬೇಕು. ಸಿ ಮತ್ತು ಡಿ ಹುದ್ದೆಗಳು ಕನ್ನಡಿಗರಿಗೇ ಮೀಸಲಿರಿಸಬೇಕು ಎಂಬ ಬೇಡಿಕೆಯನ್ನು ಮುಂದಿಡಲಾಗಿದೆ.

ಬ್ಯಾಂಕ್‌ಗಳಲ್ಲಿ ಹಿಂದಿ ಹಾವಳಿ

ಅಭ್ಯರ್ಥಿಗಳಿಗೆ ಸ್ಥಳೀಯ ಭಾಷಾ ಜ್ಞಾನ ಅಪೇಕ್ಷಣೀಯವೇ ವಿನಃ ಕಡ್ಡಾಯವಲ್ಲ ಎಂಬ ಬ್ಯಾಂಕಿಂಗ್‌ ನೇಮಕಾತಿ ನಿಯಮದಿಂದ ಕರ್ನಾಟಕದ ಬ್ಯಾಂಕುಗಳಲ್ಲಿ ಇಂದು ಹಿಂದಿ ಭಾಷಿಕರ ಸಂಖ್ಯೆಯೇ ಹೆಚ್ಚಾಗುತ್ತಿದೆ. ಈ ಹಿಂದೆ ಪ್ರಾದೇಶಿಕ ಮಂಡಳಿ ಮುಖಾಂತರ ನೇಮಕಾತಿ ನಡೆಯುತ್ತಿದ್ದಾಗ ಸ್ಥಳೀಯ ಭಾಷೆ ಬಲ್ಲ ಅಭ್ಯರ್ಥಿಗಳಿಗೆ ಆದ್ಯತೆ ದೊರೆಯುತ್ತಿತ್ತು. ಆದರೆ ಈಗ ಬ್ಯಾಂಕುಗಳಿಗೆ ರಾಷ್ಟ್ರಮಟ್ಟದಲ್ಲಿ ನೇಮಕಾತಿ ನಡೆಯುತ್ತಿರುವುದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ.

ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಮಾತ್ರ ಐಬಿಪಿಎಸ್‌ ಬ್ಯಾಂಕಿಂಗ್‌ ಪರೀಕ್ಷೆ ನಡೆಸುತ್ತದೆ. ಈ ಪರೀಕ್ಷೆಗಳಲ್ಲಿ ಕನ್ನಡೇತರರು ಹೆಚ್ಚಾಗಿ ನೇಮಕವಾಗುತ್ತಿದ್ದಾರೆ. ಹೀಗಾಗಿ ಸ್ಥಳೀಯರಿಗೆ ಬ್ಯಾಂಕ್‌ಗಳಲ್ಲಿ ವ್ಯವಹರಿಸುವುದು ಕಷ್ಟವಾಗುತ್ತಿದೆ.

ರೈಲ್ವೆ ನೇಮಕಾತಿಯಲ್ಲಿ ಎಲ್ಲಾ 22 ಭಾಷೆಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಿರುವಂತೆ ಸಂವಿಧಾನದ ಶೆಡ್ಯೂಲ…ನಲ್ಲಿ ಗುರುತಿಸಿದ ಎಲ್ಲಾ 22 ಭಾಷೆಗಳಲ್ಲಿ ಬ್ಯಾಂಕಿಂಗ್‌ ಪರೀಕ್ಷೆ ನಡೆಸುವ ನಿಯಮ ಜಾರಿಯಾಗಬೇಕು ಎಂದು ಹೋರಾಟಗಾರರು ಆಗ್ರಹಿಸುತ್ತಿದ್ದಾರೆ.

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲು: ಎಲ್ಲಿಗೆ ಬಂತು?

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಲು ಮೀಸಲು ನೀತಿಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ 2017ರಲ್ಲಿ ನಿರ್ಧರಿಸಿತ್ತು. ಆದರೆ ಮೀಸಲಾತಿ ಕಡ್ಡಾಯ ಮಾಡದೆ ಕೇವಲ ಆದ್ಯತೆ ಎಂದು ಹೇಳಿರುವುದು ಹಾಗೂ ಕನ್ನಡಿಗರೆಂದು ಗುರುತಿಸಲು ರಾಜ್ಯದಲ್ಲಿ 7 ವರ್ಷ ವಾಸವಿದ್ದರೆ ಸಾಕು ಎಂಬುದಕ್ಕೆ ಸಾಕಷ್ಟುಆಕ್ಷೇಪಗಳು ವ್ಯಕ್ತವಾದ ಕಾರಣ ಈ ಕಾನೂನು ಜಾರಿಯಾಗದೆ ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಧರಿಸಬೇಕೇ, ಮಸೂದೆ ಜಾರಿಗೆ ತರಬೇಕೇ ಅಥವಾ ಬಜೆಟ್‌ನಲ್ಲಿ ಪ್ರಸ್ತಾಪಿಸಬೇಕೇ ಎಂಬ ಬಗ್ಗೆ ಸರ್ಕಾರದಲ್ಲೇ ಸ್ಪಷ್ಟತೆಯಿಲ್ಲ ಎಂದು ಹೇಳಲಾಗುತ್ತಿದೆ.

ಈಗಲೂ ಸರೋಜಿನಿ ಮಹಿಷಿ ವರದಿಗೆ ಬೇಡಿಕೆ!

1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ವೇಳೆ ಕನ್ನಡಿಗರಿಗೆ ಕರ್ನಾಟಕದಲ್ಲಿ ಪರಭಾಷಿಕರಿಂದ ಅನ್ಯಾಯವಾಗುತ್ತಿದೆ ಎಂಬ ಕೂಗೆದ್ದಾಗ ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ವಿಮರ್ಶಿಸಲು ಸರೋಜಿನಿ ಮಹಷಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.

ಕರ್ನಾಟಕದಲ್ಲಿ ನ್ಯಾಯಯುತವಾಗಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯಬೇಕೆಂಬುದನ್ನು ಪ್ರತಿಪಾದಿಸುವ ಆ ವರದಿ ಇಂದಿಗೂ ಕನ್ನಡ ಮತ್ತು ಕರ್ನಾಟಕದ ಪರ ಹೋರಾಟಗಳಿಗೆ ಆಧಾರವಾಗಿದೆ. ಅದರಲ್ಲಿ ನಾಡಿನಲ್ಲಿ ಸ್ಥಾಪನೆಯಾಗುವ ಕಂಪನಿಗಳಲ್ಲಿ ಶೇ.80 ರಷ್ಟುಉದ್ಯೋಗವನ್ನು ಕನ್ನಡಿಗರಿಗೇ ಮೀಸಲಿಡಬೇಕೆಂದು ಹೇಳಲಾಗಿದೆ. ಈ ವರದಿ ಅನುಷ್ಠಾನವಾದರೆ ಕನ್ನಡಿಗರಿಗೆ ಸಾಕಷ್ಟುಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತವೆ.

ಬೇರೆ ರಾಜ್ಯಗಳಲ್ಲೂ ಹೋರಾಟ

ಕರ್ನಾಟಕದ ರೀತಿಯೇ ತಮ್ಮ ರಾಜ್ಯಗಳಲ್ಲಿನ ಉದ್ಯೋಗದಲ್ಲಿ ರಾಜ್ಯದ ಜನರಿಗೆ ಮೊದಲ ಆದ್ಯತೆ ದೊರಕಬೇಕು ಎಂಬ ಕಾರಣಕ್ಕೆ ಅನೇಕ ರಾಜ್ಯಗಳಲ್ಲಿ ಹೋರಾಟಗಳು ನಡೆಯುತ್ತಿವೆ. ತಮಿಳುನಾಡು, ಒಡಿಶಾ, ಮಹಾರಾಷ್ಟ್ರ, ಉತ್ತರಾಂಚಲ, ಉತ್ತರಾಖಂಡ, ಹಿಮಾಚಲ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ, ಜಮ್ಮು-ಕಾಶ್ಮೀರ, ಗುಜರಾತ್‌, ಮಧ್ಯಪ್ರದೇಶ, ಬಿಹಾರ, ಆಂಧ್ರಪ್ರದೇಶ, ಗೋವಾ, ತೆಲಂಗಾಣ ಮತ್ತು ಅಸ್ಸಾಂಗಳಲ್ಲಿಯೂ ಹೋರಾಟ ಆರಂಭವಾಗಿದೆ.

ನಮ್ಮ ರಾಜ್ಯದ ಯುವಕರು ರಾಜ್ಯದಲ್ಲಿ ಸೃಷ್ಟಿಯಾಗುವ ಉದ್ಯೋಗಗಳು ಕನ್ನಡಿಗರಿಗೆ ದಕ್ಕಬೇಕು ಎಂದು ಹೋರಾಟ ನಡೆಸುತ್ತಿರುವುದನ್ನು ಗಮನಿಸಿದ್ದೇನೆ. ಕನ್ನಡಿಗರ ಹಕ್ಕೊತ್ತಾಯವನ್ನು ಪರಿಗಣಿಸಿ ಕಾನೂನಿನ ಚೌಕಟ್ಟಿನಲ್ಲಿ ಹೇಗೆ ಕಾರ್ಯರೂಪಕ್ಕೆ ತರಬಹುದು ಎಂದು ಸಲಹೆ ಪಡೆಯಲಾಗುವುದು.

ಎಚ್‌ ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ

click me!