ರೈತರ ಭೂಮಿ ಸ್ವಾಧೀನ ಪ್ರಕ್ರಿಯೆಗೆ ಚಾಲನೆ

First Published Jun 18, 2018, 11:48 AM IST
Highlights

2022ಕ್ಕೆ ಆರಂಭಿಸಬೇಕು ಎಂದು ಗುರಿ ಹಾಕಿಕೊಳ್ಳಲಾಗಿರುವ ದೇಶದ ಮೊದಲ ಬುಲೆಟ್‌ ರೈಲು ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ ಕೊನೆಗೂ ಚಾಲನೆ ದೊರೆತಿದೆ. ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ರೈತರು ಹಾಗೂ ಭೂಮಾಲೀಕರನ್ನು ಒಲಿಸಿಕೊಳ್ಳುವತ್ತ ರಾಷ್ಟ್ರೀಯ ಹೈಸ್ಪೀಡ್‌ ರೈಲು ನಿಗಮ ನಿಯಮಿತ ಮುಂದಡಿ ಇಡತೊಡಗಿದೆ.

ಪಿಟಿಐ ಮುಂಬೈ/ಅಹ್ಮದಾಬಾದ್‌ :  2022ಕ್ಕೆ ಆರಂಭಿಸಬೇಕು ಎಂದು ಗುರಿ ಹಾಕಿಕೊಳ್ಳಲಾಗಿರುವ ದೇಶದ ಮೊದಲ ಬುಲೆಟ್‌ ರೈಲು ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ ಕೊನೆಗೂ ಚಾಲನೆ ದೊರೆತಿದೆ. ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ರೈತರು ಹಾಗೂ ಭೂಮಾಲೀಕರನ್ನು ಒಲಿಸಿಕೊಳ್ಳುವತ್ತ ರಾಷ್ಟ್ರೀಯ ಹೈಸ್ಪೀಡ್‌ ರೈಲು ನಿಗಮ ನಿಯಮಿತ ಮುಂದಡಿ ಇಡತೊಡಗಿದೆ.

ಆದರೆ ತಾವು ಭೂಮಿ ಕೊಡಬೇಕು ಎಂದರೆ ರೈತರು ಅನೇಕ ಚಿತ್ರ-ವಿಚಿತ್ರ ಬೇಡಿಕೆಗಳನ್ನು ಇಡತೊಡಗಿದ್ದಾರೆ. ಅದು ಕೆರೆ ನಿರ್ಮಾಣ ಆಗಬೇಕು, ತಮ್ಮೂರಿಗೆ ಆ್ಯಂಬುಲೆನ್ಸ್‌ ಬೇಕು, ಬೀದಿ ದೀಪ ಬೇಕು, ಆಸ್ಪತ್ರೆ ಬೇಕು, ವೈದ್ಯರು ಬೇಕು- ಎಂಬ ಇತ್ಯಾದಿ ಬೇಡಿಕೆಗಳು ಒಂದೆಡೆಯಾದರೆ ತಮ್ಮ ಹಳ್ಳಿಗೂ ಬುಲೆಟ್‌ ರೈಲು ನಿಲ್ದಾಣ ಆಗಬೇಕು ಎಂಬ ಬೇಡಿಕೆ ಇನ್ನೊಂದೆಡೆ! ಯೋಜನೆ ಹಾದು ಹೋಗುವ ಮಹಾರಾಷ್ಟ್ರದ ಪಾಲ್ಘರ್‌ನ ರೈತರು ಈ ಬೇಡಿಕೆಗಳನ್ನು ಇರಿಸಿದವರು.

ಮುಂಬೈ-ಅಹಮದಾಬಾದ್‌ ನಡುವೆ ಸಂಚರಿಸುವ ಬುಲೆಟ್‌ ರೈಲು ಯೋಜನೆ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯ 23 ಹಳ್ಳಿಗಳ 3 ಸಾವಿರ ಜನರ ಮೇಲೆ ಪರಿಣಾಮ ಬೀರಲಿದೆ. 508 ಕಿ.ಮೀ. ಒಟ್ಟು ಉದ್ದದ ಈ ಮಾರ್ಗವು 110 ಕಿ.ಮೀ.ನಷ್ಟುಪಾಲ್ಘರ್‌ನಲ್ಲೇ ಹಾಯ್ದು ಹೋಗುತ್ತದೆ. 3 ಸಾವಿರ ಹೆಕ್ಟೇರ್‌ ಜಮೀನು ಇದಕ್ಕೆ ಅಗತ್ಯವಾಗಿದೆ.

ಭೂಸ್ವಾಧೀನಕ್ಕೆ ಇಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಬುಲೆಟ್‌ ರೈಲು ನಿಗಮದ ಅಧಿಕಾರಿಗಳು ಇಡೀ ಹಳ್ಳಿಯ ಸಭೆ ಕರೆದು ಮನವೊಲಿಸುವುದನ್ನು ಬಿಟ್ಟು, ಭೂಮಿ ಕಳೆದುಕೊಳ್ಳುವ ರೈತರ ವೈಯಕ್ತಿಕ ಮನವೊಲಿಕೆಗೆ ಮುಂದಾಗಿದ್ದಾರೆ. ಅವರು ಒಪ್ಪಿದ ನಂತರ ಗ್ರಾಮದ ಸರಪಂಚರನ್ನು ಒಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಸಪೋಟಾ (ಚಿಕ್ಕು), ಮಾವು ಬೆಳೆಗಾರರು ಹೆಚ್ಚಾಗಿ ಈ ಯೋಜನೆಯಿಂದ ಬಾಧಿತರಾಗುತ್ತಿದ್ದಾರೆ. ಅನೇಕರು ಹೆಚ್ಚಿನ ಮೊತ್ತದ ಪರಿಹಾರಕ್ಕೆ ಬೇಡಿಕೆ ಇಡುತ್ತಿದ್ದು, ವಿಧಿಯಲ್ಲದೇ ಅಧಿಕಾರಿಗಳು ಇದಕ್ಕೆ ಒಪ್ಪಿಕೊಳ್ಳುತ್ತಿದ್ದಾರೆ. ಕೆಲವರು ಆ್ಯಂಬುಲೆನ್ಸ್‌, ವೈದ್ಯಕೀಯ ಸೇವೆಗೆ, ಸೌರ ವಿದ್ಯುತ್‌ಗೆ ಬೇಡಿಕೆ ಇಟ್ಟರೆ, ತಮ್ಮ ಹಳ್ಳಿಗೂ ಬುಲೆಟ್‌ ರೈಲು ಸ್ಟೇಶನ್‌ ಆಗಬೇಕು ಎಂದು ಬೀಟೆ ಗ್ರಾಮದ ಗ್ರಾಮಸ್ಥನೊಬ್ಬ ಆಗ್ರಹಿಸಿದ.

ಗುಜರಾತ್‌ನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. 195 ಹಳ್ಳಿಗಳ ಮೂಲಕ ಬುಲೆಟ್‌ ರೈಲು ಹಾದು ಹೋಗುತ್ತಿದ್ದು, 185 ಹಳ್ಳಿಗಳಿಗೆ ಭೂಸ್ವಾಧೀನ ನೋಟಿಸ್‌ ನೀಡಲಾಗಿದೆ. ಆದರೆ, ಇಲ್ಲೂ ಕೂಡ ರೈತರ ಪ್ರತಿರೋಧ ವ್ಯಕ್ತವಾಗಿದೆ.

click me!