ನಮ್ಮ ಸೀಮಿತ ಬದುಕನ್ನು ಅಪರಿಮಿತ ಮಾಡಿಕೊಳ್ಳಲು, ಲೋಕವನ್ನು ಹೆಚ್ಚು ಪ್ರೀತಿಸಲು, ಎಲ್ಲರಂತೆಯೇ ನಾವು ಎಂಬುದು ಅರ್ಥವಾಗಲು ನಾವು ಓದಬೇಕು ಎಂಬ ಅಭಿಪ್ರಾಯ ಜೈಪುರ ಸಾಹಿತ್ಯೋತ್ಸವದ ಮೂರನೆಯ ದಿನದ ಗೋಷ್ಠಿಯಲ್ಲಿ ವ್ಯಕ್ತವಾಯಿತು.
ಜೋಗಿ
ಜೈಪುರ: ಹಲವು ಜಗತ್ತುಗಳನ್ನು ನಮ್ಮದಾಗಿಸಿಕೊಳ್ಳಲು, ನಮ್ಮದಲ್ಲದ ದೃಷ್ಟಿಕೋನದ ಮೂಲಕ ಜಗತ್ತನ್ನು ನೋಡಲು, ನಮ್ಮ ಸೀಮಿತ ಬದುಕನ್ನು ಅಪರಿಮಿತ ಮಾಡಿಕೊಳ್ಳಲು, ಲೋಕವನ್ನು ಹೆಚ್ಚು ಪ್ರೀತಿಸಲು, ಎಲ್ಲರಂತೆಯೇ ನಾವು ಎಂಬುದು ಅರ್ಥವಾಗಲು ನಾವು ಓದಬೇಕು ಎಂಬ ಅಭಿಪ್ರಾಯ ಜೈಪುರ ಸಾಹಿತ್ಯೋತ್ಸವದ ಮೂರನೆಯ ದಿನದ ಗೋಷ್ಠಿಯಲ್ಲಿ ವ್ಯಕ್ತವಾಯಿತು.
undefined
ಕಥನ ಎಲ್ಲಿಂದ ಬರುತ್ತದೆ ಎಂಬ ಗೋಷ್ಠಿಯಲ್ಲಿ ಕಾದಂಬರಿಕಾರ್ತಿ ದೀಪ್ತಿ ಕಪೂರ್, ರುಥ್ ಓಜೆಕಿ, ಅಮಿತ್ ಚೌಧರಿ ಮತ್ತು ಶೆಹಾನ್ ಕರುಣತಿಲಕ ಕಾದಂಬರಿಯ ಹುಟ್ಟು, ಬೆಳವಣಿಗೆ ಮತ್ತು ಅದು ಸೃಷ್ಟಿಸುವ ಅದ್ಬುತ ಲೋಕದ ಕುರಿತು ಮಾತಾಡಿದರು. ಲೇಖಕಿ ಅಲೆಕ್ಸಾಂಡ್ರಾ ಪ್ರಿಂಗಲ್ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ನಾವೇಕೆ ಓದಬೇಕು ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಶೆಹಾನ್ ಕರುಣತಿಲಕ, ನಮಗಿರುವುದು ಒಂದೇ ತಲೆ. ಅದರ ಮೂಲಕವೇ ಎಲ್ಲವನ್ನೂ ನೋಡುತ್ತೇವೆ. ಆದರೆ ಓದುವುದರಿಂದ ಹತ್ತು ತಲೆ, ನೂರು ತಲೆಗಳ ಮೂಲಕ ನೋಡುವುದು ಅನುಭವಿಸುವುದು ಸಾಧ್ಯವಾಗುತ್ತದೆ. ನಮ್ಮ ಜಗತ್ತು ವಿಸ್ತಾರವಾಗುತ್ತಾ ಹೋಗುತ್ತದೆ. ಓದಿಗಿಂತ ದೊಡ್ಡ ಮರುಜನ್ಮ ಇಲ್ಲ. ಪ್ರತಿ ಪುಸ್ತಕ ಓದಿದಾಗಲೂ ನಾವು ಮರುಹುಟ್ಟು ಪಡೆಯುತ್ತೇವೆ ಎಂದರು.
Jaipur Literary Festival: 'ಕೈಲಿ ಪುಸ್ತಕ ಇರಬೇಕು, ತಲೇಲಿ ಐಡಿಯಾ ಇರಬೇಕು..'
ಅಮಿತ್ ಚೌಧರಿ ತಾವು ಕಾವ್ಯದ ಓದುಗ ಎಂದು ಹೇಳಿಕೊಂಡರು. ಈ ಜಗತ್ತಿನಲ್ಲಿ ಎಲ್ಲವೂ ಮುಗಿದುಹೋಗುತ್ತದೆ. ಆದರೆ ಒಳ್ಳೆಯ ಕವಿತೆ ಎಷ್ಟು ಓದಿದರೂ ಮುಗಿಯುವುದಿಲ್ಲ. ಪ್ರತಿ ಬಾರಿ ಓದಿದಾಗಲೂ ಅದು ಮತ್ತೊಂದು ಮಾತನ್ನು ನಮಗೆ ಹೇಳುತ್ತಿರುತ್ತದೆ. ಹೀಗೆ ನಿರಂತರ ವಾಗ್ವಾದ ಸಾಹಿತ್ಯದ ಜತೆ ಮಾತ್ರ ಸಾಧ್ಯ. ನಾನು ಡಿಎಚ್ ಲಾರೆನ್ಸ್ ಬರೆದ ಸನ್ಸ್ ಅಂಡ್ ಲವರ್ಸ್ ಕಾದಂಬರಿ ಓದಿದ ನಂತರ ನನ್ನ ಜಗತ್ತೇ ಬದಲಾಯಿತು. ನಾನು ನೋಡುವ ಕ್ರಮ ಬದಲಾಯಿತು ಎಂದು ತಮ್ಮ ಅನುಭವ ಹೇಳಿಕೊಂಡರು.
ಬೇರೆ ಬೇರೆ ಬದುಕಿನ ತವಕ, ತಲ್ಲಣ, ಹುಡುಕಾಟ ಮತ್ತು ಸಂಕಟಗಳನ್ನು ನಾವು ಅನುಭವಿಸಬೇಕಿದ್ದರೆ ಓದಲೇಬೇಕು. ನಾನು ಓದುತ್ತಾ ಓದುತ್ತಾ ಒಂದು ಸಮೂಹವೇ ಆಗಿಬಿಡುತ್ತೇನೆ. ಏಕಾಂಗಿಯನ್ನು ಬಹುರೂಪಿಯನ್ನಾಗಿ ಬದಲಾಯಿಸುವ ಶಕ್ತಿ ಓದಿಗೆ ಇದೆ ಎಂದು ರುಥ್ ಓಜೆಕಿ ಓದಿನ ವಿಸ್ತಾರ ತೆರೆದಿಟ್ಟರು.
ದೀಪ್ತಿ ಕಪೂರ್ ಓದು ಕೊಡುವ ಸಾಂತ್ವನದ ಕುರಿತು ಹೇಳಿದರು. ಓದು ಎಂದರೆ ಮತ್ತೊಂದು ಮನದೊಂದಿಗೆ ಮಾತುಕತೆ. ಅದರ ಸುಖವೇ ಬೇರೆ. ನಾನು ಮತ್ತೊಬ್ಬಳಾಗುವ ಕ್ಷಣ ಅದು. ನನ್ನನ್ನು ಪಸರಿಸಿಕೊಳ್ಳುವ ಕ್ಷಣ ಎಂದು ದೀಪ್ತಿ ವರ್ಣಿಸಿದರು.
ಕಾದಂಬರಿ ಬರೆಯುವುದಕ್ಕೆ ವಯಸ್ಸಿನ ಮಿತಿಯಿಲ್ಲ. ಐವತ್ತನೇ ವಯಸ್ಸಿಗೂ ಮೊದಲ ಕೃತಿ ಬರೆಯಬಹುದು. ಕವಿತೆಯಿಂದ ಆರಂಭಿಸಿ ಕತೆಯತ್ತ ಹೊರಳಬಹುದು. ಬರೆಯುವುದು ವೃತ್ತಿಯಲ್ಲ, ಜೀವನಪ್ರೀತಿ. ಯಾರಿಗೆಲ್ಲ ಸಾಧ್ಯವೋ ಅವರು ಬರೆಯಬೇಕು. ದಿನಕ್ಕೆ ಒಂದೆರಡು ಪುಟ ಬರೆಯುತ್ತಾ ಹೋಗಬೇಕು. ತಾನು ಬರೆದದ್ದು ಏನಾಗುತ್ತದೆ ಎಂದು ಯೋಚಿಸಬಾರದು. ಬರೆಯುವುದೇ ಒಂದು ಜೀವನಕ್ರಮ ಎಂಬ ಮಾತುಗಳು ಗೋಷ್ಠಿಯಲ್ಲಿ ವ್ಯಕ್ತವಾದವು.
ಆರೋಗ್ಯಪೂರ್ಣ ಚರ್ಚೆಯೇ ಪ್ರಜಾಪ್ರಭುತ್ವದ ಮೂಲಾಧಾರ; ಶಶಿ ತರೂರ್!
ಪ್ರಕಾಶಕಿ ಮತ್ತು ಸಂಪಾದಕಿ ಅಲೆಕ್ಸಾಂಡ್ರಾ ಪ್ರಿಂಗಲ್ ಕಾರ್ಯಕ್ರಮವನ್ನು ಲವಲವಿಕೆಯಿಂದ ನಿರೂಪಿಸಿದರು. ಇಡೀ ಕಾರ್ಯಕ್ರಮ ಜೈಪುರ ಸಾಹಿತ್ಯೋತ್ಸವಕ್ಕೆ ಬಂದ ಯುವಜನತೆಗೆ ಓದಿನ ಮಹತ್ವವನ್ನು ಹಾಗೂ ಬರೆಯುವ ಕ್ರಮವನ್ನು ಹೇಳಿಕೊಟ್ಟ ಕಮ್ಮಟದಂತೆ ಇತ್ತು.