Deepavali 2026: ದೀಪಾವಳಿ ಹಬ್ಬದಲ್ಲಿ ಸಿಹಿ ತಿಂದರೂ ಬ್ಲಡ್ ಶುಗರ್ ನಿಯಂತ್ರಣದಲ್ಲಿಡುವುದು ಹೇಗೆ? ಇಲ್ಲಿದೆ ಟಿಪ್ಸ್‌

Published : Oct 26, 2026, 08:45 PM IST
Deepavali diabetes

ಸಾರಾಂಶ

ದೀಪಾವಳಿ ಹಬ್ಬದಲ್ಲಿ ಮಧುಮೇಹಿಗಳು ಸಿಹಿತಿಂಡಿಗಳನ್ನು ಸಂಪೂರ್ಣವಾಗಿ ತ್ಯಜಿಸುವ ಅಗತ್ಯವಿಲ್ಲ. ಸರಿಯಾದ ಆಹಾರ ಯೋಜನೆ, ಪ್ರಮಾಣದ ನಿಯಂತ್ರಣ ಮತ್ತು ಊಟದ ನಂತರದ ನಡಿಗೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಬಹುದು. ಶುಗರ್ ಫ್ರೀ ಸಿಹಿಗಳ ಬಗ್ಗೆಯೂ ಎಚ್ಚರ ವಹಿಸಿ ಹಬ್ಬವನ್ನು ಸಂಭ್ರಮಿಸಿ.

ದೀಪಾವಳಿ ಎಂದರೆ ಕೇವಲ ಬೆಳಕಿನ ಹಬ್ಬ ಮಾತ್ರವಲ್ಲ, ಕುಟುಂಬಸ್ಥರ ಸಮ್ಮಿಲನ, ಅದ್ದೂರಿಯ ಭೋಜನ ಹಾಗೂ ಬಗೆಬಗೆಯ ಸಿಹಿತಿಂಡಿಗಳ ಸಂಭ್ರಮ. ಕಾಜು ಕಟ್ಲಿ, ಲಡ್ಡುಗಳಿಂದ ಹಿಡಿದು ಗುಲಾಬ್ ಜಾಮೂನ್ ಮತ್ತು ಬರ್ಫಿವರೆಗೆ ಹಬ್ಬದ ವಾತಾವರಣದಲ್ಲಿ ಸಿಹಿತಿಂಡಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಮಧುಮೇಹ (Diabetes) ಅಥವಾ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಈ ಹಬ್ಬದ ಸಿಹಿಯೂಟವು ರಕ್ತದಲ್ಲಿನ ಸಕ್ಕರೆ ಮಟ್ಟದ (Blood Sugar Levels) ಬಗ್ಗೆ ಭಾರಿ ಆತಂಕವನ್ನು ಮೂಡಿಸುತ್ತದೆ.

ಆದರೆ, ಮಧುಮೇಹವಿದೆ ಎಂದ ಮಾತ್ರಕ್ಕೆ ಹಬ್ಬದ ಪ್ರತಿಯೊಂದು ಸಿಹಿಯನ್ನೂ ತ್ಯಜಿಸಬೇಕೆಂದೇನೂ ಇಲ್ಲ ಎನ್ನುವುದು ವೈದ್ಯಕೀಯ ತಜ್ಞರ ಅಭಿಪ್ರಾಯ. ಸರಿಯಾದ ಆಹಾರ ಯೋಜನೆ, ಪ್ರಮಾಣದ ಮೇಲಿನ ನಿಯಂತ್ರಣ (Portion Control), ನಿಯಮಿತ ಔಷಧ ಸೇವನೆ ಮತ್ತು ಬ್ಲಡ್ ಶುಗರ್ ಟೆಸ್ಟ್‌ನೊಂಧಿಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಲೇ ದೀಪಾವಳಿ ಹಬ್ಬವನ್ನು ಖುಷಿಯಿಂದ ಸಂಭ್ರಮಿಸಬಹುದು. ಹಬ್ಬದ ಅವಧಿಯಲ್ಲಿ ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸರಳವಾಗಿ ನಿರ್ವಹಿಸಲು ಅನುಸರಿಸಬೇಕಾದ ಮುಖ್ಯ ಸಲಹೆಗಳು.

ಸಿಹಿತಿಂಡಿಯ ಪ್ರಮಾಣದ (Portion Size) ಮೇಲೆ ಇರಲಿ ನಿಗಾ

ನಿಮಗೆ ಇಷ್ಟವಾದ ಸಿಹಿತಿಂಡಿಗಳನ್ನು ಸಂಪೂರ್ಣವಾಗಿ ಬಿಡಬೇಕಿಲ್ಲ. ಆದರೆ ನೀವು ಎಷ್ಟು ಪ್ರಮಾಣದಲ್ಲಿ ಸೇವಿಸುತ್ತೀರಿ ಎಂಬುದು ಅತ್ಯಂತ ಮುಖ್ಯ. ಲಡ್ಡು, ಕಾಜು ಕಟ್ಲಿ ಹಾಗೂ ಗುಲಾಬ್ ಜಾಮೂನ್‌ಗಳಂತಹ ಸಿಹಿತಿಂಡಿಗಳಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳಿದ್ದು, ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಕ್ಷಣವೇ ಹೆಚ್ಚಿಸುತ್ತವೆ. ಒಂದೇ ಬಾರಿಗೆ ಸಾಲು ಸಾಲು ಸಿಹಿಗಳನ್ನು ತಿನ್ನುವ ಬದಲು, ನಿಮಗೆ ಅತ್ಯಂತ ಇಷ್ಟವಾದ ಒಂದೇ ಒಂದು ಸಣ್ಣ ತುಂಡು ಸಿಹಿಯನ್ನು ಆಯ್ದುಕೊಳ್ಳಿ. ನಿಧಾನವಾಗಿ ಅಗಿದು ಆಸ್ವಾದಿಸಿ ತಿನ್ನುವುದರಿಂದ ಪದೇ ಪದೇ ಸಿಹಿ ತಿನ್ನುವ ಬಯಕೆಯನ್ನು ನಿಯಂತ್ರಿಸಬಹುದು.

ಸಿಹಿ ತಿನ್ನುವ ನೆಪದಲ್ಲಿ ಪ್ರಮುಖ ಊಟಗಳನ್ನು ಬಿಡಬೇಡಿ

ರಾತ್ರಿ ದೀಪಾವಳಿ ಹಬ್ಬದ ವಿಶೇಷ ಭೋಜನವಿದೆ ಎಂಬ ಕಾರಣಕ್ಕೆ ಮಧ್ಯಾಹ್ನದ ಊಟವನ್ನು ಬಿಡುವುದು (Skipping Meals) ಅನೇಕರ ಅಭ್ಯಾಸ. ಆದರೆ ಮಧುಮೇಹಿಗಳು ಹೀಗೆ ಮಾಡುವುದು ಅತ್ಯಂತ ಅಪಾಯಕಾರಿ. ಇದು ನಿಮ್ಮ ದೈನಂದಿನ ಆಹಾರದ ಸಮಯವನ್ನು ಏರುಪೇರು ಮಾಡುವುದಲ್ಲದೆ, ನಿರ್ದಿಷ್ಟ ಮಧುಮೇಹದ ಮಾತ್ರೆಗಳನ್ನು ತೆಗೆದುಕೊಳ್ಳುವವರಲ್ಲಿ ಹಠಾತ್ 'ಲೋ ಶುಗರ್' (Hypoglycemia) ಸಮಸ್ಯೆಗೆ ಕಾರಣವಾಗಬಹುದು. ಅಲ್ಲದೆ, ರಾತ್ರಿಯ ಹೊತ್ತಿಗೆ ತೀವ್ರ ಹಸಿವಾಗಿ ಹೆಚ್ಚಿನ ಪ್ರಮಾಣದಲ್ಲಿ ಆಹಾರ ತಿನ್ನುವಂತೆ ಮಾಡುತ್ತದೆ. ಹೀಗಾಗಿ ನಿಮ್ಮ ನಿಯಮಿತ ಸಮಯಕ್ಕೆ ಸರಿಯಾಗಿ ಊಟ ಮಾಡಿ. ಸಿಹಿತಿಂಡಿ ತಿನ್ನುವ ಪ್ಲಾನ್ ಇದ್ದರೆ, ಅದನ್ನು ನಿಮ್ಮ ಒಟ್ಟಾರೆ ಆಹಾರದ ಕ್ಯಾಲೋರಿಯಲ್ಲಿ ಲೆಕ್ಕ ಹಾಕಿಕೊಳ್ಳಿ.

ಹಬ್ಬದ ತಟ್ಟೆಯಲ್ಲಿರಲಿ ಸಮತೋಲನ (Balanced Plate)

ದೀಪಾವಳಿ ಊಟದಲ್ಲಿ ಹೆಚ್ಚಾಗಿ ಪೂರಿ, ಸಮೋಸ, ಖಾರ-ನಮ್ಕೀನ್ ಮತ್ತು ಸಿಹಿತಿಂಡಿಗಳೇ ತುಂಬಿರುತ್ತವೆ. ಇವೆಲ್ಲವೂ ಕಾರ್ಬೋಹೈಡ್ರೇಟ್‌ಗಳಿಂದ ಕೂಡಿದ್ದು, ಒಟ್ಟಿಗೆ ಸೇವಿಸಿದಾಗ ದೇಹದಲ್ಲಿ ಕಾರ್ಬ್ಸ್ ಪ್ರಮಾಣ ಭಾರಿ ಹೆಚ್ಚಾಗುತ್ತದೆ. ಆದ್ದರಿಂದ ನಿಮ್ಮ ತಟ್ಟೆಯಲ್ಲಿ ತರಕಾರಿಗಳು, ಬೇಳೆಕಾಳುಗಳು, ಪನೀರ್, ಮೊಟ್ಟೆ ಅಥವಾ ಕೊಬ್ಬಿನಂಶ ಕಡಿಮೆಯಿರುವ ಮಾಂಸದಂತಹ ಪ್ರೋಟೀನ್ ಯುಕ್ತ ಆಹಾರಗಳಿರುವುದು ಕಡ್ಡಾಯ. ಪ್ರೋಟೀನ್ ಮತ್ತು ನಾರಿನಂಶವಿರುವ ಆಹಾರವು ಸಕ್ಕರೆ ಮಟ್ಟ ತಕ್ಷಣವೇ ಏರದಂತೆ ತಡೆಯುತ್ತದೆ. ಕೇವಲ ಸಿಹಿತಿಂಡಿಗಳಲ್ಲಿ ಮಾತ್ರವಲ್ಲದೆ ಅನ್ನ, ರೊಟ್ಟಿ, ಚಪಾತಿ ಮತ್ತು ಆಲೂಗಡ್ಡೆಯಲ್ಲಿಯೂ ಕಾರ್ಬೋಹೈಡ್ರೇಟ್ ಇರುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ಸಿಹಿ ಪಾನೀಯಗಳ ಬಗ್ಗೆ ಇರಲಿ ಎಚ್ಚರ

ಹಬ್ಬದ ಸಮಯದಲ್ಲಿ ಕೇವಲ ಸಿಹಿತಿಂಡಿಗಳು ಮಾತ್ರವಲ್ಲ, ಪ್ಯಾಕ್ ಮಾಡಿದ ಹಣ್ಣಿನ ರಸಗಳು (Juices), ಶರಬತ್, ಕೂಲ್ ಡ್ರಿಂಕ್ಸ್ ಹಾಗೂ ಸಿಹಿ ಪಾನೀಯಗಳೂ ಸಹ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸದ್ದಿಲ್ಲದೆ ಹೆಚ್ಚಿಸುತ್ತವೆ. ಇವುಗಳ ಬದಲಾಗಿ ಸಾಧ್ಯವಾದಷ್ಟು ಕುಡಿಯುವ ನೀರು ಅಥವಾ ಸಿಹಿಯಿಲ್ಲದ ಪಾನೀಯಗಳನ್ನು ಆಯ್ಕೆ ಮಾಡಿ. ಯಾವುದಾದರೂ ಪಾನೀಯ ಕುಡಿಯುವ ಮುನ್ನ ಅದರಲ್ಲಿರುವ ಸಕ್ಕರೆಯ ಪ್ರಮಾಣವನ್ನು ಒಮ್ಮೆ ಪರಿಶೀಲಿಸುವುದು ಒಳಿತು.

ಊಟದ ನಂತರ ಸ್ವಲ್ಪ ವಾಕಿಂಗ್ ಮಾಡಿ (Physical Activity)

ನೆಂಟರ ಮನೆಗೆ ಭೇಟಿ ನೀಡುವುದು, ಉಡುಗೊರೆ ವಿನಿಮಯ ಮಾಡಿಕೊಳ್ಳುವುದು ಹಾಗೂ ಅತಿಥಿ ಸತ್ಕಾರದ ನಡುವೆ ವ್ಯಾಯಾಮ ಹೆಚ್ಚಿನ ಸ್ಥಾನ ಪಡೆದುಕೊಳ್ಳೋದಿಲ್ಲ. ಆದರೆ ಮಧುಮೇಹ ನಿರ್ವಹಣೆಯಲ್ಲಿ ದೈಹಿಕ ಚಟುವಟಿಕೆ ಅತ್ಯಂತ ಪ್ರಮುಖ. ಹಬ್ಬದೂಟದ ನಂತರ ಹಗುರವಾದ ನಡಿಗೆ (Gentle Walk) ಮಾಡುವುದು ಅಥವಾ ಕುಟುಂಬದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ದೇಹದಲ್ಲಿನ ಗ್ಲೂಕೋಸ್ ಅನ್ನು ಕರಗಿಸಲು ನೆರವಾಗುತ್ತದೆ. ಇನ್ಸುಲಿನ್ ಅಥವಾ ವಿಶೇಷ ಮಾತ್ರೆಗಳನ್ನು ಬಳಸುವವರು ತಮ್ಮ ವೈದ್ಯರ ಸಲಹೆಯಂತೆ ಜಾಗರೂಕರಾಗಿ ವ್ಯಾಯಾಮ ಮತ್ತು ತಪಾಸಣೆ ಮಾಡಬೇಕು.

ಷುಗರ್ ಫ್ರೀ ಸಿಹಿಗಳು ಸಂಪೂರ್ಣ ಸುರಕ್ಷಿತವಲ್ಲ!

ಮಾರುಕಟ್ಟೆಯಲ್ಲಿ ಸಿಗುವ 'ಷುಗರ್ ಫ್ರೀ' (Sugar-free) ಸಿಹಿತಿಂಡಿಗಳು ಮಧುಮೇಹಿಗಳಿಗೆ ಸಂಪೂರ್ಣ ಸುರಕ್ಷಿತ ಎನ್ನುವ ಭ್ರಮೆ ಹಲವರಲ್ಲಿದೆ. ಆದರೆ 'ಷುಗರ್ ಫ್ರೀ' ಎಂಬ ಲೇಬಲ್ ಇದ್ದ ತಕ್ಷಣ ಅದು ಸಂಪೂರ್ಣ ಸುರಕ್ಷಿತ ಎಂದರ್ಥವಲ್ಲ. ಅವುಗಳನ್ನು ತಯಾರಿಸಲು ಬಳಸುವ ಪದಾರ್ಥಗಳಲ್ಲಿಯೂ ಕಾರ್ಬೋಹೈಡ್ರೇಟ್, ಕ್ಯಾಲೋರಿ ಹಾಗೂ ಕೊಬ್ಬಿನಂಶ ಇರಬಹುದು. ಇವುಗಳನ್ನು ಕೊಳ್ಳುವ ಮುನ್ನ ಪೌಷ್ಟಿಕಾಂಶಗಳ ಮಾಹಿತಿ (Nutrition Info) ಪರಿಶೀಲಿಸಿ. ಕೆಲವೊಮ್ಮೆ ಕೃತಕ ಸಿಹಿಗಿಂತಲೂ, ಸಾಮಾನ್ಯ ಸಿಹಿತಿಂಡಿಯನ್ನು ಸಣ್ಣ ಪ್ರಮಾಣದಲ್ಲಿ ಜಾಗರೂಕತೆಯಿಂದ ಸೇವಿಸುವುದೇ ಹೆಚ್ಚು ಸೂಕ್ತವಾಗಿರುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

21 ವರ್ಷದ ಆಟೋ ಚಾಲಕನ 'ಮದುವೆ ಮೆಂಟಾಲಿಟಿ'ಗೆ ನಟಿ ಸೃಷ್ಟಿ ಅಗರ್ವಾಲ್ ಶಾಕ್! ವಿಡಿಯೋ ವೈರಲ್
Cumin Tea Benefits: ಪ್ರತಿದಿನ ಜೀರಿಗೆ ಟೀ ಕುಡಿದರೆ ಏನಾಗುತ್ತೆ ಗೊತ್ತಾ? ಹಲವರಿಗೆ ಇದರ ಪ್ರಯೋಜನದ ಅರಿವಿಲ್ಲ!