ಸಂಬಂಧವೊಂದರಲ್ಲಿ ಮುಂದುವರಿಯುವ ಮುಂಚೆ ಅದು ಕೊಡುವ ರೆಡ್ ಸಿಗ್ನಲ್‌ಗಳನ್ನು ಗಮನಿಸಿ. ಆಗ ಅದು ಧೀರ್ಘಕಾಲೀನವಾಗಿರಬಲ್ಲದೆ ಎಂಬುದು ತಿಳಿಯುತ್ತದೆ.
ಆರಂಭದಲ್ಲಿ ಎಲ್ಲವೂ ಚೆನ್ನಾಗೇ ಇರುತ್ತದೆ. ನಿಮಗೆ ಸಿಕ್ಕಂಥ ಜೋಡಿ ಇನ್ನೊಬ್ಬರಿಗೆ ಸಿಕ್ಕಲು ಸಾಧ್ಯವೇ ಇಲ್ಲವೆನ್ನುವಷ್ಟು ಎಲ್ಲವೂ ವಿಶೇಷವೆನಿಸುತ್ತದೆ. ಬರಬರುತ್ತಾ ಎಲ್ಲ ಹಳತಾಗುತ್ತದೆ. ಅಯ್ಯೋ ಎಲ್ಲಿ ಸಿಕ್ಕಿಕೊಂಡುಬಿಟ್ಟೆ ಎಂದೂ ಎನಿಸಬಹುದು. ಹೀಗನಿಸಲು ಸಂಬಂಧ ಹಳಿ ತಪ್ಪುತ್ತಿರುವುದೇ ಕಾರಣವಿರಬಹುದು. ಸಂಬಂಧ ಹಳಿ ತಪ್ಪುವಾಗ ಅಲ್ಲಿ ಹಲವು ರೆಡ್ ಫ್ಲ್ಯಾಗ್‌ಗಳು ಕಾಣಿಸಿಕೊಂಡು ನಿಮಗೆ ಎಚ್ಚರಿಕೆ ಕೊಡಬಹುದು. ಅವನ್ನು ಕಡೆಗಣಿಸಿದಿರಾದಲ್ಲಿ ಸಮಯ ಕಳೆದಂತೆ ನಿಮಗೆ ದೊಡ್ಡ ಪೆಟ್ಟು ಬೀಳಬಹುದು. ಹಾಗಾಗಿ, ರೆಡ್ ಫ್ಲ್ಯಾಗ್‌ಗಳನ್ನು ಗುರುತಿಸುವುದು ಮುಖ್ಯ. ಅಂಥ ರೆಡ್ ಫ್ಲ್ಯಾಗ್‌ಗಳು ಇವಿರಬಹುದು...
ತನ್ನ ತಾನು ಎಷ್ಟು ಹೊಗಳಿಕೊಂಡರೂ ಮುಗಿಯಲ್ಲ
ನಿಮ್ಮ ಸಂಗಾತಿ ಅಥವಾ ನಿಮಗೆ ನಿಮ್ಮ ಸಾಧನೆಗಳ ಬಗ್ಗೆ ಗೊತ್ತಿರುವುದು ಸಂತೋಷವೇ. ಆ ಬಗ್ಗೆ ಹೆಮ್ಮೆ ಇರುವುದರಲ್ಲೂ ತಪ್ಪಿಲ್ಲ. ಆದರೆ, ತನ್ನನ್ನು ತಾನು ಅತಿಯಾಗಿ ಹೊಗಳಿಕೊಳ್ಳುವ ಗೀಳಿದ್ದಲ್ಲಿ ಮಾತ್ರ ಸಹಿಸಿಕೊಳ್ಳುವುದು ಕಷ್ಟ ಕಷ್ಟ. ಯಾವ ಮಾತನ್ನು ಬೇಕಾದರೂ ತನ್ನ ತಾನು ಹೊಗಳಿಕೊಳ್ಳುವುದಕ್ಕೆ ತಿರುಗಿಸಿಬಿಡಬಲ್ಲ ಚತುರತೆ ಇವರದು. ತನ್ನನ್ನು ತಾನು ಪರ್ಫೆಕ್ಟ್ ಎಂದೂ, ಜೀವನದಲ್ಲಿ ಅತ್ಯುತ್ತಮವಾದ ಎಲ್ಲವನ್ನೂ ಮಾಡಿರುವುನೆಂದೂ ಬಗೆದಿರುತ್ತಾರೆ. ತಮ್ಮ ಯಾವೊಂದು ತಪ್ಪುಗಳನ್ನೂ ಒಪ್ಪಿಕೊಳ್ಳುವವ ಜಾಯಮಾನದವರಲ್ಲ. ಇಂಥ ನಡುವಳಿಕೆ ಯಾರಿಂದ ಬಂದರೂ ಅದು ಸಂಬಂಧದಲ್ಲಿ ರೆಡ್ ಫ್ಲ್ಯಾಗೇ.
ಪದೇ ಪದೆ ಬದಲಾಗುವ ಮೂಡ್
ಆಗಾಗ ಎಲ್ಲರ ಮೂಡ್ ಕೂಡಾ ಬದಲಾಗುತ್ತಿರುತ್ತದೆ. ಒಮ್ಮೆ ಖುಷಿ, ಮತ್ತೊಮ್ಮೆ ಬೇಜಾರು ಎಲ್ಲವೂ ಸಹಜವೇ. ಆದರೆ, ಕ್ಷಣ ಚಿತ್ತ ಕ್ಷಣ ಪಿತ್ತವಾದರೆ ಮಾತ್ರ ಅಂಥ ವರ್ತನೆ ಸಹಿಸಲಸಾಧ್ಯ. ಈಗ ನಗುತ್ತಿರುವವರು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಅಳುವುದು, ಸಿಟ್ಟು ಮಾಡುವುದು, ಅತಿ ಪ್ರೀತಿ, ಅತಿ ಕೋಪ - ಹೀಗೆ ಎಲ್ಲವೂ ಅತಿಯೇ ಆಗಿದ್ದರೆ ಅವರೊಂದಿಗೆ ಸಂಬಂಧ ಜೀವನಪೂರ್ತಿ ನಡೆಸುವುದು ಕಷ್ಟಸಾಧ್ಯವೇ. ಇಂಥ ಸಂಬಂಧಕ್ಕೆ ಆರಂಭದಲ್ಲೇ ಬೈಬೈ ಹೇಳುವುದು ಇಲ್ಲದಿದ್ದರೆ ಅವರಿಗೆ ಕೌನ್ಸೆಲಿಂಗ್ ಕೊಡಿಸುವುದು ಮುಖ್ಯ.
ಹೊಂದಾಣಿಕೆಗೆ ಸಿದ್ಧವಿಲ್ಲ
ಯಾವಾಗಲೂ ಎಲ್ಲ ವಿಷಯಕ್ಕೂ ನೀವೇ ಹೊಂದಿಕೊಳ್ಳಬೇಕು, ಬಾಗಿ ಹೋಗಬೇಕು ಎಂದರೆ ಅಂಥ ಸಂಬಂಧ ಹೆಚ್ಚು ಕಾಲ ನಿಲ್ಲಲಾರದು. ಯಾವ ಸಂಬಂಧವಾದರೂ ಇಬ್ಬರೂ ಹೊಂದಿಕೊಂಡು ಹೋಗುತ್ತಿದ್ದರೆ. ಇಬ್ಬರೂ ಬೇಕಾದಾಗ ಬಾಗಿ ನಡೆದರೆ ಅದು ಹೆಚ್ಚು ಕಾಲ ಉಳಿಯುತ್ತದೆ. ನಿಮ್ಮ ಪಾರ್ಟ್ನರ್ ಹೊಂದಿಕೊಳ್ಳಲು ರೆಡಿಯಿಲ್ಲ ಎಂಬುದು ಆರಂಭದಲ್ಲೇ ತಿಳಿದು ಬಂದರೆ, ಅವರಲ್ಲಿ ಪಾಸಿಟಿವ್ ಬದಲಾವಣೆಗಳನ್ನು ತರಲು ಸಾಧ್ಯವೇ ಎಂದು ಯೋಚಿಸಿ. ಅದು ಸಾಧ್ಯವಿಲ್ಲವೆನಿಸಿದರೆ ನಿಮ್ಮ ಬದುಕಿನ ನಿರ್ಧಾರ ನೀವು ತೆಗೆದುಕೊಳ್ಳಬಹುದು.
ನಿಮ್ಮನ್ನು ಕುಟುಂಬ, ಸ್ನೇಹಿತರಿಗೆ ಪರಿಚಯಿಸುತ್ತಿಲ್ಲ
ಪ್ರೀತಿಯ ಆರಂಭದಲ್ಲಿ ಯಾರೂ ತಮ್ಮ ಗೆಳೆಯರನ್ನು, ಸ್ನೇಹಿತರನ್ನು ಪರಿಚಯಿಸುವುದಿಲ್ಲ. ಆದರೆ, ಎಷ್ಟು ಸಮಯ ಕಳೆದರೂ ಅಂಥ ವರ್ತನೆ ನಿಮ್ಮ ಪ್ರೇಮಿಯಿಂದ ಬರದಿದ್ದಲ್ಲಿ ಈ ವಿಷಯವನ್ನು ನೀವು ಗಂಭೀರವಾಗಿಯೇ ಪರಿಗಣಿಸಬೇಕು. ಇದೂ ಕೂಡಾ ನೀವು ಎಚ್ಚೆತ್ತುಕೊಳ್ಳಬೇಕಾದ ನಡೆ.
ಪರ್ಸನಲ್ ಸ್ಪೇಸ್ ಎಂದರೇನೆಂದೇ ಗೊತ್ತಿಲ್ಲ
ಸಂಬಂಧದಲ್ಲಿದ್ದರೂ, ಇಲ್ಲದಿದ್ದರೂ ಪ್ರತಿಯೊಬ್ಬರಿಗೂ ಪರ್ಸನಲ್ ಸ್ಪೇಸ್ ಎಂಬುದು ಅಗತ್ಯ. ಒಂದು ವೇಳೆ ನಿಮ್ಮ ಪಾರ್ಟ್ನರ್ ಸದಾ ಕಾಲ ನಿಮ್ಮೊಂದಿಗಿರಬೇಕೆಂದು ಒಂದು ಕ್ಷಣವೂ ನಿಮಗೆ ಪ್ರೈವೆಸಿಯನ್ನೇ ಕೊಡದಿದ್ದರೆ ಅಥವಾ ಪರ್ಸನಲ್ ಸ್ಪೇಸ್ ಎಂಬುದರ ಅರಿವೇ ಇಲ್ಲದಿದ್ದರೆ ಅಂಥವರೊಂದಿಗೆ ಬಾಳುವುದು ಕಷ್ಟ. ನೀವು ಪ್ರಾಜೆಕ್ಟ್ ಒಂದನ್ನು ಮುಗಿಸಬೇಕೆಂದರೂ ಬಿಡದೆ ಸದಾ ನಿಮ್ಮ ಅಟೆನ್ಷನ್ ಬೇಕೇ ಬೇಕೆನ್ನುತ್ತಿದ್ದರೆ ಇದು ಖಂಡಿತಾ ರೆಡ್ ಫ್ಲ್ಯಾಗ್.
ನೀವು ಹಾಗೂ ನಿಮ್ಮವರನ್ನು ದೂರುತ್ತಿದ್ದರೆ
ಯಾರೂ ಕೂಡಾ ಪರ್ಫೆಕ್ಟ್ ಅಲ್ಲ. ಒಮ್ಮೊಮ್ಮೆ ನಿಮ್ಮ ಅಥವಾ ನಿಮ್ಮವರ ಬಗ್ಗೆ ಪಾರ್ಟ್ನರ್ ದೂರಿದರೆ ಅದು ತಪ್ಪೂ ಅಲ್ಲ. ಆದರೆ, ಪದೇ ಪದೆ ಅದೇ ಮುಂದುವರೆದು ಚಾಳಿಯಾದರೆ, ನಿಮ್ಮೆಲ್ಲ ಯೋಚನೆ, ಮಾತು, ನಡತೆಯನ್ನೂ ದೂರತೊಡಗಿದರೆ, ಅಣಕಿಸತೊಡಗಿದರೆ - ಈ ರೆಡ್ ಫ್ಲ್ಯಾಗನ್ನು ಕಡೆಗಣಿಸಬೇಡಿ.