
ನಿನ್ನೆಯಷ್ಟೇ ಆತ್ಮಹತ್ಯೆಗೆ ಶರಣಾದ ಸುಶಾಂತ್ ಸಿಂಗ್ ರಜಪೂತ್ ಚಂದ್ರನ ಮೇಲೆ ಜಾಗ ಕೊಂಡಿದ್ದ ಏಕೈಕ ಭಾರತೀಯ. ಅದು ಬಿಟ್ಟರೆ ಶಾರೂಖ್ ಖಾನ್‌ಗೆ ಆತನ ಅಭಿಮಾನಿಗಳು ಚಂದ್ರನ ಮೇಲಿನ ಜಾಗವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಸುಶಾಂತ್ ಖರೀದಿಸಿರುವ ಜಾಗ ಭೂಮಿಯಿಂದ ಕಾಣುವ ಚಂದ್ರನ ಮತ್ತೊಂದು ಭಾಗದಲ್ಲಿದೆ. ಹೌದು, ಇಷ್ಟಕ್ಕೂ ಚಂದ್ರನ ಮೇಲೆ ಜಾಗ ಖರೀದಿಸಲು ಸಾಧ್ಯವೇ? ಖರೀದಿಸುವುದಾದರೂ ಯಾವ ಕಾರಣಕ್ಕೆ? ಅಲ್ಲಿ ಹೋಗಿ ಇರಲಾದೀತೇ ಮುಂತಾದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ರಿಯಲ್ ಎಸ್ಟೇಟ್ ಬೆಲೆ ಗಗನಕ್ಕೇರಿರುವಾಗ, ಮಾಲಿನ್ಯ ಮಟ್ಟ ಮಿತಿ ಮೀರಿರುವಾಗ, ಗಲಭೆಜಗಳಗಳು ಬದುಕಿನ ಹಾಸುಹೊಕ್ಕಾಗಿರುವಾಗ- ಈ ಜೀವನದ ಎಲ್ಲ ಜಂಜಡ ಕಳೆದು ಎಲ್ಲಾದರೂ ದೂರ ಹೋಗಿ ಇರೋಣ ಎಂದು ಬಹಳಷ್ಟು ಬಾರಿ ಎಲ್ಲರಿಗೂ ಅನಿಸುತ್ತದೆ. ಆ ದೂರವೆಂಬುದು ಚಂದ್ರನಷ್ಟು ದೂರವಾದರೆ ಹೇಗಿರಬಹುದು? ಯಾವ ರಗಳೆಯೂ ಇಲ್ಲ. ನಮ್ಮದೇ ಪ್ರಪಂಚ- ಅದೂ ಕೆಲ ಸಾವಿರಗಳಲ್ಲಿ ಕೊಳ್ಳಬಹುದಾದದ್ದು!
ವಾವ್, ಚಂದ್ರನ ಮೇಲೆ ಜಮೀನು ಖರೀದಿಸುವ ಐಡಿಯಾವೇ ಎಂಥ ರಮ್ಯ ಕಲ್ಪನೆಯಲ್ಲವೇ? ಆದರೆ, ಇದು ಕೇವಲ ಕಲ್ಪನೆಯಷ್ಟೇ, ಏಕೆಂದರೆ ನಮ್ಮ ಖುಷಿಗಾಗಿ ಚಂದ್ರನ ಮೇಲೆ ಜಾಗ ಖರೀದಿಸಬಹುದು, ಆದರೆ ಅಲ್ಲಿ ಹೋಗಿ ಇರಲಾಗುವುದಿಲ್ಲ.
ಸುಶಾಂತ್ ಕೂಡಾ ಅಷ್ಟೇ, ಕಾನೂನಾತ್ಮಕವಾಗಿಯೇ ಚಂದ್ರನಲ್ಲಿ ಜಾಗ ಖರೀದಿಸಿದ್ದ. ಆದರೆ, ಈ ಆಸ್ತಿ, ಕೇವಲ ಪೇಪರ್‌ಗೆ ಸೀಮಿತವಷ್ಟೇ. ಚಂದ್ರನಲ್ಲಿ ಜಾಗ ಖರೀದಿಸುವ ಖುಷಿಗಾಗಿ ನೀವು ಕೇವಲ ಪೇಪರ್‌ಗೆ ಒಂದಿಷ್ಟು ಡಾಲರ್ ಹಣ ತೆರಬೇಕಾಗುತ್ತದೆ. ಲೂನಾ ಸೊಸೈಟಿ ಇಂಟರ್‌ನ್ಯಾಷನಲ್‌ನಿಂದ ಸುಶಾಂತ್ ಖರೀದಿಸಿದ್ದು 3 ಎಕರೆ ಜಮೀನನ್ನು. ಸುಶಾಂತ್‌ಗೆ ಇದರಿಂದ ಸಿಕ್ಕಿದ್ದು ಒಂದಿಷ್ಟು ಪಬ್ಲಿಸಿಟಿ, ಜೊತೆಗೆ ನನ್ನ ಜಾಗ ಚಂದ್ರನಲ್ಲೂ ಇದೆ ಎಂಬ ಕಲ್ಪನೆಯ ಖುಷಿಯಷ್ಟೇ. ಆತನ ಬಳಿ ಜಗತ್ತಿನ ಅತಿ ಕಾಸ್ಟ್ಲಿ ಟೆಲಿಸ್ಕೋಪ್‌ಗಳಲ್ಲೊಂದು ಕೂಡಾ ಇದ್ದು, ಅದರಲ್ಲಿ ಆತ ನೈಸರ್ಗಿಕ ಉಪಗ್ರಹದಲ್ಲಿದ್ದ ತನ್ನ ಜಮೀನನ್ನು ನೋಡಿ ಖುಷಿ ಪಟ್ಟಿರಲಿಕ್ಕೂ ಸಾಕು.
ಅಂತರಿಕ್ಷದಲ್ಲಿ ಸ್ಥಳ ಖರೀದಿ ಸಾಧ್ಯವಿಲ್ಲ
ಚಂದ್ರ ಸೇರಿದಂತೆ ಭೂಮಿಯ ಹೊರತಾಗಿ ಅಂತರಿಕ್ಷದ ಇನ್ನಾವುದೇ ಗ್ರಹದಲ್ಲಿ ಅಂದರೆ ಯಾವ ದೇಶಕ್ಕೂ ಸೇರದ ಪ್ರಾಂತ್ಯದಲ್ಲಿ ಸ್ಥಳ ಖರೀದಿಸಲು ಅವಕಾಶವಿಲ್ಲ ಎನ್ನುತ್ತದೆ 1967ರ ದಿ ಔಟರ್ ಸ್ಪೇಸ್ ಟ್ರೀಟಿ. ಅವೆಲ್ಲ ಏನಿದ್ದರೂ ಎಲ್ಲರಿಗಾಗಿ ಇರುವುದು. ಯಾರೋ ಒಬ್ಬರು ಅದರ ಮಾಲೀಕತ್ವ ವಹಿಸಲು ಸಾಧ್ಯವಿಲ್ಲ ಎನ್ನುವುದು ಅದರ ಸಾರಾಂಶ. ಇದಕ್ಕೆ 104 ದೇಶಗಳು ಸಹಿ ಹಾಕಿವೆ. ಆದರೆ, ಈ ಟ್ರೀಟಿ ಕೇವಲ ರಾಷ್ಟ್ರಗಳಿಗೆ ಸಂಬಂಧಿಸಿದ್ದು, ವ್ಯಕ್ತಿಗತವಾಗಿಲ್ಲ ಎಂದು ಕೆಲ ವೆಬ್‌ಸೈಟ್‌ಗಳು ಹೇಳುತ್ತಾ, ಚಂದ್ರನ ಮೇಲಿನ ಜಾಗವನ್ನು ಮಾರಾಟ ಮಾಡುವಲ್ಲಿ ತೊಡಗಿವೆ. ಅವು ಮಾಡುವುದಿಷ್ಟೇ, ಜಾಗದ ಚಿತ್ರ, ಚಂದ್ರನ ಯಾವ ಭಾಗ, ಎಷ್ಟು ಭಾಗ ನಿಮಗೆ ನೀಡಲಾಗಿದೆ ಎಂದು ಹೇಳುತ್ತಾ, ಆ ಕುರಿತ ಸರ್ಟಿಫಿಕೇಟ್ ನೀಡುವುದು. ಇದಕ್ಕಾಗಿ ನೀವು ಸುಮಾರು 2300 ರುಪಾಯಿಗಳಷ್ಟು ಹಣ ತೆರಬೇಕು ಅಷ್ಟೇ. ಬಳಿಕ ಆ ಸರ್ಟಿಫಿಕೇಟ್‌ನ್ನು ಲ್ಯಾಮಿನೇಶನ್ ಮಾಡಿಸಿ ಮನೆಯ ಲಿವಿಂಗ್ ಹಾಲ್‌ನಲ್ಲಿ ಹಾಕಿಕೊಂಡು ಹೆಮ್ಮೆ ಪಡಬಹುದು.
ವಿಭಿನ್ನ ಉಡುಗೊರೆ
ಸಾಮಾನ್ಯವಾಗಿ ಜನರು ಇದನ್ನು ವಿಭಿನ್ನವಾದ ಉಡುಗೊರೆ ನೀಡಬೇಕೆಂದು ಬಯಸಿ ಕೊಂಡುಕೊಡುತ್ತಾರಷ್ಟೆಯೇ ಹೊರತು ಅದು ನನ್ನದೇ ಎಂದು ಕಾನೂನಿನಲ್ಲಿ ಕೇಳುವಂತಿಲ್ಲ. ಕೇವಲ ಚಂದ್ರನ ಮೇಲಿನ ಜಾಗವನ್ನಲ್ಲ, ನಕ್ಷತ್ರಗಳಿಗೆ ನಮಗಿಷ್ಟ ಬಂದವರ ಹೆಸರಿಡುವುದು- ಆ ಸರ್ಟಿಫಿಕೇಟ್ ಹೊಂದುವುದು ಕೂಡಾ ಸಾಧ್ಯವಿದೆ. ಸಾಮಾನ್ಯವಾಗಿ ದಿನಕ್ಕೆ 30 ಜನ ಹೀಗೆ ಸ್ಥಳ ಕೊಳ್ಳುತ್ತಾರೆ. ವ್ಯಾಲೆಂಟೈನ್ಸ್ ಡೇ, ಮದರ್ಸ್ ಡೇ ಸಂದರ್ಭದಲ್ಲಿ ಈ ಸಂಖ್ಯೆ ಹೆಚ್ಚುತ್ತದಂತೆ.
ಮಾರಾಟ ಮಾಡುವುದು ಕಾನೂನಾತ್ಮಕವೇ?
ಈ ಕೆಲಸಕ್ಕೆ ನಯಾಪೈಸೆ ಕಾನೂನಿನ ಮಾನ್ಯತೆಯಿಲ್ಲದ ಕಾರಣ ಸರಕಾರ ಈ ಬಗ್ಗೆ ತಲೆಯೇ ಕೆಡಿಸಿಕೊಳ್ಳಲ್ಲ. ಜನರ ಹಣೆಬರಹ, ಎಮೋಷನ್ಸ್, ಮೂರ್ಖತನಕ್ಕೆ ಸಂಬಂಧಿಸಿದ್ದು ಎಂದು ಬಿಟ್ಟುಬಿಡುತ್ತದೆ. ಸುಶಾಂತ್‌ಗೆ ಜಮೀನು ಮಾರಿದವರು ಕೂಡಾ ಮಾಲೀಕರಲ್ಲ. ಇದು ಸುಮ್ಮನೆ ಫ್ಯಾಂಟಸಿಯೊಂದರಿಂದ ದುಡ್ಡು ಮಾಡಿಕೊಳ್ಳುವ ದಂಧೆಯಷ್ಟೇ. ಇದರಲ್ಲಿ ಮೋಸ, ಕಾನೂನಿನ ಪ್ರಶ್ನೆ ಬರುವುದು ನಾವಲ್ಲಿ ಹೋಗಿ ಇರತೊಡಗಿದಾಗ ಮಾತ್ರ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.