ಎಷ್ಟೇ ಕರೆದ್ರೂ ದೇವೇಗೌಡರ ಮನೆಗೆ ಅಂಬಿ ಹೋಗ್ತಿರಲಿಲ್ಲವೇಕೆ?

By Web DeskFirst Published Nov 27, 2018, 1:57 PM IST
Highlights

ದೇವೇಗೌಡರು ಅಂಬರೀಶ್‌ರನ್ನು ಮನೆಗೆ ಬರುವಂತೆ ಎಷ್ಟೇ ಕರೆದರೂ ಅಂಬಿ ಹೋಗಲು ನಿರಾಕರಿಸುತ್ತಿದ್ದರು | ಅಯ್ಯೋ ಗೌಡರೆ ಬರೀ ಬಸ್ಸಾರು ಊಟ ಬೇಡ, ಬೆಳಿಗ್ಗೆ ತಿಂಡಿಗೆ ಬರುತ್ತೇನೆ’ ಎನ್ನುತ್ತಿದ್ದರಂತೆ. 

ಬೆಂಗಳೂರು (ನ. 27): ಅಂಬರೀಶ್ ರದ್ದು ವರ್ಣರಂಜಿತ ವ್ಯಕ್ತಿತ್ವ. ಜೀವನವನ್ನು ತುಂಬಾ ಎಂಜಾಯ್ ಮಾಡುತ್ತಿದ್ದರು. ಯಾವುದಕ್ಕೂ ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಬಂದಿದ್ದನ್ನು ಎದುರಿಸುವ ಮನುಷ್ಯ. ಇವರು ಇದ್ದಲ್ಲಿ ನಗು, ಸಂತೋಷಕ್ಕೆ ಕೊರತೆಯಿರಲಿಲ್ಲ. ಇವರ ಬಗೆಗಿನ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ. 

ಕಮ್ಮಿ ಕುಡಿ ಅಂದ್ರೆ ಬಡ್ಡಿಮಗ ಕೇಳ್ಲಿಲ್ಲ

1994 ರಲ್ಲಿ ಒಮ್ಮೆ ಅಂಬರೀಷ್ ಎಲ್ಲೋ ಹೊರಗಿನಿಂದ ಭವನಕ್ಕೆ ಬಂದು ಕಾರ್‌ನಿಂದ ಇಳಿಯುತ್ತಿದ್ದಾಗ ಭವನದ ಡ್ರೈವರ್‌ಗಳು ಸೇರಿ ಜೋರಾಗಿ ಮಾತನಾಡಿಕೊಳ್ಳುತ್ತಿದ್ದರಂತೆ. ‘ಯಾಕ್ರಲಾ ಹಿಂಗ್ಯಾಕೆ ಗರ ಬಡಿದವರಂತೆ ನಿಂತ್ಕೊಂಡೀರಿ’ ಎಂದು ಅಂಬಿ ಕೇಳಿದಾಗ, ‘ಸಾರ್ ಮೈಲಾರಪ್ಪ ಅನ್ನೋ ಡ್ರೈವರ್ ಹೋಗ್ಬಿಟ್ಟ’ ಅಂದರಂತೆ.

‘ಅಯ್ಯೋ ಬಡ್ಡಿ ಮಗನಿಗೆ ಕುಡಿಯೋದು ಸ್ವಲ್ಪ ಕಡಿಮೆ ಮಾಡು ಎಂದು ಹೇಳಿದರೂ ಕೇಳಲಿಲ್ಲ. ಈಗ ಅನುಭವ್ಸೋರು ಹೆಂಡತಿ ಮಕ್ಕಳು’ ಎಂದು ಬಯ್ದು ರೂಮ್‌ಗೆ ಹೋಗಿ 20 ಸಾವಿರ ದುಡ್ಡು ತಂದುಕೊಟ್ಟು ‘ಅವನ ಹೆಂಡತಿ ಕೈಯಲ್ಲಿ ಕೊಡ್ರೋ’ಎಂದರಂತೆ. ಅವರ ರೂಂಗೆ ಯಾರೇ ಅಣ್ಣಾ ಕಷ್ಟ ಎಂದು ಹೋಗಲಿ ಅವರನ್ನು ಬರಿಗೈಯಲ್ಲಿ ವಾಪಸ್ ಕಳಿಸುತ್ತಿರಲಿಲ್ಲ. ಅಂಬಿಯ ವಿಶೇಷ ಗುಣ ಎಂದರೆ, ಇತರ ರಾಜಕಾರಣಿಗಳಂತೆ ಸಹಾಯ ಮಾಡುವಾಗ ಜಾತಿ ನೋಡುತ್ತಿರಲಿಲ್ಲ.

ಗೌಡ್ರೇ ನಿಮ್ಮ ಬಸ್ಸಾರು ಊಟ ಬೇಡ

ಮಂಡ್ಯದಲ್ಲಿ ಹೇಗೆ ಎಲ್ಲಿ ತಲೆ ಮಾಂಸ, ಬೋಟಿ ಚೆನ್ನಾಗಿ ಸಿಗುತ್ತದೆ ಎಂದು ಅಂಬಿಗೆ ಗೊತ್ತಿತ್ತೋ ಹಾಗೆಯೇ ದಿಲ್ಲಿಯಲ್ಲಿ ಕೂಡ ಬಿರಿಯಾನಿ ಎಲ್ಲಿ ಚೆನ್ನಾಗಿ ಸಿಗುತ್ತದೆ, ಖೈಮಾ ಬಾಲ್ ಎಲ್ಲಿ ರುಚಿಕರ ಎಂದು ಗೊತ್ತಿತ್ತು. ರಾತ್ರಿ ಮನೆಯಲ್ಲಿ ಸಮಾರಾಧನೆ ನಡೆದರೆ ಎಷ್ಟೇ ತಡವಾಗಲಿ ಬಿಸಿ ಬಿಸಿ ಊಟವೇ ಅಂಬಿಗೆ ಬೇಕಿತ್ತಂತೆ. ದೇವೇಗೌಡರು ಎಷ್ಟೇ ಸಲ ಊಟಕ್ಕೆ ರಾತ್ರಿಗೆ ಮನೆಗೆ ಕರೆದರೂ, ‘ಅಯ್ಯೋ ಗೌಡರೆ ಬರೀ ಬಸ್ಸಾರು ಊಟ ಬೇಡ, ಬೆಳಿಗ್ಗೆ ತಿಂಡಿಗೆ ಬರುತ್ತೇನೆ’ ಎನ್ನುತ್ತಿದ್ದರಂತೆ.

ದೊಡ್ಡ ಗೌಡರು ಕರೆದವ್ರೆ ಎಂದು ಕಷ್ಟಪಟ್ಟು ಬೆಳಿಗ್ಗೆ ಎದ್ದು ಅಂಬಿ ಹೋದರೆ, ಗೌಡರು ವಿಷ್ಣು ಸಹಸ್ರನಾಮ ಹೇಳುತ್ತಾ ಅರ್ಧ ಗಂಟೆ ತಡ ಮಾಡುತ್ತಿದ್ದರಂತೆ. ಅಯ್ಯೋ ಏನಪ್ಪಾ ನಿಮ್ಮ ಸಾಹೇಬರು ಪೂಜೆ ಪುನಸ್ಕಾರ ಎಂದು ತಿಂಡಿ ಲೇಟ್ ಮಾಡಿಸುತ್ತಾರೆ ಎಂದು ಹುಸಿ ಕೋಪ ತೋರಿಸುತ್ತಿದ್ದರಂತೆ. ‘ಅಯ್ಯೋ ನೀವು ತಿಂಡಿ ಮಾಡಿಬಿಡಿ, ಸಾಹೇಬರು ಹೇಳಿದ್ದಾರೆ’ ಎಂದರೆ ‘ಇಲ್ಲಪ್ಪಾ...ಮಾಜಿ ಪ್ರಧಾನಿ ಅವರು’ ಎಂದು ನಗುತ್ತ ನಗಿಸುತ್ತ ಕಾಯುತ್ತಿದ್ದರಂತೆ. 

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ 

click me!