ನೆರೆ ಸಂತ್ರಸ್ತರಿಗೆ ಹೊಸ ಸೂರಿಗೆ 5 ಲಕ್ಷ ರು. ನೆರವು

By Kannadaprabha NewsFirst Published Aug 13, 2019, 7:26 AM IST
Highlights

ರಾಜ್ಯದಲ್ಲಿ ಭೀಕರ ಪ್ರವಾಹದಿಂದ ತತ್ತರಿಸಿದ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಮೀಕ್ಷೆ ನಡೆಸುತ್ತಿದ್ದಾರೆ. ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. 

ಧರ್ಮಸ್ಥಳ [ಆ.13]: ರಾಜ್ಯದಲ್ಲಿ ನೆರೆಯಿಂದ ಸಂತ್ರಸ್ತಗೊಂಡವರಿಗೆ ಹೊಸದಾಗಿ ಮನೆ ನಿರ್ಮಾಣಕ್ಕೆ 5 ಲಕ್ಷ ರು. ನೆರವನ್ನು ಸರ್ಕಾರ ಬಿಡುಗಡೆ ಮಾಡಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಬೆಳ್ತಂಗಡಿಯ ಕುಕ್ಕಾವು ನೆರೆಪೀಡಿತ ಗ್ರಾಮಕ್ಕೆ ಸೋಮವಾರ ಭೇಟಿದ ಬಳಿಕ ಸಿಎಂ ಯಡಿಯೂರಪ್ಪ ಅವರು ಧರ್ಮಸ್ಥಳದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನೆರೆ ಸಂತ್ರಸ್ತರಿಗೆ ಹೊಸದಾಗಿ ಮನೆ ನಿರ್ಮಾಣಕ್ಕೆ ಅಧಿಕಾರಿಗಳು ಕಾನೂನಿನ ಸಬೂಬು ಹೇಳಬಾರದು. ಜಾಗ ಹಾಗೂ ಖಾತೆ ಸಮಸ್ಯೆ ಸೇರಿದಂತೆ ಸೂಕ್ತ ದಾಖಲೆ ಪತ್ರಗಳ ಕೊರತೆ ಇದ್ದರೆ ಅದನ್ನು ಸರಿಪಡಿಸುವ ಹೊಣೆ ಅಧಿಕಾರಿಗಳದ್ದು. ನೆರೆ ಸಂತ್ರಸ್ತರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ಅವರು ಬಯಸಿದಾಗ ಹೊಸ ಮನೆ ನಿರ್ಮಾಣಕ್ಕೆ 5 ಲಕ್ಷ ರು. ನೆರವು ನೀಡಬೇಕು ಎಂದು ಸೂಚನೆ ನೀಡುತ್ತಿರುವುದಾಗಿ ಸಿಎಂ ಯಡಿಯೂರಪ್ಪ ಹೇಳಿದರು.

ಮನೆ ದುರಸ್ತಿಗೆ 1 ಲಕ್ಷ:

ಸಂತ್ರಸ್ತ ಕುಟುಂಬಕ್ಕೆ ತುರ್ತು ಪರಿಹಾರವಾಗಿ 10 ಸಾವಿರ ರು. ನೀಡಬೇಕು. ಮನೆ ದುರಸ್ತಿಗೆ ಪ್ರತಿ ಮನೆಗೆ 1 ಲಕ್ಷ ರು. ನೀಡಲಾಗುವುದು. ಮನೆ ನಿರ್ಮಿಸಲಾಗದ ಕುಟುಂಬಕ್ಕೆ ಪ್ರತಿ ಮಾಸಿಕ ಬಾಡಿಗೆ ನೆಲೆಯಲ್ಲಿ 5 ಸಾವಿರ ರು. ನೀಡಲಾಗುವುದು. ಸುಮಾರು ಎಂಟ್ಹತ್ತು ತಿಂಗಳು ವರೆಗೂ ಬಾಡಿಗೆ ಪರಿಹಾರ ಮೊತ್ತ ನೀಡಲಾಗುವುದು. ಅಲ್ಲಿವರೆಗೆ ಸಂತ್ರಸ್ತರು ಬಾಡಿಗೆ ಮನೆ ಅಥವಾ ಸಂಬಂಧಿಕ ಮನೆಗಳಲ್ಲಿ ಇರಬಹುದು. ಅವರು ಇರುವಲ್ಲಿಗೆ ಬಾಡಿಗೆ ಪರಿಹಾರ ಮೊತ್ತ ಪಾವತಿಸಲಾಗುವುದು. ಬಳಿಕ ಸಂತ್ರಸ್ತರು ಎರಡು ಬೆಡ್‌ ರೂಮಿನ ಸದೃಢವಾದ ಮನೆ ನಿರ್ಮಿಸಬೇಕು. 30-10 ಹಾಗೂ 40-50 ವಿಸ್ತೀರ್ಣದ ಮನೆ ನಿರ್ಮಿಸುವ ಬಗ್ಗೆ ಉಚಿತವಾಗಿ ಜಾಗ ಒದಗಿಸಲು ಶಾಸಕರು ಹಾಗೂ ಜಿಲ್ಲಾಡಳಿತ ಸಂತ್ರಸ್ತರಿಗೆ ನೆರವಾಗಬೇಕು ಎಂದು ಸಿಎಂ ಸೂಚಿಸಿದರು.

ಸುಳ್ಯ ಶಾಸಕ ಅಂಗಾರ ಮಾತನಾಡಿ, ನೆರೆ ಸಂತ್ರಸ್ತರ ಭಾಗಶಃ ಕುಸಿತಗೊಂಡ ಮನೆಗಳಿಗೆ ಸೂಕ್ತ ಪರಿಹಾರ ಸಿಗುವುದಿಲ್ಲ. ಮನೆ ಭಾಗಶಃ ಕುಸಿದರೂ, ಅದರ ಅಡಿಪಾಯ ಪೂರ್ತಿ ಕುಸಿದಿರುತ್ತದೆ. ಇಂತಹ ಪ್ರಕರಣಗಳಲ್ಲಿ ಅಧಿಕಾರಿಗಳು ಸರಿಯಾದ ವರದಿ ನೀಡುವುದಿಲ್ಲ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಸಿಎಂ, ಇಂತಹ ಪ್ರಕರಣಗಳಲ್ಲಿ ಕಾನೂನು, ಕಟ್ಟಳೆಗಳನ್ನು ಬದಿಗಿಟ್ಟು ಮಾನವೀಯತೆ ನೆಲೆಯಲ್ಲಿ ಗರಿಷ್ಠ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದರು.

ಪ್ರಾಕೃತಿಕ ಹಾನಿ ಪುನರ್‌ ಸ್ಥಾಪನೆ:

ನೆರೆಯಿಂದ ಪ್ರಕೃತಿಗೆ ವ್ಯಾಪಕ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ರಸ್ತೆ, ಸೇತುವೆ, ಕೃಷಿ ಜಮೀನು ನಷ್ಟವುಂಟಾಗಿದ್ದು, ಇದಕ್ಕೂ ಪ್ರತ್ಯೇಕ ಪರಿಹಾರ ನೀಡಲಾಗುವುದು. ಹಾನಿಗೊಂಡ ರಸ್ತೆ ಹಾಗೂ ಸೇತುವೆಗಳನ್ನು ಸರಿಪಡಿಸಲಾಗುವುದು. ಈ ಬಗ್ಗೆ ಜಿಲ್ಲಾ ಪಂಚಾಯ್ತಿ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಜಿಲ್ಲಾಡಳಿತ ಸಮಗ್ರ ವರದಿಯನ್ನು ತರಿಸಿಕೊಂಡು ಸರ್ಕಾರಕ್ಕೆ ಆದಷ್ಟುಬೇಗ ಸಲ್ಲಿಸಬೇಕು ಎಂದರು.

ಸಾಂಕ್ರಾಮಿಕ ರೋಗ ತಡೆಗೆ ಕ್ರಮ:

ನೆರೆ ಬಳಿಕ ಈಗ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಸಂತ್ರಸ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಹೇಳಿದರು. ಇದಕ್ಕೆ ಸ್ಪಂದಿಸಿದ ಸಿಎಂ ಯಡಿಯೂರಪ್ಪ, ಆಯಾ ಜಿಲ್ಲೆಗಳಲ್ಲಿ ಇರುವ ಮೆಡಿಕಲ್‌ ಕಾಲೇಜುಗಳ ನೆರವನ್ನು ಪಡೆದುಕೊಂಡು ಪ್ರತಿ ಸಂತ್ರಸ್ತ ಮನೆಯನ್ನು ಭೇಟಿ ಮಾಡಿ ಆರೋಗ್ಯ ತಪಾಸಣೆ ನಡೆಸಬೇಕು. ಜೊತೆಗೆ ಕುಡಿಯುವ ನೀರು ಕಲುಷಿತ ಪ್ರಕರಣಗಳಿಗೆ ಆಸ್ಪದ ನೀಡಬಾರದು. ಸಾಂಕ್ರಾಮಿಕ ರೋಗ ಕಾಣಿಸಿದ ಬಗ್ಗೆ ಯಾವುದೇ ಪ್ರಕರಣ ವರದಿಯಾಗಬಾರದು ಎಂದು ಸಿಎಂ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಬಂಟ್ವಾಳ ಶಾಸಕ ರಾಜೇಶ್‌ ನಾಯ್‌್ಕ ಮಾತನಾಡಿ, ಮೊನ್ನೆ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದ ಬಂಟ್ವಾಳ ಪೇಟೆ ಜಲಾವೃತ್ತವಾಗಿದೆ. ಅನೇಕ ಕುಟುಂಬಗಳು ಹಾಗೂ ಅಂಗಡಿ ಮುಂಗಟ್ಟುಗಳು ನೀರು ನುಗ್ಗಿ ಹಾನಿಗೀಡಾಗಿವೆ. ಇವುಗಳಿಗೆ ಸೂಕ್ತ ಪರಿಹಾರ ನೀಡುವಂತೆ ವಿನಂತಿಸಿದರು.

ನೆರೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌ ಸಮಸ್ಯೆ ತಲೆದೋರಿದೆ. ಅಲ್ಲದೆ ಕೆಲವು ಮನೆಗಳ ಸಂಪರ್ಕ ಕಡಿತಗೊಂಡಿದೆ. ಅಂತಹ ಮನೆಗಳಿಗೆ ಆಹಾರ ಧಾನ್ಯ ಪೂರೈಕೆ ವ್ಯವಸ್ಥಿತವಾಗಿ ನಡೆಯಬೇಕು. ಅವರಿಗೆ ತತ್ಕಾಲಿಕವಾಗಿ ಸೀಮೆಎಣ್ಣೆ ಪೂರೈಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕು ಎಂದು ಶಾಸಕ ಯು.ಟಿ.ಖಾದರ್‌ ಹೇಳಿದರು.

ಎಡಿಬಿ ಅನುದಾನ ಹೊಂದಾಣಿಕೆ:

ನೆರೆ ಸಂತ್ರಸ್ತರು ಮನೆಯನ್ನು ಕಳೆದುಕೊಳ್ಳುವಾಗ ಅಗತ್ಯ ವಸ್ತುಗಳು ಕೂಡ ನಾಶವಾಗಿವೆ. ಈ ಕಾರಣಕ್ಕೆ ಅಗತ್ಯ ವಸ್ತುಗಳ ಖರೀದಿಗೆ ಕನಿಷ್ಠ 50 ಸಾವಿರ ರು. ವರೆಗೆ ನೀಡಬೇಕು. ಅಲ್ಲದೆ ಉಳ್ಳಾಲ ಪ್ರದೇಶದಲ್ಲಿ ಕಡಲ್ಕೊರೆತ ತಡೆಗೆ ಅಗತ್ಯ ಅನುದಾನ ನೀಡಬೇಕು ಎಂದು ಶಾಸಕ ಯು.ಟಿ.ಖಾದರ್‌ ಆಗ್ರಹಿಸಿದರು.

ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ಮಾತನಾಡಿ, ಸುರತ್ಕಲ್‌ನ ಸಸಿಹಿತ್ಲು, ಮುಕ್ಕ ಬೀಚ್‌ಗಳಲ್ಲಿ ಕಡಲ್ಕೊರತೆ ಸಮಸ್ಯೆ ಇದೆ. ಸುಮಾರು ಎರಡೂವರೆ ಕಿ.ಮೀ. ದೂರಕ್ಕೆ ತಡೆಗೋಡೆ ನಿರ್ಮಾಣಕ್ಕೆ ಅನುದಾನ ನೀಡಬೇಕು. ಇಲ್ಲಿ ಕೂಡ ನೆರೆಗೆ ಮನೆ ಹಾಗೂ ರಸ್ತೆ ಹಾನಿಗೀಡಾಗಿದೆ ಎಂದರು.

ಇದಕ್ಕೆ ಉತ್ತರಿಸಿದ ಸಿಎಂ, ಮಂಗಳೂರಿನ ಉಳ್ಳಾಲ ಸೇರಿದಂತೆ ಕಡಲ್ಕೊರತೆ ತಡೆಗೆ ಎಡಿಬಿ ಯೋಜನೆಯಲ್ಲಿ 900 ಕೋಟಿ ರು. ಮೊತ್ತದಲ್ಲಿ ಎರಡನೇ ಹಂತದಲ್ಲಿ 152 ಕೋಟಿ ರು. ಮಂಜೂರಾಗಿದೆ. ಈ ಮೊತ್ತವನ್ನು ಕಡಲ್ಕೊರೆತ ತಡೆ ಕಾಮಗಾರಿಗೆ ಬಳಸಿಕೊಳ್ಳುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ಸೂಚಿಸಿದರು.  ಈ ಸಂದರ್ಭ ಸಿಎಂ ಸಲಹೆಗಾರ ಲಕ್ಷ್ಮೇನಾರಾಯಣ, ಸಂಸದ ನಳಿನ್‌ ಕುಮಾರ್‌ ಕಟೀಲ್‌, ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌, ಜಿ.ಪಂ. ಸಿಇಒ ಡಾ.ಸೆಲ್ವಮಣಿ ಇದ್ದರು.

click me!