
ಬೆಂಗಳೂರು (ಜ.31): ಅತಿ ಅಪರೂಪದ ಖಗೋಳ ಕೌತುಕ ಎಂದೇ ಬಣ್ಣಿಸಲಾಗುವ ‘ಸೂಪರ್ ಬ್ಲೂ ಬ್ಲಡ್ ಮೂನ್’ ವಿಸ್ಮಯಕ್ಕೆ ಸಾಕ್ಷಿಯಾಗಲು ಇಡೀ ವಿಶ್ವವೇ ತುದಿಗಾಲಲ್ಲಿ ನಿಂತಿದೆ.
ಭಾರತದಲ್ಲಿ 36 ವರ್ಷಗಳ ಹಿಂದೆ ಕಾಣಿಸಿಕೊಂಡ, ಅಮೆರಿಕದ ಪಾಲಿಗೆ 150 ವರ್ಷಗಳಲ್ಲೇ ಮೊದಲ ಬಾರಿಗೆ ಕಾಣಿಸುವ ಈ ದೃಶ್ಯ ಬುಧವಾರ ಸಂಜೆ ಬಾನಂಗಳದಲ್ಲಿ ಗೋಚರವಾಗಲಿದೆ. ಅತ್ಯಂತ ದೊಡ್ಡದಾಗಿ ಚಂದಿರ ಗೋಚರಿಸುವ ‘ಸೂಪರ್ ಮೂನ್’ ದಿನದಂದೇ ಸಂಪೂರ್ಣ ಚಂದ್ರ ಗ್ರಹಣ ಘಟಿಸುತ್ತಿದ್ದು, ಈ ವಿದ್ಯಮಾನವನ್ನು ಕಣ್ತುಂಬಿಕೊಳ್ಳಲು ಖಗೋಳಾಸಕ್ತರು ಕಾತರದಿಂದ ಕಾಯುತ್ತಿದ್ದಾರೆ. ವಿಶ್ವದ ವಿವಿಧೆಡೆ ಒಂದೊಂದು ಕಾಲಘಟ್ಟದಲ್ಲಿ ಬುಧವಾರ ಸಂಜೆ 4.21 ರಿಂದ ರಾತ್ರಿ ೯.೪೦ರ ವರೆಗೆ ‘ಸೂಪರ್ ಬ್ಲೂ ಬ್ಲಡ್ ಮೂನ್’ ಕಾಣಿಸಿ ಕೊಳ್ಳಲಿದೆ.
ಸೂಪರ್ ಮೂನ್?
ಸೂಪರ್ ಮೂನ್ ಹುಣ್ಣಿಮೆಯ ದಿನದಂದು ಚಂದ್ರನು ಭೂಮಿಗೆ ಅತ್ಯಂತ ಸನಿಹಕ್ಕೆ (೩.೫೮ ಲಕ್ಷ ಕಿ.ಮೀ.) ಇರುತ್ತಾನೆ. ಅಂದು ಮಾಮೂಲಿಗಿಂತ ಶೇ.14 ದೊಡ್ಡದಾಗಿ ಕಾಣುತ್ತಾನೆ. ಶೇ.28 ಹೆಚ್ಚು ಪ್ರಭೆಯಿಂದ ಹೊಳೆಯುತ್ತಾನೆ. ದೊಡ್ಡ ಗಾತ್ರದಲ್ಲಿ ಚಂದ್ರನನ್ನು ನೋಡುವುದೇ ಸುಂದರ ದೃಶ್ಯ. ಈ ರೀತಿ ವರ್ಷದಲ್ಲಿ 4 ರಿಂದ 6 ಬಾರಿ ಸೂಪರ್ ಮೂನ್ ವಿದ್ಯಮಾನ ಘಟಿಸುತ್ತದೆ.
ಬ್ಲೂ ಮೂನ್?
ತಿಂಗಳಿಗೊಮ್ಮೆ ಹುಣ್ಣಿಮೆ ಬರುವುದು ಸರ್ವೇ ಸಾಮಾನ್ಯ. ಅಂದರೆ ವರ್ಷಕ್ಕೆ 12 ಹುಣ್ಣಿಮೆಗಳು ಇರುತ್ತವೆ. ಅಪರೂಪಕ್ಕೊಮ್ಮೆ ಒಂದೇ ತಿಂಗಳು ಎರಡು ಹುಣ್ಣಿಮೆಗಳು ಬರುತ್ತವೆ. ಹೀಗೆ ಒಂದೇ ತಿಂಗಳಲ್ಲಿ ಬರುವ ಎರಡನೇ ಹುಣ್ಣಿಮೆಯ ಪೂರ್ಣ ಚಂದಿರನನ್ನು ಬ್ಲೂ ಮೂನ್ ಎಂದೇ
ಕರೆಯುತ್ತಾರೆ. ಸಾಮಾನ್ಯವಾಗಿ 2.7 ವರ್ಷಗಳಲ್ಲಿ ಒಂದು ಬಾರಿ ಬ್ಲೂ ಮೂನ್ ವಿದ್ಯಮಾನ ಸಂಭವಿಸುತ್ತದೆ.
ಬ್ಲಡ್ ಮೂನ್?
ಸೂರ್ಯ-ಚಂದ್ರರ ನಡುವೆ ಭೂಮಿ ಬಂದು ಸಂಭವಿಸುವ ಖಗೋಳ ವಿದ್ಯಮಾನವೇ ಚಂದ್ರಗ್ರಹಣ. ಸಂಪೂರ್ಣ (ಖಗ್ರಾಸ) ಚಂದ್ರಗ್ರಹಣ ಆದಾಗ ಭೂಮಿಯ ನೆರಳಿನಿಂದಾಗಿ ಚಂದಿರ ಕೆಲಕಾಲ ‘ಕಣ್ಮರೆ’ಯಾಗುತ್ತಾನೆ. ಆದರೆ, ಬ್ಲಡ್ ಮೂನ್ ದಿನ ಚಂದಿರನು ತಾಮ್ರವರ್ಣದಲ್ಲಿ ಕಂಗೊಳಿಸುತ್ತಾನೆ. ಭೂಮಿ ಮೂಲಕ ಸೂರ್ಯರಶ್ಮಿ ಹಾದು ಚಂದ್ರನ ಮೇಲೆ ಬೀಳುವುದೇ ಇದಕ್ಕೆ ಕಾರಣ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.