ತದಿಗೆಗೆ ಬರುವ ಮುದ್ದು ಮಂಗಳ ಗೌರಿ; ಇವತ್ತಿನ ವಿಶೇಷವೇನು?

By Web DeskFirst Published 12, Sep 2018, 10:51 AM IST
Highlights

ಇಂದು ಗೌರಿ ಹಬ್ಬದ ಸಂಭ್ರಮ. ಸುಮಂಗಲಿಯರು ಮತ್ತು ಅವಿವಾಹಿತ ಹೆಂಗೆಳೆಯರು ಉಪವಾಸ ಮಾಡಿ, ಗೌರಿಯ ಜೊತೆಗೆ ಗಂಗೆಯನ್ನು ಪೂಜಿಸುತ್ತಾರೆ. ಹತ್ತಿರ ಇರುವ ಕೆರೆ, ಹೊಳೆ ಇಲ್ಲವೇ ಬಾವಿ ಬಳಿ ತೆರಳಿ, ಮೂರರಿಂದ ಐದು ಚಿಕ್ಕ ಕಲ್ಲುಗಳನ್ನು ಮಣ್ಣಿನ ಗುಡ್ಡೆಯ ಮೇಲಿಟ್ಟು, ಹೂ ಮುಡಿಸಿ ಕುಂಕುಮ ಹಚ್ಚಿ ತಂಬಿಟ್ಟಿನ ಆರತಿ ಮಾಡಿ ಗಂಗೆ ಪೂಜೆ ಮಾಡುತ್ತಾರೆ.

ಬೆಂಗಳೂರು (ಸೆ. 12): ಹಬ್ಬ ಮನಸ್ಸಿಗೆ ಸಂತೋಷ ನೀಡುವ ಟಾನಿಕ್, ಜಂಜಡದ ಜೀವನಕ್ಕೆ ಬ್ರೇಕ್ ಹಾಕಿ ಎಲ್ಲವನ್ನೂ ಮರೆತು ಹಬ್ಬದಲ್ಲಿ ತನ್ಮಯರಾಗುವಂತೆ ಮಾಡುವ ಅದರ ಶಕ್ತಿ ಅನನ್ಯ. ಇಂದಿನ ಮಹಿಳೆಯರು ಎಷ್ಟೇ ಮಾಡರ್ನ್ ಆಗಿರಲಿ, ವರ್ಷಕ್ಕೊಮ್ಮೆ ಬರುವ ಗೌರಿ ಹಬ್ಬದಂದು ಪಕ್ಕಾ ಗೃಹಿಣಿಯಾಗಿ ಪೂಜಾ-ಕೈಂಕರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ಅಲ್ಲದೇ, ತವರಿನಿಂದ ಬರುವ ಬಾಗಿನಕ್ಕಾಗಿ ಕಾಯುತ್ತಾರೆ. ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳಿಗಂತೂ, ಪೂಜೆ ಉಡುಗೊರೆ ಹೀಗೆ ಸಡಗರ ದುಪ್ಪಟ್ಟು. ತಾನಿರುವ ಪತಿಯ ಮನೆ ಎಷ್ಟೇ ಶ್ರೀಮಂತವಾಗಿರಲಿ, ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಲೇ ಇರಲಿ ಆದರೆ, ಗೌರಿ ಹಬ್ಬದಂದು ಮಾತ್ರ ಪ್ರತಿ ಹೆಣ್ಣಿನ ಮನ ತವರನ್ನು ನೆನೆಯುತ್ತದೆ. ಬಾಗಿನದ ಹಾದಿ ಕಾಯುತ್ತದೆ. ಇದು ನ್ಯಾನೋ ಟೆಕ್ನಾಲಜಿ ಯುಗಕ್ಕೂ ಬದಲಾಗದು.

ಹೆಣ್ಣು ಮಕ್ಕಳು ಆಚರಿಸುವ ಹಬ್ಬಗಳು, ಮನಕ್ಕೆ ಖುಷಿ ನೀಡುತ್ತವೆ. ಕಾಸಗಲ ಕುಂಕುಮ, ಸೀರೆ, ಆಭರಣ ಧರಿಸಿ ಪೂಜಾ ಕಾರ್ಯಗಳಲ್ಲಿ ಮಗ್ನರಾಗಿ ಪುಟ್ಟ ಗೌರಿಯಂತೆ ಕಾಣುವ ಹೆಣ್ಣು ಮಕ್ಕಳನ್ನು ನೋಡಿದರೆ ಸಂತೋಷವಾಗುತ್ತದೆ. ಹಬ್ಬದ ಹೆಸರಿನಲ್ಲಾದರೂ ಸರಿಯೇ, ಸಂಪ್ರದಾಯ ಉಳಿಯುವಂತಾಗುತ್ತಿದೆಯಲ್ಲ! ಎಂಬುದೇ ಖುಷಿ ಎಂಬುದು ಹಿರಿಯರ ಅಭಿಪ್ರಾಯ.

ಹಳ್ಳಿಗಳ ಸೊಗಡಿನಲ್ಲಿ

ಸುಮಂಗಲಿಯರು ಮತ್ತು ಅವಿವಾಹಿತ ಹೆಂಗೆಳೆಯರು ಉಪವಾಸ ಮಾಡಿ, ಗೌರಿಯ ಜೊತೆಗೆ ಗಂಗೆಯನ್ನು ಪೂಜಿಸುತ್ತಾರೆ. ಹತ್ತಿರ ಇರುವ ಕೆರೆ, ಹೊಳೆ ಇಲ್ಲವೇ ಬಾವಿ ಬಳಿ ತೆರಳಿ, ಮೂರರಿಂದ ಐದು ಚಿಕ್ಕ ಕಲ್ಲುಗಳನ್ನು ಮಣ್ಣಿನ ಗುಡ್ಡೆಯ ಮೇಲಿಟ್ಟು, ಹೂ ಮುಡಿಸಿ ಕುಂಕುಮ ಹಚ್ಚಿ ತಂಬಿಟ್ಟಿನ ಆರತಿ ಮಾಡಿ ಗಂಗೆ ಪೂಜೆ ಮಾಡುತ್ತಾರೆ. ಜೊತೆಗೆ ಬಂದಿರುವ ಸುಮಂಗಲಿಯರು ಬಿಂದಿಗೆಯಲ್ಲಿ ನೀರು ತುಂಬಿಸಿ, ಅದಕ್ಕೂ ಗೌರಿ ಎಳೆ ಕಟ್ಟಿ ಪೂಜಿಸಿ ಮನೆಗೆ ಕರೆತರುತ್ತಾರೆ.

ನಂತರ ಮನೆಯಲ್ಲಿ ಕಳಸದ ಬಳಿ ಗಂಗೆಯನ್ನು ಇರಿಸಿ ಪೂಜಿಸಲಾಗುತ್ತದೆ. ಗೌರಿ ಸಮಾನರಾದ ಮುತ್ತೈದೆಯನ್ನು ಕುಳ್ಳಿರಿಸಿ, ಹಣೆಗೆ ಕುಂಕುಮವಿಟ್ಟು ಮಡಿಲಿಗೆ ಬಾಗಿನ ಹಾಕಲಾಗುತ್ತದೆ. ಬಾಗಿನದಲ್ಲಿ ಹಸರಿ ಬಳೆಗಳು, ಸೀರೆ ಇಲ್ಲವೇ ರವಿಕೆ ಕಣ, ಅರಿಷಿನ-ಕುಂಕುಮ, ಹಣ್ಣು ನಾಲ್ಕೆದು ಬಗೆ ತಿಂಡಿ-ತಿನಿಸುಗಳು, ಅಕ್ಕಿ ಸೇರಿದಂತೆ ಅನೇಕ ಮಂಗಳ ದ್ರವ್ಯಗಳ್ನು ಎರಡು ಮೊರದಲ್ಲಿ ಇರಿಸಿಲಾಗಿರುತ್ತದೆ. ಅರಿಷಿಣ ದಾರದಿಂದ ಮಾಡಿದ ಗೌರಿ ಎಳೆಯನ್ನು ಹೊಸದಾಗಿ ಮದುವೆಯಾದ ಹೆಣ್ಣಿಗೆ ಕಟ್ಟಿ, ತಂದ ಬಾಗಿನಕ್ಕೆ ಪೂಜೆ ಸಲ್ಲಿಸಿ ನೀಡಲಾಗುತ್ತದೆ.

ಹೊಸ ಬಟ್ಟೆ ತೊಟ್ಟು ಶ್ರೀಗೌರಿಯಲ್ಲಿ ತಮ್ಮ ಇಷ್ಟಾರ್ಥ ಸೇವೆಗಳ ಹರಕೆಯನ್ನಿಡುತ್ತಾರೆ. ಅವಿವಾಹಿತ ಹೆಂಗೆಳೆಯರು ಭವಿಷ್ಯದಲ್ಲಿ ಸೂಕ್ತ ವರನನ್ನು ಅನುಗ್ರಹಿಸುವಂತೆ ಕೋರುವುದು ಸಾಮಾನ್ಯ. ಇನ್ನು ಸುಮಂಗಲಿಯರು ತವರು ಮನೆಯ ಮತ್ತು ಗಂಡನ ಸುಖ -ಬಯಸಿ ಬಾಗಿನ ಕೊಟ್ಟು ದೇವಿಯಲ್ಲಿ ಕೃತಾರ್ಥರಾಗುತ್ತಾರೆ.

ನಗರದ ಬೀಡಿನಲ್ಲಿ

ನಗರ ಭಾಗದಲ್ಲಿ ಈ ಹಬ್ಬವನ್ನು ಸಾಂಕೇತಿಕವಾಗಿ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಹೆಂಗೆಳೆಯರು ಮತ್ತು ಸುಮಂಗಲಿಯರು, ದೇವಸ್ಥಾನಕ್ಕೆ ಹೋಗಿ ಪೂಜೆ ಪುನಸ್ಕಾರ ಮಾಡುತ್ತಾರೆ. ಬಾಗಿನ ಅರ್ಪಿಸುವುದು ಇದ್ದರೂ, ಅದು ಅಲ್ಲಲ್ಲಿ ಮಾತ್ರ ಕಂಡು ಬರುತ್ತದೆ. ನಗರೀಕರಣದ ಪ್ರಭಾವದಿಂದಾಗಿ, ಇಂತಹ ಹಬ್ಬಗಳು ನೇಪಥ್ಯಕ್ಕೆ ಸರಿಯುತ್ತಿವೆ.

ಈಗ ಸಮಯದ ಒತ್ತಡದಿಂದ ಬಾಗಿನದ ಬದಲು ಹಣವನ್ನು ಕಳುಹಿಸುತ್ತಿರುವ ಪದ್ಧತಿ ರೂಢಿಯಲ್ಲಿದೆಯಲ್ಲದೆ. ಈ ಬಾಗಿನ ಕೊಡುವ ಒಳ ಅರ್ಥ ಪ್ರತಿಯೊಬ್ಬರಲ್ಲೂ ಹಂಚಿಕೆಯ ಭಾವನೆಯುಂಟಾಗಲಿ ಎಂದು.  ಸೀರೆ, ಕುಪ್ಪುಸ, ಅರಿಶಿನ, ಕುಂಕುಮ, ಹಸಿರು ಬಳೆ, ಕಾಲುಂಗುರ, ಅರಿಶಿನದಾರ (ತಾಳಿಯ ಸಂಕೇತ), ಹೂ ಹಣ್ಣು, ಜೋಡಿ ತೆಂಗಿನಕಾಯಿ, ಸಿಹಿ ತಿಂಡಿಗಳು, ಅಕ್ಷತೆ ಕಾಳು, ಕಾಡಿಗೆ, ಬೆಳ್ಳಿಬಟ್ಟಲು ಮತ್ತು ಒಂದು ಜೊತೆ ಬಿದಿರಿನ ಮೊರ, ಇಷ್ಟೆಲ್ಲಾ ಪೂಜನೀಯ ವಸ್ತುಗಳು ಬಾಗಿನದಲ್ಲಿರುತ್ತದೆ.

ಸಕಲ ಸೌಭಾಗ್ಯದಾತೆ ಸ್ವರ್ಣಗೌರಿ

ಗೌರಿಯನ್ನು ಪೂಜಿಸುವುದರಿಂದ ಸರ್ವಾಭೀಷ್ಟಗಳನ್ನು ಕೊಡುತ್ತಾಳೆಂದು ಪುರಾಣಗಳು ಹೇಳುತ್ತದೆ. ಗೌರ (ಹಳದಿ - ಬಿಳುಪು ಮಿಶ್ರ) ವರ್ಣದ ಶರೀರದಿಂದ ಕೂಡಿದ ಪಾರ್ವತಿ ರೂಪಾಂತರವನ್ನು ತಳೆದುದರಿಂದ ಆಕೆಗೆ ಗೌರಿ ಎಂದು ಹೆಸರು ಬಂದಿದೆ. ಈ ವಿಚಾರವಾಗಿ ಒಂದು ಪೌರಾಣಿಕ ಕಥೆ ಹೀಗಿದೆ.

ದಕ್ಷ ಬ್ರಹ್ಮನಿಗೆ ಕಾಳಿ ಎಂಬ ಮಗಳಿದ್ದಳು. ಆಕೆ ಕನ್ನೆದಿಲೆಯಂತೆ ಕಪ್ಪು ಬಣ್ಣದಿಂದ ಕೂಡಿದ್ದಳು. ದಕ್ಷ ಆಕೆಯನ್ನು ಈಶ್ವರನಿಗೆ ಕೊಟ್ಟು ಮದುವೆ ಮಾಡಿದ್ದ. ಒಮ್ಮೆ ಆಸ್ಥಾನ ಮಂಟಪದಲ್ಲಿ ವಿಷ್ಣು ಮತ್ತು ದೇವತೆಗಳೊಡನೆ ಈಶ್ವರ ತನ್ನ ಪತ್ನಿಯನ್ನು ಕಷ್ಣ ವರ್ಣಳಾದ ಕಾಳಿಯೇ, ಬಾ. ನಿನ್ನ ಬಣ್ಣ ಕಪ್ಪಾಗಿದ್ದರೂ ಸೌಂದರ್ಯದಿಂದ ಕೂಡಿದ ನಿನ್ನ ರೂಪ ನನಗೆ ಪ್ರಿಯವಾಗಿದೆ ಎಂದು ಹೇಳಿದ. ಈ ಮಾತನ್ನು ಕೇಳಿದ ಕಾಳಿ ಲಜ್ಜಿತಳಾಗಿ, ದುಃಖಿಸಿ ತನ್ನ ಕಪ್ಪು ದೇಹವನ್ನು ನೀಗಲು ದೇವ ಸಮುದಾಯದೆದುರಿನಲ್ಲೇ ಅಗ್ನಿ ಪ್ರವೇಶ ಮಾಡಿ ಮತ್ತೆ ಪರ್ವತರಾಜನಿಗೆ ಮಗಳಾಗಿ ಗೌರವರ್ಣ ಶರೀರದಿಂದ ಕೂಡಿದವಳಾಗಿ ಹುಟ್ಟಿ ಈಶ್ವರನನ್ನೇ ವಿವಾಹವಾದಳು.

ಭಾದ್ರಪದ ಶುದ್ಧ ತೃತೀಯ ದಿನದಂದು ಪಾರ್ವತಿ ಆವಿರ್ಭವಿಸಿದುದರಿಂದ ಆ ದಿವಸ ಸ್ವರ್ಣಗೌರಿ ವ್ರತವನ್ನು ಆಚರಿಸುವುದು ರೂಢಿಯಲ್ಲಿದೆ. ವಿವಾಹದ ದಿನ, ಕನ್ಯಾದಾನಕ್ಕೆ ಪೂರ್ವಭಾವಿಯಾಗಿ ಕನ್ಯೆ ಗೌರಿ ಪೂಜೆಯನ್ನು ಮಾಡುವುದು ಕೆಲವರಲ್ಲಿರುವ ಪದ್ಧತಿ. ಸ್ವರ್ಣಗೌರಿ ಪೂಜೆಯಂತೆಯೇ ಮಂಗಳ ಗೌರಿ ಪೂಜೆಯೂ ಬಹಳ ಮುಖ್ಯವಾದುದು.

ಸ್ತ್ರೀಯರು ಇದನ್ನು ಸೌಮಾಂಗಲ್ಯ ವೃದ್ಧಿಗಾಗಿ ಮಾಡುತ್ತಾರೆ. ಶ್ರಾವಣ ಮಾಸದ ಎಲ್ಲಾ ಮಂಗಳ ವಾರಗಳಲ್ಲೂ ಈ ವ್ರತವನ್ನು ಮಾಡುತ್ತಾರೆ. ವಿವಾಹವಾದ ವರ್ಷದಲ್ಲಿ ತಂದೆಯ ಗೃಹದಲ್ಲೂ, ಬಳಿಕ ನಾಲ್ಕು ವರ್ಷಗಳ ಕಾಲ ಪತಿಯ ಗೃಹದಲ್ಲೂ ವ್ರತೋಪಾಸನೆ ಮಾಡುವುದು ಸಂಪ್ರದಾಯ.  

ಪ್ರದೇಶದಿಂದ ಪ್ರದೇಶಕ್ಕೆ ಭಿನ್ನ ಆಚರಣೆ 

ಗೌರಿ ಹಬ್ಬವನ್ನು ಆಚರಿಸುವ ಪದ್ಧತಿ ಒಂದೊಂದು ಕಡೆ ಒಂದೊಂದು ರೀತಿ. ಹಳೇ ಮೈಸೂರು ಭಾಗದಲ್ಲಿ ಗೌರಿಯ ವಿಗ್ರಹ ತಂದು ಕಲಶ ಸ್ಥಾಪಿಸಿ ಪೂಜಿಸುತ್ತಾರೆ. ಜೊತೆಗೆ ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಐದು ಮೊರದ ಬಾಗಿನವನ್ನು ಇಟ್ಟು ಪೂಜಿಸಿ ತಾಯಿಗೆ ಇತರ ಮುತ್ತೈದೆಯರಿಗೆ ನೀಡಿದರೆ ಉಳಿದವರು ಕನಿಷ್ಠ ಎರಡು ಬಾಗಿನ ಇಡುತ್ತಾರೆ.

ಮಳೆಗಾಲದ ದಿನ ಬಾವಿ, ಕೆರೆ ಕಟ್ಟೆಗಳು, ನದಿಗಳು ತುಂಬಿ ಹರಿಯುತ್ತವೆ. ಜನಜೀವನದ ಉಸಿರಿಗೆ ಭೂಮಿಯ ಹಸಿರಿಗೆ ಕಾರಣವಾದ ಆ ಗಂಗೆಯಲ್ಲಿ ಸಮೃದ್ಧತೆ ನೆಲೆಸಲಿ ಎನ್ನುವ ಹಾರೈಕೆಯೊಂದಿಗೆ ಗೌರಿಯ ವಿಗ್ರಹವನ್ನು ಗಣೇಶನ ಜೊತೆಗೆ ವಿಸರ್ಜಿಸುವಾಗ ಮಡಲಕ್ಕಿ ತುಂಬಿ ಬೀಳ್ಕೊಡುತ್ತಾರೆ.

ಗಣಪನಿಗೆ ಪಂಚಕಜ್ಜಾಯ, ಮೋದಕ, ಕರ್ಜಿಕಾಯಿ, ಕಡಬು, ಚಕ್ಕುಲಿ, ಉಂಡೆ... ಹೀಗೆ ಕನಿಷ್ಠ 21 ಬಗೆಯ ಸಿಹಿ ತಿಂಡಿಗಳನ್ನು ಮಾಡಿದರೆ ಗೌರಿಗೆ ಮಾತ್ರ ಹೋಳಿಗೆ (ಒಬ್ಬಟ್ಟು) ಪ್ರಿಯವಂತೆ. ಅರಿಶಿಣದ ಉಂಡೆಯ ರೂಪದಲ್ಲಿ ಪೂಜೆಗೊಳ್ಳುವ ಆ ತಾಯಿ, ಬರಿ ಅರಿಶಿಣದ ಬೊಂಬೆಯಲ್ಲ.

ಮಂಗಳ, ಮಾಂಗಲ್ಯ, ಸಮೃದ್ಧಿಯ ಸಂಕೇತ. ಪೂಜೆ ಪಡೆದು, ಉಡಿ ತುಂಬಿಸಿಕೊಂಡು ಹೊರಟು ಬಿಡುವುದಿಲ್ಲ. ಆಕೆ ಮಗನೊಡನೆ ನಿಲ್ಲುತ್ತಾಳೆ, ಅಂತಲೆ ಗಣೇಶ ಮೂರ್ತಿಯ ಮುಂದೆ ಗೌರಿಯ ವಿಗ್ರಹವಿರುತ್ತದೆ. ತಾಯಿ ಮಗನೊಂದಿಗೆ ಪೂಜೆಗೊಳ್ಳುವ ಪರಿಗೆ ಸ್ವತಃ ಈಶ್ವರನೂ ಅರೆಕ್ಷಣ ಕರುಬಬೇಕು!

Last Updated 19, Sep 2018, 9:23 AM IST