ಜೆಡಿಎಸ್‌ನಿಂದ ಪ್ರಜ್ವಲ್‌ ರೇವಣ್ಣ ಉಚ್ಚಾಟನೆಗೆ ನಿರ್ಧಾರ: ಎಚ್.ಡಿ.ಕುಮಾರಸ್ವಾಮಿ

By Kannadaprabha News  |  First Published Apr 30, 2024, 4:23 AM IST

ಅಶ್ಲೀಲ ವಿಡಿಯೋ ಪ್ರಕರಣದ ಹಿನ್ನೆಲೆಯಲ್ಲಿ ಪಕ್ಷಕ್ಕೆ ಉಂಟಾಗುವ ಮುಜುಗರ ತಪ್ಪಿಸುವ ಉದ್ದೇಶದಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡುವುದು ಬಹುತೇಕ ನಿಶ್ಚಿತವಾಗಿದೆ. 


ಬೆಂಗಳೂರು/ ಶಿವಮೊಗ್ಗ (ಏ.30): ಅಶ್ಲೀಲ ವಿಡಿಯೋ ಪ್ರಕರಣದ ಹಿನ್ನೆಲೆಯಲ್ಲಿ ಪಕ್ಷಕ್ಕೆ ಉಂಟಾಗುವ ಮುಜುಗರ ತಪ್ಪಿಸುವ ಉದ್ದೇಶದಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡುವುದು ಬಹುತೇಕ ನಿಶ್ಚಿತವಾಗಿದೆ. ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ಭಾನುವಾರವೇ ನಿರ್ಧರಿಸಲಾಗಿದ್ದು, ಮಂಗಳವಾರ ಹುಬ್ಬಳ್ಳಿಯಲ್ಲಿ ನಡೆಯಲಿರುವ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಅಧಿಕೃತ ನಿರ್ಣಯ ಕೈಗೊಂಡು ಪಕ್ಷದ ರಾಷ್ಟ್ರೀಯ ಮಂಡಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಖುದ್ದು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಪ್ರಜ್ವಲ್ ಅವರನ್ನು ಉಚ್ಚಾಟಿಸುವಂತೆ ಪಕ್ಷದ ಶಾಸಕರು ಹಾಗೂ ಮುಖಂಡರು ಬಹಿರಂಗವಾಗಿಯೇ ಒತ್ತಾಯ ಮಾಡಿದ್ದಾರೆ. ಅಲ್ಲದೆ, ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳಿಗೆ ಪರಿಣಾಮ ಬೀರುವ ಅಪಾಯ ಇರುವುದರಿಂದ ತಕ್ಷಣ ಕಠಿಣ ಕ್ರಮ ಕೈಗೊಳ್ಳಿ ಎಂದು ಬಿಜೆಪಿ ನಾಯಕರೂ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಸೋಮವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಅವರು ಸಂಸತ್‌ ಸದಸ್ಯರಾಗಿರುವುದರಿಂದ ಪಕ್ಷದಿಂದ ಅವರನ್ನು ಉಚ್ಚಾಟಿಸುವ ಬಗ್ಗೆ ರಾಷ್ಟ್ರೀಯ ಮಂಡಳಿಯೇ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ರಾಷ್ಟ್ರೀಯ ಮಂಡಳಿಗೆ ಉಚ್ಚಾಟನೆಗೆ ಶಿಫಾರಸ್ಸು ಮಾಡಲಾಗುವುದು ಎಂದರು.

Tap to resize

Latest Videos

ಉಪ್ಪು ತಿಂದವ್ರು ನೀರು ಕುಡೀಬೇಕು: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌ಗೆ ಎಚ್‌ಡಿಕೆ ಪ್ರತಿಕ್ರಿಯೆ

ಭಾನುವಾರ ಈ ವಿಚಾರ ಅರಿವಿಗೆ ಬಂದಾಗ ನಾವು ಚರ್ಚೆ ನಡೆಸಿದ್ದೆವು. ಆದರೆ ದೇವೇಗೌಡರಿಗೆ ಸ್ಪಷ್ಟವಾಗಿ ಗೊತ್ತಿರಲಿಲ್ಲ. ವಿಷಯವನ್ನು ಅವರ ಗಮನಕ್ಕೆ ತರಲಾಗಿದೆ. ಪ್ರಜ್ವಲ್‌ ರೇವಣ್ಣ ಅವರ ಉಚ್ಚಾಟನೆ ರಾಷ್ಟ್ರೀಯ ಮಂಡಳಿಯಿಂದ ಆಗಬೇಕಾಗಿರುವುದರಿಂದ ನಾನೂ ದೇವೇಗೌಡರಿಗೆ ಮನವಿ ಮಾಡಿದ್ದೆ. ಈಗ ಬಂದಿರುವ ಕೆಲ ವಿಷಯಗಳ ಆಧಾರದ ಮೇಲೆ ಪ್ರಜ್ವಲ್‌ ರೇವಣ್ಣ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ನಿರ್ಧಾರ ಶೀಘ್ರ ಹೊರ ಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಈವರೆಗೆ ಪ್ರಜ್ವಲ್ ವಿರುದ್ಧ ಯಾರೂ ನೇರ ಆರೋಪ ಮಾಡಿಲ್ಲ. ಆದರೂ ನಡೆದಿರುವ ವಿಷಯ ತಿಳಿದು ಪಕ್ಷದೊಳಗೆ ಚರ್ಚೆ ನಡೆದಿದೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು. ಈ ಪ್ರಕರಣದಲ್ಲಿ ಪ್ರಜ್ವಲ್‌ ಅವರ ತಪ್ಪು ಇದ್ದರೆ ಯಾವುದೇ ರಾಜಿಗೆ ಒಳಗಾಗುವ ಪ್ರಶ್ನೆಯೇ ಇಲ್ಲ. ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲು ಸಂಪೂರ್ಣ ಸಹಮತ ಇದೆ. ನಾನಾಗಲಿ, ದೇವಗೌಡರಾಗಲಿ ಯಾರಿಗೂ ಅನ್ಯಾಯ ಮಾಡಿದವರಲ್ಲ. ಲಕ್ಷಾಂತರ ಬಡ ಕುಟುಂಬಕ್ಕೆ ಸಹಾಯ ಮಾಡಿದ್ದೇವೆ. ಬಡವರ ಮನೆಯ ದೀಪ ಬೆಳಗಿಸಿದ್ದೇವೆ. ಆ ರೀತಿ ಬದುಕಿದ್ದೇವೆ ಎಂದು ತಿಳಿಸಿದರು.

2 ಲಕ್ಷ ಪೆನ್‌ಡ್ರೈವ್‌ ಹಂಚಿದ್ದಾರೆ: ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ದೊಡ್ಡ ವಿಷಯವನ್ನಾಗಿಸಲು ಕಾಂಗ್ರೆಸ್‌ನವರು ಎಲ್ಲ ರೀತಿಯ ಕುತಂತ್ರವನ್ನು ನಡೆಸಿದ್ದಾರೆ. ಪೆನ್‌ಡ್ರೈವ್‌ಗಳು ಎಲ್ಲಿ ಸೃಷ್ಟಿಯಾದವು? ಚುನಾವಣೆಯ ಮೂರು ದಿನಗಳ ಮುನ್ನ ಸುಮಾರು ಎರಡು ಲಕ್ಷ ಪೆನ್‌ಡ್ರೈವ್‌ಗಳನ್ನು ಸೃಷ್ಟಿಸಿ ಗಲ್ಲಿ, ಗಲ್ಲಿಗೆ ಹಂಚಿರುವುದು ಯಾರು? ಯಾರಿಂದ ಇದು ಹೊರಗೆ ಬಂದಿದೆ? ಇದೆಲ್ಲ ತನಿಖೆಯಾಗಬೇಕು. ಇಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಅದೇ ರೀತಿ ಪೆನ್‌ಡ್ರೈವ್‌ ಹಂಚಿ ಹೆಣ್ಣುಮಕ್ಕಳ ಮಾನ ಹರಾಜು ಹಾಕಿದವರ ಮೇಲೂ ಸೂಕ್ತ ಕ್ರಮವಾಗಬೇಕು ಎಂದು ಒತ್ತಾಯಿಸಿದರು.

ಈ ವಿಚಾರದಲ್ಲಿ ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ ಟ್ವೀಟ್‌ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನರೇಂದ್ರ ಮೋದಿ, ಬಿಜೆಪಿ, ದೇವೇಗೌಡರಿಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ. ಈ ವಿಚಾರದಲ್ಲಿ ನನ್ನ ಹಾಗೂ ನನ್ನ ತಂದೆಯ ಬಗ್ಗೆ ಯಾರೂ ಸಂಶಯಪಡಬೇಡಿ ಎಂದು ಮನವಿ ಮಾಡಿದರು.

ಪಕ್ಷಕ್ಕೆ ಮುಜುಗರ- ಜೆಡಿಎಸ್ ಶಾಸಕರು: ಸಂಸದ ಮತ್ತು ಎನ್​ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಿಂದಾಗಿ ಪಕ್ಷದಲ್ಲಿ ಮುಜುಗರ ಅನುಭವಿಸಬೇಕಾಗಿರುವ ಕಾರಣ ತಕ್ಷಣ ಅವರನ್ನು ಪಕ್ಷದಿಂದ ಅಮಾನತುಗೊಳಿಸಬೇಕು ಎಂದು ಜೆಡಿಎಸ್‌ ಶಾಸಕರಾದ ಶರಣಗೌಡ ಕಂದಕೂರು ಮತ್ತು ಸಮೃದ್ಧಿ ಮಂಜುನಾಥ್‌ ಒತ್ತಾಯಿಸಿದ್ದಾರೆ. ಶರಣಗೌಡ ಕಂದಕೂರು ಅವರು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಗೆ ಪತ್ರ ಬರೆದಿದ್ದರೆ, ಸಮೃದ್ಧಿ ಮಂಜುನಾಥ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅಮಾನತಿಗೆ ಆಗ್ರಹಿಸಿದ್ದಾರೆ.

ಕೆಲ ದಿನಗಳಿಂದ ಹರದಾಡುತ್ತಿರುವ ವಿಡಿಯೋದಿಂದ ಮುಜುಗರವಾಗಿದೆ. ಈ ವಿಡಿಯೋಗಳಲ್ಲಿ ಪ್ರಜ್ವಲ್ ರೇವಣ್ಣ ಕಾಣಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಪ್ರಜ್ವಲ್ ತಪ್ಪಿತಸ್ಥರು ಎಂಬ ಭಾವನೆ ಉಂಟಾಗಿದೆ. ಲಾಟರಿ ನಿಷೇಧಿಸುವ ಮೂಲಕ ಎಚ್‌.ಡಿ.ಕುಮಾರಸ್ವಾಮಿ ಹೆಣ್ಣುಮಕ್ಕಳ ಪುಣ್ಯಕ್ಕೆ ಪಾತ್ರರಾಗಿದ್ದಾರೆ. ಪಕ್ಷದ ಚಿಹ್ನೆಯಲ್ಲಿ ಭತ್ತದ ತೆನೆಹೊತ್ತ ಮಹಿಳೆಯ ಚಿತ್ರ ಇದೆ. ಭತ್ತದ ತೆನೆಹೊತ್ತ ಮಹಿಳೆಯ ಚಿತ್ರ ಹೆಣ್ಣಿನ ಗೌರವವನ್ನು ಪ್ರತಿಪಾದಿಸುತ್ತದೆ. ಇಂತಹ ಪರಂಪರೆ ಹೊಂದಿರುವ ಪಕ್ಷಕ್ಕೆ ಮುಜುಗರ ತಂದಿರುವುದು ಸುಳ್ಳಲ್ಲ. ಹೀಗಾಗಿ ಪ್ರಜ್ವಲ್ ರೇವಣ್ಣರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಕಂದಕೂರು ಪತ್ರದ ಮೂಲಕ ಆಗ್ರಹಿಸಿದ್ದಾರೆ.

ಯುಪಿಎಯಿಂದಲೇ ರಾಜ್ಯಕ್ಕೆ ಹೆಚ್ಚು ಬರ ಪರಿಹಾರ ಅನ್ಯಾಯ: ಎಚ್‌ಡಿಕೆ ಆರೋಪ

ಇನ್ನು ಸಮೃದ್ಧಿ ಮಂಜುನಾಥ್, ‘ಪ್ರಜ್ವಲ್ ರೇವಣ್ಣ ಪ್ರಕರಣ ಮುಜುಗರಕ್ಕೆ ಒಳಗಾಗುವಂತೆ ಆಗಿದೆ. ಜನಸಾಮಾನ್ಯರ ಪ್ರಶ್ನೆಗಳಿಗೆ ಉತ್ತರ ಹೇಳಲು ಸಾಧ್ಯವಾಗುತ್ತಿಲ್ಲ. ಆರೋಪ ಹೊತ್ತಿರುವ ರೇವಣ್ಣ ಮತ್ತು ಪ್ರಜ್ವಲ್‌ ಅವರನ್ನು 24 ಗಂಟೆಗಳಲ್ಲಿ ಪಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಸಿದ್ಧಾಂತಗಳನ್ನು ಉಳಿಸಿ ಕಾರ್ಯಕರ್ತರನ್ನು ಮತ್ತು ನಮ್ಮನ್ನು ಮುಜುಗರದಿಂದ ಪಾರು ಮಾಡಬೇಕು’ ಎಂದು ಸಾಮಾಜಿಕ ಜಾಲತಾಣದ ಮೂಲಕ ಒತ್ತಾಯಿಸಿದ್ದಾರೆ.

click me!