ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇದ್ದಾಕ್ಷಣ ಓಟ್ ಬರಲ್ಲ

By Suvarna Web DeskFirst Published Dec 1, 2017, 4:57 PM IST
Highlights

ಚುನಾವಣೆಗಳು ಹತ್ತಿರವಾಗುತ್ತಿದ್ದಂತೆಯೇ ಎಲ್ಲಾ ರಾಜಕೀಯ ಪಕ್ಷಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಸಕ್ರಿಯವಾಗುತ್ತಿವೆ. ಆದರೆ ಈ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳೋದೇ ಬೇರೆ. ಈ ರೀತಿ ಜಿದ್ದಿಗೆ ಬಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗುವುದರಿಂದ ಜನಾಭಿಪ್ರಾಯ ರೂಪಿಸಲು ಸಾಧ್ಯವಿಲ್ಲ. ಅವು ಕೇವಲ ಕೆಲವು ಜನರನ್ನಷ್ಟೇ ತಲುಪುತ್ತವೆ ಎಂದು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.

1) ಅರವಿಂದ್ ಸರ್, ಮೊದಲು ಮೋದಿಯ ಬಗ್ಗೆ ನೇರವಾಗಿ ಟೀಕಿಸುಸುತ್ತಿದ್ದ ನೀವು, ಇತ್ತೀಚೆಗೆ ಮೋದಿಯ ಬಗ್ಗೆ ಮಾತನಾಡುವುದೇ ಇಲ್ಲವಲ್ಲ. ಯಾಕೆ?

ಅ: ಇಲ್ಲ, ಹಾಗೇನಿಲ್ಲ, ಕಳೆದ ವರ್ಷ ನವೆಂಬರ್ 8ರಂದು ಆದ ನೋಟ್ ಬ್ಯಾನ್‌ನಿಂದ ನಮ್ಮ ದೇಶದ ಆರ್ಥಿಕತೆಯ ಬೆನ್ನುಲುಬೇ ಮುರಿದಂತಾಗಿದೆ. ಈ ಕಾರಣದಿಂದಾಗಿಯೇ ನೋಟ್ ಬ್ಯಾನ್ ದೇಶದಲ್ಲಿ ಆದಂತಹ ದೊಡ್ಡ ಹಗರಣ ಎಂದು ನಾನು ಮೊದಲೇ ಹೇಳಿದ್ದೆ. ಆದರೆ ಅಂದು ಕೇಜ್ರಿವಾಲ್‌ಗೆ ಬುದ್ಧಿ ಇಲ್ಲ ಎಂದು ನಿಮ್ಮ ಮಾಧ್ಯಮಗಳೇ ಹೇಳಿದ್ದವು. ಆಲ್ದೇ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್‌ನಲ್ಲಿಯೂ ಇವಿಎಂನಲ್ಲಿ ತಾಂತ್ರಿಕ ದೋಷ ಇದೆ, ಅದೇ ಕಾರಣದಿಂದ ನಾವು ಅಲ್ಲಿನ ಚುನಾವಣೆಯಲ್ಲಿ ಸೋಲಬೇಕಾಯಿತು ಎಂದು ಹೇಳಿದ್ದೆ. ಆದರೆ ಆಗಲೂ ನೀವು ನನ್ನ ಸುಳ್ಳ, ಬುದ್ಧಿ ಇಲ್ಲ ಎಂದು ಹೇಳಿದ್ದಿರಿ. ನೋಡಿ ಈಗ, ಅಂದು ಹೇಳಿದ ನನ್ನ ಮಾತುಗಳು ಸತ್ಯ ಎಂದು ಗೊತ್ತಾಗಿದೆ. ಇತ್ತೀಚೆಗೆ ಗುಜರಾತ್‌ನಿಂದಲೂ ಒಂದು ವಿಡಿಯೋ ಬಂದಿದೆ. ಹಾಗೆ ಉತ್ತರ ಪ್ರದೇಶದಿಂದಲೂ ಇಂಥದ್ದೇ ವಿಡಿಯೋ ಬಂದಿದೆ. ಅದರಲ್ಲಿ ಅದರಲ್ಲಿ ಇವಿಎಂ ಮಷಿನ್‌ನಲ್ಲಿ ತಾಂತ್ರಿಕ ದೋಷವಿರುವುದು ಸ್ಪಷ್ಟವಾಗಿದೆ. ಮಷಿನ್‌ನ ಯಾವುದೇ ಬಟನ್ ಒತ್ತಿದರೂ ಅದು ಬಿಜೆಪಿಗೇ ಮತ ಹೋಗುತ್ತದೆ. ಪ್ರಜಾಪ್ರಭುತ್ವ ವಿರೋಧಿಯಾದ ಪ್ರತಿಯೊಂದು ಘಟನೆಯನ್ನೂ ನಾನು ವಿರೋಧಿಸಿದ್ದೇನೆ.

2) ಇತ್ತೀಚೆಗೆ ರಾಹುಲ್ ಗಾಂಧಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟಿವ್ ಆಗಿದ್ದಾರೆ. ಕೆಲವರು ಹೊಗಳುತ್ತಿದ್ದಾರೆ ಕೂಡಾ. ಇದರ ಬಗ್ಗೆ ಏನ್ ಹೇಳ್ತೀರಾ?

ಅ: ತುಂಬ ಒಳ್ಳೇ ವಿಚಾರ, ಪ್ರಜಾ ಪ್ರಭುತ್ವಕ್ಕೆ ಒಳ್ಳೇದು. ಅದರಲ್ಲಿಯೂ ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಹೆಚ್ಚಿನ ಬಳಕೆಯನ್ನು ಕಲಿಯುತ್ತಿರುವುದು ತುಂಬಾ ಒಳ್ಳೆದು. ಅಣ್ಣಾ ಅಂದೋಲನದಿಂದ ಸೋಷಿಯಲ್ ಮೀಡಿಯಾ ಪ್ರಮುಖ ಪಾತ್ರ ವಹಿಸಿತು. ಆಗ ಸೋಷಿಯಲ್ ಮೀಡಿಯಾಗಳು ಏನಿತ್ತೋ ಅದನ್ನು ಮಾತ್ರ ತೋರಿಸುತ್ತಿದ್ದವು. ಆದರೆ ಈಗ ಪ್ರತಿಯೊಂದು ಪಕ್ಷವು ಅವರವರ ಖಾಸಗಿ ಏಜೆನ್ಸಿಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿನ ಅಕೌಂಟ್‌ಗಳನ್ನು ನೋಡಿಕೊಳ್ಳುತ್ತದೆ. ಕಣ ಮಾತ್ರದಲ್ಲಿ ಲಕ್ಷ ಲಕ್ಷ ಫೇಕ್ ಲೈಕ್ಸ್, ಕಾಮೆಂಟ್‌ಗಳನ್ನು ನೀಡಿ ಜನರನ್ನು ಮೋಸ ಮಾಡಿ, ತಾವು ತುಂಬ ಜನಪ್ರಿಯ ನಾಯಕರು ಎಂದು ತೋರಿಸಿಕೊಳ್ಳುತ್ತಿದಾರೆ. ಇದು ಪ್ರಜಾಪ್ರಭುತ್ವಕ್ಕೆ ಹಾನಿಕಾರಕವಾಗಿದೆ. ಆದರೆ ಜನರೇನು ದಡ್ಡರಲ್ಲ. ಈ ಕುತಂತ್ರಗಳಿಂದ ಜನರು ಹತ್ತಿರ ಆಗುತ್ತಾರೆ, ಮತ ನೀಡುತ್ತಾರೆ ಎಂಬುದು ಸುಳ್ಳು. ಏಕೆಂದರೆ ಈ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವವರಿಗೆ ಮಾತ್ರ ಅಲ್ಲಿ ಏನಾಗುತ್ತಿದೆ ಎಂದು ತಿಳಿಯುತ್ತಿರುತ್ತದೆ. ಆದರೆ ಸಾಮಾಜಿಕ ಜಾಲತಾಣಗಳಿಂದಾಚೆಗಿರುವ ಜನರನ್ನು ಇವು ತಲುಪುವುದಿಲ್ಲ. ಈಗಿನ ಜಾತಿವಾದ, ಪದ್ಮಾವತಿ ವಿವಾದಗಳು ಜನರ ಅಭಿಪ್ರಾಯವನ್ನು ಬದಲಾಯಿಸುವುದಿಲ್ಲ. ದೇಶದ ಆರ್ಥಿಕ ಅಭಿವೃದ್ಧಿ ಹದಗೆಟ್ಟಿದ್ದು, ಜನರು ಇದಕ್ಕೆ ತಕ್ಕ ಉತ್ತರ ನೀಡಲು ಸಜ್ಜಾಗಿದ್ದಾರೆ.

3) ಸೋಷಿಯಲ್ ಮೀಡಿಯಾದಿಂದ ಉಪಯೋಗವಾಗುತ್ತಿದೆ ಎಂದು ನಿಮಗೆ ಅನಿಸುತ್ತಿಲ್ಲವೇ?

ಅ: ಇಲ್ಲ ಹಾಗೇನಿಲ್ಲ. ಸಾಮಾಜಿಕ ಮಾಧ್ಯಮಗಳಿಂದ ಜನರಿಗೆ ಸಾಕಷ್ಟು ಉಪಯೋಗವಾಗುತ್ತಿದೆ. ಒಳ್ಳೆಯ ಸಂದೇಶಗಳು ಜನರಿಗೆ ತಲುಪುತ್ತಿವೆ. ಅಲ್ಲದೆ ಅಂತಹ ವಿಷಯಗಳು ಜನರಿಗೆ ತಲುಪುವ ಅವಶ್ಯಕತೆ ಕೂಡಾ ಇದೆ. ಸಾಮಾಜಿಕ ಮಾಧ್ಯಮಗಳಿಂದಾಗಿ ಯಾವುದೇ ತರಹದ ಗಲಭೆಯನ್ನು ಮುಚ್ಚಿಡಲು ಸಾಧ್ಯವಾಗುವುದಿಲ್ಲ. ಆದರೆ ನನಗನಿಸುವುದು, ಸಾಮಾಜಿಕ ಮಾಧ್ಯಮಗಳಿಗಿಂತ, ಮುಖ್ಯವಾಹಿನಿಯಲ್ಲಿರುವ ಮಾಧ್ಯಮಗಳು ಜನರಿಗೆ ಹೆಚ್ಚು ಹತ್ತಿರವಾಗಿವೆ. ಹಾಗಾಗಿ ಅವುಗಳ ಜವಾಬ್ದಾರಿ ಹೆಚ್ಚಿದೆ. ಮುಖ್ಯವಾಹಿನಿಯ ಮಾಧ್ಯಮಗಳು ದೇಶದಲ್ಲಿರುವ ಭ್ರಷ್ಟಾಚಾರದ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಅಪ್ರಯೋಜಕ ಸುದ್ದಿಗಳನ್ನು ಪ್ರಸಾರ ಮಾಡುವುದನ್ನು ಬಿಡಬೇಕಿದೆ.

4) ದೆಹಲಿಯಲ್ಲಿ ಇತ್ತೀಚೆಗೆ ಮಾಲಿನ್ಯದಿಂದಾದ ವಿಷಕಾರಕ ವಾತಾವರಣವನ್ನು ತಿಳಿಗೊಳಿಸುವಲ್ಲಿ ನಿಮ್ಮ ಸರ್ಕಾರ ವಿಫಲವಾಯಿತು. ಈ ಬಗ್ಗೆ ನೀವು ಏನು ಹೇಳುತ್ತೀರಾ?

ಅ: ನಾವು ಈ ಬಗ್ಗೆ ಅನೇಕ ಸುದ್ದಿಗೋಷ್ಠಿ ಮಾಡಿ ಮಾಲಿನ್ಯದ ಆತಂಕಕಾರಿ ವಾತಾವರಣದ ಬಗೆಗಿನ ಸತ್ಯಾಂಶಗಳನ್ನು ಹೇಳಿದ್ದೇನೆ. ದೆಹಲಿಯಲ್ಲಿ ಆಗಸ್ಟ್, ಸೆಪ್ಟಂಬರ್‌ನಲ್ಲಿ ಮಾಲಿನ್ಯದ ಪ್ರಮಾಣ ನಿಯಂತ್ರಣದಲ್ಲೇ ಇತ್ತು ಆದರೆ ಆಕ್ಟೋಬರ್ ನಂತರ ಮಾಲಿನ್ಯ ಪ್ರಮಾಣ ಮಿತಿಮೀರಿತು. ಕಾರಣ, ಪಂಜಾಬ್ ಹಾಗೂ ಹರಿಯಾಣದಲ್ಲಿ ಬೆಳೆಗಳನ್ನು ಸುಟ್ಟಿದ್ದರಿಂದ ದೆಹಲಿಯಲ್ಲಿ ಹೊಗೆ ಆವರಿಸಿಕೊಂಡು ಅನೇಕ ತೊಂದರೆಗೆ ಕಾರಣವಾಯಿತು. ಇದು ನಮ್ಮ ಬೇಜವಾಬ್ದಾರಿ ಅಲ್ಲ.

5) ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಮೋದಿ ಬ್ರಾಂಡ್ಪ್ರಾರಂಭವಾಗಿದೆ. ಮೋದಿ ದೇಶದ ಪ್ರಭಾವಿ ರಾಜಕೀಯ ನಾಯಕ ಎಂದು ಹೇಳಲಾಗುತ್ತಿದೆ. ಹೀಗಾಗಿ ಮೋದಿಯನ್ನು ಹಣಿಯಲು ನಿಮ್ಮ ಪ್ಲಾನ್?

ಅ: ಹಾಗೇನಿಲ್ಲ. ನಮಗೆ ನಿರ್ದಿಷ್ಟ ವ್ಯಕ್ತಿಯೊಂದಿಗೆ ಯಾವ ದ್ವೇಷವೂ ಇಲ್ಲ. ದೇಶದ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಇನ್ನು ಮುಂದಿನ 2019ರ ಚುನಾವಣೆಯ ಬಗ್ಗೆ ಹೇಳೋದಾದ್ರೆ, ಮುಂದಿನ ಚುನಾವಣೆ ಮೋದಿ ಮತ್ತು ದೇಶದ ಜನತೆಯ ನಡುವೆ ನಡೆಯುತ್ತದೆ. ಮುಂದಿನ ಬಾರಿ ಮೋದಿಯ ವಿರುದ್ಧ ಜನರೇ ದಿಟ್ಟ ಉತ್ತರ ನೀಡಲಿದ್ದಾರೆ.

(ಕನ್ನಡಪ್ರಭ)

click me!