ವಿದ್ಯಾರ್ಥಿಗಳೇ ಪರೀಕ್ಷಾ ಭಯ ಬಿಡಿ; ಇಲ್ಲಿವೆ ನಿಮಗಾಗಿ ಒಂದಷ್ಟು ಗೈಡ್'ಲೈನ್'ಗಳು

By Suvarna Web DeskFirst Published Jan 22, 2018, 1:10 PM IST
Highlights

ಪರೀಕ್ಷೆ ಹತ್ತಿರವಾಗುತ್ತಿರುವ ಸಮಯದಲ್ಲಿ  ವಿದ್ಯಾರ್ಥಿಗಳಲ್ಲಿ ತಮ್ಮ ತಯಾರಿಗಳ ಬಗ್ಗೆ, ತಮ್ಮ ಮೇಲಿನ ವಿಶ್ವಾಸದ ಮೇಲೆ ಅನುಮಾನಗಳು ಉದ್ಭವವಾಗಬಹುದು. ಮಾನಸಿಕ ಒತ್ತಡವು ಇದಕ್ಕೆ ಕಾರಣವಿರಬಹುದು. ಪರೀಕ್ಷೆ ಹತ್ತಿರವಾಗುತ್ತಿರುವಾಗ ನಡವಳಿಕೆಯಲ್ಲಿ ಬದಲಾವಣೆಗಳನ್ನು ಕಂಡರೂ, ಪೋಷಕರಿಗೆ ಟೆಸ್ಟ್‌ಗಳಲ್ಲಿ ಪ್ರದರ್ಶನ ಕ್ಷೀಣಿಸುತ್ತಿರುವುದರ ಬಗ್ಗೆ ಆತಂಕ ಉಂಟಾಗಬಹುದು.

ಪರೀಕ್ಷೆ ಹತ್ತಿರವಾಗುತ್ತಿರುವ ಸಮಯದಲ್ಲಿ  ವಿದ್ಯಾರ್ಥಿಗಳಲ್ಲಿ ತಮ್ಮ ತಯಾರಿಗಳ ಬಗ್ಗೆ, ತಮ್ಮ ಮೇಲಿನ ವಿಶ್ವಾಸದ ಮೇಲೆ ಅನುಮಾನಗಳು ಉದ್ಭವವಾಗಬಹುದು. ಮಾನಸಿಕ ಒತ್ತಡವು ಇದಕ್ಕೆ ಕಾರಣವಿರಬಹುದು. ಪರೀಕ್ಷೆ ಹತ್ತಿರವಾಗುತ್ತಿರುವಾಗ ನಡವಳಿಕೆಯಲ್ಲಿ ಬದಲಾವಣೆಗಳನ್ನು ಕಂಡರೂ, ಪೋಷಕರಿಗೆ ಟೆಸ್ಟ್‌ಗಳಲ್ಲಿ ಪ್ರದರ್ಶನ ಕ್ಷೀಣಿಸುತ್ತಿರುವುದರ ಬಗ್ಗೆ ಆತಂಕ ಉಂಟಾಗಬಹುದು.

ವಿದ್ಯಾರ್ಥಿಗಳಿಗೆ ಹೀಗಾಗಬಹುದು!

ಆಧುನಿಕ ಸ್ಪರ್ಧಾತ್ಮಕ ಬದುಕಿನಲ್ಲಿ ಸಮಾಜವು ಉತ್ತಮ ಫಲಿತಾಂಶಕ್ಕೆ ಒತ್ತು ಕೊಟ್ಟು, ಒಳ್ಳೆಯ ಫಲಿತಾಂಶವಿಲ್ಲದಿದ್ದಲ್ಲಿ ಧಿಕ್ಕರಿಸುವಂತೆ, ಯಾವುದಕ್ಕೂ ಪ್ರಯೋಜನಕ್ಕೆ ಬಾರದವನಂತೆ ಬಿಂಬಿಸುತ್ತದೆ. ಈ ಸಂದರ್ಭ ಒತ್ತಡಕ್ಕೆ ಕಾರಣಗಳು ಹಲವು.

1. ಒಂದೇ ಗುರಿಯನ್ನು ಹೊಂದಿ ವಿದ್ಯಾರ್ಥಿಗಳು ತಯಾರಿ ನಡೆಸಿರುತ್ತಾರೆ. ಇದರಿಂದ ಅದೇ ಗುರಿಯನ್ನು ಹೊಂದಿದವರೊಡನೆ ತಾವು ಅಭ್ಯಾಸ ಮಾಡಿರುವ ರೀತಿ, ತಿಳಿದಿರುವುದನ್ನು ಹೋಲಿಕೆ ಮಾಡಿಕೊಂಡು, ತಾವು ಹಿಂದೆ ಬಿದ್ದಿದ್ದೇವೆಂಬ ವಿಚಾರಗಳು ಆತಂಕ ಉಂಟು ಮಾಡಬಹುದು.

2. ತಾವು ಹಾಕಿಕೊಂಡ ವೇಳಾಪಟ್ಟಿಗೆ (ಅನುಗುಣ) ಅನುಸರಿಸಲಾಗದಿದ್ದಲ್ಲಿ ಗೊಂದಲ  ಉಂಟಾಬಹುದು. ಕೆಲವೊಮ್ಮೆ ಬೇರೆಯವರ ವಿಚಾರಗಳು ಸ್ಫೂರ್ತಿಯಂತೆ ಕಂಡು, ಈ ಹೊತ್ತಿನಲ್ಲಿ ತಮ್ಮ ಗುರಿಯನ್ನು ಏಕಾಏಕಿ ಬದಲಾಯಿಸಿಕೊಂಡರೆ, ಅದರಿಂದ ಒತ್ತಡ ಹೆಚ್ಚಾಗುವುದು.

3. ಒಂದೇ ಸಮನೆ ಶ್ರಮ ವಹಿಸಿ ಏಳೆಂಟು ತಿಂಗಳುಗಳಿಂದ ಬಿಡುವಿಲ್ಲದೆ ಓದುವುದು, ಸಮಯ ನಿರ್ವಹಣೆಗಾಗಿ ಕ್ಲಾಸ್‌ಗಳಿಗೆ ಓಡುವುದು ಕೂಡ ಬೇಸರದಿಂದ ಬಳಲಿಕೆಯಾಗಬಹುದು, ಹಾಗೆಯೇ ಉತ್ಸಾಹ ಕಡಿಮೆಗೊಳ್ಳಬಹುದು.

4. ತನ್ನ ತಯಾರಿಯು ಸರಿಯಾಗಿಲ್ಲದೇ ಪರೀಕ್ಷೆಯ ಫಲಿತಾಂಶ ಚೆನ್ನಾಗಿಲ್ಲದಿದ್ದಲ್ಲಿ ಏನು ಮಾಡುವುದು ಎಂಬ ಆತಂಕ ಸೃಷ್ಟಿಯಾಗಬಹುದು. ಪೋಷಕರಿಗಿರುವ ಆತಂಕವೂ ಕೂಡ ಇನ್ನೂ ಹೆಚ್ಚಿನ ಮನಸ್ಸಿನ ಒತ್ತಡಕ್ಕೆ ಕಾರಣವಾಗಬಹುದು.

ಹೀಗಾದಾಗ ಮಕ್ಕಳು ಏನ್ಮಾಡ್ತಾರೆ?

ನಕಾರಾತ್ಮಕ ಆಲೋಚನೆಗಳು ಹೆಚ್ಚಾದಾಗ ಆತಂಕ ಹೆಚ್ಚಿ, ಆತ್ಮವಿಶ್ವಾಸ, ಏಕಾಗ್ರತೆ ಕಡಿಮೆಯಾಗಿ ಭಾವನೆಗಳಲ್ಲಿ ಏರುಪೇರಾಗುತ್ತದೆ. ಈ ಸಂದರ್ಭ ಬೇಸರ, ಮುಂಗೋಪ, ಭಯದಿಂದ ಮನಸ್ಸು ಚಂಚಲಗೊಳ್ಳುತ್ತದೆ. ನಿದ್ರಾಹೀನತೆ, ತಲೆನೋವು, ಮೈಗ್ರೇನ್, ಕೋಪ ಎಲ್ಲ ಆವರಿಸಿ ವಿದ್ಯಾರ್ಥಿಗಳು ಓದನ್ನೇ ನಿಲ್ಲಿಸಿಬಿಡಬಹುದು. ಇದರಿಂದ ಗಾಬರಿಯಾಗುವ ಪೋಷಕರು ಏನೂ ಮಾಡಲೂ ತೋಚದ ಸ್ಥಿತಿಯಲ್ಲಿರುತ್ತಾರೆ. ಇದಕ್ಕೆ ಹತ್ತಿರದ ಮನೋವೈದ್ಯರು ಅಥವಾ ಮನಶಾಸ್ತ್ರಜ್ಞರನ್ನು ಕಂಡು  ಕೌನ್ಸೆಲಿಂಗ್ ಪಡೆಯಬಹುದು.

ಈ ಗೈಡ್‌ಲೈನ್ಸ್ ಫಾಲೋ ಮಾಡಿ

1. ಗುರಿಯನ್ನು ಕೊನೆಯ ಕ್ಷಣಗಳಲ್ಲಿ ಬದಲಾಯಿಸಬಾರದು. ಒಂದು ವೇಳೆ ಬದಲಾಯಿಸಬೇಕಾದ್ದಲ್ಲಿ ಅದನ್ನು ಎರಡು ಮೂರು ಬಾರಿ ಯೋಚಿಸಿ, ಸಂಬಂಧಪಟ್ಟವರೊಡನೆ ಚರ್ಚಿಸಿ ನಿರ್ಧರಿಸಬೇಕು.

2. ಅಭ್ಯಾಸದ ವೇಳಾಪಟ್ಟಿಯಲ್ಲಿ ತಮ್ಮ ಸಾಮರ್ಥ್ಯ, ದೌರ್ಬಲ್ಯಗಳ ಬಗ್ಗೆ ಅರಿವಿಟ್ಟುಕೊಂಡು, ಆತ್ಮವಿಶ್ವಾಸ ಕ್ಷೀಣಿಸದ  ಹಾಗೇ ಬದಲಾವಣೆ ಮಾಡಿಕೊಳ್ಳಬೇಕು.

3.  ಮನಸ್ಸಿನಲ್ಲಿ ತಾವು ತಮ್ಮ ಸಾಮರ್ಥ್ಯಕ್ಕೆ ತಕ್ಕಂಥ  ಸಾಧನೆಯ ಗುರಿ ಹೊಂದಬೇಕೇ ಹೊರತು ಇತರರೊಡನೆ ಸ್ಪರ್ಧೆಯಲ್ಲಿದ್ದೇವೆಂಬ ಆಲೋಚನೆಯಲ್ಲಿ ತೊಡಗಿರಬಾರದು.

4.  ಶಿಕ್ಷಕರಲ್ಲಿ ಗೊಂದಲಗಳ ಬಗ್ಗೆ ಚರ್ಚಿಸಿ. ಸ್ನೇಹಿತರಲ್ಲೂ ವಿಚಾರ ವಿನಿಮಯ ಮಾಡಿಕೊಳ್ಳಿ.

5. ಪರೀಕ್ಷೆ ಸಮಯದಲ್ಲಿ ಆಗಬಹುದಾದ ಸಮಸ್ಯೆಗಳ ಬಗ್ಗೆ ಈಗಲೇ ತಯಾರಿ ನಡೆಸಬಹುದು. ಫ್ಲ್ಯಾನ್ ‘‘ಎ’’ ಆಗದಿದ್ದಲ್ಲಿ ಪ್ಲ್ಯಾನ್ ‘‘ಬಿ’’ ಎಂಬಂತೆ ಪರ್ಯಾಯ ಮಾರ್ಗಗಳ ಬಗ್ಗೆಯೂ ಚಿಂತಿಸಿ.

6.  ಧನಾತ್ಮಕ ಯೋಚನೆಗಳಿಗೆ ಒತ್ತು ಕೊಡಬೇಕು. ಹೀಗೆ ಮನಸ್ಸಿನ ವರ್ತನೆಯ ನಿರ್ವಹಣೆಯ ಬಗ್ಗೆ ತಯಾರಿ ನಡೆಸಿದಲ್ಲಿ ತಮ್ಮ ಶ್ರೇಷ್ಠ ಪ್ರದರ್ಶನಕ್ಕೆ ಸಹಾಯಕವಾಗಬಲ್ಲದು.

-ಡಾ. ವಿಜಯ್ ಕುಮಾರ್ ಹರವಿಶೆಟ್ಟರ್, ಮನೋವೈದ್ಯರು

click me!