ಬ್ಯಾಂಕ್‌ ನೋಟಿಸ್‌ಗೆ ಹೆದರಿ ಶಿವಮೊಗ್ಗ ರೈತ ಆತ್ಮಹತ್ಯೆ

By Web DeskFirst Published Dec 8, 2018, 11:10 AM IST
Highlights

ಬ್ಯಾಂಕಿನಿಂದ ಸಾಲ ಮರುಪಾವತಿಗೆ ಒತ್ತಾಯಿಸಿ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಹೆಸರಿದ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 

ಶಿವಮೊಗ್ಗ : ರಾಷ್ಟ್ರೀಕೃತ ಬ್ಯಾಂಕ್‌ ಸಾಲ ಮರುಪಾವತಿಗೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಸುತ್ತುಕೋಟೆ ಗ್ರಾಮದಲ್ಲಿ ನಡೆದಿದೆ.

ಚೆನ್ನಪ್ಪಯ್ಯ(52) ಆತ್ಮಹತ್ಯೆ ಮಾಡಿಕೊಂಡವರು. ಬುಧವಾರ ರಾತ್ರಿ ಕೊಟ್ಟಿಗೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಚೆನ್ನಪ್ಪಯ್ಯಗೆ ಪತ್ನಿ, ಮೂವರು ಮಕ್ಕಳು ಇದ್ದಾರೆ.

ಚನ್ನಪ್ಪಯ್ಯ ಕುಟುಂಬದ ಹೆಸರಲ್ಲಿ 8 ಎಕರೆ ಜಮೀನಿದ್ದು, ತೋಟ ಅಭಿವೃದ್ಧಿಪಡಿಸಿದ್ದರು. ಇದಕ್ಕಾಗಿ ನಗರದ ಎಸ್‌ಬಿಐನಿಂದ 9 ಲಕ್ಷ ರುಪಾಯಿ ಸಾಲ ಪಡೆದಿದ್ದರು. ಜೊತೆಗೆ ಖಾಸಗಿಯಾಗಿಯೂ ಸಾಲ ಮಾಡಿದ್ದರು. ಆದರೆ ಬೆಳೆ ವಿಫಲವಾಗಿದ್ದರಿಂದ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ.

ಸಾಲ ಮರುಪಾವತಿಸುವಂತೆ ಬ್ಯಾಂಕಿನವರು ನೋಟಿಸ್‌ ನೀಡಿದ್ದರಲ್ಲದೆ, ಊರಿಗೆ ಕೂಡ ಬಂದು ಹೋಗಿದ್ದರು. ಈ ನಡುವೆ, ಚೆನ್ನಪ್ಪಯ್ಯ ತಮ್ಮ ಜಮೀನು ಮಾರಾಟ ಮಾಡಲು ಮುಂದಾಗಿದ್ದರು. ಆದರೆ ಸರಿಯಾದ ಬೆಲೆ ಸಿಗದ ಕಾರಣ ಅದೂ ಸಾಧ್ಯವಾಗಿರಲಿಲ್ಲ. ಈ ಎಲ್ಲ ಬೆಳವಣಿಗೆಗಳಿಂದ ತೀವ್ರ ಒತ್ತಡಕ್ಕೆ ಸಿಲುಕಿದ ಚೆನ್ನಪ್ಪಯ್ಯ ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮನೆಯವರು ಹೇಳಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಗ್ರಾಮಾಂತರ ಪೊಲೀಸ್‌ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಸಿ.ಎಸ್‌.ಜಯಪ್ಪ, ಸಿಬ್ಬಂದಿ ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!