ಝೀರೋ ವೇಸ್ಟ್ ಅಡುಗೆಮನೆ ನಿಮ್ಮದಾಗಬೇಕೆ? ಇಲ್ಲಿವೆ ನೋಡಿ ಟಿಪ್ಸ್
ಅಡುಗೆಮನೆಯ ವ್ಯವಸ್ಥಿತ ನಿರ್ವಹಣೆಯಿಂದ ತಿಂಗಳ ಬಜೆಟ್‍ನಲ್ಲಿ ಒಂದಿಷ್ಟು ಉಳಿಕೆಯಾಗುವ ಜೊತೆ ಮನಸ್ಸಿಗೂ ತೃಪ್ತಿ, ಪರಿಸರಕ್ಕೂ ಹಿತ. ಇಂಥ ಝೀರೋ ವೇಸ್ಟ್ ಕಿಚನ್ ನಿಮ್ಮದಾಗಲು ಒಂದಿಷ್ಟು ಯೋಜನೆ ಹಾಗೂ ಅನುಷ್ಠಾನ ಅಗತ್ಯ.
ಮಹಿಳೆಯರು ಅಡುಗೆಮನೆಯಲ್ಲೇ ಹೆಚ್ಚಿನ ಸಮಯ ಕಳೆಯುತ್ತಾರೆ. ಮನಸ್ಸು ಮಾಡಿದ್ರೆ ಕುಟುಂಬದ ಖರ್ಚು-ವೆಚ್ಚವನ್ನು ಅಡುಗೆಮನೆಯಿಂದಲೇ ನಿಯಂತ್ರಿಸಲು ಸಾಧ್ಯವಿದೆ. ಈಗಲೂ ಕೆಲವು ಅಮ್ಮಂದಿರ ಹಣದ ಸೇಫ್ ಲಾಕರ್ ಅಡುಗೆ ಮನೆಯಲ್ಲೇ ಇರುತ್ತೆ. ಅಲ್ಲಿರುವ ಹತ್ತಾರು ಡಬ್ಬಾಗಳಲ್ಲಿ ಯಾವುದೋ ಒಂದರಲ್ಲಿ ಅಮ್ಮನ ಸೇವಿಂಗ್ಸ್ ಇರುತ್ತೆ. ಅಡುಗೆಮನೆಯಲ್ಲಿ ಬಳಕೆಯಾಗುವ ಪ್ರತಿ ವಸ್ತುವನ್ನು ವ್ಯರ್ಥ ಮಾಡದೆ ಬಳಸುವ ಕಲೆ ಮಹಿಳೆಗೆ ಗೊತ್ತಿದ್ರೆ ತಿಂಗಳ ಬಜೆಟ್‍ನಲ್ಲಿ ಒಂದಿಷ್ಟು ಉಳಿತಾಯ ಮಾಡಬಹುದು. ಸಮರ್ಪಕ ಯೋಜನೆ ಹಾಗೂ ಅನುಷ್ಠಾನದಿಂದ ಝಿರೋ ವೇಸ್ಟ್ ಕಿಚನ್ ನಿಮ್ಮದಾಗಿಸಿಕೊಳ್ಳಬಹುದು.ಇದ್ರಿಂದ ನಿಮ್ಮ ಹಣ ಮಾತ್ರ ಉಳಿಯೋದಿಲ್ಲ,ಬದಲಿಗೆ ಪರಿಸರಕ್ಕೂ ಹಿತ. ಹಾಗಾದ್ರೆ ಝಿರೋ ವೇಸ್ಟ್ ಕಿಚನ್ ರೂಪಿಸೋದು ಹೇಗೆ? ಅದಕ್ಕಾಗಿ ಏನೆಲ್ಲ ಮಾಡಬಹುದು?
ಲಾಕ್‌ಡೌನ್ ಟೈಮಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಬಿಸ್ಕತ್ ಇದು
ಕುಕ್ಕರ್ ಬಳಕೆ ಹೆಚ್ಚಿಸಿ
ಅಡುಗೆಮನೆಯಲ್ಲಿ ಕುಕ್ಕರ್ ಬಳಕೆ ಹೆಚ್ಚಿದಷ್ಟೂ ಅಡುಗೆ ಅನಿಲದ ಉಳಿತಾಯವಾಗುತ್ತದೆ.ಇದ್ರಿಂದ ತಿಂಗಳ ಬಜೆಟ್ ತಗ್ಗುವ ಜೊತೆ ತರಕಾರಿ, ಧಾನ್ಯಗಳು ಸೇರಿದಂತೆ ಕುಕ್ಕರ್‍ನಲ್ಲಿ ಬೇಯಿಸಿದ ಆಹಾರಗಳಲ್ಲಿರುವ ಪೌಷ್ಟಿಕಾಂಶಗಳು ನಷ್ಟವಾಗೋದಿಲ್ಲ. ಕುಕ್ಕರ್ ಬಳಕೆ ಖರ್ಚು ತಗ್ಗಿಸಿ ಕುಟುಂಬ ಸದಸ್ಯರ ಆರೋಗ್ಯ ಸಂರಕ್ಷಿಸುತ್ತದೆ.ಇನ್ನು ಅಡುಗೆ ಅನಿಲದ ಕಡಿಮೆ ಬಳಕೆಯಿಂದ ಪರಿಸರ ಕಾಳಜಿಯನ್ನೂ ತೋರಿದಂತಾಗುತ್ತದೆ.
ಅಗತ್ಯಕ್ಕೆ ತಕ್ಕಷ್ಟೇ ಸಾಮಗ್ರಿ ಖರೀದಿಸಿ
ದಿನಸಿ ಸಾಮಗ್ರಿಗಳನ್ನು ಆಗಾಗ ಖರೀದಿಸುವ ಬದಲು ವಾರಕ್ಕೋ, ತಿಂಗಳಿಗೋ ಒಮ್ಮೆ ಖರೀದಿಸೋದು ಉತ್ತಮ. ಜಾಸ್ತಿ ಸಾಮಗ್ರಿಗಳನ್ನು ಒಟ್ಟಿಗೆ ಖರೀದಿಸೋದ್ರಿಂದ ಒಂದಿಷ್ಟು ಹಣವೂ ಉಳಿತಾಯವಾಗುತ್ತದೆ. ಅಲ್ಲದೆ, ತಿಂಗಳಿಗೆ ಎಷ್ಟು ಸಾಮಗ್ರಿ ಬೇಕಾಗುತ್ತದೆ, ಎಷ್ಟು ಖರ್ಚಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಸಿಗುತ್ತದೆ.ಇದ್ರಿಂದ ಪ್ರತಿ ತಿಂಗಳು ಅಡುಗೆಮನೆಯಲ್ಲಿ ಬೇಳೆಕಾಳುಗಳು ಸೇರಿದಂತೆ ಕೆಲವು ಸಾಮಗ್ರಿಗಳು ಹಾಳಾಗೋದನ್ನು ತಪ್ಪಿಸಬಹುದು.ತರಕಾರಿಗಳನ್ನು ಖರೀದಿಸುವಾಗ ಮನೆಯಲ್ಲಿರುವ ಸದಸ್ಯರ ಸಂಖ್ಯೆ ಗಮನದಲ್ಲಿರಲಿ. ಇಬ್ಬರು ಇರುವ ಮನೆಗೆ ಒಂದೇ ತರಕಾರಿಯನ್ನು ಕೆಜಿಗಟ್ಟಲೆ ಖರೀದಿಸಿದ್ರೆ ಹಾಳಾಗುವ ಸಾಧ್ಯತೆ ಹೆಚ್ಚು. ಯಾವ ತರಕಾರಿ ಬೇಗ ಹಾಳಾಗುತ್ತೋ ಅದನ್ನು ಮೊದಲು ಹಾಗೂ ಕೆಡದ ತರಕಾರಿಗಳನ್ನು ನಂತರ ಬಳಸುವಂತೆ ಪ್ಲ್ಯಾನ್ ಮಾಡಿ.
ಕ್ಯಾಲ್ಸಿಯಂ ಮಾತ್ರೆ ತೆಗೆದುಕೊಂಡರೆ ಹಾರ್ಟ್ ಅಟ್ಯಾಕ್ ಸಾಧ್ಯತೆ ಹೆಚ್ಚು!
ಪ್ಲಾಸ್ಟಿಕ್ ಡಬ್ಬಗಳ ಬಳಕೆ ನಿಲ್ಲಿಸಿ
ಬಹುತೇಕರ ಅಡುಗೆಮನೆ ಪ್ಲಾಸ್ಟಿಕ್ ಡಬ್ಬಗಳಿಂದಲೇ ಅಲಂಕರಿಸಲ್ಪಟ್ಟಿರುತ್ತದೆ. ಆದ್ರೆ ಪ್ಲಾಸ್ಟಿಕ್ ಡಬ್ಬಗಳು ಅಥವಾ ಪ್ಲೇಟ್ ಮುಂತಾದವು ದೀರ್ಘಕಾಲ ಬಾಳಿಕೆ ಬರೋದಿಲ್ಲ. ಇವುಗಳು ಬೇಗ ಬಣ್ಣ ಮಾಸುವ ಕಾರಣ ಆಗಾಗ ಬದಲಾಯಿಸಬೇಕಾಗುತ್ತದೆ. ಅಲ್ಲದೆ, ಆರೋಗ್ಯ ದೃಷ್ಟಿಯಿಂದಲೂ ಪ್ಲಾಸ್ಟಿಕ್ ಬಳಕೆ ಒಳ್ಳೆಯದ್ದಲ್ಲ. ಪದೇಪದೆ ಪ್ಲಾಸ್ಟಿಕ್ ಡಬ್ಬಗಳನ್ನು ಬದಲಾಯಿಸೋದ್ರಿಂದ ಹಣ ಕೂಡ ವೇಸ್ಟ್. ಆದಕಾರಣ ಪ್ಲಾಸ್ಟಿಕ್ ಬದಲಿಗೆ ಸ್ಟೀಲ್ ಅಥವಾ ಗಾಜಿನ ಡಬ್ಬಗಳನ್ನು ಬಳಸಿ. ಪ್ಲಾಸ್ಟಿಕ್‍ಗೆ ಹೋಲಿಸಿದ್ರೆ ಸ್ಟೀಲ್ ಹಾಗೂ ಗಾಜಿನ ಡಬ್ಬಗಳು ದುಬಾರಿ ನಿಜ. ಆದ್ರೆ ಇವುಗಳಿಗೆ ಒನ್‍ಟೈಂ ಇನ್ವೆಸ್ಟ್ ಮಾಡಿದ್ರೆ ಸಾಕು, ದೀರ್ಘ ಬಾಳಿಕೆ ಬರುತ್ತವೆ. ಅಲ್ಲದೆ, ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಕಾರ. ಇನ್ನು ಅಡುಗೆಮನೆಯ ಸೆಲ್ಫ್‍ಗಳಲ್ಲಿ ಗಾಜಿನ ಡಬ್ಬಗಳಿದ್ರೆ ಅವುಗಳನ್ನು ನೋಡೋದೆ ಚೆಂದ. ಯಾವ ಸಾಮಗ್ರಿ ಯಾವ ಡಬ್ಬದಲ್ಲಿದೆ ಎಂದು ತಡಕಾಡುವ ಪ್ರಮೇಯವೂ ಎದುರಾಗೋದಿಲ್ಲ.
ಟಿಶ್ಯೂ ಬದಲಿಗೆ ಬಟ್ಟೆ ಬಳಸಿ
ಅಡುಗೆಮನೆಯ ಕಟ್ಟೆಗಳನ್ನು ಕ್ಲೀನ್ ಮಾಡಲು ಕೆಲವರು ಟಿಶ್ಯೂ ಬಳಸುತ್ತಾರೆ. ಅಡುಗೆಮನೆಯಲ್ಲಿ ಆಗಾಗ ಕ್ಲೀನ್ ಮಾಡುತ್ತಲೇ ಇರಬೇಕಾಗುವ ಕಾರಣ ದಿನಕ್ಕೆ ಸಾಕಷ್ಟು ಟಿಶ್ಯೂಗಳು ಬೇಕಾಗಬಹುದು. ಇದ್ರಿಂದ ಹಣವೂ ವೇಸ್ಟ್ ಜೊತೆ ತ್ಯಾಜ್ಯವೂ ಹೆಚ್ಚು. ಕಾಟನ್ ಬಟ್ಟೆ ಅಥವಾ ಮೈಕ್ರೋಫೈಬರ್ ಬಳಸಿದ್ರೆ ಈ ಸಮಸ್ಯೆಯಿಲ್ಲ.
ಮರುಬಳಕೆ ಬ್ಯಾಗ್ ಬಳಸಿ
ದಿನಸಿ, ತರಕಾರಿಗಳನ್ನು ಖರೀದಿಸಲು ಹೋಗುವಾಗ ಬಟ್ಟೆ ಬ್ಯಾಗ್‍ಗಳನ್ನೇ ಬಳಸಿ. ಇದ್ರಿಂದ ಪ್ಲಾಸ್ಟಿಕ್ ಬಳಕೆ ತಗ್ಗುತ್ತದೆ. ಅಲ್ಲದೆ, ಕಿಚನ್‍ನಲ್ಲಿ ಪ್ಲಾಸ್ಟಿಕ್ ಬ್ಯಾಗ್‍ಗಳು ರಾಶಿ ಬೀಳೋದು ಕೂಡ ತಪ್ಪುತ್ತೆ.
ಕಾಂಪೋಸ್ಟ್ ತಯಾರಿಸಿ
ತರಕಾರಿಗಳು ಹಾಗೂ ಹಣ್ಣಿನ ಸಿಪ್ಪೆಗಳು, ಮೊಟ್ಟೆ ಚಿಪ್ಪು ಮುಂತಾದವು ನಿಮ್ಮನೆಯಲ್ಲಿರುವ ಗಿಡಗಳಿಗೆ ಉತ್ತಮ ಗೊಬ್ಬರವಾಗಬಲ್ಲವು. ಇಂಥ ತ್ಯಾಜ್ಯಗಳನ್ನು ಡಸ್ಟ್ಬಿನ್‍ಗೆ ಎಸೆಯುವ ಬದಲು ಒಂದು ಡಬ್ಬದಲ್ಲಿ ಹಾಕಿ ಬಿಸಿಲಿಗಿಟ್ಟರೆ ಕಾಂಪೋಸ್ಟ್ ಸಿದ್ಧವಾಗುತ್ತೆ.